ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಜಿಲ್ಲೆಯಲ್ಲೂ ಕಕ್ಷಿದಾರರ ತಂಗುದಾಣ

Last Updated 17 ಫೆಬ್ರುವರಿ 2011, 10:50 IST
ಅಕ್ಷರ ಗಾತ್ರ

ಧಾರವಾಡ: “ರಾಜ್ಯದ ಎಲ್ಲ ಜಿಲ್ಲಾ ನ್ಯಾಯಾಲಯಗಳಲ್ಲಿ ವಕೀಲರ ಕೊಠಡಿಗಳ ಸಮುಚ್ಚಯ ಹಾಗೂ ಕಕ್ಷಿದಾರರ ತಂಗುದಾಣವನ್ನು ನಿರ್ಮಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ” ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಎಂ.ಉದಾಸಿ ಹೇಳಿದರು. ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ನಿರ್ಮಿಸಿರುವ ಕಕ್ಷಿದಾರರ ತಂಗುದಾಣ ಉದ್ಘಾಟಿಸಿ ಮಾತನಾಡಿದ ಅವರು, ಬೆಳಗಾವಿ ನಂತರ ಧಾರವಾಡದಲ್ಲಿಯೇ ಈ ತಂಗುದಾಣ ನಿರ್ಮಾಣವಾಗಿದೆ. ಮುಂಬರುವ ದಿನಗಳಲ್ಲಿ ಎಲ್ಲ ಜಿಲ್ಲೆಗಳಲ್ಲೂ ಕಕ್ಷಿದಾರರ ತಂಗುದಾಣ ನಿರ್ಮಿಸಲಾಗುವುದು ಎಂದರು.

ಇಂದು ನ್ಯಾಯಾಧೀಶರ ಕೊರತೆಯಿಂದಾಗಿ ಪ್ರಕರಣಗಳು ಬೇಗನೇ ಇತ್ಯರ್ಥವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿ ನ್ಯಾಯಾಧೀಶರ ನೇಮಕಕ್ಕೆ ಕ್ರಮ ತೆಗೆದುಕೊಳ್ಳಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೇರಿಕೊಂಡು ನ್ಯಾಯಾಂಗ ಇಲಾಖೆಯ ಉನ್ನತಿಗೆ ಶ್ರಮಿಸುವ ಅಗತ್ಯವಿದೆ ಎಂದು ಹೇಳಿದರು.

ಜಿಲ್ಲಾ ನ್ಯಾಯಾಲಯದಲ್ಲಿ ತಮ್ಮ ಇಲಾಖೆಯಿಂದ 16 ಕೋಟಿ ರೂಪಾಯಿ ವೆಚ್ಚದಲ್ಲಿ ಮೂರು ಮಹಡಿಯ ಕಟ್ಟಡ ನಿರ್ಮಿಸಲಾಗುವುದು. ಈ ಕಟ್ಟಡದಲ್ಲಿ ಲಿಫ್ಟ್ ಸೇರಿದಂತೆ ಎಲ್ಲ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. 2012-13ನೇ ಸಾಲಿನಲ್ಲಿ ಈ ಕಟ್ಟಡ ಸಂಪೂರ್ಣವಾಗಿ ನಿರ್ಮಾಣಗೊಳ್ಳಲಿದೆ. ಹುಬ್ಬಳ್ಳಿ ನ್ಯಾಯಾಲಯದ ಮೇಲ್ದರ್ಜೆಗೆ 2 ಕೋಟಿ ರೂ., ಅವಳಿನಗರದಲ್ಲಿ ನ್ಯಾಯಾಧೀಶರ ವಸತಿಗೃಹಕ್ಕೆ 8 ಕೋಟಿ ರೂ. ಹಾಗೂ ಇಲ್ಲಿನ ವಕೀಲರ ಕೊಠಡಿಗೆ ಮತ್ತೆ ಒಂದು ಕೋಟಿ ರೂಪಾಯಿ ನೀಡಲಾಗುವುದು ಎಂದು ತಿಳಿಸಿದರು.
ವಕೀಲರ ಕೊಠಡಿಗಳ ಸಮುಚ್ಛಯ ಉದ್ಘಾಟಿಸಿದ ನ್ಯಾಯಮೂರ್ತಿ ಕೆ.ಶ್ರೀಧರರಾವ್, ಪುರಾತನ ಕಾಲದಿಂದಲೂ ನ್ಯಾಯಾಂಗ ಇಲಾಖೆ ಕೊರತೆಯಲ್ಲಿಯೇ ಕೆಲಸ ಮಾಡುತ್ತಿದೆ. ಈ ಎಲ್ಲ ಕೊರತೆಗಳನ್ನು ನೀಗಿಸಲು ಸರ್ಕಾರಗಳು ಮುತವರ್ಜಿ ವಹಿಸಬೇಕು. ಪ್ರತಿ ಜಿಲ್ಲೆಗೂ ವಕೀಲರ ಕೊಠಡಿ, ಕಕ್ಷಿದಾರರ ತಂಗುದಾಣವನ್ನು ಒದಗಿಸಬೇಕು. ಬಡ ವಕೀಲರಿಗೆ ಹೊರಗಡೆ ಕಚೇರಿ ಮಾಡಲು ಆಗುವುದಿಲ್ಲ, ಅಂಥವರು ವಕೀಲರ ಕೊಠಡಿಗಳಲ್ಲಿ ಕಚೇರಿ ಮಾಡಿಕೊಳ್ಳುತ್ತಾರೆ ಎಂದರು.

ನ್ಯಾಯಮೂರ್ತಿ ಮೋಹನ ಶಾಂತನಗೌಡರ ಮಾತನಾಡಿ, ಒಂದು ವೇಳೆ ನ್ಯಾಯಾಂಗ ವ್ಯವಸ್ಥೆ ಕುಸಿದರೆ, ಪ್ರಜಾಪ್ರಭುತ್ವವೇ ಕುಸಿಯುತ್ತದೆ. ಅರಾಜಕತೆ ತಾಂಡವಾಡುತ್ತದೆ. ಸರ್ಕಾರ ಎಲ್ಲ ಕ್ಷೇತ್ರಗಳಿಗೂ ನೀಡುವಂತೆ ನ್ಯಾಯಾಂಗ ಇಲಾಖೆಗೂ ಸೌಕರ್ಯ ಕಲ್ಪಿಸಿಕೊಡಬೇಕು. ಅಂದಾಗ ಮಾತ್ರ ಪ್ರಜಾಪ್ರಭುತ್ವ ಎತ್ತಿ ಹಿಡಿದಂತಾಗುತ್ತದೆ ಎಂದು ಹೇಳಿದರು.

ಸಂಸದ ಪ್ರಹ್ಲಾದ ಜೋಶಿ ಮಾತನಾಡಿದರು. ಜಿಲ್ಲಾ ನ್ಯಾಯಾಧೀಶ ಕೆ.ನಟರಾಜನ್, ಸಿ.ರಾಜಶೇಖರ ಉಪಸ್ಥಿತರಿದ್ದರು. ವಕೀಲರ ಸಂಘದ ಅಧ್ಯಕ್ಷ ವಿ.ಡಿ.ಕಾಮರೆಡ್ಡಿ ಸ್ವಾಗತಿಸಿದರು. ಉಪಾಧ್ಯಕ್ಷ ಬಿ.ಪಿ.ಧನಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT