ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವಕ್ಕೆ ಕೋಮುವಾದ ಧಕ್ಕೆ

Last Updated 9 ಡಿಸೆಂಬರ್ 2013, 9:17 IST
ಅಕ್ಷರ ಗಾತ್ರ

ಮೈಸೂರು: ಉತ್ತರ ಭಾರತದ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಪ್ರಕಟವಾಗಿರುವ ಫಲಿತಾಂಶವನ್ನು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ಎಲ್ಲರೂ ಮುಕ್ತವಾಗಿ ಸ್ವಾಗತಿಸಬೇಕು. ಪ್ರಜೆಗಳು ತಮ್ಮ ಹಕ್ಕನ್ನು ಯೋಗ್ಯವಾಗಿ ಚಲಾಯಿಸಿದ್ದಾರೆ ಎಂದು ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಅಭಿಪ್ರಾಯಪಟ್ಟರು.

ರಾಮಕೃಷ್ಣನಗರದ ನೃಪತುಂಗ ಶಾಲೆಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಭಾನುವಾರ ಹಮ್ಮಿಕೊಂಡಿದ್ದ ‘ಪ್ರಜಾಪ್ರಭುತ್ವಕ್ಕೆ ಗಂಡಾಂತರ– ಕೋಮುವಾದ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ದೆಹಲಿ, ಮಧ್ಯಪ್ರದೇಶ, ರಾಜಸ್ತಾನ ಹಾಗೂ ಛತ್ತೀಸಗಡ ರಾಜ್ಯದ ಜನತೆ ಮತಗಟ್ಟೆಯಲ್ಲಿ ದಾಖಲಿಸಿದ ಅಭಿಪ್ರಾಯವನ್ನು ಒಪ್ಪಿಕೊಳ್ಳಬೇಕು. ಆಡಳಿತದಲ್ಲಿರುವ ಪಕ್ಷ ಭ್ರಷ್ಟಾಚಾರದ ಹಾದಿ ಹಿಡಿದರೆ ಜನತೆ ಪರ್ಯಾಯ ಮಾರ್ಗ ಅನುಸರಿಸಬೇಕಾಗುತ್ತದೆ. ಅದು ಅನಿವಾರ್ಯ ಕೂಡ ಹೌದು ಎಂದು ಪ್ರತಿಪಾದಿಸಿದರು.

ರಾಷ್ಟ್ರೀಯ ಪಕ್ಷವೊಂದು ಗೆಲುವು ಸಾಧಿಸಲು ಅಗತ್ಯವಾದ ಪೂರಕ ವಾತಾವರಣವನ್ನು ಮಾಧ್ಯಮಗಳು ಸೃಷ್ಟಿಸಿವೆ. ಗುಜರಾತ್‌ ನರಮೇದದ ಕುರಿತು ವರದಿ ಮಾಡಿದ್ದ ಮಾಧ್ಯಮಗಳೇ ಅದಕ್ಕೆ ಕಾರಣೀಭೂತನಾದ ವ್ಯಕ್ತಿಯನ್ನು ಎತ್ತಿಹಿಡಿಯುತ್ತಿರುವುದು ದುರಂತ. ಗುಜರಾತ್‌ನಲ್ಲಿರುವ ಉಸಿರು ಕಟ್ಟಿಸುವ ವಾತಾವರಣದ ಕುರಿತು ಯಾವ ವರದಿಗಳೂ  ಪ್ರಕಟವಾಗುತ್ತಿಲ್ಲ. ನರೇಂದ್ರ ಮೋದಿ ಸರ್ಕಾರ ಜನತೆಯ ವಾಕ್‌ ಸ್ವಾತಂತ್ರ್ಯ ಧಮನ ಮಾಡಿದ ಚಿತ್ರಣವನ್ನು ಕಟ್ಟಿಕೊಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವಕ್ಕೆ ಕೋಮುವಾದ ಮಾತ್ರವೇ ಗಂಡಾಂತರವಲ್ಲ. ಕೋಮುವಾದವನ್ನು ಮುಂದೆ ಮಾಡಿದರೆ ಪ್ರಜಾತಂತ್ರವನ್ನು ಉಳಿಸಲು ಸಾಧ್ಯವಿಲ್ಲ. ಮೂರು ಸಾವಿರಕ್ಕೂ ಹೆಚ್ಚು ಜಾತಿಗಳಿರುವ ದೇಶದಲ್ಲಿ ಕೋಮುವಾದವನ್ನು ಸೀಮಿತ ಪರಿಕಲ್‍ಪನೆಯಲ್ಲಿ ಖ್ಯಾನಿಸಲಾಗುತ್ತಿದೆ. ಕೋಮುವಾದಕ್ಕೆ ಬಲಿಯಾದವರು ಜಾತ್ಯತೀತ ಪಕ್ಷಗಳಿಗೆ ಮತ ಹಾಕುತ್ತಾರೆ ಎಂಬ ಭರವಸೆ ಇಲ್ಲ ಎಂದರು.

ವ್ಯವಸ್ಥೆಯ ವೈಫಲ್ಯ: ಮಡೆ ಮಡೆಸ್ನಾನ ಇನ್ನೂ ಜೀವಂತವಾಗಿರುವುದಕ್ಕೆ ವ್ಯವಸ್ಥೆಯ ವೈಫಲ್ಯವೇ ಕಾರಣ. ಎಂಜಲು ಎಲೆಯ ಮೇಲೆ ಉರುಳಾಡುವುದು ನಾಚಿಕೆಗೇಡಿನ ಸಂಗತಿ. ಈ ಮೂಲಕ ದೇವಸ್ಥಾನವನ್ನು ಅಪವಿತ್ರ ಗೊಳಿಸಲಾಗುತ್ತಿದೆ. ಇಂತಹ ಮೌಢ್ಯಗಳಿಗೆ ಕಾನೂನು ವ್ಯಾಪ್ತಿಯಲ್ಲಿಯೇ ಪರಿಹಾರ ನೀಡಲು ಸಾಧ್ಯವಿದೆ ಎಂದು ಹೇಳಿದರು.

ಜನಪ್ರಿಯ ಯೋಜನೆ ಬೇಡ: ಸರ್ಕಾರಗಳು ಜನಪ್ರಿಯ ಕಾರ್ಯಕ್ರಮ ರೂಪಿಸುವುದನ್ನು ಬಿಟ್ಟು ಜನಹಿತ ಕಾಪಾಡಬೇಕು. ಸರ್ಕಾರ ನೀಡುವ ಮುಗ್ಗಲು ಅಕ್ಕಿಯನ್ನು ತಿನ್ನಲು ಸಾಧ್ಯವಿಲ್ಲ. ಶಿಕ್ಷಣ ಹಕ್ಕು ಕಾಯ್ದೆ ಅಡಿ ಪ್ರವೇಶಾತಿ ನೀಡದ ಶಾಲೆಗಳ ವಿರುದ್ಧ ಕ್ರಮ ಜರುಗಿಸಬೇಕು. ಎಲ್ಲ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಚಿಂತಿಸಬೇಕು. ಕನ್ನಡ ಮಾಧ್ಯಮದ ಶಾಲೆಗಳನ್ನು ಉಳಿಸಲು ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.

ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಮಾತನಾಡಿ, ಕೋಮುವಾದಿಗಳ ಕುರಿತು ಭಿನ್ನಾಭಿಪ್ರಾಯವಿದ್ದರೂ ನಾಲ್ಕೂ ರಾಜ್ಯಗಳ ಜನತೆಯ ನಿರ್ಣಯವನ್ನು ಒಪ್ಪಿಕೊಳ್ಳಲೇಬೇಕು. ವಾಸ್ತವವನ್ನು ಸ್ವೀಕರಿಸದ ಹೊರತು ಕನಸು ಕಾಣಲು ಸಾಧ್ಯವಿಲ್ಲ. ಪ್ರಭುತ್ವ ಉಳಿಸಿಕೊಳ್ಳಲು ಸರ್ಕಾರ ರಾಕ್ಷಸಿ ಗುಣಗಳನ್ನು ಅವಾಹಿಸಿಕೊಳ್ಳುತ್ತದೆ. ಸರ್ವಾಧಿಕಾರಿಗಳ ಸಾಲಿನಲ್ಲಿರುವ ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೆ ಮತ್ತೆ ತುರ್ತುಪರಿಸ್ಥಿತಿ ನಿರ್ಮಾಣವಾಗಬಹುದು. ಆದರೆ, ಅದು ಪ್ರಜಾಪ್ರಭುತ್ವದ ನಿರಂತರ ಸ್ಥಾಯಿಭಾವವಾಗಿ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದರು.

ಜಾತ್ಯತೀತ ಎನ್ನುವುದು ಬಿಟ್ಟರೆ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ವ್ಯತ್ಯಾಸವಿಲ್ಲ. ದೆಹಲಿಯಲ್ಲಿ ಸಾಧನೆ ಮಾಡಿದ ಆಮ್‌ ಆದ್ಮಿ ಪಕ್ಷದ ಸಾಧನೆ ಆಶಾಭಾವ ಹುಟ್ಟಿಸುತ್ತದೆ. ಚುನಾವಣೆಯ ಬಳಿಕ ಪ್ರಜೆಗಳು ಮತ್ತು ಪ್ರಭುಗಳ ನಡುವೆ ಕಂದಕ ನಿರ್ಮಾಣವಾಗುವುದು ಪ್ರಜಾಪ್ರಭುತ್ವದ ದುರಂತ. ಆದರೂ, ಮತಪೆಟ್ಟಿಗೆಯೇ ದೇಶದ ಪರಿಹಾರ ಎಂದು ಪ್ರತಿಪಾದಿಸಿದರು. ಸಮಾಜವಾದಿ ಚಿಂತಕ ಪ. ಮಲ್ಲೇಶ್‌ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಜಿ.ಪಿ. ಬಸವರಾಜು ಹಾಜರಿದ್ದರು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT