ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಣಯ-ವಿರಸ...

Last Updated 12 ಡಿಸೆಂಬರ್ 2012, 19:50 IST
ಅಕ್ಷರ ಗಾತ್ರ

ಸ್ಯಾಂಡಿಯಾಗೊ (ಪಿಟಿಐ): ಸಿತಾರ್ ದಿಗ್ಗಜ ರವಿಶಂಕರ್ ಅವರ ವೈಯಕ್ತಿಕ ಬದುಕು ಸಹ ಅವರ ಸಂಗೀತ ಸಾಧನೆಯಷ್ಟೇ ಚರ್ಚೆಗೆ ಕಾರಣವಾಗಿತ್ತು.

21ರ ಯುವಕನಾಗಿದ್ದಾಗ 1941ರಲ್ಲಿ ತಮ್ಮ ಗುರು ಉಸ್ತಾದ್ ಅಲ್ಲಾವುದ್ದೀನ್ ಖಾನ್ ಅವರ ಪುತ್ರಿ ಅನ್ನಪೂರ್ಣಾ ದೇವಿ ಅವರನ್ನು ವರಿಸಿದರು. ಈ ಅಂತಧರ್ಮೀಯ ವಿವಾಹಕ್ಕೆ ರವಿಶಂಕರ್ ಹಿರಿಯ ಸಹೋದರ ಉದಯ್ ಶಂಕರ್ ಪ್ರಸ್ತಾಪ ಮುಂದಿಟ್ಟಿದ್ದರು. ಈ ದಂಪತಿಯ ಏಕೈಕ ಪುತ್ರ ಶುಭೇಂದ್ರ ಶಂಕರ್ 1942ರಲ್ಲಿ ಜನಿಸಿದರು. ಈ ದಾಂಪತ್ಯ ಕೆಲವೇ ವರ್ಷಗಳಲ್ಲಿ ಮುರಿದು ಬಿತ್ತು..

40ರ ದಶಕದ ಅಂತ್ಯದಲ್ಲಿ ಪರಿಚಯವಾದ ನೃತ್ಯ ಕಲಾವಿದೆ ಕಮಲಾ ಶಾಸ್ತ್ರಿ ಅವರೊಂದಿಗೆ ಮೂರು ದಶಕಗಳ ಕಾಲ ಬಾಂಧವ್ಯ ಹೊಂದಿದ್ದರು. ನ್ಯೂಯಾರ್ಕ್‌ನ ಸಂಗೀತ ಕಛೇರಿಗಳ ನಿರ್ವಾಹಕಿ ಸ್ಯು ಜೋನ್ಸ್ ಅವರೊಂದಿಗಿನ ಪ್ರಣಯದಿಂದಾಗಿ 1979ರಲ್ಲಿ ನೋರಾ ಜೋನ್ಸ್ ಜನಿಸಿದರು.

1981ರಲ್ಲಿ ಕಮಲಾ ಶಾಸ್ತ್ರಿ ಅವರಿಂದ ಬೇರ್ಪಟ್ಟ ರವಿಶಂಕರ್, 1986ರವರೆಗೆ ಸ್ಯು ಜೋನ್ಸ್ ಜತೆ ಇದ್ದರು.
70ರ ದಶಕದಿಂದ ಪರಿಚಿತರಾಗಿದ್ದ ಸುಕನ್ಯಾ ರಾಜನ್ ಹಾಗೂ ರವಿಶಂಕರ್ ಪ್ರೇಮದ ಫಲವಾಗಿ 1981ರಲ್ಲಿ ಅನುಷ್ಕಾ ಹುಟ್ಟಿದರು. ಆದರೆ ರವಿಶಂಕರ್ ಅವರು ಸುಕನ್ಯಾ ಅವರನ್ನು ವರಿಸ್ದ್ದಿದು 1989ರಲ್ಲಿ. ರವಿಶಂಕರ್ ಮೇಲೆ ಆರಾಧನಾ ಭಾವ ಹೊಂದಿದ್ದ ಸುಕನ್ಯಾ ಅವರ ಇಳಿಗಾಲದ ಸಂಗಾತಿಯಾದರು. ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾಂಡಿಯಾಗೊ ಬಳಿ ಈ ದಂಪತಿ ನೆಲೆಸಿದ್ದರು.

ಶುಭೇಂದ್ರ ಶಂಕರ್ ಅಥವಾ ಶುಭೊ ಶಂಕರ್ ಸಂಗೀತ ಕಛೇರಿಗಳಲ್ಲಿ  ತಂದೆಗೆ ಸಾಥ್ ನೀಡುತ್ತಿದ್ದರು. ಸೀತಾರ್ ಮತ್ತು ಸುರ್‌ಬಹಾರ್ ನುಡಿಸುತ್ತಿದ್ದ ಅವರ ಸಂಗೀತ ಬದುಕು ಅಷ್ಟೇನೂ ಉಜ್ವಲವಾಗಿರಲಿಲ್ಲ. 1992ರಲ್ಲಿ ಶುಭೇಂದ್ರ ಕೊನೆಯುಸಿರೆಳೆದರು.

ಸಂಗೀತಗಾರ್ತಿಯಾದ ಪುತ್ರಿ ನೋರಾ ಜೋನ್ಸ್ 2003ರಲ್ಲಿ ಎಂಟು ಗ್ರ್ಯಾಮಿ ಪ್ರಶಸ್ತಿ ಪಡೆದರು.
2003ರಲ್ಲಿ ಕಿರಿಯ ಪುತ್ರಿ ಅನುಷ್ಕಾ ಶಂಕರ್ ಅವರ ಆಲ್ಬಂ ಸಹ ಗ್ರ್ಯಾಮಿ ಪ್ರಶಸ್ತಿಗಾಗಿ ನಾಮಕರಣಗೊಂಡಿತ್ತು.
2013ರ ಗ್ರ್ಯಾಮಿ ಪ್ರಶಸ್ತಿಗಾಗಿ ಈಗ ರವಿಶಂಕರ್ ಹಾಗೂ ಅನೂಷ್ಕ ಶಂಕರ್ ಇಬ್ಬರ ಆಲ್ಬಂಗಳು ಪ್ರತ್ಯೇಕವಾಗಿ ನಾಮಕರಣಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT