ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ದೊರೆತ ನಂತರ ಸಫಾರಿಗೆ ಅನುಮತಿ

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹುಲಿ ಅಭಯಾರಣ್ಯಗಳಲ್ಲಿ ಪ್ರವಾಸೋದ್ಯಮಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿರುವ ಆದೇಶ ದೊರಕಿದ ನಂತರವಷ್ಟೆ ರಾಜ್ಯದಲ್ಲಿ ಸಫಾರಿಗೆ ಅನುಮತಿ ನೀಡಲು ಅರಣ್ಯ ಇಲಾಖೆ ನಿರ್ಧರಿಸಿದೆ.

ನ್ಯಾಯಾಲಯದ ಆದೇಶದ ಪ್ರತಿ ವೆಬ್‌ಸೈಟ್‌ನಲ್ಲಿ ಪ್ರಕಟವಾದ ನಂತರ ಅಥವಾ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಆದೇಶ ದೊರಕಿದ ನಂತರ ರಾಜ್ಯದ ಹುಲಿ ಅಭಯಾರಣ್ಯಗಳಲ್ಲಿ ಸಫಾರಿಗೆ ಅನುಮತಿ ನೀಡುತ್ತೇವೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದೀಪಕ್ ಶರ್ಮ ತಿಳಿಸಿದರು.

`ಪ್ರಜಾವಾಣಿ~ ಜೊತೆ ಮಾತನಾಡುತ್ತಿದ್ದ ಅವರು, ಆದೇಶದ ಪ್ರತಿ ಬುಧವಾರ ದೊರೆತರೆ ಗುರುವಾರದಿಂದಲೇ ಜಾರಿಯಾಗುವಂತೆ ಪ್ರವಾಸೋದ್ಯಮಕ್ಕೆ ಅನುಮತಿ ನೀಡುತ್ತೇವೆ ಎಂದರು. ಹುಲಿ ಸಂರಕ್ಷಣಾ ಯೋಜನೆಯನ್ನು ಆರು ತಿಂಗಳಲ್ಲಿ ಸಿದ್ದಪಡಿಸುವಂತೆ ನ್ಯಾಯಾಲಯ ಸೂಚಿಸಿರುವ ಬಗ್ಗೆ ಗಮನ ಸೆಳೆದಾಗ ಆದೇಶವನ್ನು ಈ ಅಂಶವೂ ಇದ್ದರೆ ಪಾಲಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಜೆಎಲ್‌ಆರ್: ರಾಜ್ಯದ ಹುಲಿ ಅಭಯಾರಣ್ಯಗಳ ವ್ಯಾಪ್ತಿಯಲ್ಲಿರುವ ಕಬಿನಿ, ಬಂಡೀಪುರ, ಭದ್ರಾ, ಕೆ.ಗುಡಿ ಹಾಗೂ ಅಣಶಿಯಲ್ಲಿ ರೆಸಾರ್ಟ್ ಹೊಂದಿರುವ ಸರ್ಕಾರಿ ಸ್ವಾಮ್ಯದ ಜಂಗಲ್ ಲಾಡ್ಜಸ್‌ನ ವ್ಯವಸ್ಥಾಪಕ ನಿರ್ದೇಶಕ ಅನೂರ್ ರೆಡ್ಡಿ, `ಅರಣ್ಯ ಇಲಾಖೆ ಅನುಮತಿ ನೀಡಿದ ನಂತರವೇ ಸಫಾರಿ ಆರಂಭಿಸುತ್ತೇವೆ. ರೆಸಾರ್ಟ್‌ಗಳಲ್ಲಿ ಪ್ರವಾಸಿಗರು ಕೊಠಡಿಗಳನ್ನು ಕಾಯ್ದಿರಿಸಲು ಈಗಾಗಲೇ ಆರಂಭಿಸಬಹುದು.  ಬಹುಶಃ ಶುಕ್ರವಾರದಿಂದ ಸಫಾರಿ ಆರಂಭಿಸುತ್ತೇವೆ~ ಎಂದು ತಿಳಿಸಿದರು.

ಹುಲಿ ಅಭಯಾರಣ್ಯದ ಹೃದಯ ಭಾಗದ ಶೇ 20ರಷ್ಟು ಪ್ರದೇಶದಲ್ಲಿ ಸಫಾರಿ ನಡೆಸಲು ನ್ಯಾಯಾಲಯ ಅವಕಾಶ ನೀಡಿದೆ. ಆದರೆ ಪ್ರಮುಖ ಹುಲಿ ಅಭಯಾರಣ್ಯವಾದ ಬಂಡಿಪುರದಲ್ಲಿ ಪ್ರವಾಸೋದ್ಯಮ ವಲಯವನ್ನು ಯಾವುದೇ ಕಾರಣಕ್ಕೂ ವಿಸ್ತರಿಸದಿರಲು ನಿರ್ಧರಿಸಲಾಗಿದೆ ಬಂಡಿಪುರ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ತಿಳಿಸಿದರು.

`ಈ ಕಾಡಿನಲ್ಲಿ ಸುಮಾರು 2-3 ದಶಕದಿಂದ ಪ್ರವಾಸೋದ್ಯಮ ವಲಯ ಗುರುತಿಸಿ ಸುರಕ್ಷಿತವಾಗಿ ಸಫಾರಿ ನಡೆಯುತ್ತಿದೆ. ಇಲ್ಲಿ ಕಾಡಿನ ಹೃದಯ ಭಾಗದ ಶೇ 10ರಷ್ಟು ಪ್ರದೇಶ ಪ್ರವಾಸೋದ್ಯಮಕ್ಕೆ ಮುಕ್ತವಾಗಿದೆ. ಇದನ್ನು ಶೇ 20ಕ್ಕೆ ವಿಸ್ತರಿಸಿದರೆ ಪ್ರವಾಸೋದ್ಯಮದ ಧಾರಣ ಶಕ್ತಿ ಹೆಚ್ಚಾಗುತ್ತದೆ.
 
ಇದೀಗ 15 ಜೀಪ್‌ಗಳಿಗೆ ಕಾಡಿನಲ್ಲಿ ಚಲಿಸಲು ಅನುಮತಿ ನೀಡಿದ್ದೇವೆ. ಹೊಸ ಮಾರ್ಗ ಗುರುತಿಸಿದರೆ 30 ವಾಹನಕ್ಕೆ ಅನುಮತಿ ನೀಡಬೇಕಾಗುತ್ತದೆ. ಇದರಿಂದ ಕಾಡಿನ ಮೇಲೆ ಒತ್ತಡ ಹೆಚ್ಚಾಗುತ್ತದೆ. ಹೀಗಾಗಿ ಪ್ರವಾಸೋದ್ಯಮ ವಲಯವನ್ನು ಹೆಚ್ಚಿಸುವುದಿಲ್ಲ~ ಎಂದರು.

ಹುಲಿಗಳು ಮೇಲಾಗಿ ಸೂಕ್ಷ್ಮ ಮನಸ್ಸಿನ ಪ್ರಾಣಿಗಳು. ಪ್ರವಾಸೋದ್ಯಮ ವಲಯದಲ್ಲಿ ಓಡಾಡುತ್ತಿರುವ ಹುಲಿಗಳು ಸಫಾರಿಗೆ ಹೊಂದಿಕೊಂಡಿರುತ್ತವೆ. ಹೊಸ ಪ್ರದೇಶವನ್ನು ಪ್ರವಾಸೋದ್ಯಮಕ್ಕೆ ಮುಕ್ತ ಮಾಡಿದರೆ, ಅಲ್ಲಿರುವ ಹುಲಿಗಳು ಬೇರೆ ಪ್ರದೇಶಕ್ಕೆ ವಲಸೆ ಹೋಗಬೇಕಾಗುವ ಅನಿವಾರ್ಯ ಸ್ಥಿತಿ ಎದುರಾಗುತ್ತದೆ. ಇದರಿಂದ ಹುಲಿಗಳ ನಡುವೆ ಗಡಿಗಾಗಿ ಸಂಘರ್ಷ ಹೆಚ್ಚಾಗುವ ಸಾಧ್ಯತೆಯಿದೆ. ಇದು ಹುಲಿ ಸಂರಕ್ಷಣೆಯ ದೃಷ್ಟಿಯಿಂದ ಒಳ್ಳೆಯ ಸಂಗತಿಯಲ್ಲ ಎಂದು ಪುಷ್ಕರ್ ಅಭಿಪ್ರಾಯಪಟ್ಟರು.

ನೈತಿಕತೆ ಹೆಚ್ಚಲಿ

`ಕಾಡು ಒಂದು ವಿಸ್ಮಯ ಲೋಕ. ಇದು ಕೋಟಿಗಟ್ಟಲೆ ವರ್ಷದಲ್ಲಿ ವಿಕಾಸವಾಗಿ ಬೆಳೆದುನಿಂತಿದೆ. ಇದನ್ನು ಅವಲಂಭಿಸಿ ವನ್ಯಜೀವಿ ಪ್ರವಾಸೋದ್ಯಮ ಬೆಳೆದುನಿಂತಿದೆ. ಯಾವುದೇ ಉದ್ಯಮಕ್ಕೆ ನೈತಿಕತೆ ಇರಬೇಕು. ಆದರೆ ವನ್ಯಜೀವಿ ಪ್ರವಾಸೋದ್ಯಮದಲ್ಲಿ ನೈತಿಕತೆಯೇ ಮಾಯವಾಗಿತ್ತು.
 
ಮತ್ತೊಂದು ವಿಧಾನಸೌಧ ಕಟ್ಟಬಹುದು. ಕಾಡನ್ನು ಬೆಳೆಸಲು ಸಾಧ್ಯವಿಲ್ಲ. ಪರಿಸರ ಪ್ರವಾಸೋದ್ಯಮದಲ್ಲಿ ನಿರತರಾಗಿರುವ ಜನ ಸಾಮಾಜಿಕ ಕಾಳಜಿಯನ್ನು ಮರೆಯಬಾರದು. ಗಿಡಗಳನ್ನು ನೆಟ್ಟರೆ ಕಾಡು ಆಗುವುದಿಲ್ಲ. ಇರುವ ಕಾಡು ಉಳಿಯಬೇಕಾದರೆ ನೈತಿಕತೆ ಹೆಚ್ಚಾಗಬೇಕು. 
- ಕೃಪಾಕರ ಸೇನಾನಿ, ವನ್ಯಜೀವಿ ನಡವಳಿಕೆ ತಜ್ಞರು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT