ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಣವ್ ಬಜೆಟ್: ವರ್ಚಸ್ಸು ಹೆಚ್ಚಿಸದ ಕಸರತ್ತು

Last Updated 28 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಸೋಮವಾರ ಮಂಡಿಸಲಾದ ಕೇಂದ್ರ ಸರ್ಕಾರದ ಬಜೆಟ್ ಅನ್ನು, ಯುಪಿಎ ಸರ್ಕಾರವು ಸದ್ಯಕ್ಕೆ ಎದುರಿಸುತ್ತಿರುವ ವಿಚಿತ್ರ ಬಿಕ್ಕಟ್ಟಿನ ಪರಿಸ್ಥಿತಿ ಹಿನ್ನೆಲೆಯಲ್ಲಿಯೇ ಪರಾಮರ್ಶಿಸಬೇಕಾಗಿದೆ.ಹಲವಾರು ಭ್ರಷ್ಟಾಚಾರ ಪ್ರಕರಣಗಳು ಮತ್ತು ಕಪ್ಪು ಹಣದ ಸುತ್ತ ತಳಕು ಹಾಕಿಕೊಂಡಿರುವ ವಿವಾದಗಳು ಸರ್ಕಾರದ ವರ್ಚಸ್ಸಿಗೆ ಸಾಕಷ್ಟು ಮಸಿ ಬಳಿದಿವೆ. ಒಟ್ಟಾರೆ ಆರ್ಥಿಕ ಚಟುವಟಿಕೆಗಳು ಯಾವುದೇ ವಿಘ್ನಗಳಿಲ್ಲದೇ ಸುಸೂತ್ರವಾಗಿ ನಡೆಯುತ್ತಿದ್ದರೂ, ವಿವಾದಗಳು ಮತ್ತು ಗರಿಷ್ಠ ಮಟ್ಟದಲ್ಲಿ ಇರುವ ಹಣದುಬ್ಬರ ಪರಿಸ್ಥಿತಿಯು ಸರ್ಕಾರಕ್ಕೆ ಸಾಕಷ್ಟು ಇರಿಸು ಮುರಿಸು ಮಾಡುತ್ತಿವೆ.

ದೇಶ ಎದುರಿಸುತ್ತಿರುವ ಹಲವಾರು ಜ್ವಲಂತ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಬಗ್ಗೆ ಹಣಕಾಸು ಸಚಿವರು ಸ್ಪಷ್ಟ ಸಂದೇಶ ನೀಡಲಿದ್ದಾರೆಂದು ಬಹುವಾಗಿ ನಿರೀಕ್ಷಿಸಲಾಗಿತ್ತು.
ಬಹುತೇಕ ಸಮಸ್ಯೆಗಳನ್ನು ಅಲ್ಪಾವಧಿ ಕ್ರಮಗಳ ಮೂಲಕವೇ ಬಗೆಹರಿಸಲು ಸಾಧ್ಯವಿಲ್ಲ. ಹೀಗಾಗಿ ಬಜೆಟ್‌ನಲ್ಲಿ  ದೀರ್ಘಾವಧಿ  ಕ್ರಮಗಳನ್ನು ಪ್ರಕಟಿಸುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸ್ಪಷ್ಟ ಸಂದೇಶ ನೀಡಲು ಸಾಧ್ಯವಿತ್ತು.

ದೇಶದ ಅರ್ಥ ವ್ಯವಸ್ಥೆಯ ಕಾವಲುಗಾರನಾಗಿರುವ ಹಣಕಾಸು ಸಚಿವಾಲಯವು, ಜನಸಾಮಾನ್ಯರು ಮತ್ತು ಉದ್ದಿಮೆ ರಂಗಕ್ಕೆ ತಾನು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸ್ಪಷ್ಟ ಸಂಕೇತ ನೀಡುವ  ಅವಕಾಶ ತಪ್ಪಿಸಿಕೊಂಡಿರುವುದು ಕಂಡು ಅಚ್ಚರಿಯಾಗುತ್ತದೆ. ಹೀಗಾಗಿ ಸರ್ಕಾರದ ವರ್ಚಸ್ಸು ಬಜೆಟ್ ಮುನ್ನ ಹೇಗಿತ್ತೊ ಆನಂತರವೂ ಅದೇ ಬಗೆಯಲ್ಲಿ ಇದೆ. ವಿಶಾಲ ಆರ್ಥಿಕತೆಯ ಬಗ್ಗೆ ಕೈಗೊಂಡಿರುವ  ತೀರ್ಮಾನಗಳ  ಬಗ್ಗೆ ನಿರ್ಧಾರಕ್ಕೆ ಬರಬಹುದಾದರೆ, ವಿತ್ತೀಯ ಕೊರತೆ ತಗ್ಗಿಸುವ ಮೂಲಕ ಮುಂಗಡ ಪತ್ರವು ಪ್ರಗತಿಪರ ಧೋರಣೆ ಅಳವಡಿಸಿಕೊಂಡಿರುವುದು ವೇದ್ಯವಾಗುತ್ತದೆ.

ನಿರೀಕ್ಷೆಯಂತೆ ಸಾಮಾಜಿಕ ವಲಯಕ್ಕೆ ಹೆಚ್ಚು ಅನುದಾನ (ಶೇ 17ರಷ್ಟು) ನಿಗದಿ ಮಾಡಲಾಗಿದೆ. ‘ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಸೃಷ್ಟಿ ಯೋಜನೆ’ಯ ಕೂಲಿಯನ್ನು ಹಣದುಬ್ಬರಕ್ಕೆ ತಕ್ಕಂತೆ ನಿಗದಿ ಮಾಡಲಾಗುವುದು ಎಂದು ಪ್ರಕಟಿಸಲಾಗಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಈ ವ್ಯವಸ್ಥೆಯಲ್ಲಿ ಸಾಕಷ್ಟು ಸೋರಿಕೆ ಇದ್ದರೂ ‘ಎನ್‌ಆರ್‌ಇಜಿಎಸ್’ನ ಫಲಾನುಭವಿಗಳಿಗೆ ಹೆಚ್ಚಿನ ಪ್ರಯೋಜನವಂತೂ ಆಗಲಿದೆ.

ಆರ್ಥಿಕ ಸುಧಾರಣಾ ಕ್ರಮಗಳಿಗೆ ಸಂಬಂಧಿಸಿದಂತೆ, ಹಣಕಾಸು ವಲಯ ಮತ್ತು  ಸಾಲದ ಮಾರುಕಟ್ಟೆಯಲ್ಲಿ ದೃಢ ಹೆಜ್ಜೆ ಇರಿಸಲಾಗಿದೆ.  ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ಮೂಲಕ ಮೂಲಸೌಕರ್ಯ ರಂಗಕ್ಕೆ ಉತ್ತೇಜನ ನೀಡಲು ಉದ್ದೇಶಿಸಲಾಗಿದೆ. ಬಂಡವಾಳ ಸಂಗ್ರಹ ಅನುಮಾನ: ವಿಮೆ ಮತ್ತು ಪಿಂಚಣಿ ಸುಧಾರಣಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ.ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ (ಪಿಎಸ್‌ಯು) ಷೇರು ವಿಕ್ರಯದ ಮೂಲಕ  ್ಙ  40 ಸಾವಿರ ಕೋಟಿಗಳನ್ನು ಸಂಗ್ರಹಿಸಲು ಉದ್ದೇಶಿಸಲಾಗಿದೆ.  ಹಿಂದಿನ ವರ್ಷದ ಅನುಭವ ಆಧರಿಸಿ ಹೇಳುವುದಾದರೆ, ಈ ಪ್ರಮಾಣದ ಬಂಡವಾಳ ಕ್ರೋಡೀಕರಣ ಸಾಧ್ಯವಾಗಲಿರುವುದು ಅನುಮಾನ.

ಆಹಾರ ಹಣದುಬ್ಬರವು ಕುಟುಂಬವೊಂದರ ವೆಚ್ಚದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.  ಈ ಜ್ವಲಂತ ಸಮಸ್ಯೆಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಸರ್ಕಾರವು ತನ್ನ ಅಸಹಾಯಕತೆಯನ್ನು ಸ್ಪಷ್ಟವಾಗಿ ಪ್ರದರ್ಶಿಸಿದೆ. ಬೇಡಿಕೆ ಮೇಲೆ ಸರ್ಕಾರಕ್ಕೆ ಯಾವುದೇ ನಿಯಂತ್ರಣ ಇಲ್ಲದಿರುವ ಹಿನ್ನೆಲೆಯಲ್ಲಿ, ಬಜೆಟ್ ಭಾಷಣದಲ್ಲಿ  ಪೂರೈಕೆ ಪರಿಸ್ಥಿತಿ ಬಗ್ಗೆಯೂ ಯಾವುದೇ ಉಲ್ಲೇಖ ಇಲ್ಲ. ಹೀಗಾಗಿ ಅಲ್ಪಾವಧಿಯಲ್ಲಿ ಋತುಮಾನ ಬದಲಾವಣೆಗೆ ತಕ್ಕಂತೆ ಆಹಾರ ಹಣದುಬ್ಬರವು ಗರಿಷ್ಠ ಮಟ್ಟಕ್ಕೆ ಹೆಚ್ಚಳಗೊಳ್ಳುವ ಅಪಾಯ ಇದ್ದೇ ಇದೆ.

ಇನ್ನೊಂದು ಜ್ವಲಂತ ಸಮಸ್ಯೆಯಾಗಿರುವ, ಕಪ್ಪು ಹಣಕ್ಕೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ಹೆಚ್ಚು ಮಹತ್ವವನ್ನೇ ಕೊಟ್ಟಿಲ್ಲ. ಈ ಸಮಸ್ಯೆ ಅಲ್ಪಾವಧಿಯದ್ದು ಆಗಿರದೇ ದೀರ್ಘಾವಧಿಯದ್ದು ಆಗಿದ್ದರೂ ಆ ಬಗ್ಗೆ ಹೆಚ್ಚು ಮಹತ್ವವನ್ನೇ ಕೊಟ್ಟಿಲ್ಲ. ಮುಖೇಡಿತನ: ಬಹುಬ್ರಾಂಡ್‌ನ ಚಿಲ್ಲರೆ ವಹಿವಾಟು ರಂಗದಲ್ಲಿ ವಿದೇಶಿ ನೇರ ಹೂಡಿಕೆಗೆ (ಎಫ್‌ಡಿಐ) ವಿಪುಲ ಅವಕಾಶಗಳು ಇವೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿತ್ತು. ಇದೊಂದು ರಾಜಕೀಯವಾಗಿ ತುಂಬ ಸೂಕ್ಷ್ಮ ವಿಷಯವಾಗಿರುವುದರಲ್ಲಿ ಸಂದೇಹವೇ ಇಲ್ಲ. ಆದರೆ, ಈ ಬಗ್ಗೆ ಬಜೆಟ್ ಮೌನವಾಗಿರುವುದು ಮುಖೇಡಿತನವಾಗಿದೆ.

ಪರೋಕ್ಷ ತೆರಿಗೆ ದರಗಳಲ್ಲಿ ಕೆಲ ಮಟ್ಟಿಗೆ ಬದಲಾವಣೆಗಳನ್ನು ತರಲಾಗಿದೆ. ಆರ್ಥಿಕ ಮುಗ್ಗಟ್ಟಿನ ನಂತರದ ದಿನಗಳ ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇದೊಂದು ಬಜೆಟ್‌ನ ಸ್ವಾಗತಾರ್ಹ ಕ್ರಮವಾಗಿದೆ. ಬಹುವಾಗಿ ನಿರೀಕ್ಷಿಸಲಾಗುತ್ತಿದ್ದ ಆದಾಯ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳವು  ವೇತನ ವರ್ಗಕ್ಕೆ ಖಚಿತವಾಗಿಯೇ ನೆರವಾಗಲಿದ್ದು, ಅವರ ಮುಖದಲ್ಲಿ ನಗೆ ಮೂಡಿಸಲಿದೆ. ಒಟ್ಟಾರೆ ಬಜೆಟ್ ಆದಾಯ ತೆರಿಗೆ ಹೊರೆಗಳಿಂದ ಮುಕ್ತವಾಗಿದೆ.

ಇನ್ನೊಂದು ವರ್ಷ ವ್ಯರ್ಥ: 12ನೇ ಪಂಚವಾರ್ಷಿಕ ಯೋಜನಾ ಅವಧಿಯಲ್ಲಿ ಹಣಕಾಸು ಸಚಿವರು ಆರ್ಥಿಕ ವೃದ್ಧಿ  ದರವನ್ನು ಗರಿಷ್ಠ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕಾಗಿದೆ.  ಈ ಉದ್ದೇಶಕ್ಕೆ  ಮೂಲ ಸೌಕರ್ಯ ಸೇರಿದಂತೆ ಹಲವಾರು ವಲಯಗಳಲ್ಲಿ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿರುವ ಸುಧಾರಣಾ ಕ್ರಮಗಳನ್ನು ಜಾರಿಗೆ  ತರುವ ಅಗತ್ಯ ಇತ್ತು. ಅಂತಹ ಯಾವುದೇ ಕ್ರಮಗಳನ್ನು ಪ್ರಕಟಿಸಲಾಗಿಲ್ಲ. ಹೀಗಾಗಿ ಮತ್ತೊಂದು ವರ್ಷ ವ್ಯರ್ಥವಾಗುತ್ತಿದೆ.

ಗ್ರಾಮೀಣ ಆರ್ಥಿಕತೆಗೆ ನಿರಂತರವಾಗಿ ಮಹತ್ವ ನೀಡಿರುವುದು ಮತ್ತು ವಿಶಿಷ್ಟ ಗುರುತಿನ ಯೋಜನೆಯು ನಿರೀಕ್ಷಿತ ಫಲ ನೀಡುತ್ತಿರುವುದು  ಬಜೆಟ್‌ನ ಪ್ರಮುಖ ಮನಗೆಲ್ಲುವ ಸಂಗತಿಯಾಗಿದೆ. ಬಡವರು ಬಡತನದಿಂದ ಹೊರಬರಲು ಅಗತ್ಯವಾಗಿರುವ ಶೇ 10ಕ್ಕಿಂತ ಹೆಚ್ಚು ಆರ್ಥಿಕ ವೃದ್ಧಿ ದರವನ್ನು ನಿರಂತರವಾಗಿ ಕಾಯ್ದುಕೊಳ್ಳುವುದು ಅಗತ್ಯವಾಗಿದ್ದು ಅದಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುವಲ್ಲಿ ಬಜೆಟ್ ವಿಫಲವಾಗಿದೆ ಎಂದೇ ಹೇಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT