ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವ ಎತ್ತ ಸಾಗಿದೆ: ಗಣತಂತ್ರ ಅಲ್ಲ ಧನತಂತ್ರ

Last Updated 21 ಜನವರಿ 2011, 19:30 IST
ಅಕ್ಷರ ಗಾತ್ರ

ದೇಶದ ಗಣತಂತ್ರವನ್ನು ಅಂಗೀಕರಿಸುವ ಹೊತ್ತಿನಲ್ಲಿ ಸಂವಿಧಾನದ ನಿರ್ಮಾಪಕರಿಗೆ ಇದ್ದ ಆದರ್ಶ ಮತ್ತು ಗುರಿಗಳೇನು ಎಂಬುದನ್ನು ನೆನೆದುಕೊಂಡರೆ ನಾವು ಆ ಕಲ್ಪನೆಗಳಿಂದ ಬಹಳ ದೂರ ನಡೆಯುತ್ತಿರುವ ಹಾಗೆ ಅನಿಸುತ್ತದೆ. ಇದು ಹತಾಶೆಗೆ ಎಡೆ ಮಾಡುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನೆಲೆಗೊಳಿಸುವಾಗ ನಮ್ಮ ಸಂವಿಧಾನ ಅದನ್ನೊಂದು ಸರ್ವತಂತ್ರ ಸ್ವತಂತ್ರ ಜಾತ್ಯತೀತ ಸಮಾಜವಾದಿ ಗಣತಂತ್ರವನ್ನಾಗಿ ಪರಿಭಾವಿಸಿಕೊಂಡಿತ್ತು. ಸಂವಿಧಾನದ ಸ್ಪಷ್ಟ ನಿಲುವುಗಳ ಹೊರತಾಗಿಯೂ ನಮ್ಮ ದೇಶದ ಪ್ರಜಾಪ್ರಭುತ್ವದ ಗುಣಮಟ್ಟ ಚುನಾವಣೆಯಿಂದ ಚುನಾವಣೆಗೆ, ವರ್ಷದಿಂದ ವರ್ಷಕ್ಕೆ ಹದಗೆಡುತ್ತಲೇ ಬರುತ್ತಿರುವುದಕ್ಕೆ ಕಾರಣವೇನಿರಬಹುದು ಎಂಬುದನ್ನು ನಾವು ಸ್ಪಷ್ಟಗೊಳಿಸಿಕೊಳ್ಳಬೇಕಾದ ಅಗತ್ಯವಿದೆ.

ಜನರೆದುರು ಮಂಡಿತವಾದ ಸಂವಿಧಾನದ ಘೋಷಿತ ಆಶಯಗಳ ಸ್ವರೂಪಕ್ಕೆ ಭಿನ್ನವಾದ ಗುಪ್ತ ನಿಲುವುಗಳೂ ಅಧಿಕಾರಾರೂಢರಿಗಿದ್ದಿರಬಹುದೇ ಎಂಬ ಅನುಮಾನವನ್ನೂ ತಳೆಯಬೇಕಾಗುತ್ತದೆ.

ದೇಶದ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವುದೆಂದರೆ ಅದು ಕೇವಲ ರಾಜಕೀಯವಾದ ನಿಲುವುಗಳಿಂದ ಮಾತ್ರ ಸಾಧ್ಯವಿಲ್ಲ. ಅದು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ನೀತಿಗಳಾಗಿಯೂ ಕಾರ್ಯಾಚರಣೆಯಲ್ಲಿರಬೇಕಾಗುತ್ತದೆ.
ದೇಶದ ಬಹುಸಂಖ್ಯಾತ ಮಂದಿ ಅನಕ್ಷರಸ್ಥರೂ, ಬಡವರೂ ಹಾಗೂ ಸಾಂಸ್ಕೃತಿಕವಾಗಿ ಕನಿಷ್ಠ ಶ್ರೇಣೀಕರಣದ ಪರಿಗಣನೆಗೊಳಪಟ್ಟವರೂ ಆಗಿರುವಾಗ ಪ್ರತಿಯೊಬ್ಬರ ಮತಕ್ಕೂ ಒಂದೇ ಮೌಲ್ಯ ಎಂಬುದು ಅದರ ನಿಜಾಚರಣೆಯಲ್ಲಿರುವುದಕ್ಕೆ ಸಾಧ್ಯವಾಗುವುದಿಲ್ಲ. ದೇಶದಲ್ಲಿರುವ ದಮನಿತ ಸಮುದಾಯಗಳಿಗೆ ಸಾಮಾಜಿಕ ಸಮಾನತೆ ದೊರೆಯದ ಹೊರತು ನಮಗೆ ಸಿಗುವ ರಾಜಕೀಯ ಸ್ವಾತಂತ್ರ್ಯವೆನ್ನುವುದು ಮೇಲ್ಜಾತಿಗಳ ರಾಜಕೀಯಾಧಿಪತ್ಯವಾಗಿ ಬಿಡುವ ಸಾಧ್ಯತೆ ಇದೆ ಎಂಬ ಮುಂದಾಲೋಚನೆಯಿಂದಲೇ ಡಾ. ಬಿ ಆರ್ ಅಂಬೇಡ್ಕರ್ ಅವರು ಮೀಸಲಾತಿಯ ಅವಕಾಶವನ್ನು ಪ್ರತಿಪಾದಿಸಿದರು.

ಇದು ಒಂದು ಹಂತದ ಮಟ್ಟಿಗೆ ಕೆಲವೇ ಜಾತಿಗಳ ಆಧಿಪತ್ಯ ಏರ್ಪಡುವ ಅಪಾಯವನ್ನು ನಿವಾರಿಸಿತಾದರೂ ದುರ್ಬಲ ವರ್ಗಗಳ ಸಬಲೀಕರಣವೆನ್ನುವುದು ಸಾಕಷ್ಟು ಪ್ರಮಾಣದಲ್ಲಿ ಅಂದುಕೊಂಡಷ್ಟು ವೇಗವಾಗಿ ಕೈಗೂಡಲಿಲ್ಲ. ಆದ್ದರಿಂದ ಈಗಲೂ ರಾಜಕೀಯದಲ್ಲಿ ಬಲಿಷ್ಠ ಜಾತಿಗಳ ಮೇಲಾಧಿಪತ್ಯವೆನ್ನುವುದು  ಮುಂದುವರಿದಿದೆ. ದುರ್ಬಲ ಜಾತಿಗಳ ಮತಗಳನ್ನು ಕಡೆಗಣಿಸಿ, ಬಲಿಷ್ಠ ಜಾತಿಗಳು ತಮ್ಮಷ್ಟಕ್ಕೆ ತಾವೇ ರಾಜಕೀಯ ಬಹುಮತವನ್ನು ಪಡೆಯುವುದು ಅಸಾಧ್ಯವಾಗಿರುವುದರಿಂದ ಅನಿವಾರ್ಯವಿರುವ ಮಟ್ಟಿಗೆ ಅಂತಹ ಜಾತಿ ಪ್ರತಿನಿಧಿಗಳಿಗೆ ಅಧಿಕಾರ ಸ್ಥಾನಗಳ ನಿಯೋಜನೆಯನ್ನು ಒದಗಿಸಿಕೊಡುವ ತಂತ್ರಗಾರಿಕೆ ಬಹುಪಾಲು ಎಲ್ಲಾ ರಾಜಕೀಯ ಪಕ್ಷಗಳಲ್ಲಿದೆ.

ಅಧಿಕಾರ ಸ್ಥಾನಗಳ ನಿಯೋಜನೆ ಎನ್ನುವುದು ನಿಜವಾದ ಅಧಿಕಾರ ಸೂತ್ರಗಳನ್ನು ವಹಿಸಿಕೊಡುವ ಮಟ್ಟದಲ್ಲಿ ಇಲ್ಲವೆಂಬುದನ್ನು ನಾವು ನೋಡುತ್ತಿದ್ದೇವೆ. ದುರ್ಬಲ ಜಾತಿ ಪ್ರತಿನಿಧಿಗಳಿಗೆ ಹೀಗೆ ತೋರಿಕೆಯ ಅಧಿಕಾರ ನಿಯೋಜನೆಯ ತಂತ್ರಗಾರಿಕೆಯನ್ನು ರಾಜಕೀಯ ಪಕ್ಷಗಳು ಪ್ರದರ್ಶಿಸುತ್ತಾ ಬಂದಿರುವುದಕ್ಕೆ ಕಾರಣ ಸಂವಿಧಾನದ ನಿಯಮಾವಳಿ. ಈ ಪ್ರವೃತ್ತಿಯಿಂದಾಗಿ ನಮ್ಮ ದೇಶದ ಪ್ರಜಾಪ್ರಭುತ್ವ ಅದರ ಗುಣಮಟ್ಟದಲ್ಲಿ ನಿಜವಾಗಿಯೂ ಜಾತ್ಯತೀತವಾದ ಪ್ರಜಾಪ್ರಭುತ್ವವಾಗಿ ನೆಲೆಗೊಳ್ಳುವುದು ಸಾಧ್ಯವಾಗುತ್ತಿಲ್ಲ.

ಬೇರೆ ಬೇರೆ ಸಮುದಾಯಗಳ ಕ್ರಿಯಾಶೀಲ ಪಾಲುದಾರಿಕೆ ಇರದಿದ್ದರೆ ಪ್ರಜಾಪ್ರಭುತ್ವವು ಬಲಿಷ್ಠ ಜಾತಿಗಳ ಪ್ರಭುತ್ವ ಮಾತ್ರ ಆಗಿ ಬಿಡುವ ಅಪಾಯವನ್ನು ಪರಿಗಣಿಸಿದ ಹಾಗೆಯೇ, ದೇಶದಲ್ಲಿನ ಸಂಪತ್ತು ಮತ್ತು ಸಂಪನ್ಮೂಲಗಳ ಒಡೆತನ ಸೂಕ್ತವಾದ ನಿಯಂತ್ರಣಗಳಿಲ್ಲದೆ ಹೋದಲ್ಲಿ ಗಣತಂತ್ರವೆಂಬುದು ಹಣ ತಂತ್ರವಾಗಿಯೂ, ಜನಪ್ರಭುತ್ವವೆಂಬುದು ಧನಪ್ರಭುತ್ವವಾಗಿಯೂ ಮಾರ್ಪಡುವ ಬಗ್ಗೆ ಸಂವಿಧಾನ ನಿರ್ಮಾಪಕರಲ್ಲಿ ಕೆಲವರಿಗೆ ಮಾತ್ರ ಸ್ಪಷ್ಟವಾದ ತಿಳುವಳಿಕೆ ಇತ್ತು. ಮಿಶ್ರ ಆರ್ಥಿಕ ವ್ಯವಸ್ಥೆಯಲ್ಲಿ ಖಾಸಗಿ ಒಡೆತನಕ್ಕೆ ಅವಕಾಶವಿದ್ದ ಹಾಗೆಯೇ ಸಮಾಜವಾದಿ ನಿಯಂತ್ರಣದ ಅಂಶವೂ ಇರಬೇಕೆಂಬುದನ್ನು ಅಂಬೇಡ್ಕರ್ ಹಾಗೂ ಇತರೆ ಕೆಲವರು ಪ್ರತಿಪಾದಿಸಿದ್ದರು. ಆದರೆ ನಂತರದಲ್ಲಿ ಬಂದ ಸಂವಿಧಾನದ ತಿದ್ದುಪಡಿಗಳು ಕ್ರಮೇಣ ಸಮಾಜವಾದಿ ನಿಯಂತ್ರಣದ ಅಂಶಗಳನ್ನು ದುರ್ಬಲಗೊಳಿಸುತ್ತಾ ಸಂಪೂರ್ಣ ಖಾಸಗೀಕರಣ ಹಾಗೂ ಉದಾರೀಕರಣದ ಇಂದಿನ ಪರಿಸ್ಥಿತಿಗೆ ತಂದು ನಿಲ್ಲಿಸಿದವು.

ಇಂದು ಖಾಸಗಿಯವರು ತಮ್ಮ ಒಡೆತನದಲ್ಲಿ ಹೊಂದಿರಬಹುದಾದ ಸಂಪತ್ತು ಹಾಗೂ ನಿಯಂತ್ರಣದಲ್ಲಿಟ್ಟುಕೊಳ್ಳಬಹುದಾದ ಸಂಪನ್ಮೂಲಗಳಿಗೆ ಮಿತಿಗಳಿಲ್ಲದಂತಾಗಿದೆ. ಹಾಗಾಗಿ ಸಾವಿರಾರು ಕೋಟಿ ರೂಪಾಯಿಗಳ ಆದಾಯವನ್ನು ಹೊಂದಿರುವ ವ್ಯಕ್ತಿಗಳು, ಕಂಪೆನಿಗಳು ದೇಶದ ತುಂಬ ತುಂಬಿಕೊಳ್ಳುತ್ತಿವೆ. ಅಕ್ರಮವಾಗಿ ಹಣ ಗಳಿಸುವುದು, ಅಪಾರ ಸಂಪತ್ತಿಗೆ ಒಡೆಯರಾಗಿರುವುದು ಹಾಗೂ ಆ ಹಣವನ್ನು ತಮ್ಮ ವಿವೇಚನೆಯನುಸಾರ ಖರ್ಚು ಮಾಡುವುದು ಎಂಬುದಕ್ಕೆ ಯಾವುದೇ ಕಟ್ಟುಪಾಡುಗಳು ಅದರ ನಿಜಾರ್ಥದಲ್ಲಿ ಇಲ್ಲ. ಇವೆ ಎಂದು ಹೇಳಿಕೊಳ್ಳಬಹುದಾದ ಕೆಲವು ನಿಯಂತ್ರಣಗಳು ವಾಸ್ತವದಲ್ಲಿ ಜಾರಿಯಲ್ಲಿರುವುದಿಲ್ಲ.

ಅತಿ ಹೆಚ್ಚಿನ ಸಂಪತ್ತನ್ನು ತಮ್ಮ ಕೈಯಲ್ಲಿಟ್ಟುಕೊಂಡಿರುವ ವ್ಯಕ್ತಿಗಳು ಇಲ್ಲಿಗೆ ಮೂರುನಾಲ್ಕು ದಶಕಗಳ ಹಿಂದೆ ತಮ್ಮ ಸಂಪತ್ತನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ತಮಗೆ ಅನುಕೂಲಕರವಾದ ನೀತಿ ನಿಯಮಾವಳಿ ಜಾರಿಗೊಳಿಸುವ ಪಕ್ಷಗಳು ಅಧಿಕಾರಕ್ಕೆ ಬರಲು ತಮ್ಮ ಕಳ್ಳ ಹಣದ ಮೂಲಕ ನೆರವು ನೀಡುವ ವಿಧಾನ ಆರಂಭವಾಯಿತು. ಅದು ಈಗ ಕಪ್ಪು ಹಣವುಳ್ಳವರೇ ನೇರವಾಗಿ ರಾಜಕೀಯ ಪಕ್ಷಗಳ ನೇತೃತ್ವ ವಹಿಸುವುದು ಮತ್ತು ರಾಜಕೀಯಾಧಿಕಾರದ ಮುಖ್ಯ ಸ್ಥಾನಗಳನ್ನು ಕೈವಶ ಮಾಡಿಕೊಳ್ಳುವುದು ಎಂಬ ಹಂತಕ್ಕೆ ಬಂದು ನಿಂತಿದೆ.

ವ್ಯಕ್ತಿ ವರ್ಚಸ್ಸು, ನಾಯಕತ್ವದ ಗುಣಗಳು, ಜನಸಮೂಹಗಳ ಬೆಂಬಲ ಮುಂತಾದ ಅಂಶಗಳ ಹಿನ್ನೆಲೆಯಲ್ಲಿ ದೊರೆಯುತ್ತಿದ್ದ ರಾಜಕೀಯಾಧಿಕಾರದ ಸ್ಥಾನ ಎಂಬುದು ಇಂದು ಕೇವಲ ಹೆಚ್ಚು ಹಣ ಖರ್ಚು ಮಾಡುವ ಸಾಮರ್ಥ್ಯವುಳ್ಳವರಿಗೆ ಎನ್ನುವ ಹಂತಕ್ಕೆ ಬಂದಿದೆ.

ಚುನಾವಣೆಗೆ ಯಾವ ಪಕ್ಷ ಅಪಾರ ಹಣವನ್ನು ಕಳ್ಳದಾರಿಗಳಲ್ಲಿ ಹಂಚಲು ಶಕ್ತವಾಗಿದೆಯೋ ಅಂತಹ ಪಕ್ಷ ರಾಜಕೀಯಾಧಿಕಾರ ಪಡೆದುಕೊಳ್ಳುತ್ತದೆ ಎನ್ನುವಷ್ಟು ಕಳಪೆ ದರ್ಜೆಯ ಪ್ರಜಾಪ್ರಭುತ್ವವಾಗಿ ಮಾರ್ಪಟ್ಟಿದೆ. ಅತಂತ್ರ ರಾಜಕೀಯ ಸನ್ನಿವೇಶ ಉಂಟಾದಾಗ ಇದು ಮತ್ತಷ್ಟು ನಿರ್ಣಾಯಕ ಪಾತ್ರ ವಹಿಸುತ್ತಿದೆ. ರಾತ್ರೋರಾತ್ರಿ ಜನಪ್ರತಿನಿಧಿಗಳು ತಮ್ಮ ಪಕ್ಷ ನಿಷ್ಠೆ, ವ್ಯಕ್ತಿ ನಿಷ್ಠೆ ಬದಲಿಸುವುದು ಇಂತಹ ಹಣದ ಆಮಿಷದಿಂದಾಗಿ ಎಂಬುದು ಈಗ ಗುಟ್ಟಾಗಿರುವ ವಿಷಯವಲ್ಲ. ಆ ರೀತಿಯಾದ ಹಣದ ಹರಾಜಿನಲ್ಲಿ ತಮ್ಮ ಸದಸ್ಯರು ಮಾರಾಟವಾಗಿ ಬಿಡಬಹುದೆಂಬ ಭಯದಲ್ಲಿ ತಮ್ಮ ಬೆಂಬಲಿಗರನ್ನೆಲ್ಲ ಸರ್ವ ಸುಖ ಒದಗಿಸುವ ರೆಸಾರ್ಟ್ ಬಂಧನದಲ್ಲಿಡುವ ಪರಿಪಾಠ ಕೂಡ ಇವತ್ತಿನ ಪ್ರಜಾಪ್ರಭುತ್ವದ ಗುಣಮಟ್ಟಕ್ಕೊಂದು ಸಾಕ್ಷ್ಯಾಧಾರವಾಗಿದೆ.

ದೀರ್ಘಕಾಲೀನ ದೃಷ್ಟಿಕೋನವುಳ್ಳ, ದೇಶವನ್ನು ಸುಸ್ಥಿರ ಅಭಿವೃದ್ಧಿಯೆಡೆಗೆ ಕೊಂಡೊಯ್ಯುವ ಚುನಾವಣಾ ಪ್ರಣಾಳಿಕೆಗಳಿಗಿಂತ ಜನರನ್ನು ಪ್ರಲೋಭನೆಗೊಳಿಸುವ ‘ಕೊಡುಗೆ ಘೋಷಣೆಗಳೇ ಚುನಾವಣೆಯಲ್ಲಿ ಮತಗಳನ್ನು ಆಕರ್ಷಿಸುವ ವಿಧಾನವಾಗಿ ಹೋಗಿರುವುದು, ಮತದಾರರೂ ಕೂಡ ಇಂತಹ ಘೋಷಣೆಗಳಿಗೆ ಅಲೋಚನಾರಹಿತರಾಗಿ ಮಾರಾಟವಾಗಿ ಬಿಡಲು ಉತ್ಸಾಹ ಪ್ರದರ್ಶಿಸುತ್ತಿರುವುದು ಪ್ರಜಾಪ್ರಭುತ್ವವು ತಲುಪುತ್ತಿರುವ ಅಧೋಗತಿಗೆ ನಿದರ್ಶನವಿರುವಂತಿದೆ.

ಮತಗಳನ್ನು ಕೊಳ್ಳಲು ಚುನಾವಣೆಗೆ ಮೊದಲೇ ಹಂಚುವ ನಗದು ರೂಪದ ಅಕ್ರಮ ಲಂಚ, ಚುನಾವಣೆಯಲ್ಲಿ ಗೆದ್ದ ಮೇಲೆ ಸರ್ಕಾರದಿಂದ ಒದಗಿಸುತ್ತೇವೆಂದು ಹೇಳುವ ‘ಕೊಡುಗೆ ಘೋಷಣೆಗಳ ಅಕ್ರಮ ಲಂಚಗಳ ಆಮಿಷಗಳೇ ಇಂದು ಪ್ರಧಾನ ವಹಿಸುತ್ತಿರುವುದು ಈ ಅಧಃಪತನವನ್ನು ನಿದರ್ಶಿಸುತ್ತಿವೆ. ಸಮಾಜದ ಹಿತ, ದೇಶದ ಭವಿಷ್ಯ ಮುಂತಾದ ಅಂಶಗಳಿಗಿಂತ ಹೆಚ್ಚು ವ್ಯಕ್ತಿಗತ ಲಾಭವೊಂದನ್ನೇ ಪರಿಗಣಿಸುವ ಹಂತಕ್ಕೆ ಮತದಾರರು ಬಂದು ನಿಂತಿರುವುದು ನಮ್ಮ ಗಣತಂತ್ರದ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಪ್ರಹಸನದ ಮಟ್ಟಕ್ಕೆ ತಂದು ನಿಲ್ಲಿಸಿದೆ.

ದಮನಿತ ಜನ ಸಮುದಾಯಗಳ ಸಬಲೀಕರಣ ಮತ್ತು ಸಂಪತ್ತಿನ ಒಡೆತನದ ಮೇಲೆ ಸೂಕ್ತ ನಿಯಂತ್ರಣ ಹೊಂದಿರುವ, ದೇಶದ ಎಲ್ಲ ಮುಖ್ಯ ಉತ್ಪಾದನಾ ರಂಗಗಳನ್ನೂ ಸಾಮಾಜಿಕ ಒಡೆತನದ ಅಡಿಯಲ್ಲಿ ತರುವ ತತ್ವಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದು ಸಾಧ್ಯವಾಗದಿದ್ದರೆ ಜನತಂತ್ರವನ್ನು ಧನತಂತ್ರವನ್ನಾಗಿಸುತ್ತಿರುವ ವೈಪರೀತ್ಯವನ್ನು ತಡೆಗಟ್ಟುವುದು ಬಹುಶಃ ಅಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT