ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವದತ್ತ ಮೈಸೂರು!

ಮೈಸೂರು: ಮೊದಲ ಲೋಕಸಭಾ ಚುನಾವಣೆ-1952
Last Updated 21 ಮಾರ್ಚ್ 2014, 9:39 IST
ಅಕ್ಷರ ಗಾತ್ರ

ಮೈಸೂರು: ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೆ ಮೈಸೂರು ಸಂಸ್ಥಾನವು ಮಗ್ಗಲು ಬದಲಾಯಿಸಿದ ಮಹತ್ವದ ವರ್ಷ 1952. ಯದುವಂಶದ ಕೊನೆಯ ಮಹಾರಾಜರಾದ ಜಯಚಾಮರಾಜ ಒಡೆಯರ್ ಅವರೂ ಸಾಮಾನ್ಯರಂತೆ ಮತ ಚಲಾಯಿಸಿ ಹೊಸ ಪರ್ವವನ್ನು ಸ್ವಾಗತಿಸಿದ ವರ್ಷ!

ಸುದೀರ್ಘ ಕಾಲದ ರಾಜಾಶ್ರಯದಲ್ಲಿ ಅರಳಿದ್ದ ಮೈಸೂರು ಸಂಸ್ಥಾನವು ಅಂದು ಮೊಟ್ಟಮೊದಲ ಲೋಕಸಭಾ ಚುನಾವಣೆಯನ್ನು ಸಂತಸದಿಂದಲೇ ಬರ ಮಾಡಿಕೊಂಡಿತ್ತು. ಮೈಸೂರು ನಗರದ ಮತಗಟ್ಟೆ ಸಂಖ್ಯೆ 1ರಲ್ಲಿ ಜಯಚಾಮರಾಜ ಒಡೆಯರ್ ಮತ್ತು ಪರಿವಾರದವರು ಸಾಮಾನ್ಯ ಪ್ರಜೆಯಂತೆ ಮತ ಚಲಾಯಿಸಿ ಬಂದಿದ್ದರು.

ಇದಕ್ಕೂ ಮುನ್ನ ಸಂಸ್ಥಾನದ ಮುಖ್ಯ ಚುನಾವಣಾಧಿಕಾರಿ ಕೆ.ಪಿ. ರಾಮನಾಥಯ್ಯ ನೀಡಿದ್ದ ಹೇಳಿಕೆಯೂ ಪ್ರಜಾಪ್ರಭುತ್ವದ ಗಾಂಭೀರ್ಯವನ್ನು ತೋರಿಸಿತ್ತು. ‘ರಾಜರು ಮತ್ತು ಅವರ ವಂಶಸ್ಥರಿಗೆ ಮತ ಚಲಾಯಿಸಲು ಯಾವುದೇ ವಿಶೇಷ ಅಥವಾ ಪ್ರತ್ಯೇಕ ವ್ಯವಸ್ಥೆ ಮಾಡಿಲ್ಲ. ಅವರಿಗೆ ಸಂಬಂಧಪಟ್ಟ ಮತಗಟ್ಟೆಗೆ ಮಾಮೂಲಿ ವ್ಯಕ್ತಿಗಳಂತೆ ಬಂದು ಮತ ಚಲಾವಣೆ ಮಾಡಲಿ ಎಂದು ತಿಳಿಸಿದ್ದೇವೆ’ ಎಂದು ಹೇಳಿಕೆ ನೀಡಿದ್ದರು. ಮೊದಲ ಬಾರಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಹಲವು ವಿಶೇಷ ಪ್ರಸಂಗಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ.

ವೋಟುದಾರರ ಸಂಘ
ಆಗ ಮೈಸೂರು ದ್ವಿಸದಸ್ಯ ಚುನಾವಣಾ ಕ್ಷೇತ್ರವಾಗಿತ್ತು. ಒಂದು ಪಕ್ಷದಿಂದ ಇಬ್ಬರು ಸ್ಪರ್ಧಿಸುವ ಅವಕಾಶವಿತ್ತು. ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆಪ್ತರಾಗಿದ್ದ ಮತ್ತು ಹಂಗಾಮಿ ಸಚಿವರಾಗಿದ್ದ ಎಚ್‌.ಸಿ. ದಾಸಪ್ಪ ಮತ್ತು ರಾಚಯ್ಯ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು.

ಸಂಸ್ಥಾನದಲ್ಲಿ1952ರ ಜನವರಿ 2ರಿಂದ 19ರವರೆಗೆ ಚುನಾವಣೆ ನಡೆಯಿತು. 1951ರ ಡಿಸೆಂಬರ್‌ ತಿಂಗಳಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು.

ದ್ವಿಸದಸ್ಯ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಎಚ್‌.ಸಿ. ದಾಸಪ್ಪ, ಎನ್‌. ರಾಚಯ್ಯ, ಕಿಸಾನ್ ಮಜ್ದೂರ್ ಪ್ರಜಾ ಪಕ್ಷದ ಎಂ.ಎಸ್. ಗುರುಪಾದಸ್ವಾಮಿ ಮತ್ತು ಎಂ.ಎಸ್. ಸಿದ್ದಯ್ಯ ಕಣಕ್ಕೆ ಇಳಿದಿದ್ದರು. 

ಡಿಸೆಂಬರ್ ತಿಂಗಳಲ್ಲಿ ಚುನಾವಣೆ ಕಾವೇರಿದಂತೆ ಪತ್ರಕರ್ತ ಮಾದಯ್ಯ, ಟಿ. ನಾರಾಯಣ ಮತ್ತು ಅನಂತಸುಬ್ಬರಾವ್ ಅವರು ಸೇರಿ ಅಖಿಲ ಭಾರತ ವೋಟುದಾರರ ಸಂಘವನ್ನು  ಸ್ಥಾಪಿಸಿದರು. ಎಲ್ಲ ಪಕ್ಷದವರನ್ನೂ ಕರೆಸಿ ಒಂದೇ ವೇದಿಕೆಯಲ್ಲಿ ಮಾತನಾಡುವ ಅವಕಾಶ ನೀಡಿದರು. ಭಾರತದಲ್ಲಿ ಎಲ್ಲಿಯೂ ಆಗದ ಉತ್ತಮ ಪ್ರಯತ್ನವನ್ನು ಅವರು ಮಾಡಿದ್ದರು. ಆದರೆ, ಚುನಾವಣೆಯ ಸಮೀಪದಲ್ಲಿ ಒಂದು ದಿನ ವೋಟುದಾರರ ಸಂಘವು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುವುದಾಗಿ ಘೋಷಿಸಿ, ಸಂಘವನ್ನು ವಿಸರ್ಜನೆ ಮಾಡಲಾಯಿತು.

ಒಂಬತ್ತು ಜೋಡೆತ್ತುಗಳ ಗಾಡಿ
ಆ ಸಂದರ್ಭದಲ್ಲಿ ಭಾರತೀಯ ಕಾಂಗ್ರೆಸ್ ಪಕ್ಷದ ಚುನಾವಣೆ ಚಿಹ್ನೆ ನೊಗ ಕಟ್ಟಿದ ಜೋಡೆತ್ತು. ಚಿಹ್ನೆಯನ್ನು ಜನರಿಗೆ ಪರಿಚಯಿಸಲು ವಿವಿಧ ರೀತಿಯ ಪ್ರಚಾರ ಪ್ರಯತ್ನಗಳು ನಡೆದವು.

ನಗರದಲ್ಲಿ ಆರು ಜೋಡಿ ಎತ್ತುಗಳನ್ನು ಹೂಡಿದ ಗಾಡಿಯ ಮೆರವಣಿಗೆ ನಡೆಯಿತು. ಕನ್ನೇಗೌಡರ ಕೊಪ್ಪಲಿನ ಪೈಲ್ವಾನ್ ಬಸವಯ್ಯ, ಸಾಹುಕಾರ್ ಚೆನ್ನಯ್ಯನವರು, ಅಭ್ಯರ್ಥಿಗಳಾದ ಎಚ್‌.ಸಿ. ದಾಸಪ್ಪ, ರಾಚಯ್ಯ ಮತ್ತು ಮೈಸೂರು ಶಾಸನ ಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಪಕ್ಷದ ಅಭ್ಯರ್ಥಿಗಳ ಮೆರವಣಿಗೆಯು ವಿಜೃಂಭಣೆಯಿಂದ ನಡೆಯಿತು. ನಂಜನಗೂಡು, ನೆಲಮಂಗಲ, ಮಂಡ್ಯ ಮತ್ತಿತರ ಕಡೆ ನಡೆದ ಒಂಬತ್ತು ಜೊತೆ ಎತ್ತುಗಳ ನೊಗಗಳನ್ನು ಹೂಡಿದ ಸರ್ವಾಲಂಕೃತ ಗಾಡಿಯ ಮೆರವಣಿಗೆ ಭಾರಿ ಜನಪ್ರಿಯವಾಯಿತು. ಇಷ್ಟೆಲ್ಲ ಆದ ಮೇಲೆ ಕಾಂಗ್ರೆಸ್‌ ಗೆಲುವು ನಿಶ್ಚಿತ ಎನ್ನುವ ಭರವಸೆ ಮೂಡಿಸಿತ್ತು. ಆದರೆ, ಫಲಿತಾಂಶ ಮಾತ್ರ ದಂಗುಬಡಿಸಿತ್ತು.

ಪತ್ರಕರ್ತ ಗುರುಪಾದಸ್ವಾಮಿ ಜಯಭೇರಿ
ಕಿಸಾನ್ ಮಜ್ದೂರ್ ಪ್ರಜಾ ಪಕ್ಷದ ಎಂ.ಎಸ್. ಗುರುಪಾದಸ್ವಾಮಿ ಚುನಾವಣೆಯಲ್ಲಿ ಎಚ್‌.ಸಿ. ದಾಸಪ್ಪ ಅವರನ್ನು ಸೋಲಿಸಿದರು. ಆದರೆ, ಕಾಂಗ್ರೆಸ್‌ನ ಇನ್ನೊಬ್ಬ ಅಭ್ಯರ್ಥಿ ರಾಚಯ್ಯ ಗೆದ್ದರು. ಇಡೀ ಮೈಸೂರು ಸಂಸ್ಥಾನದಲ್ಲಿ ಗೆದ್ದ ಕಾಂಗ್ರೆಸೇತರ ಅಭ್ಯರ್ಥಿ ಯೆಂದರೆ ಗುರುಪಾದಸ್ವಾಮಿಯೊಬ್ಬರೇ. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿದ್ದ ಆ ಯುವಕನ ಜಯವು ಮೈಸೂರು ಸಂಸ್ಥಾನದಲ್ಲಿ ಹೊಸ ಇತಿಹಾಸವೇ ಆಗಿ ಉಳಿಯಿತು. ‘ಪ್ರಜಾಮತ’  ನಿಯತಕಾಲಿಕೆಯ ಸಂಪಾದಕರೂ ಆಗಿದ್ದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT