ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚಾರ ಸಭೆಗೆ ಅನುಮತಿ ಕಡ್ಡಾಯ

Last Updated 8 ಏಪ್ರಿಲ್ 2013, 6:38 IST
ಅಕ್ಷರ ಗಾತ್ರ

ಗಡಿಯಲ್ಲಿ ಅರೆಸೇನಾ ಪಡೆ ನಿಯೋಜನೆ; ರೌಡಿಗಳ ವಿರುದ್ಧ ಕ್ರಮ

ವಿಜಾಪುರ: `ಮುಕ್ತ ಹಾಗೂ ಪಾರದರ್ಶಕ ಚುನಾವಣೆಗಾಗಿ ಅರೆ ಸೇನಾ ಪಡೆ ನಿಯೋಜಿಸಲಾಗುತ್ತಿದೆ. ಜಿಲ್ಲೆಯಲ್ಲಿ 250 ರೌಡಿಗಳನ್ನು ಗುರುತಿಸಿದ್ದು, ಮತದಾನದ ದಿನಕ್ಕಿಂತ ಮುಂಚೆ ಅವರನ್ನು ವಶಕ್ಕೆ ಪಡೆಯಲಾಗುವುದು' ಎಂದು ಜಿಲ್ಲಾಧಿಕಾರಿ ಶಿವಯೋಗಿ ಕಳಸದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಹಿಲೋರಿ ಹೇಳಿದರು.

`ಅಭ್ಯರ್ಥಿಗಳು ಪ್ರಚಾರ ಸಭೆ ನಡೆಸಲು ಹಾಗೂ ಅಲ್ಲಿ ಸೇರುವವರಿಗೆ ಊಟದ ವ್ಯವಸ್ಥೆ ಮಾಡಲು ಅನುಮತಿ ಪಡೆಯುವುದು ಕಡ್ಡಾಯ. ಇಲ್ಲದಿದ್ದರೆ ಆ ಅಭ್ಯರ್ಥಿಗಳ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ಭಾನುವಾರ ಇಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.

`ವಿಧಾನಸಭಾ ಚುನಾವಣೆಯ ವೆಚ್ಚದ ಮಿತಿಯನ್ನು ಕೇಂದ್ರ ಚುನಾವಣಾ ಆಯೋಗ ರೂ.16ಲಕ್ಷಕ್ಕೆ ಮಿತಿಗೊಳಿಸಿದೆ. ಅಭ್ಯರ್ಥಿಗಳು ಪ್ರತ್ಯೇಕ ಬ್ಯಾಂಕ್ ಖಾತೆ ತೆರೆದು, ಆ ಖಾತೆಯ ಮೂಲಕವೇ ಚುನಾವಣಾ ವೆಚ್ಚ ಪಾವತಿಸಬೇಕು' ಎಂದು ಜಿಲ್ಲಾಧಿಕಾರಿ ಹೇಳಿದರು.
ಪ್ರತಿ ಅಭ್ಯರ್ಥಿ ನೀಡುವ ಪ್ರಮಾಣ ಪತ್ರದಲ್ಲಿ ಆಸ್ತಿಯ ವಿವರಗಳ ಜೊತೆಗೆ ಕ್ರಿಮಿನಲ್ ಪ್ರಕರಣಗಳ ಮಾಹಿತಿ ನೀಡುವುದು ಕಡ್ಡಾಯ ಎಂದರು.

`ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಚುನಾವಣಾಧಿಕಾರಿಗಳ ಕೊಠಡಿಯೊಳಗೆ ಕೇವಲ ಐದು ಜನರಿಗೆ ಮಾತ್ರ ಪ್ರವೇಶವಿದೆ. ಐದಕ್ಕಿಂತ ಹೆಚ್ಚು ಜನ ಪ್ರವೇಶಿಸಿದರೆ ಪ್ರಕರಣ ದಾಖಲಿಸಲಾಗುವುದು. ಎಲ್ಲ ಚುನಾವಣಾಧಿಕಾರಿಗಳ ಕಚೇರಿ ಹೊರಗಡೆ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ತಮ್ಮಂದಿಗೆ ಬರುವ ಬೆಂಗಲಿಗರನ್ನು ನಿಯಂತ್ರಿಸುವ ಹೊಣೆಯೂ ಅಭ್ಯರ್ಥಿಗಳದ್ದು' ಎಂದು ಎಸ್ಪಿ ತಿಳಿಸಿದರು. ಪ್ರಚಾರ ಸಭೆ ಹಾಗೂ ಅಲ್ಲಿ ಸೇರಿದವರಿಗೆ ಪೂರೈಸುವ ಊಟದ ವೆಚ್ಚ ಅಭ್ಯರ್ಥಿಯ ಚುನಾವಣಾ ವೆಚ್ಚದ ಖಾತೆಗೆ ಸೇರಿಸುವುದು ಕಡ್ಡಾಯ. ಪ್ರಚಾರಕ್ಕೆ ಬಳಸುವ ವಾಹನಗಳಿಗೆ ಚುನಾವಣಾಧಿಕಾರಿಯಿಂದ ಅನುಮತಿ ಪಡೆಯಬೇಕು. ಎಷ್ಟು ವಾಹನ ಬಳಸಬೇಕು ಎಂಬುದನ್ನು ಚುನಾವಣಾ ಆಯೋಗ ಶೀಘ್ರವೇ ಪ್ರಕಟಿಸಲಿದೆ ಎಂದರು.

ಕಾಸಿಗಾಗಿ ಸುದ್ದಿ ಬೇಡ: ಮಾಧ್ಯಮಗಳಲ್ಲಿ `ಕಾಸಿಗಾಗಿ ಸುದ್ದಿ' ಹಾವಳಿ ನಿಯಂತ್ರಿಸಲು ಸಮಿತಿ ರಚಿಸಲಾಗಿದೆ. ಈ ವಿಷಯದಲ್ಲಿ ಚುನಾವಣಾ ಆಯೋಗ ಜಾರಿಗೊಳಿಸಿರುವ ಮಾರ್ಗಸೂಚಿಗಳನ್ನು ಮಾಧ್ಯಮದವರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಡಿಸಿ ಮನವಿ ಮಾಡಿದರು.

ಗಡಿಯಲ್ಲಿ ಕಟ್ಟೆಚ್ಚರ: ಮಹಾರಾಷ್ಟ್ರದ ಗಡಿಯಲ್ಲಿರುವ ಇಂಡಿ, ನಾಗಠಾಣ, ಬಬಲೇಶ್ವರ ಮತಕ್ಷೇತ್ರದ 60 ಗ್ರಾಮಗಳಲ್ಲಿ ಅರೆ ಸೇನಾ ಪಡೆಯನ್ನು ನಿಯೋಜಿಸಲಾಗುವುದು. 20 ಅರೆ ಸೇನಾ ಪಡೆಗಳ 2000 ಜನ ಯೋಧರು ಚುನಾವಣಾ ಭದ್ರತೆಗೆ ಆಗಮಿಸಲಿದ್ದು, ಅವರೊಟ್ಟಿಗೆ 1500 ಜನ ಪೊಲೀಸರು, 500 ಜನ ಗೃಹ ರಕ್ಷಕರು, 100 ಜನ ಪೊಲೀಸ್ ಅಧಿಕಾರಿಗಳು, ತಲಾ ಐದು ಕೆಎಸ್‌ಆರ್‌ಪಿ ಮತ್ತು ಐಆರ್‌ಬಿ ತುಕುಡಿಗಳನ್ನು ನಿಯೋಜಿಸಲಾಗುತ್ತಿದೆ ಎಂದು ಎಸ್ಪಿ ಮಾಹಿತಿ ನೀಡಿದರು.

ಸಾಂಗಲಿ ಮತ್ತು ಸೋಲಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಜಂಟಿ ಸಭೆ ನಡೆಸಲಾಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಪೊಲೀಸರಿಂದ ಗಡಿಯಲ್ಲಿ ಜಂಟಿ ತನಿಖಾ ಠಾಣೆ ಆರಂಭಕ್ಕೆ ನಿರ್ಧರಿಸಲಾಗಿದೆ. ಚುನಾವಣಾ ಅಕ್ರಮ ತಡೆಗೆ ಜಿಲ್ಲೆಯಲ್ಲಿ ಈಗಾಗಲೆ 25 ತನಿಖಾ ಠಾಣೆಗಳನ್ನು ಆರಂಭಿಸಲಾಗಿದೆ ಎಂದರು.

ಜಾಗೃತಿ: `ಮತದಾರರಾಗಿ; ಮತ ಚಲಾಯಿಸಿ' ಅಭಿಯಾನದ ಅಂಗವಾಗಿ ಜಿಲ್ಲೆಯಲ್ಲಿ ಬೀದಿ ನಾಟಕಗಳ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. `ಮತಕ್ಕಾಗಿ ಓಟ' ನಡೆಸಲು ನಿರ್ಧರಿಸಲಾಗಿದೆ. ಮತದಾನದ ಪ್ರಮಾಣ ಕನಿಷ್ಠ ಶೇ.80ರಷ್ಟಾದರೂ ಆಗಲಿ ಎಂಬ ಕಾರಣಕ್ಕೆ ಈ ಪ್ರಯತ್ನ ಮಾಡಲಾಗುತ್ತಿದೆ ಎಂದು `ಸ್ವೀಪ್' ಸಮಿತಿಯ ಮುಖ್ಯಸ್ಥ, ಜಿ.ಪಂ. ಸಿಇಒ ಗುತ್ತಿ ಜಂಬುನಾಥ್ ಹೇಳಿದರು.

ಮನೆ ಮನೆಗೆ ಚೀಟಿ: ಮತದಾನದ ದಿನಕ್ಕಿಂತ ಮೂರು ದಿನ ಮೊದಲು ಮತದಾರರ ಮನೆಗೆ ಮಾಹಿತಿ ಚೀಟಿ ವಿತರಿಸಲಾಗುವುದು. ಮತದಾನದ ದಿನದಂದು ಮತಗಟ್ಟೆಯಿಂದ 200 ಮೀಟರ್ ವ್ಯಾಪ್ತಿಯ ಹೊರಗೆ ಕೌಂಟರ್ ತೆರೆದು ಅಲ್ಲಿಯೂ ಮಾಹಿತಿ ಚೀಟಿ ವಿತರಿಸಲು ವ್ಯವಸ್ಥೆ ಮಾಡಲಾಗುವುದು ಎಂದರು. ವಾರ್ತಾ ಇಲಾಖೆ ಹೊರ ತಂದಿರುವ `ಚುನಾವಣಾ ಹಿನ್ನೋಟ' ಮಾಹಿತಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಜೆ.ಸಿದ್ದಪ್ಪ, ಜಿಲ್ಲಾ ವಾರ್ತಾಧಿಕಾರಿ ಬಿ.ಆರ್. ರಂಗನಾಥ ಪತ್ತಿಕಾಗೋಷ್ಠಿಯಲ್ಲಿದ್ದರು.

**********

-ನಾಮಪತ್ರ ಸಲ್ಲಿಕೆ ಆರಂಭ: 10.4.2013
-ನಾಮಪತ್ರ ಸಲ್ಲಿಕೆ ಕೊನೆ ದಿನ: 17.4.2013
-ನಾಮಪತ್ರಗಳ ಪರಿಶೀಲನೆ: 18.4.2013
-ನಾಮಪತ್ರ ವಾಪಸ್ಸು ಪಡೆಯಲು ಕೊನೆ ದಿನ: 20.4.2013
-ಮತದಾನ: 5.5.2013
-ಮತ ಎಣಿಕೆ: 8.5.2013

**********

6 ಪ್ರಕರಣ ದಾಖಲು

ಚುನಾವಣಾ ನೀತಿ ಸಂಹಿತೆ ಪಾಲನೆಗೆ ಪ್ರತಿ ಕ್ಷೇತ್ರಕ್ಕೆ ಮೂರರಂತೆ 24 ನೀತಿ ಸಂಹಿತೆ ಜಾರಿ ತಂಡ, ಪ್ರತಿ 10ರಿಂದ 15 ಮತಗಟ್ಟೆಗೆ ಒಬ್ಬರಂತೆ 117 ಜನ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಿ ಅವರಿಗೆ ದಂಡಾಧಿಕಾರಿಗಳ ಅಧಿಕಾರ ನೀಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹೇಳಿದರು.

ಜಿಲ್ಲೆಯಲ್ಲಿ ಈ ವರೆಗೆ ನೀತಿ ಸಂಹಿತೆ ಉಲ್ಲಂಘಿಸಿದ ಆರು ಪ್ರಕರಣ ದಾಖಲಾಗಿವೆ ಎಂದರು. ಜನವರಿ 16, 2013ರ ವರೆಗೆ ಜಿಲ್ಲೆಯಲ್ಲಿ 14,83,267 ಮತದಾರರು ಇದ್ದಾರೆ. ಅವರಲ್ಲಿ 7,77,727 ಜನ ಪುರುಷರು, 7,05,540 ಜನ ಮಹಿಳೆಯರು ಸೇರಿದ್ದಾರೆ. ಈ ವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ 18,295 ಜನ ಅರ್ಜಿ ಸಲ್ಲಿಸಿದ್ದು, ಮತದಾರರ ಪಟ್ಟಿಯಿಂದ ತಮ್ಮ ಹೆಸರು ತೆಗೆದು ಹಾಕಲು 1519, ಹೆಸರು ಪರಿಷ್ಕರಣೆಗೆ 2765 ಅರ್ಜಿಗಳು ಸಲ್ಲಿಕೆಯಾಗಿವೆ ಎಂದರು.ಒಟ್ಟಾರೆ 1799 ಮತಗಟ್ಟೆಗಳ ಪೈಕಿ 421 ಅತಿ ಸೂಕ್ಷ್ಮ,   507 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

*********

ಭಿಕ್ಷುಕರಿಗೂ ಮತದಾನ ಹಕ್ಕು

ವಿಜಾಪುರದ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿರುವ 50 ಜನ ಭಿಕ್ಷುಕರಿಗೆ ಮತದಾನದ ಹಕ್ಕು ನೀಡಲು ಅವರ ಹೆಸರನ್ನು ಮತಪಟ್ಟಿಯಲ್ಲಿ ಸೇರಿಸಲಾಗಿದೆ.

ಬುದ್ದಿಮಾಂದ್ಯರಲ್ಲದ ಎಲ್ಲರಿಗೂ ಗುರುತಿನ ಚೀಟಿ ನೀಡಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು. ಅಲ್ಲದೆ ಅಲೆಮಾರಿಗಳಿಗೂ ಅವರು ನೆಲೆ ನಿಂತ ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಕಳಸದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT