ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಣಾಳಿಕೆ ಬದಲು `ಮನವಿ' ಬಿಡುಗಡೆ

Last Updated 23 ಏಪ್ರಿಲ್ 2013, 19:37 IST
ಅಕ್ಷರ ಗಾತ್ರ

ಬೆಂಗಳೂರು: ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಮೈತ್ರಿಕೂಟವು ಮಂಗಳವಾರ ನಗರದಲ್ಲಿ ಪಕ್ಷದ ಪ್ರಣಾಳಿಕೆ ಬದಲು `ಮನವಿ' ಎಂಬ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿತು.

ಈ ಕುರಿತು ಮಾತನಾಡಿದ ಬಿಎಸ್‌ಪಿ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಅವರು, `ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಪರ್ಯಾಯ ರಾಜಕಾರಣ ಬೆಳೆಯಬೇಕಾಗಿದೆ. ಈ ಮೈತ್ರಿಕೂಟವು ಪರ್ಯಾಯ ರಾಜಕಾರಣವಾಗಿ ಬೆಳೆಯುವ ವಿಶ್ವಾಸವಿದೆ' ಎಂದರು.

`ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದ, ಮುಸ್ಲಿಂ, ಕ್ರೈಸ್ತ ಹಾಗೂ ಮೇಲ್ಜಾತಿಯ ಬಡವರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಬೇಕೆಂಬ ದೃಢ ಸಂಕಲ್ಪ ನಮ್ಮದಾಗಿದೆ. ಮೈತ್ರಿಕೂಟದಿಂದ 200 ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಲಾಗಿದೆ' ಎಂದು ಹೇಳಿದರು.

ಸರ್ವರಿಗೂ ಒಳ್ಳೆಯದಾಗುವ ಅಭಿವೃದ್ಧಿ ಯೋಜನೆಗಳು, ಎಸ್‌ಸಿ, ಎಸ್‌ಟಿ ಮತ್ತು ಓಬಿಸಿ ಸಮುದಾಯಗಳ ಬಾಕಿ ಉಳಿದಿರುವ ಹುದ್ದೆಗಳನ್ನು ಸಂಪೂರ್ಣವಾಗಿ ಭರ್ತಿ ಮಾಡುವುದು. ಮುಸ್ಲಿಂ ಹಾಗೂ ದಲಿತ ಕ್ರೈಸ್ತರಿಗೂ ಮೀಸಲಾತಿ ನೀಡಲು ಅಗತ್ಯ ಕಾನೂನು ತಿದ್ದುಪಡಿ- ಹೀಗೆ ಅನೇಕ ಅಂಶಗಳನ್ನುಳ್ಳ ಮನವಿಯನ್ನು ಬಿಡುಗಡೆ ಮಾಡಲಾಯಿತು.

ಬಿಜೆಪಿ ಪ್ರಚಾರಕ್ಕೆ ವಿಶೇಷ ರಥ
ಚುನಾವಣಾ ಪ್ರಚಾರಕ್ಕಾಗಿ ರಾಜ್ಯ ಬಿಜೆಪಿ, ಸರಕು ಸಾಗಣೆಯ 14 ಆಟೊಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಿದೆ.
ಈ ಆಟೊಗಳನ್ನು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಪ್ರತಿ ಆಟೊದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲು ಧ್ವನಿವರ್ಧಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಪಕ್ಷದ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಯಾವುದೇ ಅಡಚಣೆ ಇಲ್ಲದಂತೆ ನಿಂತು ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲು ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಆಟೊಗಳಿಗೆ ಮಂಗಳವಾರ ಚಾಲನೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT