ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚಾರದಲ್ಲಿ ಮುಂದೆ ಮತ ಗಳಿಕೆಯಲ್ಲಿ ಹಿಂದೆ

Last Updated 9 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ವಾರಣಾಸಿ:  `ಕಾಂಗ್ರೆಸ್ ಪಕ್ಷ ಮೂರು ಇಲ್ಲವೇ ನಾಲ್ಕನೇ ಸ್ಥಾನದಲ್ಲಿದೆ ಎಂದು ಹೇಳುತ್ತಿದ್ದೀರಿ, ಆದರೆ ಪತ್ರಿಕೆ ಮತ್ತು ಟಿವಿಗಳಲ್ಲಿ ಆ ಪಕ್ಷದ್ದೇ ಹೆಚ್ಚು ಸುದ್ದಿ ಬರುತ್ತಿದೆಯಲ್ಲಾ?~ಎಂದು ಚಿತ್ರದುರ್ಗದ `ಪ್ರಜಾವಾಣಿ~ ಓದುಗ ಕಾಸವನಹಳ್ಳಿ ಶಿವಣ್ಣ ಎಂಬವರು ಪೋನ್ ಮಾಡಿ ಆಕ್ಷೇಪಿಸುತ್ತಿದ್ದರು. ಅವರ ಆಕ್ಷೇಪ ಸರಿಯಾಗಿಯೇ ಇದೆ.

ಮೂರನೆ ಇಲ್ಲವೇ ನಾಲ್ಕನೆ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಮತ್ತು ಕಳೆದ ಮೂರು ಚುನಾವಣೆಗಳಲ್ಲಿ  ಮತಪ್ರಮಾಣವನ್ನು ಶೇಕಡಾ ಎಂಟರಿಂದ ಒಂಬತ್ತಕ್ಕೂ ಹಿಗ್ಗಿಸಲಾಗದೆ ಒದ್ದಾಡುತ್ತಿರುವ ಕಾಂಗ್ರೆಸ್   ಮಾಧ್ಯಮಗಳಲ್ಲಿನ ಪ್ರಚಾರದಲ್ಲಿ ಮಾತ್ರ ಮೊದಲನೆ ಸ್ಥಾನದಲ್ಲಿಯೇ ಇದೆ.

ಇದಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಅವರಂತಹ `ತಾರಾಪ್ರಚಾರಕರು ಇರುವುದಷ್ಟೇ ಕಾರಣ ಅಲ್ಲ, ರಂಜನೆ ಮತ್ತು ರೋಚಕತೆಯನ್ನು ಇಷ್ಟಪಡುವ ಇಂದಿನ  ಮಾಧ್ಯಮಗಳಿಗೆ ಹೊಂದಿಕೊಳ್ಳುವಂತಹ ನಾಯಕರು ಬೇರೆ ಪಕ್ಷಗಳಲ್ಲಿ ಇಲ್ಲದಿರುವುದೂ ಕಾರಣ. ಬಹುಜನ ಸಮಾಜ ಪಕ್ಷದ ಪರ ಪ್ರಚಾರ ನಡೆಸುತ್ತಿರುವ ಏಕೈಕ ನಾಯಕಿ ಮುಖ್ಯಮಂತ್ರಿ ಮಾಯಾವತಿ. ಅವರನ್ನು ಹೊರತುಪಡಿಸಿ ಇನ್ನೊಬ್ಬ ನಾಯಕರ ಹೆಸರು ಯಾರಿಗೂ ಗೊತ್ತಿಲ್ಲ. ಸಮಾಜವಾದಿ ಪಕ್ಷದ ನಾಯಕ ಮುಲಾಯಂಸಿಂಗ್ ಯಾದವ್ ಹಿಂದಿಯಲ್ಲಿ ಆಡುವ ಮಾತುಗಳು ಹಿಂದಿ ಬಲ್ಲವರಿಗೂ ಅರ್ಥವಾಗುವುದಿಲ್ಲ. ಹಲ್ಲು ಕಿತ್ತ ಹಾವಿನಂತಾಗಿರುವ ಭಾರತೀಯ ಜನತಾ ಪಕ್ಷವನ್ನು ಕೇಳುವವರೇ ಇಲ್ಲ.

ಚುನಾವಣಾ ಆಯೋಗ ಕಟ್ಟುನಿಟ್ಟಿನಿಂದ ನೀತಿ ಸಂಹಿತೆಯನ್ನು ಜಾರಿಗೆ ತಂದಿರುವುದು ಕೂಡಾ ರಾಜಕೀಯ ಪಕ್ಷಗಳ ಪ್ರಚಾರ ಜನರ ಗಮನ ಸೆಳೆಯದಿರಲು ಕಾರಣ. ಭಿತ್ತಿಪತ್ರ, ಬ್ಯಾನರ್, ಬಂಟಿಂಗ್ಸ್, ಮೈಕ್ ಪ್ರಚಾರ ಯಾವುದೂ ಎಲ್ಲಿಯೂ ಹೆಚ್ಚಾಗಿ ಕಾಣಿಸುತ್ತಿಲ್ಲ.

ಬುಧವಾರ ಮತದಾನ ನಡೆದ ಫೈಜಾಬಾದ್ ಕ್ಷೇತ್ರ ಹಿಂದಿನ ಚುನಾವಣೆಗಳ ಕಾಲದಲ್ಲಿ ಶ್ರಿರಾಮನ ಹೆಸರಿನ ಭಿತ್ತಿಪತ್ರ-ಬ್ಯಾನರ್‌ಗಳಿಂದ ಕೇಸರಿಮಯವಾಗಿರುತ್ತಿತ್ತು. ಈ ಬಾರಿ ಅವುಗಳು ಯಾವುದೂ ಇಲ್ಲದೆ ಬಿಕೋ ಎನಿಸುತ್ತಿತ್ತು. ಚುನಾವಣೆಗೂ ತನಗೂ ಸಂಬಂಧವೇ ಇಲ್ಲದಂತೆ ವಾರಣಾಸಿ ಇದೆ. ಚುನಾವಣಾ ಆಯೋಗದ ಕಟ್ಟೆಚ್ಚರದ ಜತೆಯಲ್ಲಿ ರಾಜಕೀಯ ಪಕ್ಷಗಳಲ್ಲಿ ಜನಪ್ರಿಯ ನಾಯಕರ ಸಂಖ್ಯೆಯೂ ಕಡಿಮೆಯಾಗಿರುವುದರಿಂದ ಜನ ಚುನಾವಣೆಯನ್ನೇ ಮರೆತುಬಿಟ್ಟವರಂತಿದ್ದಾರೆ.

ಬಿಜೆಪಿ ಪ್ರಚಾರ ಕಳೆದ ಇಪ್ಪತ್ತು ವರ್ಷಗಳಲ್ಲಿ ಎಂದೂ ಇಷ್ಟೊಂದು ಸಪ್ಪೆಯಾಗಿರಲಿಲ್ಲ ಎಂದು ಆ ಪಕ್ಷದ ಕಾರ್ಯಕರ್ತರೇ ಗೊಣಗಾಡುತ್ತಿದ್ದಾರೆ. ಒಂದು ಕಾಲದ ಬೆಂಕಿ ಉಂಡೆ ಉಮಾಭಾರತಿಯನ್ನು ಪ್ರಚಾರದ ಕಣಕ್ಕಿಳಿಸಿದರೂ ಜನರನ್ನು ಆಕರ್ಷಿಸಲು ಸಾಧ್ಯವಾಗುತ್ತಿಲ್ಲ.

ಉದ್ರೇಕಕಾರಿ ಭಾಷಣಕ್ಕೆ ಹೆಸರಾದ ಸನ್ಯಾಸಿನಿ ಬಾಯಿಯಲ್ಲಿ `ರಾಮರಾಜ್ಯ~ ಸ್ಥಾಪನೆಯ ಮಾತುಗಳನ್ನು ಆಡಿಸಿದರೆ ಜನ ಯಾಕೆ ಸೇರುತ್ತಾರೆ. ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಬಂದು ವೇದಿಕೆಯೊಂದನ್ನು ಮುರಿದುಹಾಕಿ ಹೋಗಿದ್ದಾರೆ. ರಾಜನಾಥ್‌ಸಿಂಗ್ ಮತ್ತು ಕಲ್‌ರಾಜ್ ಮಿಶ್ರಾ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದೆ. ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಹಾಜರಿ ಹಾಕಿಹೋಗಿದ್ದಾರೆ. ಲಾಲ್‌ಕೃಷ್ಣ ಅಡ್ವಾಣಿ ಅವರ ಮೊದಲ ಸುತ್ತಿನ ಪ್ರಚಾರಕ್ಕೆ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ.

ಬಿಜೆಪಿ ಪ್ರಚಾರ ನೀರಸವಾಗಲು ಮುಖ್ಯ ಕಾರಣ ಮಾಜಿ ಪ್ರಧಾನಿ ಅಟಲಬಿಹಾರಿ ವಾಜಪೇಯಿ ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದು ಪ್ರಚಾರದಲ್ಲಿ ಭಾಗವಹಿಸಲು ಸಾಧ್ಯವಾಗದೆ ಇರುವುದು. ಉತ್ತರಪ್ರದೇಶದ ಜತೆ ಆಪ್ತ ಸಂಬಂಧ ಹೊಂದಿರುವ ವಾಜಪೇಯಿ ಅವರಿಗೆ ಪಕ್ಷವನ್ನು ಮೀರಿದ ಅಭಿಮಾನಿಗಳು ಹಿಂದುಗಳಲ್ಲಿ ಮಾತ್ರವಲ್ಲ ಮುಸ್ಲಿಮರಲ್ಲಿಯೂ ಇಲ್ಲಿದ್ದಾರೆ. ರಾಮಮಂದಿರ ನಿರ್ಮಾಣದ ಬಗ್ಗೆ ಬಿಜೆಪಿ ಗಟ್ಟಿದನಿಯಲ್ಲಿ ಮಾತನಾಡದಿರುವ ಈ ಚುನಾವಣೆಯಲ್ಲಿ ವಾಜಪೇಯಿ ಮಾತುಗಳನ್ನು ಜನ ಕೇಳುತ್ತಿದ್ದರೇನೋ?

ಇದಕ್ಕಿಂತಲೂ  ದೊಡ್ಡ ಹಿನ್ನಡೆ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಗೈರುಹಾಜರಿ. ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿಸಲಾಗುತ್ತಿರುವ ಮೋದಿ ಇಲ್ಲಿಯ ವರೆಗೆ ಉತ್ತರಪ್ರದೇಶಕ್ಕೆ ಕಾಲಿಟ್ಟಿಲ್ಲ. ಇದಕ್ಕೆ ಮೊದಲ ಕಾರಣ ಮೋದಿ ಅವರ ಹಳೆಯ ವಿರೋಧಿ ಸಂಜಯ್ ಜೋಷಿ ಉತ್ತರಪ್ರದೇಶದಲ್ಲಿ ಪಕ್ಷದ ಚುನಾವಣಾ ಸಂಚಾಲಕರಾಗಿರುವುದು. ಜೋಷಿ ಮೋದಿಯವರನ್ನು ಕರೆಯುತ್ತಿಲ್ಲ, ಕರೆಯದೆ ಅವರು ಬರುತ್ತಿಲ್ಲ. ಮೋದಿ ಸ್ನೇಹಿತ ಗಡ್ಕರಿ ಮತ್ತು ಜೋಷಿ ಸಂಬಂಧ ಕೂಡಾ ಸೌಹಾರ್ದಯುತವಾಗಿಲ್ಲ.


 ಪಕ್ಷದೊಳಗಿನ ನಾಯಕರ ವ್ಯಕ್ತಿ ಪ್ರತಿಷ್ಠೆಯ ಕಾಳಗ ಕೂಡಾ ಪ್ರಚಾರ ಕಾರ್ಯದಲ್ಲಿ ಬಿಜೆಪಿ ಉಳಿದ ಎಲ್ಲ ಪಕ್ಷಗಳಿಗಿಂತ ಹಿಂದಕ್ಕೆ ಹೋಗಿ ನಿಲ್ಲುವಂತೆ ಮಾಡಿದೆ. ಉದ್ದೇಶಪೂರ್ವಕವಾಗಿ ಉಗ್ರ ಹಿಂದುತ್ವದ ಪ್ರಚಾರದಿಂದ ಬಿಜೆಪಿ ಹಿಂದೆ ಸರಿದಿರುವುದು ಕೂಡಾ ಅದರ ಪ್ರಚಾರ ಜನಾಕರ್ಷಣೆ ಕಳೆದುಕೊಳ್ಳಲು ಕಾರಣವಾಗಿರಬಹುದು. ಬಿಜೆಪಿ ಬಾಯಿಯಲ್ಲಿ ಕಾಂಗ್ರೆಸ್ ಮಾತುಗಳನ್ನು ಕೇಳಲು ಯಾರು ಇಷ್ಟಪಡುತ್ತಾರೆ?

ಈಗಲೂ ಚುನಾವಣಾ ಪ್ರಚಾರ ಸಭೆಗಳಲ್ಲಿ ಹೆಚ್ಚು ಜನ ಸೇರುತ್ತಿರುವುದು ಬಿಎಸ್‌ಪಿ ನಾಯಕಿ ಮಾಯಾವತಿಯವರಿಗೆ. ಆದರೆ ಮಾಧ್ಯಮದವರನ್ನು ಕಾನ್ಸಿರಾಮ್ ದಿನದಿಂದಲೂ ದೂರ ಇಟ್ಟುಕೊಂಡು ಬಂದಿರುವ ಬಿಎಸ್‌ಪಿ ಧೋರಣೆಯನ್ನು ಮಾಯಾವತಿ ಅವರೂ ಮುಂದುವರಿಸಿಕೊಂಡುಹೋಗಿದ್ದಾರೆ. ಈಗಲೂ ಅವರ ಸಂದರ್ಶನ-ಬೈಟ್‌ಗಳಿಗೆ ಅವಕಾಶ ಕಡಿಮೆ. ಅವರ ಸಮೀಪ ಸುಳಿಯಲೂ ಕೂಡಾ ಅನುಮತಿ ಇಲ್ಲ.

ಮಾಧ್ಯಮದವರನ್ನು ಅವರೂ ನಂಬಿಲ್ಲ, ಮಾಧ್ಯಮದವರಿಗೂ ಅವರು ಬೇಕಿಲ್ಲ. ಆದುದರಿಂದ ಬಿಎಸ್‌ಪಿ ಕುರಿತ ಒಳಿತ-ಕೆಡುಕು ಯಾವುದೂ ಪ್ರಚಾರವಾಗುತ್ತಿಲ್ಲ. ಆದರೆ ಬಿಎಸ್‌ಪಿ ಚಿಹ್ನೆಯಾದ ಆನೆಯ ಮೂರ್ತಿಗಳಿಗೆ ಮುಸುಕುಹಾಕುವ ಚುನಾವಣಾ ಆಯೋಗದ ನಿರ್ಧಾರ ಆ ಪಕ್ಷಕ್ಕೆ ಪುಕ್ಕಟೆ ಪ್ರಚಾರ ನೀಡಿದೆ. ಬುಧವಾರ ಸಂಜೆ ಇಲ್ಲಿಗೆ ಸಮೀಪದ ದಿಯೋರಿಯಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಯಾವತಿ `ಆನೆಗಳ ಮೂರ್ತಿಗಳಿಗೆ ಮುಸುಕು ಹಾಕಿ ಜನರ ಗಮನಸೆಳೆದ ಕೇಂದ್ರ ಚುನಾವಣಾ ಆಯೋಗಕ್ಕೆ ಧನ್ಯವಾದಗಳು~ ಎಂದು ವ್ಯಂಗ್ಯವಾಡಿದರು.

ಕಳೆದ 3-4 ಚುನಾವಣೆಗಳಲ್ಲಿ ಅಮಿತಾಬ್ ಬಚ್ಚನ್ ಕುಟುಂಬ ಆಗಮಿಸದೆ ಸಮಾಜವಾದಿ ಪಕ್ಷದ ಚುನಾವಣಾ ಪ್ರಚಾರ ಪೂರ್ಣಗೊಂಡಿದ್ದೇ ಇಲ್ಲ. ಈ ಬಾರಿ ಬಚ್ಚನ್ ಕುಟುಂಬ ಬಂದಿಲ್ಲ, ಅವರ ಹಿಂದೆ ವಿದೂಷಕನಂತಿದ್ದ ಅಮರ್‌ಸಿಂಗ್ ಕೂಡಾ ದೂರ ಸರಿದು ಯಾವುದೋ ಹೊಸ ಪಕ್ಷ ಕಟ್ಟಿ ಬಹಿರಂಗವಾಗಿ ಎಸ್‌ಪಿ ವಿರುದ್ದ, ಗುಟ್ಟಾಗಿ ಕಾಂಗ್ರೆಸ್ ಪರ ಪ್ರಚಾರ ನಡೆಸುತ್ತಿದ್ದಾರೆ. ದಕ್ಷಿಣದ ಚಿತ್ರತಾರೆ ಜಯಪ್ರದಾ ಅವರ ಜತೆ ಇದ್ದಾರೆ. ಇವರೆಲ್ಲರೂ ಒಂದು ಕಾಲದಲ್ಲಿ ಎಸ್‌ಪಿ ಪರ ಪ್ರಚಾರದಲ್ಲಿ ತೊಡಗಿದ್ದವರು. ಒಂದಷ್ಟು ಎಸ್‌ಪಿ ಮತದಾರರಿಗೆ ಇದು ರೂಢಿಯೂ ಆಗಿಬಿಟ್ಟಿತ್ತೇನೋ? ಈಗ ಎಸ್‌ಪಿ ಒಮ್ಮಿಂದೊಮ್ಮೆಲೇ ಹಳೆಯ ಗ್ಲಾಮರ್ ಕಳೆದುಕೊಂಡು ಗಂಭೀರವಾಗಿ ಬಿಟ್ಟಿರುವುದರಿಂದ ಅದರ ಪ್ರಚಾರ ಕೂಡಾ ಮಂಕಾಗಿ ಹೋಗಿದೆ.

ಉಳಿದ ಪಕ್ಷಗಳ ಈ ದೌರ್ಬಲ್ಯ ರಾಹುಲ್‌ಗಾಂಧಿಗೆ ನೆರವಾಗಿದೆ. ಒದಗಿಬಂದ ಅವಕಾಶವನ್ನು ಅಣ್ಣ-ತಂಗಿಯರಿಬ್ಬರೂ ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ಪ್ರಿಯಾಂಕ ಪ್ರಚಾರ ರಾಯಬರೇಲಿ, ಅಮೇಥಿಗೆ ಸೀಮಿತವಾಗಿದ್ದರೆ ರಾಹುಲ್ ರಾಜ್ಯದ ತುಂಬಾ ಪ್ರಚಾರ ಮಾಡುತ್ತಿದ್ದಾರೆ. ಪ್ರತಿಯೊಬ್ಬರೂ ದಿನಕ್ಕೆ ಸರಾಸರಿ 20 ಸಭೆಗಳನ್ನು ನಡೆಸುತ್ತಿದ್ದಾರೆ.

ಸುಲಲಿತ ಹಿಂದಿ, ಸಂದರ್ಭಕ್ಕೆ ತಕ್ಕ ಆವೇಶ ಮತ್ತು ಜನರೊಡನೆ ಬೆರೆಯುವ ಗುಣ ನಿಸ್ಸಂಶಯವಾಗಿ ರಾಹುಲ್ ಗಾಂಧಿಯನ್ನು ಎಲ್ಲರ ಕಣ್ಮಣಿಯನ್ನಾಗಿ ಮಾಡಿದೆ. `ವ್ಯತ್ಯಾಸ ಏನೆಂದರೆ ರಾಹುಲ್ ಗಾಂಧಿ ಸಭೆಗೆ ಬಂದವರು ಅವರನ್ನು ನೋಡಲು ಬಂದವರು. ಮಾಯಾವತಿ ಅವರ ಸಭೆಗೆ ಬಂದವರು ಅವರಿಗೆ ಮತಹಾಕಲು ಬಂದವರು~ ಎನ್ನುತ್ತಾರೆ ಇಲ್ಲಿನ ಹಿರಿಯ ಪತ್ರಕರ್ತರೊಬ್ಬರು. ನಿಜ ಇರಬಹುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT