ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಣಾಳಿಕೆ ಎಂಬ ಕನಸಿನೊಳಗಿನ ಗಂಟು

Last Updated 24 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಆಗ್ರಾ: ಉತ್ತರಪ್ರದೇಶದ ಮತದಾರರು ಬದಲಾವಣೆಗಾಗಿ ತುದಿಗಾಲಲ್ಲಿ ನಿಂತಿದ್ದಾರೆ ಎಂದು ಭವಿಷ್ಯ ನುಡಿಯಲಾಗುತ್ತಿದೆ. ಹೆಚ್ಚುತ್ತಿರುವ ಮತದಾನದ ಪ್ರಮಾಣವನ್ನು ನೋಡುತ್ತಿದ್ದರೆ ಈ ಭವಿಷ್ಯ ಸುಳ್ಳಾಗಬಹುದು ಎಂದು ಹೇಳುವುದು ಸಾಧ್ಯ ಇಲ್ಲ. ಆದರೆ ಜನತೆ ಬಯಸುವ ಬದಲಾವಣೆಯನ್ನು ತರಬೇಕೆಂಬ ಪ್ರಾಮಾಣಿಕತೆ ಯಾವುದಾದರೂ ಪಕ್ಷಗಳಲ್ಲಿ ಇವೆಯೇ? ಇದಕ್ಕಾಗಿ ಅವುಗಳು ಏನಾದರೂ ಸಿದ್ದತೆಗಳನ್ನು ಮಾಡಿಕೊಂಡಿವೆಯೇ? ಇದನ್ನು ತಿಳಿದುಕೊಳ್ಳಲು ಇರುವ ಏಕೈಕ ಅವಕಾಶ ಚುನಾವಣಾ ಪ್ರಣಾಳಿಕೆಗಳು.ಆದರೆ ಇವುಗಳ ಮೇಲೆ ಕಣ್ಣು ಹಾಯಿಸಿದರೆ ಆ ಭರವಸೆ ಹುಟ್ಟುವುದಿಲ್ಲ. ಚುನಾವಣಾ ಪ್ರಣಾಳಿಕೆಗಳನ್ನು ದೇಶದ ಯಾವ ರಾಜಕೀಯ ಪಕ್ಷವೂ ಎಂದೂ ಪ್ರಾಮಾಣಿಕತೆಯಿಂದ ತಯಾರಿಸಿದ್ದೇ ಇಲ್ಲ, ದೇಶದ ಮತದಾರರು ಕೂಡಾ  ಆ ಪ್ರಣಾಳಿಕೆಗಳನ್ನು ಎಂದೂ ಗಂಭೀರವಾಗಿ ಸ್ವೀಕರಿಸಿದ್ದೇ ಇಲ್ಲ. ಈ ನಿಯಮಕ್ಕೆ ಉತ್ತರಪ್ರದೇಶ ಕೂಡಾ ಅಪವಾದ ಅಲ್ಲ.


ಪ್ರಣಾಳಿಕೆ ವಿಷಯದಲ್ಲಿ ಉಳಿದೆಲ್ಲ ರಾಜಕೀಯ ಪಕ್ಷಗಳಿಗಿಂತ ಪ್ರಾಮಾಣಿಕವಾಗಿರುವುದು ಬಹುಜನ ಸಮಾಜ ಪಕ್ಷ. ಅದು ಪ್ರಣಾಳಿಕೆಯನ್ನು ಹಿಂದೆಯೂ ಬಿಡುಗಡೆ ಮಾಡಿಲ್ಲ, ಈ ಬಾರಿಯೂ ಮಾಡಿಲ್ಲ. ಕಾರ್ಯಕ್ರಮ ಮತ್ತು ಸಾಧನೆಗಳೇ ನಮ್ಮ ಪ್ರಣಾಳಿಕೆ ಎಂದು ಆ ಪಕ್ಷ ಹೇಳುತ್ತಾ ಬಂದಿದೆ.  ಆ ಪಕ್ಷಕ್ಕೆ ಮತಹಾಕುವವರು ಕೂಡಾ ಪ್ರಣಾಳಿಕೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಈ ಚುನಾವಣೆಯ ಅತೀ ದೊಡ್ಡ ಪ್ರಣಾಳಿಕೆ ಬಿಜೆಪಿಯದ್ದು, ಅದು 70 ಪುಟಗಳದ್ದು. ಅದು ಕೂಡಾ ಸಾಮಾನ್ಯ ಜನ ಓದಲಾಗದ ಪಂಡಿತರ ಹಿಂದಿ ಭಾಷೆಯಲ್ಲಿದೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ 30 ಪುಟಗಳದ್ದು.ಸಮಾಜವಾದಿ ಪಕ್ಷ 18 ಪುಟಗಳಲ್ಲಿ ಮುಗಿಸಿಬಿಟ್ಟಿದೆ.

ಎಲ್ಲ ಪಕ್ಷಗಳ ಗುರಿ ರೈತರು ಮತ್ತು ಯುವಜನರು. ರೈತರ ಬೆಳೆಗೆ ಅವರ ಉತ್ಪಾದನಾ ವೆಚ್ಚಕ್ಕಿಂತ ಶೇಕಡಾ 50ರಷ್ಟು ಹೆಚ್ಚಿನ ಬೆಲೆ, 50,000 ರೂಪಾಯಿ ವರೆಗಿನ ರೈತರ ಸಾಲ ಮನ್ನಾ, ಕಾಲುವೆ ಮತ್ತು ಸರ್ಕಾರಿ ಕೊಳವೆಬಾವಿಗಳಿಂದ ರೈತರಿಗೆ ಉಚಿತ ನೀರು, 65ಕ್ಕಿಂತ ಹೆಚ್ಚು ವಯಸ್ಸಿನ ರೈತರಿಗೆ ಪಿಂಚಣಿ-ಇವು ಸಮಾಜವಾದಿ ಪಕ್ಷ ನೀಡಿರುವ ಭರವಸೆಗಳು. ಒಂದು ಕ್ವಿಂಟಾಲ್ ಕಬ್ಬಿಗೆ 300 ರೂಪಾಯಿ ಖರೀದಿ ದರ, ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಜತೆಯಲ್ಲಿ ಪ್ರತಿ ಕ್ವಿಂಟಲಿಗೆ 125 ರೂಪಾಯಿ ಬೋನಸ್, ರೈತರಿಗೆ ಶೇಕಡಾ ಒಂದರ ದರದಲ್ಲಿ ಸಾಲ, ಸಣ್ಣ ಮತ್ತು ಮಧ್ಯಮ ರೈತರಿಗೆ ಉಚಿತ ವಿದ್ಯುತ್, ವಯಸ್ಸಾದ ರೈತರು, ನೇಕಾರರು ಮತ್ತು ಕರಕುಶಲ ಕಾರ್ಮಿಕರಿಗೆ ಮಾಸಿಕ 2000 ರೂಪಾಯಿ ಪಿಂಚಣಿ- ಇವು ಬಿಜೆಪಿಯ ಪ್ರಣಾಳಿಕೆಯಲ್ಲಿನ ಮುಖ್ಯಾಂಶಗಳು. ಈ ಎರಡು ಪಕ್ಷಗಳಿಗೆ ಹೋಲಿಸಿದರೆ ಕಾಂಗ್ರೆಸ್ ಪ್ರಣಾಳಿಕೆ ಹೆಚ್ಚು ಪ್ರಾಯೋಗಿಕವಾಗಿದೆ .ನಿರ್ದಿಷ್ಟವಾದ ಆಶ್ವಾಸನೆಗಳನ್ನು ನೀಡುವ ಉಸಾಬರಿಗೆ ಹೋಗದೆ ಕೃಷಿಮಾರುಕಟ್ಟೆ,ನೀರಾವರಿ, ಕೃಷಿ ತಂತ್ರಜ್ಞಾನ, ಮೂಲಸೌಕರ್ಯದ ಬಗ್ಗೆ ಕೈಗೊಳ್ಳಬಹುದಾದ ಕ್ರಮಗಳನ್ನಷ್ಟೇ ವಿವರಿಸಿ ಸುಮ್ಮನಾಗಿದೆ.

ರೈತರ ನಂತರ ರಾಜಕೀಯ ಪಕ್ಷಗಳು ಕಣ್ಣಿಟ್ಟಿರುವುದು ವಿದ್ಯಾರ್ಥಿಗಳು ಮತ್ತು ಯುವಜನರ ಮೇಲೆ. ಒಂದು ಕಾಲದಲ್ಲಿ ಕಂಪ್ಯೂಟರ್‌ಗಳನ್ನು ವಿರೋಧಿಸುತ್ತಿದ್ದ ಸಮಾಜವಾದಿ ಪಕ್ಷ ಉಚಿತವಾಗಿ ಹತ್ತನೆ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಮತ್ತು ಹನ್ನೆರಡನೆ ತರಗತಿ ಪಾಸಾದವರಿಗೆ ಲ್ಯಾಪ್‌ಟಾಪ್ ವಿತರಿಸುವುದಾಗಿ ಆಶ್ವಾಸನೆ ನೀಡಿದೆ. ಪದವಿ ತರಗತಿ ವರೆಗೆ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ, ಐದುಲಕ್ಷ ರೂಪಾಯಿಗಳಿಗಿಂತ ಕಡಿಮೆ ಆದಾಯದ ಕುಟುಂಬಗಳ ವಿದ್ಯಾರ್ಥಿಗಳಿಗೆ ಉನ್ನತ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ಬೋದನಾ ಶುಲ್ಕ ಮಾಫಿ ಮಾಡುವುದು ಸಮಾಜವಾದಿ ಪಕ್ಷ ವಿದ್ಯಾರ್ಥಿಗಳಿಗೆ ನೀಡಿರುವ ಇತರ ಭರವಸೆಗಳು. ಈ ಪಕ್ಷದ ಜತೆ ಪೈಪೋಟಿಗಿಳಿದಿರುವ ಬಿಜೆಪಿ 1,000 ರೂಪಾಯಿಗೆ ಟ್ಯಾಬ್ಲೆಟ್ ಮತ್ತು 5,000 ರೂಪಾಯಿಗೆ ಲ್ಯಾಪ್‌ಟಾಪ್ ನೀಡುವುದಾಗಿ ಘೋಷಿಸಿದೆ. ಇಲ್ಲಿಯೂ ಕಾಂಗ್ರೆಸ್ ದೊಡ್ಡ ಆಶ್ವಾಸನೆಗಳನ್ನು ನೀಡಲು ಹೋಗದೆ ಉನ್ನತ ಶಿಕ್ಷಣದ  ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಶಿಕ್ಷಣ ಸಾಲ ಮೊದಲಾದ ಪ್ರಾಯೋಗಿಕ ಮಾತುಗಳನ್ನಷ್ಟೇ ಹೇಳಿದೆ.

 ಈ ಭರವಸೆಗಳನ್ನು ಈಡೇರಿಸಲು ಸಾಧ್ಯವೇ? ` ಈಡೇರಿಸಲು ಸಾಧ್ಯವೇ ಎಂಬ ಪ್ರಶ್ನೆ ಒತ್ತಟ್ಟಿಗಿರಲಿ, ಸಮಾಜವಾದಿ ಪಕ್ಷ ಮತ್ತು ಬಿಜೆಪಿಯ ಪ್ರಣಾಳಿಕೆಗಳನ್ನು ಕಾರ್ಯರೂಪಕ್ಕೆ ತರಲು ಬೇಕಾಗುವ ಹಣ ಎಷ್ಟು ಎಂಬುದನ್ನು ಲೆಕ್ಕ ಹಾಕುವುದು ಕೂಡಾ ಕಷ್ಟ~ ಎನ್ನುತ್ತಾರೆ ಲಖನೌದ ಗಿರಿ ಅಭಿವೃದ್ದಿ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಅಜಿತ್‌ಕುಮಾರ್ ಸಿಂಗ್. ಅವರೇ ಕಷ್ಟಪಟ್ಟು ಮಾಡಿರುವ ಅಧ್ಯಯನ ಹೀಗಿದೆ: ಒಂದು ಲ್ಯಾಪ್‌ಟಾಪ್‌ನ ಬೆಲೆ 20,000 ರೂಪಾಯಿ ಎಂದಿಟ್ಟುಕೊಂಡರೆ ಹನ್ನೆರಡನೆ ತರಗತಿಯಿಂದ ಪ್ರತಿವರ್ಷ ಪಾಸಾಗುವ ಹತ್ತು ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಲು 2,000 ಕೋಟಿ ರೂಪಾಯಿ ಬೇಕಾಗುತ್ತದೆ.

ಒಂದು ಟ್ಯಾಬ್ಲೆಟ್ ಬೆಲೆ 5000 ರೂಪಾಯಿ ಎಂದಿಟ್ಟುಕೊಂಡರೆ ಪ್ರತಿವರ್ಷ ಹತ್ತನೆ ತರಗತಿ ಪಾಸಾಗುವ 20 ಲಕ್ಷ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌ನೀಡಲು 1,000 ಕೋಟಿ ರೂಪಾಯಿ ಬೇಕು. ಒಂದು ದನಕ್ಕೆ 5,000 ರೂಪಾಯಿ ಪ್ರಕಾರ ಬಡತನ ರೇಖೆಗಿಂತ ಕೆಳಗೆ ಇರುವ ಒಂದುಕೋಟಿ ಕುಟುಂಬಗಳಿಗೆ ಉಚಿತವಾಗಿ ದನ ನೀಡಲು 5,000 ಕೋಟಿ ರೂಪಾಯಿ ಬೇಕು.ರೈತರಿಗೆ ಸರ್ಕಾರಿ ಮೂಲಗಳಿಂದ ಉಚಿತವಾಗಿ ನೀರು ಮತ್ತು ವಿದ್ಯುತ್ ನೀಡಲು 2,000 ಕೋಟಿ ರೂಪಾಯಿ ಬೇಕು. ಇದರ ಜತೆ ರೈತರ ಸಾಲ ಮನ್ನಾ ಮಾಡಲು ಇನ್ನಷ್ಟು ಸಾವಿರ ಕೋಟಿ ರೂಪಾಯಿಗಳು ಬೇಕು. 

 ಸಮಾಜವಾದಿ ಪಕ್ಷ ಮತ್ತು ಬಿಜೆಪಿ ತಮ್ಮ ಪ್ರಣಾಳಿಕೆಗಳಲ್ಲಿ ನೀಡಿರುವ ಆಶ್ವಾಸನೆಗಳನ್ನು ಈಡೇರಿಸಲು ಕನಿಷ್ಠ 50,000 ಕೋಟಿ ರೂಪಾಯಿ ಬೇಕಾಗಬಹುದು ಎಂದು ಗಿರಿ ಅಭಿವೃದ್ದಿ ಅಧ್ಯಯನ ಸಂಸ್ಥೆ ಮಾಡಿರುವ ಅಧ್ಯಯನ ಹೇಳಿದೆ. 2011-12ರ ಸಾಲಿನ ಉತ್ತರಪ್ರದೇಶದ ಯೋಜನಾ ಗಾತ್ರ 47,000 ಕೋಟಿ ರೂಪಾಯಿ.

ಇಷ್ಟು ಮಾತ್ರ ಅಲ್ಲ, ಒಂದೊಮ್ಮೆ  ಬಿಎಸ್‌ಪಿ ಆಡಳಿತ ಕೊನೆಗೊಂಡು ಯಾವುದಾದರೂ ವಿರೋಧ ಪಕ್ಷ ಇಲ್ಲವೇ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಅದರ ಪಾಲಿಗೆ ಸಿಗುವ ರಾಜ್ಯವಾದರೂ ಎಂತಹದ್ದು? ಸರ್ಕಾರದ ಅಧಿಕೃತ ದಾಖಲೆಗಳಲ್ಲಿನ ವಿವರ ಹೀಗಿದೆ: 2007-08ರ ಸಾಲಿನಲ್ಲಿ ಉತ್ಪಾದನಾ ಕ್ಷೇತ್ರ ಶೇಕಡಾ 8.8ರ ಅಭಿವೃದ್ದಿ ದರದಲ್ಲಿದ್ದರೆ ಈಗ ಅದು ಶೇಕಡಾ 1.5ಕ್ಕೆ ಇಳಿದಿದೆ. ಸರ್ಕಾರಿ ಕ್ಷೇತ್ರಗಳಲ್ಲಿ ಉದ್ಯೋಗಗಳ ಸಂಖ್ಯೆ ಹೆಚ್ಚಾಗಿಲ್ಲ.

ಖಾಸಗಿ ಕ್ಷೇತ್ರದಲ್ಲಿ 1991ರಲ್ಲಿ 5.36 ಲಕ್ಷ ಉದ್ಯೋಗಳ ಸಂಖ್ಯೆ 5 ಲಕ್ಷಕ್ಕೆ ಇಳಿದಿದೆ. 2011-12ರಲ್ಲಿ 8,3011 ಕೋಟಿ ರೂಪಾಯಿಗಳಿಷ್ಟಿದ್ದ ಸಾಲ 2010-11 ರಸಾಲಿನಲ್ಲಿ 1,88,757 ಕೋಟಿ ರೂಪಾಯಿಯಷ್ಟಾಗಿದೆ. ಪ್ರಣಾಳಿಕೆಗಳಲ್ಲಿ ಕೊಟ್ಟ ಆಶ್ವಾಸನೆಗಳ ಈಡೇರಿಕೆಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಖಾಲಿ ಬೊಕ್ಕಸದ ಕಾರಣ ನೀಡಲು ಇಷ್ಟು ಸಾಕಾಗಲಾರದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT