ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾತಂತ್ರ ಉಳಿಸಿಗೆ ಚಾಲನೆ: ಪ್ರತಿಪಕ್ಷಗಳ ವಿರುದ್ಧ ಗುಡುಗು

Last Updated 6 ಫೆಬ್ರುವರಿ 2011, 9:45 IST
ಅಕ್ಷರ ಗಾತ್ರ

ಚಿಕ್ಕೋಡಿ: ‘ರಾಜ್ಯಪಾಲರನ್ನು ಹಟಾವೋ ಮಾಡುವುದಕ್ಕಿಂತ ರಾಜ್ಯಪಾಲರನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಪ್ರತಿಪಕ್ಷಗಳನ್ನು ಹಟಾವೋ ಮಾಡಬೇಕಾದ ಅಗತ್ಯವಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.ರಾಜ್ಯಪಾಲರ ವಿರುದ್ಧ ರಾಜ್ಯ ಬಿಜೆಪಿ ಇಲ್ಲಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಪ್ರಜಾತಂತ್ರ ಉಳಿಸಿ’ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.

‘ನನ್ನ ರಾಜೀನಾಮೆಗೆ ಆಗ್ರಹಪಡಿಸುವ ಕಾಂಗ್ರೆಸ್ ನಾಯಕರು ಬಹಿರಂಗ ಚರ್ಚೆಗೆ ಬರಲಿ. ನನಗೆ ಪುಕ್ಕಟೆಯಾಗಿ ಅಧಿಕಾರ ಬಂದಿಲ್ಲ. ಹಲವು ವರ್ಷಗಳಿಂದ ಹೋರಾಟ ಮಾಡಿ, ಬೆವರು ಸುರಿಸಿ ಅಧಿಕಾರ ಪಡೆದಿದ್ದೇವೆ. ನನ್ನ ರಾಜೀನಾಮೆ ಕೇಳಲು ಇವರ್ಯಾರು’ ಎಂದು  ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

‘ಜೆಡಿಎಸ್ ಮುಖಂಡರು ನಾನು ಬೇನಾಮಿ ಆಸ್ತಿ ಗಳಿಸಿದ್ದಾಗಿ ಆರೋಪ ಮಾಡುತ್ತಿದ್ದಾರೆ. ಅದನ್ನು ಅಗತ್ಯ ದಾಖಲೆಗಳ ಸಮೇತ ಸಾಬೀತುಪಡಿಸಿದರೆ  ಮಾತ್ರ  ರಾಜೀನಾಮೆ ನೀಡಲು ತಾವು ಸಿದ್ಧ.  ದೇವೇಗೌಡ ಮತ್ತು ಅವರ ಮಕ್ಕಳು ನನ್ನ ಒಂದು ಮುಖವನ್ನು ಮಾತ್ರ ನೋಡಿದ್ದಾರೆ.  ಬೆನ್ನು ತೋರಿಸಿ ಓಡಿ ಹೋಗುವ ಜಾಯಮಾನ ನನ್ನದ್ದಲ್ಲ. ರಾಜ್ಯದ ಜನತೆಯ ಬೆಂಬಲ ನಮಗಿದೆ ಎಂದು ಹೇಳಿದರು.

ಸರಕಾರದ ಸಾಧನೆಗಳ ಬಗೆಗೆ ಒಂದೆರೆಡು ತಿಂಗಳುಗಳಲ್ಲಿ ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ಜನಾಭಿಪ್ರಾಯ ಸಂಗ್ರಹಿಸುತ್ತೇನೆ. ಜನರು ನಮ್ಮ ಸರಕಾರದ ಬಗೆಗೆ ಅತೃಪ್ತಿ ವ್ಯಕ್ತಪಡಿಸಿದ್ದಲ್ಲಿ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ನಗಾರಿ ಬಾರಿಸುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಕೇಂದ್ರ ಸರಕಾರದಲ್ಲಿ ಮಂತ್ರಿಸ್ಥಾನ ಗಿಟ್ಟಿಸಿಕೊಳ್ಳುವ ದುರಾಸೆಯಿಂದ ರಾಜ್ಯ ಬಿಜೆಪಿ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.  ಸಂವಿಧಾನ ವಿರೋಧಿ ರಾಜ್ಯಪಾಲರನ್ನು ರಾಜ್ಯದಿಂದ ತೊಲಗಿಸಬೇಕು ಎಂದು ಘೋಷಣೆ ಕೂಗಿದರು.

ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, ಸಹಕಾರ ಸಚಿವ ಲಕ್ಷ್ಮಣ ಸವದಿ, ಸಂಸದರಾದ ರಮೇಶ ಕತ್ತಿ, ಸುರೇಶ ಅಂಗಡಿ ಮಾತನಾಡಿದರು. ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಸ್ವಾಗತಿಸಿದರು. ರಾಜ್ಯಸಭೆ ಸದಸ್ಯ ಡಾ.ಪ್ರಭಾಕರ ಕೋರೆ, ಜಿ.ಪಂ. ಅಧ್ಯಕ್ಷ ಈರಣ್ಣ ಕಡಾಡಿ, ಶಾಸಕರಾದ ದುರ್ಯೋಧನ ಐಹೊಳೆ, ಸಂಜಯ ಪಾಟೀಲ, ಅಭಯ ಪಾಟೀಲ, ಜಗದೀಶ ಮೆಟಗುಡ್ಡ, ಪ್ರಹ್ಲಾದ ರೇಮಾನಿ, ಅರುಣ ಶಹಾಪುರ, ಪುರಸಭೆ ಅಧ್ಯಕ್ಷೆ ಶೋಭಾ ಚೆನ್ನವರ, ಮಾಜಿ ಸಚಿವ ಶಶಿಕಾಂತ ನಾಯಿಕ, ಮಾಜಿ ಶಾಸಕರಾದ ಮನೋಹರ ಕಟ್ಟೀಮನಿ, ದತ್ತು ಹಕ್ಯಾಗೋಳ, ಎಂ.ಎಲ್. ಮುತ್ತೆನ್ನವರ, ಮಹಾದೇವಪ್ಪ ಯಾದವಾಡ, ಮಹಾಜನಶೆಟ್ಟರ, ಹಾಗೂ ಡಾ.ಭೀಮಶಿ ಜಾರಕಿಹೊಳಿ, ಶಶಿಕಲಾ ಜೊಲ್ಲೆ, ನಿರ್ಮಲಕುಮಾರ ಸುರನ್ನಾ, ಅಣ್ಣಾಸಾಹೇಬ ಜೊಲ್ಲೆ,  ತುಬಾಕಿ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT