ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಸತ್ತೆಯ ಹೃದಯಕ್ಕೆ ಜನಜಾಗೃತಿಯೊಂದೇ ಮದ್ದು

Last Updated 26 ಫೆಬ್ರುವರಿ 2011, 14:30 IST
ಅಕ್ಷರ ಗಾತ್ರ

ಪಿ. ಜಿ. ವಿಜು

ಭಾರತದ ಚುನಾವಣಾ ಕಾನೂನುಗಳಿಗೆ ಸಂಬಂಧಿಸಿದಂತೆ ಇನ್ನು ನಾಲ್ಕು ತಿಂಗಳಲ್ಲಿ ಹಲವು ತಿದ್ದುಪಡಿಗಳೊಂದಿಗೆ ಸಮಗ್ರ ಸುಧಾರಣೆ ಮಾಡಲಿರುವುದಾಗಿ ಕೇಂದ್ರ ಸರ್ಕಾರದ ಕಾನೂನು ಸಚಿವ ವೀರಪ್ಪ ಮೊಯಿಲಿ ಈಚೆಗೆ ಹೇಳಿದ್ದಾರೆ. ವಿಧಾನಸಭೆ, ಲೋಕಸಭಾ ಚುನಾವಣೆಗಳೂ ಸೇರಿದಂತೆ ಹಲವು ಚುನಾವಣಾ ಪ್ರಕ್ರಿಯೆಗಳಲ್ಲಿ ಹಣದ ಚೆಲ್ಲಾಟ ಎದ್ದು ಕಾಣುವಂಥದ್ದು. ಇದಕ್ಕೂ ‘ಭ್ರಷ್ಟ ವ್ಯವಸ್ಥೆ’ಗೂ ನಿಕಟ ಸಂಬಂಧ ಇರುವುದರಿಂದ ಚುನಾವಣಾ ವ್ಯವಸ್ಥೆಗೇ ಮದ್ದು ಅರೆಯುವ ಕೆಲಸಕ್ಕೆ ದೇಶದ ಜನ ಬಹಳ ಹಿಂದಿನಿಂದ ಒತ್ತಾಯಿಸುತ್ತ ಬಂದಿದ್ದಾರೆ.

ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಚುನಾವಣೆಗಳು ಹೃದಯವಿದ್ದಂತೆ. ಚುನಾವಣೆಗಳಿಲ್ಲದ ಪ್ರಜಾಸತ್ತೆಯನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಇಂತಹ ಹೃದಯಕ್ಕೆ ಬೇನೆಯಾದರೆ ಜೀವದ ಸ್ಥಿತಿ ಏನು ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆಯ ಭಾರತದಲ್ಲಿ ‘ಚುನಾವಣಾ ವ್ಯವಸ್ಥೆ’ ದಿನದಿಂದ ದಿನಕ್ಕೆ ಹದಗೆಡುತ್ತ ಸಾಗಿದೆ. ಹೀಗಾಗಿ ‘ವ್ಯವಸ್ಥೆ’ಯ ಸುಧಾರಣೆಗಾಗಿ ಜನ ಧ್ವನಿ ಕೇಳಿ ಬರುವುದು ಸಹಜ. ಹೀಗಾಗಿ ಪ್ರಜಾಸತ್ತೆಯ ಯಶಸ್ಸಿನ ದಿಸೆಯಲ್ಲಿ ‘ಚುನಾವಣಾ ಸುಧಾರಣೆ’ಗಳ ಪ್ರಯತ್ನಗಳು ಅರ್ಥಪೂರ್ಣ.

ಇಂಗ್ಲೆಂಡ್‌ನಲ್ಲಿ ನೂರಿಪ್ಪತ್ತು ವರ್ಷಗಳ ಹಿಂದೆಯೇ ‘ಚುನಾವಣಾ ಸುಧಾರಣಾ ಸಮಿತಿ’ಯೊಂದು ಆಸ್ಥಿತ್ವದಲ್ಲಿದ್ದುದನ್ನು ಗಮನಿಸಿದರೆ, ಇಂತಹ ಪ್ರಯತ್ನಗಳು ಜಗತ್ತಿನಾದ್ಯಂತ ಪ್ರಜಾಸತ್ತೆ ಇರುವ ದೇಶಗಳಲ್ಲಿ ಸಾಮಾನ್ಯವಾಗಿತ್ತೆನಿಸುತ್ತದೆ. ಆಗ ಲಂಡನ್‌ನಲ್ಲಿ ವಕೀಲರು, ಪ್ರಾಧ್ಯಾಪಕರು ಸೇರಿದಂತೆ ಸಮಾಜದ ಗಣ್ಯರೆಲ್ಲಾ ಒಂದೆಡೆ ಸೇರಿ ಚುನಾವಣೆಗಳ ಲೋಪದೋಷಗಳನ್ನು ನಿವಾರಿಸುವ ಬಗ್ಗೆ ಚರ್ಚಿಸಿ ಹೊಸ ನಿಯಮಗಳನ್ನು ರೂಪಿಸಲು ನೆರವಾಗುತ್ತಿದ್ದರು.

ಭಾರತದಲ್ಲಿಯೂ ಅಂತಹ ಪ್ರಯತ್ನಗಳು 60ವರ್ಷಗಳಿಂದಲೂ ನಡೆಯುತ್ತ ಬಂದಿವೆ. 1954ರಲ್ಲಿ ಆಗಿನ ಪ್ರಧಾನಿ ನೆಹರು ಚುನಾವಣಾ ಪ್ರಚಾರಕ್ಕಾಗಿ ಕೊಚ್ಚಿನ್‌ಗೆ ಹೋಗಿದ್ದರಲ್ಲ, ಆಗ ಕೇರಳ ಸರ್ಕಾರ 1ಲಕ್ಷದ 2ಸಾವಿರ ರೂಪಾಯಿಗಳನ್ನು ಖರ್ಚು ಮಾಡಿದ್ದು, ಆ ಕಾಲದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸ ಒದಗಿಸಿತ್ತು. ಸಮಾಜವಾದಿ ಮುಖಂಡ ರಾಮಮನೋಹರ ಲೋಹಿಯಾ, ಕಮ್ಯುನಿಸ್ಟ್ ನೇತಾರ ಇಎಂಎಸ್ ನಂಬೂದರಿಪಾಡ್ ಸೇರಿದಂತೆ ಹಲವರು ಬಹಳ ದಿನಗಳ ಕಾಲ ಆ ಬಗ್ಗೆ ‘ಪತ್ರ ಸಮರ’ ನಡೆಸಿದ್ದರು. ಲೋಕಸಭೆ ಮತ್ತು ಕೇರಳ ವಿಧಾನಸಭೆಗಳಲ್ಲೂ ಚರ್ಚೆಯಾಗಿತ್ತು. ಹೀಗಾಗಿ ಚುನಾವಣಾ ವೆಚ್ಚದ ವಿಭಿನ್ನ ಆಯಾಮಗಳು ಆಗಲೇ ಜನರ ಗಮನಕ್ಕೆ ಬಂದಿದ್ದವು. ಲೋಹಿಯಾ ಅವರು ಚುನಾವಣಾ ವೆಚ್ಚದ ಜತೆಗೆ ಆತ್ಮಸಾಕ್ಷಿ ಮತ್ತು ನೈತಿಕತೆಯ ಪ್ರಶ್ನೆಯನ್ನೂ ಮುಂದಿಟ್ಟಿದ್ದರು. ಆದರೆ ಇವತ್ತು ಅಂತಹ ‘ಚುನಾವಣಾ ವೆಚ್ಚ’ಗಳು ತೀರಾ ಸಹಜವೆನಿಸಿಬಿಟ್ಟಿದೆ.ಲೋಹಿಯಾ ಅವರಿಗಿದ್ದ ನೈತಿಕತೆಯ ಛಾತಿ ಇಂದು ಯಾರಿಗಿದೆ? ಆದರೂ ಆಗಾಗ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿ ಚುನಾವಣಾ ಆಯೋಗದ ಕಿವಿ ಹಿಂಡಿದ್ದೂ ಇದೆ.

ಭಾರತದ ಸಂವಿಧಾನದಲ್ಲಿ ಚುನಾವಣಾ ಆಯೋಗಕ್ಕೆ ವಿಶಿಷ್ಟ ಸ್ಥಾನವಿದೆ. 1950ರ ಜನವರಿ 25ರಂದು ಹುಟ್ಟು ಪಡೆದ ಈ ಆಯೋಗ ಸ್ವತಂತ್ರ ಬಜೆಟ್ ಹೊಂದಿದೆ. ಚುನಾವಣೆಗಳು ನಡೆಯುವ ವರ್ಷಗಳಲ್ಲಿ ಅದು ಹೆಚ್ಚಾಗಿರುತ್ತದಷ್ಟೆ. ಚುನಾವಣೆಗೆ ಸಂಬಂಧಿಸಿದಂತೆ ಬ್ರಿಟಿಷರ ಕೆಲವು ಕಾನೂನುಗಳನ್ನು ಸಂವಿಧಾನದಲ್ಲಿ ಸೇರಿಸಲಾಗಿದೆ. ಕೆಲವನ್ನು ಪರಿಷ್ಕರಿಸಲಾಗಿದೆ. ಕಾಲ ಕಾಲಕ್ಕೆ ತಿದ್ದುಪಡಿಗಳನ್ನು ಕಂಡಿವೆ.

ಲೋಕಸಭೆ ಅಥವಾ ವಿಧಾನಸಭೆಗಳಿಗೆ ಪ್ರತಿಸಲ ಚುನಾವಣೆಗಳು ನಡೆದಾಗಲೂ ಒಂದಲ್ಲ ಒಂದು ಹೊಸ ಸಮಸ್ಯೆ ಎದ್ದು ಕಾಣುವುದು ಸಾಮಾನ್ಯ. ಪ್ರತಿ ಸಲವೂ ಅಭ್ಯರ್ಥಿಯ ಖರ್ಚು ಏರುತ್ತಲೇ ಇದೆ. ಅಪರಾಧ ಹಿನ್ನೆಲೆ ಇರುವವರ ಸ್ಪರ್ಧೆಯೂ ಹೆಚ್ಚಿದೆ. ರಾಜಕೀಯ ಪಕ್ಷಗಳ ಸಂಖ್ಯೆಯೂ ಏರುತ್ತಿವೆ. ಚುನಾವಣೆಯ ವೇಳೆ ಹಣ ಹಂಚುವಿಕೆ ರಾಜಾರೋಷವಾಗಿ ನಡೆಯುತ್ತಿದೆ. ಇವುಗಳಿಂದ ರೋಸಿ ಹೋದ ಕೆಲವರು ಮತದಾನದ ಬಗ್ಗೆ ನಂಬಿಕೆ ಕಳೆದುಕೊಳ್ಳುವಂತಹ ಸ್ಥಿತಿ ಬಂದಿದೆ.ಇಂತಹ ನೂರೆಂಟು ಎಡರು, ತೊಡರುಗಳನ್ನು ನಿವಾರಿಸಿ ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯ ಕಾಪಾಡುವುದರೊಂದಿಗೆ ಪ್ರಜಾಸತ್ತೆಯ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಚುನಾವಣಾ ಆಯೋಗವು ನಿರಂತರವಾಗಿ ಶಿಫಾರಸು, ಸಲಹೆಗಳನ್ನು ನೀಡುತ್ತಾ ಬಂದಿದೆ.

ಸ್ವಾತಂತ್ರ್ಯಾನಂತರದ ಮೊದಲ ಎರಡು ದಶಕಗಳಲ್ಲಿ ಚುನಾವಣಾ ಪ್ರಕ್ರಿಯೆ ಇಷ್ಟು ಹದಗೆಟ್ಟಿರಲಿಲ್ಲ. ಹೀಗಾಗಿ  ಚುನಾವಣಾ ಆಯೋಗವು ಚುನಾವಣೆಗಳನ್ನು ಸುಸೂತ್ರವಾಗಿ ನಡೆಸುವುದಕ್ಕಷ್ಟೇ ತನ್ನನ್ನು ಸೀಮಿತಗೊಳಿಸಿಕೊಂಡಿತ್ತು. ಆದರೆ 60ರ ದಶಕದ ಕೊನೆಯಲ್ಲಿ ಮತದಾರರನ್ನು ಸೆಳೆಯಲು ನಾನಾತಂತ್ರಗಳು ಕಣ್ಣು ಕೋರೈಸತೊಡಗಿದಾಗ, 1971ರಲ್ಲಿ ನಡೆದ 5ನೇ ಸಾರ್ವತ್ರಿಕ ಚುನಾವಣೆ ವೇಳೆ ಮೊದಲ ಬಾರಿಗೆ ರಾಜಕೀಯ ಪಕ್ಷಗಳಿಗೆ ‘ನಡವಳಿಕೆಯ ಮಾದರಿ’ಯ ನೀತಿ ಸಂಹಿತೆ ನೀಡಲಾಯಿತು. ಅದರ ಅನ್ವಯ ಚುನಾವಣೆಯ ದಿನಾಂಕ ಪ್ರಕಟವಾದ ಮೇಲೆ ರಾಜಕೀಯ ಪಕ್ಷಗಳು ಯಾವುದೇ ಭರವಸೆ ನೀಡುವಂತಿಲ್ಲ, ಶಂಕುಸ್ಥಾಪನೆ ನೆರವೇರಿಸುವಂತಿಲ್ಲ.

ಆಡಳಿತ ಪಕ್ಷವಂತೂ ಯಾವುದೇ ಹೊಸ ನೇಮಕಾತಿ, ವರ್ಗಾವಣೆ ಇತ್ಯಾದಿಗಳನ್ನು ನಡೆಸುವಂತಿಲ್ಲ. ಸರ್ಕಾರಿ ವೆಚ್ಚದಲ್ಲಿ ಜಾಹೀರಾತು ನೀಡುವುದು ಹಾಗೂ ಸರ್ಕಾರಿ ವಾಹನಗಳ ದುರ್ಬಳಕೆಗೆ ತಡೆ ಹೇರಲಾಯಿತು. ಇವತ್ತಿಗೂ ಆ ನೀತಿ ಸಂಹಿತೆ ಮುಂದುವರಿದಿದೆ. ಆದರೆ ಉಲ್ಲಂಘನೆಯ ನಿದರ್ಶನಗಳೂ ಬಹಳಷ್ಟಿವೆ.

ಹೀಗೆ ಚುನಾವಣೆಯಲ್ಲಿನ ಲೋಪಗಳನ್ನು ನಿವಾರಿಸುವ ದಿಸೆಯಲ್ಲಿ ಹಿಂದಿನ ಸರ್ಕಾರಗಳೂ ಸಾಕಷ್ಟು ಪ್ರಯತ್ನಿಸಿವೆ.1975ರಲ್ಲಿ ತಾರ್ಕುಂಡೆ ವರದಿ, 1990ರಲ್ಲಿ ಗೋಸ್ವಾಮಿ ವರದಿ,1998ರಲ್ಲಿ ಇಂದ್ರಜಿತ್ ಗುಪ್ತಾ ಸಮಿತಿ ವರದಿಗಳನ್ನು ಪಡೆಯಲಾಯಿತಲ್ಲದೆ, 1998ರಲ್ಲಿ ಸ್ವತಃ ಚುನಾವಣಾ ಆಯೋಗವೇ ಹಲವು ಶಿಫಾರಸುಗಳನ್ನು ಸರ್ಕಾರದ ಮುಂದಿಟ್ಟಿತ್ತು. ಈ ನಡುವೆ ಸಂವಿಧಾನದಲ್ಲಿ ಚುನಾವಣಾ ಆಯೋಗಕ್ಕೆ ನೀಡಲಾಗಿರುವ ಅಧಿಕಾರವನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಬಹುದೆಂಬುದನ್ನು 1990ರಿಂದ 96ರವರೆಗೆ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಟಿ. ಎನ್. ಶೇಷನ್ ತೋರಿಸಿಕೊಟ್ಟಿದ್ದನ್ನು ನಾವು ಮರೆಯುವುದೆಂತು?

ಚುನಾವಣೆಗೆ ಸಂಬಂಧಿಸಿದ ಕೆಲವು ಕಾನೂನು ನಿಯಮಗಳನ್ನೇ ಜಾರಿಗೆ ತರುವುದಕ್ಕೆ ರಾಜಕಾರಣಿಗಳೇ ಅಡ್ಡಿಯಾದಾಗ ಸ್ವತಃ ಸುಪ್ರೀಂ ಕೋರ್ಟ್ ಚಾಟಿ ಬೀಸಿದ ಘಟನೆಗಳು ನಡೆದಿವೆ. ಸಂವಿಧಾನದಲ್ಲಿ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ 324ನೇ ನಿಬಂಧನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಆಯೋಗಕ್ಕೆ 2002ರ ಜೂನ್‌ನಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಅದರ ಅನ್ವಯ ಅಭ್ಯರ್ಥಿಗಳು ತಮ್ಮ ಸಮಸ್ತ ಆಸ್ತಿಪಾಸ್ತಿಗಳ ವಿವರ, ಕ್ರಿಮಿನಲ್ ದಾಖಲೆಗಳಿದ್ದರೆ ಅವುಗಳ ಮಾಹಿತಿಗಳ ಅಫಿಡವಿಟ್ಟನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. ಚುನಾವಣಾ ಆಯೋಗ ಆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಯತ್ನಿಸಿತು. ಆಗ ದೇಶದ ಬಹುತೇಕ ರಾಜಕೀಯ ಪಕ್ಷಗಳು ‘ಚುನಾವಣಾ ಆಯೋಗ ತನ್ನ ಅಧಿಕಾರದ ವ್ಯಾಪ್ತಿ ಮೀರಿ ವರ್ತಿಸುತ್ತಿದೆ’ ಎಂದು ಬೊಬ್ಬಿರಿದವು. ಆಗ ಸುಪ್ರೀಂಕೋರ್ಟ್ ಆಯೋಗದ ನೆರವಿಗೆ ಬಂದಿತು.

‘ತಾವು ಆಯ್ಕೆ ಮಾಡುವ ಪ್ರತಿನಿಧಿಗಳ ಆಸ್ತಿಪಾಸ್ತಿಯ ವಿವರಗಳನ್ನು ಮತದಾರರು ತಿಳಿದುಕೊಳ್ಳುವುದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದ ಸುಪ್ರೀಂಕೋರ್ಟ್ ಆ ವಿವರಗಳನ್ನೆಲ್ಲಾ ಸಾರ್ವಜನಿಕರ ಗಮನಕ್ಕೂ ತರಬೇಕೆಂದು ಆದೇಶಿಸಿತು. ಆಗ ಆ ನಿಯಮದ ವಿರುದ್ಧ ಕಿಡಿಕಿಡಿಯಾಗಿದ್ದವರ ಬಾಯಿ ಕಟ್ಟಿತು. 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಆ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ಬಂದಿತು.

ಈ ನಡುವೆ ಭಾರತ ಸರ್ಕಾರ ಚುನಾವಣಾ ಪ್ರಕ್ರಿಯೆಯಲ್ಲಿ ವೈಜ್ಞಾನಿಕತೆ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ತಂದಿರುವ ಸುಧಾರಣೆ ಮತ್ತು ಪರಿಷ್ಕರಣೆಗಳು ಹೆಮ್ಮೆ ಪಡುವಂತಹದ್ದೇ. ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು 28ವರ್ಷಗಳ ಹಿಂದೆಯೇ ಕೇರಳದಲ್ಲೊಂದು ಕಡೆ ಪ್ರಯೋಗಾತ್ಮಕವಾಗಿ ಮೊದಲ ಸಲ ಬಳಸಲಾಗಿತ್ತು. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಇಂತಹ 15ಲಕ್ಷ ಮತ ಯಂತ್ರಗಳನ್ನು ಬಳಸಿದ್ದನ್ನು ಕಂಡು ಜಗತ್ತೇ ನಿಬ್ಬೆರಗಾಗಿದೆ. ಇದರಿಂದ ಮತಪೆಟ್ಟಿಗೆಗಳ ಅಪಹರಣ, ಅನಗತ್ಯ ಸಾಗಾಟ ವೆಚ್ಚ, ಅಪಾರ ಕಾಗದ ಬಳಕೆ ಇತ್ಯಾದಿಗಳು ತಪ್ಪಿವೆ. 12 ವರ್ಷಗಳ ಹಿಂದೆಯೇ ಚುನಾವಣಾ ಆಯೋಗ ತನ್ನ ಅಂತರ್ಜಾಲ ತಾಣಕ್ಕೆ ಚಾಲನೆ ನೀಡಿದೆ. ಇದರಲ್ಲಿ ಚುನಾವಣಾ ಕಾನೂನು ಸೇರಿದಂತೆ ಎಲ್ಲಾ ವಿವರಗಳು ಲಭ್ಯವಿವೆ.

ಒಟ್ಟಾರೆ ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಅವಕಾಶವಾಗಿದೆ. 1978ರಲ್ಲೇ ಸಿಕ್ಕಿಂನಲ್ಲಿ ಮೊದಲ ಬಾರಿಗೆ ಭಾವ ಚಿತ್ರಗಳಿರುವ ಗುರುತಿನ ಚೀಟಿಯನ್ನು ಬಳಸಲಾಯಿತು. ಎರಡು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಇಂತಹ ಗುರುತಿನ ಚೀಟಿಗಳನ್ನು ಬಳಸಿದ್ದು ಹೆಗ್ಗಳಿಕೆ.

ಈಗ ಭಾರತದ ರಾಜಕೀಯ ರಂಗ ಕಪ್ಪು ಹಣದ ಅಬ್ಬರ ಮತ್ತು ಅಪರಾಧೀಕರಣದಿಂದ ನಲುಗುತ್ತಿದೆ. ಇದನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗವೇ ಸ್ವತಃ ತನ್ನ ಅನುಭವದ ಮೇರೆಗೆ ರೂಪಿಸಿರುವ ಹಲವು ಶಿಫಾರಸುಗಳನ್ನು ಜಾರಿಗೆ ತರಲು ಸರ್ಕಾರ ಯೋಚಿಸುತ್ತಿರುವುದು ಉತ್ತಮ ಹೆಜ್ಜೆಯಾಗಿದೆ.

 ‘ರಾಜಕೀಯ ಪಕ್ಷಗಳು ತಮ್ಮ ಹಣಕಾಸಿನ ಮೂಲ ಮತ್ತು ಖರ್ಚು ವೆಚ್ಚಗಳ ಪೂರ್ಣ ವಿವರಗಳನ್ನು ಪ್ರತಿ ವರ್ಷವೂ ಚುನಾವಣಾ ಆಯೋಗಕ್ಕೆ ಒಪ್ಪಿಸಬೇಕು. ಅಭ್ಯರ್ಥಿಗಳು ಏಕಕಾಲದಲ್ಲಿ ಎರಡು ಕಡೆ ಸ್ಪರ್ಧಿಸುವುದನ್ನು ತಪ್ಪಿಸಬೇಕು. ಒಂದು ವೇಳೆ  ಸ್ಪರ್ಧೆಗೆ ಅವಕಾಶ ನೀಡಿದರೂ, ಗೆದ್ದ ಮೇಲೆ ಒಂದನ್ನು ಉಳಿಸಿಕೊಳ್ಳುವ ಅಭ್ಯರ್ಥಿ ಇನ್ನೊಂದು ಕ್ಷೇತ್ರದಲ್ಲಿ ನಡೆಯಬೇಕಾದ ಉಪಚುನಾವಣೆಯ ಸಂಪೂರ್ಣ ವೆಚ್ಚವನ್ನು ಚುನಾವಣಾ ಆಯೋಗಕ್ಕೆ ನೀಡಬೇಕು. ರಾಜಕೀಯ ಪಕ್ಷಗಳು ಎಲ್ಲಾ ಹಣಕಾಸಿನ ವ್ಯವಹಾರಗಳನ್ನು ಚೆಕ್ ಮೂಲಕವೇ ನಡೆಸಬೇಕು. ಸರ್ಕಾರದ ಸಾಧನೆಗಳನ್ನು ಪಕ್ಷದ ಸಾಧನೆ ಎಂಬಂತೆ ಸಾರ್ವಜನಿಕ ಸ್ಥಳಗಳಲ್ಲಿ ಬಿಂಬಿಸುವುದನ್ನು ನಿಲ್ಲಿಸಬೇಕು. ಒಂದು ವೇಳೆ ಅಂತಹ ಜಾಹೀರಾತುಗಳಿದ್ದರೂ ಅದರಲ್ಲಿ ಪಕ್ಷದ ಅಥವಾ ವ್ಯಕ್ತಿಯ ಹೆಸರಿರಬಾರದು.

ಯಾವುದೇ ವ್ಯಕ್ತಿ ಐದು ವರ್ಷ ಜೈಲುಶಿಕ್ಷೆ ಅನುಭವಿಸಿದ್ದರೆ ಅವನು ಸ್ಪರ್ಧಿಸುವುದನ್ನು ನಿಷೇಧಿಸಬೇಕು’ ಇತ್ಯಾದಿ ಹತ್ತು ಹಲವು ಶಿಫಾರಸುಗಳನ್ನು ಆಯೋಗ ಸರ್ಕಾರದ ಮುಂದಿಟ್ಟಿದೆ. ಇವೆಲ್ಲವೂ ಪ್ರಜಾಪ್ರಭುತ್ವದ ಪ್ರವಹಿಸುವಿಕೆಯಲ್ಲಿ  ಎತ್ತೆತ್ತಲಿಂದಲೋ ಬಂದು ಸೇರುವ ಕೊಳಕುಗಳನ್ನು ಶುದ್ದೀಕರಿಸಲು ಶಕ್ತವಾಗಿರುವಂತವು. ಆದರೆ ಜನ  ‘ಪ್ರವಾಹ’ವೇ ‘ಮದ್ದು ನಿರೋಧಕ’ ಸ್ವಭಾವ ಮೈಗೂಡಿಸಿಕೊಂಡರೆ ಏನೂ ಮಾಡಲಾಗದು. ಹೀಗಾಗಿ ಚುನಾವಣಾ  ಸುಧಾರಣಾ ಪ್ರಕ್ರಿಯೆಗಳ ಜತೆಗೆ ಪ್ರಜಾಸತ್ತೆಯ ಮೌಲ್ಯಗಳನ್ನು ಜನರಿಗೆ ಮನದಟ್ಟು ಮಾಡಿಕೊಡುವ ಕೆಲಸಗಳೂ  ನಡೆಯಬೇಕಿದೆ. ಸ್ವತಃ ಜನರೇ ಚುನಾವಣಾ ಪ್ರಕ್ರಿಯೆಗೆ ಪ್ರಾಮಾಣಿಕವಾಗಿ ಸ್ಪಂದಿಸುವುದು ಬಹಳ ಮುಖ್ಯ.

ಈ ಹಿನ್ನೆಲೆಯಲ್ಲಿ ಜನ ಮಾನಸದಲ್ಲಿ ‘ಪ್ರಜಾಸತ್ತೆಯ ಸುಧಾರಣೆ’ಯ ಪರಿಕಲ್ಪನೆ ಜೀವ ತಳೆಯಬೇಕಿದೆ. ಪಕ್ಷಗಳ ಒಳಗೇ ನಿರಂತರ ಚುನಾವಣೆಗಳು ನಡೆಯುತ್ತಿದ್ದು ಆಂತರಿಕ ಪ್ರಜಾಪ್ರಭುತ್ವ ಎಚ್ಚರದ ಸ್ಥಿತಿಯಲ್ಲಿರಬೇಕು. ಪಕ್ಷಗಳು ಜಾತಿ, ಧರ್ಮ, ದುಡ್ಡಿನ ದೊರೆಗಳ ‘ಹಂಗಿ’ನ ಸರಪಳಿ ಕಳಚಿಕೊಳ್ಳಬೇಕು. ಶಾಂತವೇರಿ ಗೋಪಾಲಗೌಡ, ಅಂದಾನಪ್ಪ ದೊಡ್ಡಮೇಟಿ, ಚಿತ್ರದುರ್ಗದ ಡಾ. ತಿಪ್ಪೇಸ್ವಾಮಿ, ಉಳ್ಳಾಲ ಶ್ರೀನಿವಾಸ ಮಲ್ಯ ಅವರಂತವರನ್ನು ಹುಡುಕುವ ಜಾಣ್ಮೆ ಮತ್ತು ಪ್ರಾಮಾಣಿಕತೆಯನ್ನು ಜನರೇ ತೋರಿಸಬೇಕಿದೆ. ಜನರಲ್ಲಿ ಈ ಎಚ್ಚರ ಮತ್ತು ಜವಾಬ್ದಾರಿ ಮೈಗೂಡದಿದ್ದರೆ ಯಾವ ಕಾನೂನು ತಿದ್ದುಪಡಿಯೇ ಆಗಲಿ, ಉತ್ಕೃಷ್ಟ ತಂತ್ರಜ್ಞಾನದ ಬಳಕೆಯೇ ಆಗಲಿ ಚುನಾವಣಾ ಪ್ರಕ್ರಿಯೆ ಎಂಬ ‘ಹೃದಯ’ದ ಬೇನೆಯನ್ನು ಗುಣಪಡಿಸಲು ಸಾಧ್ಯವಿಲ್ಲ..


 (ಅನಿವಾರ್ಯ ಕಾರಣಗಳಿಂದ ಈ ವಾರದ ‘ನಾಲ್ಕನೇ ಆಯಾಮ’ ಅಂಕಣ ಪ್ರಕಟವಾಗಿಲ್ಲ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT