ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಣೀತಾ ನವನೀತ

Last Updated 5 ಜನವರಿ 2012, 19:30 IST
ಅಕ್ಷರ ಗಾತ್ರ

`ಸಖತ್ತಾಗವ್ಳೆ.. ಸುಮ್ನೆ ನಗ್ತಾಳೆ.. ಕದ್ದು ನೋಡ್ತಾಳೆ..~- ಈ ಹಾಡು ಕೇಳಿಸಿದಾಕ್ಷಣ ನೀಳ ಕಾಯದ ಬಾರ್ಬಿಯಂಥ ಚೆಲುವೆ ಕಣ್ಣೆದುರು ಸುಳಿಯುತ್ತಾಳೆ. ಆಕೆಯ ಹೆಸರು ಪ್ರಣೀತಾ. ದೊಡ್ಡ ಕಣ್ಣುಗಳ, ಹಾಲು ಬಿಳುಪಿನ ಪ್ರಣೀತಾಳ ಮೊದಲ ಸಿನಿಮಾ `ಪೊರ್ಕಿ~. ಅದರ ಬಿಡುಗಡೆಗೆ ಮುಂಚೆಯೇ ಪ್ರಣೀತಾ ತೆಲುಗಿನ `ಬಾವಾ~ ಚಿತ್ರದಲ್ಲಿ ಬಿಜಿಯಾಗಿದ್ದರು. ನಂತರ `ಏಮ್ ಪಿಲ್ಲೋ ಏಮ್ ಪಿಲ್ಲಾಡೋ~, ತಮಿಳಿನ `ಉದಯನ್~ ಸಿನಿಮಾಗಳಲ್ಲಿ ನಟಿಸಿದರು. `ಜರಾಸಂಧ~ ಮೂಲಕ ಮತ್ತೆ ಕನ್ನಡಕ್ಕೆ ಬಂದರು. ಇದೀಗ `ಭೀಮಾತೀರದ ಹಂತಕರು~, `ಸ್ನೇಹಿತರು~ ಮತ್ತು ತಮಿಳಿನ `ಸಗುನಿ~ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಬಿಡುವಿಲ್ಲದ ಶೆಡ್ಯೂಲ್‌ಗಳ ನಡುವೆ `ಸಿನಿಮಾ ರಂಜನೆ~ ಜೊತೆ ಪ್ರಣೀತಾ ಮಾತು ಹಂಚಿಕೊಂಡರು.

ಕನ್ನಡದಲ್ಲಿ ಅವಕಾಶಗಳು ಹೇಗಿವೆ?
ಉತ್ತಮ ಅವಕಾಶಗಳು ಬರುತ್ತಿವೆ. ಆದರೆ ನಾನೇ ತೂಗಿ ಅಳೆದು ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವೆ.

ನಿಮ್ಮೂರು ಯಾವೂರು?
ನಾನು ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದವಳು. ಅಪ್ಪ ಅಮ್ಮ ಡಾಕ್ಟರ್ಸ್‌. ಅಮ್ಮ ಸ್ವಲ್ಪ ದಿನ ಇಂದೋರ್‌ನಲ್ಲಿದ್ದರು. ಅಪ್ಪ ಕನ್ನಡದವರು.

ಸಿನಿಮಾಗೆ ಬಂದುದು ಹೇಗೆ?
`ಪೊರ್ಕಿ~ ಸಿನಿಮಾದಲ್ಲಿ ನಟಿಸುವ ಅವಕಾಶ ಆಕಸ್ಮಿಕವಾಗಿ ಸಿಕ್ಕಿತು. ಮನೆಯಲ್ಲಿ ತುಂಬಾ ವಿರೋಧ ಎದುರಿಸಬೇಕಾಯಿತು. ಎಲ್ಲರನ್ನೂ ಒಪ್ಪಿಸಲು ತುಂಬಾ ಕಷ್ಟವಾಯಿತು. ಓದು ಮುಂದುವರಿಸುತ್ತಾ ರಜೆಯಲ್ಲಿ ಮಾತ್ರ ನಟಿಸುವುದಾಗಿ ಹೇಳಿ ಒಪ್ಪಿಸಿದೆ. ಇದೀಗ ನನ್ನ ನಟನೆ ಬಗ್ಗೆ ಅವರಿಗೂ ಹೆಮ್ಮೆ ಎನಿಸಿದೆ.

ರಜೆಯಲ್ಲಿ ಮಾತ್ರ ನಟಿಸುವೆ ಎನ್ನುವುದಾದರೆ, ನಟನೆ ನಿಮಗೆ ಹವ್ಯಾಸ ಮಾತ್ರ ಎಂದಂತಾಯಿತು...
ಅವಕಾಶಗಳು ನಿರಂತರ ಬರುತ್ತಿರುವುದರಿಂದ ಕಾಲೇಜಿಗೆ ಹೋಗಲು ಆಗುತ್ತಿಲ್ಲ. ಪರೀಕ್ಷೆ ಮಾತ್ರ ತೆಗೆದುಕೊಳ್ಳುತ್ತಿದ್ದೇನೆ. ಆರಂಭದಲ್ಲಿ ಸಿನಿಮಾ ಹವ್ಯಾಸವಾಗಿಯೇ ಇತ್ತು. ಇದೀಗ ವೃತ್ತಿ ಆಗುವ ಹಂತದಲ್ಲಿದೆ.

ಎಂಥ ಪಾತ್ರಗಳನ್ನು ಮಾಡಬೇಕೆಂಬ ಆಸೆ ಇದೆ.
ನಿಜ ಬದುಕಿಗೆ ಹತ್ತಿರವಾದ ಪಾತ್ರಗಳನ್ನು ಮಾಡಲು ತುಂಬಾ ಇಷ್ಟ. ಭವಿಷ್ಯದಲ್ಲಿ ಪ್ರಬುದ್ಧ ಪಾತ್ರಗಳನ್ನು ಮಾಡುವಾಸೆ ಇದೆ. ಬೇರೆ ಬೇರೆ ರೀತಿಯ ದೇಹ ಭಾಷೆ (ಬಾಡಿ ಲಾಂಗ್ವೆಜ್) ಇರುವ ಮತ್ತು ಹಲವು ರೀತಿಯ ಗೆಟಪ್‌ಗಳಿರುವ ಪಾತ್ರಗಳನ್ನು ಮಾಡಲು ಇಷ್ಟ.

ನಿಮ್ಮ ನಟನಾ ಪ್ರತಿಭೆ ಬಗ್ಗೆ ಏನನ್ನಿಸುತ್ತದೆ?
ನಿರ್ದೇಶಕರು ಹೇಳಿಕೊಟ್ಟ ಹಾಗೆ ನಟಿಸ್ತೀನಿ. ಅವರ ಕಲ್ಪನೆಯ ಪಾತ್ರವಾಗಲು ಪ್ರಯತ್ನಿಸ್ತೀನಿ. ಹಳೆಯ ಸಿನಿಮಾಗಳನ್ನು ನೋಡ್ತೀನಿ. ಅದರಿಂದ ಏನು ಮಾಡಬಹುದು? ಏನು ಮಾಡಬಾರದು? ಹಿಂದಿನವರು ಏನೆಲ್ಲಾ ಮಾಡಿದ್ದಾರೆಂದು ತಿಳಿಯುತ್ತದೆ. ಅದೇ ನನಗೆ ದಾರಿದೀಪ.

ಹಳೆಯ ಕನ್ನಡ ಸಿನಿಮಾಗಳನ್ನು ನೋಡಿದ್ದೀರಾ?
`ಭಕ್ತ ಪ್ರಹ್ಲಾದ~, `ಶರಪಂಜರ~, `ಆಪ್ತಮಿತ್ರ~- ಹೀಗೆ ತುಂಬಾ ಸಿನಿಮಾ ನೋಡಿರುವೆ. ಸೌಂದರ್ಯ ಅವರ ನಟನೆ ಇಷ್ಟ. ಎಕ್ಸ್‌ಪೋಸ್ ಮಾಡದೆ ಪ್ರತಿಭೆಯಿಂದಲೇ ಬೆಳೆದ ಅವರಂತಾಗಬೇಕು ಎಂಬುದೇ ನನ್ನಾಸೆ.

ಗ್ಲಾಮರಸ್ ಪಾತ್ರಗಳನ್ನು ಮಾಡಲು ಇಷ್ಟಪಡುವಿರಾ?
ಸಿನಿಮಾ ಎಂದರೆ ಮನರಂಜನೆ. ಗ್ಲಾಮರ್ ಇರಲೇಬೇಕು. ಆದರೆ ಅದೇ ಮುಖ್ಯ ಅಲ್ಲ. ಗ್ಲಾಮರ್‌ಗೆ ಮಿತಿ ಇದ್ದರೆ ಒಳಿತು. ಕುಟುಂಬದ ಜನರೆಲ್ಲಾ ಒಟ್ಟಾಗಿ ಕುಳಿತು ನೋಡುವಂಥ ಸಿನಿಮಾ ಮಾಡಬೇಕು. ಗ್ಲಾಮರ್ ಎಂದರೆ ಎಕ್ಸ್‌ಪೋಸ್ ಅಲ್ಲ, ಅದು ಸೌಂದರ್ಯ ಪ್ರಜ್ಞೆ. ನನ್ನ ಮುಖಕ್ಕೆ ಅತಿ ಗ್ಲಾಮರ್ ಸೂಟ್ ಆಗಲ್ಲ ಅಂತಾರೆ. ನನಗೆ ಸಿಗುತ್ತಿರುವುದೆಲ್ಲ ಮುಗ್ಧ ಪಾತ್ರಗಳೇ.

ಫಿಟ್ ಆಗಿರಲು ಏನು ಮಾಡ್ತೀರಿ?
ನಾನು ತುಂಬಾ ತೆಳ್ಳಗೇನೂ ಇ್ಲ್ಲಲ್ಲ, ಆರೋಗ್ಯಕರವಾಗಿದ್ದೀನಿ ಅಷ್ಟೇ. ಸಿನಿಮಾಗೆ ಬಂದ ಮೇಲೆ ಫಿಟ್‌ನೆಸ್ ಕಾಯ್ದುಕೊಳ್ಳಲು ಕಡ್ಡಾಯವಾಗಿ ವ್ಯಾಯಮ ಮಾಡ್ತೀನಿ. ಅವಕಾಶ ಸಿಕ್ಕಿದಾಗ ಜಿಮ್‌ಗೆ ಹೋಗ್ತೀನಿ. ಹುಟ್ಟಿದಾಗಿನಿಂದ ಸಸ್ಯಾಹಾರಿ. ಡಯಟ್ ಮಾಡುವ ತೊಂದರೆ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT