ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಸತ್ತೆಯಲ್ಲೂ ಅಧಿಕಾರಿ ಸಾಮಾನ್ಯನಿಗಿಂತ ಹೆಚ್ಚು ಸಮಾನ!

Last Updated 23 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಸಿ.ಎನ್ ರಾಮಚಂದ್ರನ್ ಅವರ ಲೇಖನ  ತುಂಬ ಪ್ರಸ್ತುತವಾದ ಮತ್ತು ಸ್ಪಷ್ಟ ಸಂದೇಶದ ಬರಹ. ‘ಸಟಾನಿಕ್ ವರ್ಸಸ್‌’, ‘ಢುಂಡಿ’ಗಳಂತೆ ಅಪರಾಧ ‘ಪ್ರಮಾಣಿತ’ವಾಗಿ ಕೃತಿಯ ನಿಷೇಧ, ವೈಯಕ್ತಿಕ ಶಿಕ್ಷೆ ಒದಗದಿರುವವರು ಅನೇಕ­ರಿದ್ದಾರೆ. ಆದರೆ ಅವರು ಅಭಿಪ್ರಾಯ ಸ್ವಾತಂತ್ರ್ಯದ ಮೇಲೆ ವಿಶ್ವಾಸವಿಟ್ಟು ಅನುಭವಿಸಿದ ಹಿಂಸೆ ಕಡಿಮೆಯದ್ದೇನಲ್ಲ.

ನರೇಂದ್ರ ಮೋದಿ ಅವರ ಬಗ್ಗೆ ಈಚೆಗೆ ಅನಂತಮೂರ್ತಿ­ಯವರ ಒಂದು ಸಹಜೋಕ್ತಿ ಎಬ್ಬಿಸಿದ ಪ್ರತಿ ಅಲೆಗಳು ಅದೆಷ್ಟು! ಸಾರಾ ಅಬೂಬಕ್ಕರ್, ಮಹಾಲಿಂಗ ಭಟ್ಟ, ಡಾ. ವಿಲ್ಲಿ ಡ ಸಿಲ್ವಾ, ಜಯಪ್ರಕಾಶ ಮಾವಿನ­ಕುಳಿ, ಪೋಲಂಕಿ ರಾಮಮೂರ್ತಿ ಮುಂತಾದವರ ಅವಹೇಳನಕ್ಕೆ ಗುರಿಯಾದ ವೈಚಾರಿಕ ಕೃತಿ­ಗಳನ್ನೂ ಈ ಸಂದರ್ಭದಲ್ಲಿ ಗಮನಿಸಬಹುದು.

ಸದ್ಯ ಇರುವ ಸ್ಥಿತಿಯಲ್ಲಿ ಅಧಿಕಾರಿಗಳು ಸಮಯ, ಖರ್ಚು ಮತ್ತು ಭತ್ಯೆಗಳನ್ನು ಸರ್ಕಾರದಿಂದ ಪಡೆದು ಇಂಥ ಕಾರುಬಾರು­ಗಳನ್ನು ನಡೆಸುತ್ತಾರೆ; ಸರಿಯೇ. ಆದರೆ ಬಹು­ತೇಕ ಆರೋಪಿಗಳು ಸಮಯ, ಖರ್ಚು ಎಲ್ಲಕ್ಕೂ ಮುಖ್ಯವಾಗಿ ಮಾನಸಿಕ ಹಿಂಸೆ­­ಯನ್ನು ಪೂರ್ಣ ವೈಯಕ್ತಿಕವಾಗಿ ಭರಿಸ­ಬೇಕಾಗುತ್ತದೆ.

ಆರೋಪ ಸಿದ್ಧವಾಗದಿದ್ದಲ್ಲಿ ಅಧಿಕಾರಿ (ಕೆಲವು ಸನ್ನಿವೇಶಗಳಲ್ಲಿ ನ್ಯಾಯಾಧಿಕಾರಿಗಳ ಸಣ್ಣಪುಟ್ಟ ವಾಗ್ದಂಡನೆ ಹೊರತುಪಡಿಸಿದರೆ) ನಿರುಮ್ಮಳವಾಗಿ ಮುಂದುವರಿಯು­ತ್ತಾನೆ. ರಂಗು­ರಂಗಾಗಿ ಪಕ್ಷ ವಹಿಸುವ ಎಲ್ಲ ಸಾರ್ವಜನಿಕ ಮಾಧ್ಯಮಗಳು ಹೊಸ ‘ಐಟಮ್’ ಅನ್ವೇಷಣೆಯಲ್ಲಿ ತೊಡ­ಗುತ್ತವೆ. ಆರೋಪ ಮುಕ್ತನಾದವ ಕನಿಷ್ಠ ಖರ್ಚನ್ನಾದರೂ ಮರಳಿ ಪಡೆಯಬೇಕಿದ್ದರೆ ಪ್ರತ್ಯೇಕ ವ್ಯಾಜ್ಯವನ್ನೇ ಹೂಡಿ, ಸಾಧಿಸಬೇಕು.

ಅಧಿಕಾರ ಒದಗಿಸುವ ಎಲ್ಲಾ ಸವಲತ್ತುಗಳ ಹಿಂದೆ ಈತ ಸಕಲ ಜೀವಾಜೀವಗಳ ಹಿತ ಸಾಧನೆಯ ವಕ್ತಾರ ಎಂಬ ಬಲು ದೊಡ್ಡ ವಿಶ್ವಾಸ­ವಿರುತ್ತದೆ. ಆದರೆ ಆಚರಣೆಯಲೋಕ­ದಲ್ಲಿ ನನ್ನದೇ ಅನುಭವಗಳು ಕೊಡುವ ನಿದರ್ಶನಗಳು ಅಷ್ಟೇನೂ ಆರೋಗ್ಯಕರವಾಗಿಲ್ಲ. ಅಧಿಕಾರಿಯ ವೈಯಕ್ತಿಕ ಇಷ್ಟಾನಿಷ್ಟ­ಗಳಿಗೆ ಕಾನೂನಿನ ಆಶಯಗಳು ಬಳಲುತ್ತವೆ; ಕೇವಲ ಸತಾವಣೆಯ ಅಸ್ತ್ರಗಳಷ್ಟೇ ಆಗುತ್ತವೆ

ನನ್ನದೇ ತೀರಾ ಸಣ್ಣ  ಅನುಭವ ನೋಡಿ: ಸುಮಾರು ಒಂದು ದಶಕದ ಹಿಂದೆ, ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಅವ್ಯವಸ್ಥೆಗಳ ಕುರಿತು ನನ್ನದೊಂದು  ಪತ್ರಿಕಾ ಲೇಖನ ಪ್ರಕಟವಾಯಿತು. ಅಂದಿನ ಅರಣ್ಯಾ­ಧಿಕಾರಿಣಿ ಅದನ್ನು ಕಾರ್ಕಳದ ನ್ಯಾಯಾಲ­ಯ­ದಲ್ಲಿ ‘ಮಾನನಷ್ಟ’ ಎಂದರು. ನಾನು ಉಡುಪಿ ಜಿಲ್ಲಾ ನ್ಯಾಯಾಲಯದ ಮೊರೆ ಹೋದಾಗ (ವಕೀಲರನ್ನು ಇಟ್ಟು),  ಅದು ಅನೂರ್ಜಿತ­ಗೊಂಡಿತು. ಆ ಅಧಿಕಾರಿ ಅಹವಾಲನ್ನು ಬೆಂಗಳೂರಿನ ಉಚ್ಚ ನ್ಯಾಯಾ­ಲ­ಯ­ಕ್ಕೇರಿಸಿದರು.

ಮತ್ತೆ ನಾನು ವಕೀಲರನ್ನಿಟ್ಟು ಮುಕ್ತನಾಗ­ಬೇಕಾಯಿತು. ಅಲ್ಲೂ ಅಹವಾಲಿಗೆ ‘ಸ್ವೀಕಾರ ಯೋಗ್ಯತೆ’ಯೇ (ಅಡ್ಮಿಟ್ಟೇ ಆಗಲಿಲ್ಲ) ಇಲ್ಲವೆಂದು ಘೋಷಣೆಯಾಯಿತು. ಆದರೂ ಆಕೆಗೆ ಎಲ್ಲವೂ ಸಹಜವಾಗಿ ಇಲಾಖೆಯ ನಿಯಮಾನುಸಾರ OOD, TA, DAಗಳಾಗಿಯೇ ಇದ್ದವು. ನಾನು, ನನ್ನ ವೃತ್ತಿಯ ಸಮಯಕ್ಕೆ ಮೊದಲು ಎರವಾದೆ. ಮತ್ತೆ  ಕಾರ್ಕಳ, ಉಡುಪಿ, ಬೆಂಗಳೂರೆಂದು ಅಲೆಯುವುದು, ವಕೀಲರ ಸೇವಾಶುಲ್ಕ ಕೊಡುವುದನ್ನೆಲ್ಲ ಕೈಯಿಂದಲೇ ವ್ಯಯಿಸಿದೆ.

ತೀರ್ಪು ‘ಆರೋಪ ಹುಸಿ’ ಎಂದೇ ಬಂದರೂ ನ್ಯಾಯಾಲಯ ನನ್ನ ಖರ್ಚು, ಮಾನಸಿಕ ಹಿಂಸೆಗೆ ಪರಿಹಾರ ಹೇಳುವಂತಿಲ್ಲ. ನನಗದು ಬೇಕೇ ಆದರೆ ಪ್ರತ್ಯೇಕ ಹೊಸದೇ ವ್ಯಾಜ್ಯ ಹೂಡಬೇಕಿತ್ತು; ಮತ್ತೆ ನನ್ನದೇ ಸಮಯ, ಖರ್ಚು ಹಾಕಿ ತಾರ್ಕಿಕ ಕೊನೆ (ಬೆಂಗಳೂರು, ದಿಲ್ಲಿವರೆಗೆ!) ಮುಟ್ಟಬೇ ಕಾಗುತ್ತಿತ್ತು. ಪ್ರಜಾಸತ್ತೆಯಲ್ಲೂ ಅಧಿಕಾರಿ ಸಾಮಾನ್ಯನಿಗಿಂತ ಹೆಚ್ಚು ಸಮಾನ!
ಕಾನೂನನ್ನು ಅನುಷ್ಠಾನಿಸುವ ಅಧಿಕಾರಿಗಳನ್ನು ವೈಯ­ಕ್ತಿ­ಕ­ವಾಗಿ ವ್ಯಾಜ್ಯಕ್ಕೆ ಬಾಧ್ಯಸ್ತರನ್ನಾಗಿಸಬೇಕು. ಒಂದೇ ತೀರ್ಪಿನ ಕೊನೆಯಲ್ಲಿ ಹುಸಿ ವ್ಯಾಜ್ಯಕ್ಕೆ ಆತನನ್ನು ಶಿಕ್ಷಿಸಿ, ಹೆಚ್ಚಿನ ಸವ­ಲತ್ತನ್ನು (ಪರಿಹಾರ) ‘ಆರೋಪಿ’ಗೆ ಒದಗಿಸುವಂತಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT