ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಪ್ರಜೆಗೂ ಉಚಿತ ಕಾನೂನು: ಆಶಯ

Last Updated 9 ನವೆಂಬರ್ 2011, 19:30 IST
ಅಕ್ಷರ ಗಾತ್ರ

ರಾಮನಗರ: `ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಯೊಬ್ಬರಿಗೂ ಕಾನೂನು ಸೇವಾ ಸೌಲಭ್ಯಗಳನ್ನು ಒದಗಿಸಿಕೊಡುವ ಉದ್ದೇಶದಿಂದ ಉಚಿತವಾಗಿ ಕಾನೂನು ಸೇವಾ ಪ್ರಾಧಿಕಾರ ಕಾರ್ಯನಿರ್ವಹಿಸುತ್ತಿದೆ~ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಕೆ.ನಾರಾಯಣಪ್ರಸಾದ್ ತಿಳಿಸಿದರು.

ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಪ್ರತಿ ಪ್ರಜೆಯೂ ಕಾನೂನು ಸೇವೆಯಿಂದ ವಂಚಿತರಾಗಬಾರದು. ನ್ಯಾಯಾಲಯಗಳಿಗೆ ಬರುವ ಬಡವರಿಗೆ ಉಚಿತ ಕಾನೂನು ನೆರವು ನೀಡಲಾಗುತ್ತದೆ. ರಾಷ್ಟ್ರ, ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಕಚೇರಿಗಳನ್ನು ಪ್ರಾರಂಭಿಸಲಾಗಿದೆ. ನ್ಯಾಯಾಲಯದ ಮೇಲೆ ನಂಬಿಕೆ ಇಟ್ಟು ಬರುವ ಎಲ್ಲರಿಗೂ ನ್ಯಾಯದಾನ ಮಾಡುವುದು ಪ್ರಾಧಿಕಾರದ ಧ್ಯೇಯವಾಗಿದೆ ಎಂದು ವಿವರಿಸಿದರು.

ಸಾಮಾನ್ಯ ಜನರಿಗೆ ಕಾನೂನುಗಳ ಅರಿವು ಮೂಡಿಸುವುದರಿಂದ ಅವರು ತಮಗಾಗಿರುವ ತೊಂದರೆಗಳನ್ನು ತಾವೇ ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿ.ಪುಷ್ಪಾವತಿ ಮಾತನಾಡಿ, ಕಾನೂನು ಸೇವೆಗಳ ಪ್ರಾಧಿಕಾರದವತಿಯಿಂದ ಪ್ರತಿ ತಿಂಗಳಲ್ಲಿ ಮೂರ‌್ನಾಲ್ಕು ಬಾರಿ ಉಚಿತ ಕಾನೂನು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಗ್ರಾಮೀಣ ಭಾಗದ ಓದು ಬರಹ ಗೊತ್ತಿಲ್ಲದ ಜನರಲ್ಲಿ ಕಾನೂನು ಅರಿವನ್ನು ಮೂಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಸಂವಿಧಾನ ಪ್ರಜೆಗಳ ಜೀವನಕ್ಕೆ ಅವಶ್ಯವಕವಾದ ಕಾನೂನುಗಳನ್ನು ಜಾರಿಗೆ ತಂದಿದೆ. ಇಂಥ ಕಾನೂನುಗಳ ಬಗ್ಗೆ ತಿಳಿದುಕೊಂಡು, ಸರಿಯಾಗಿ ಬಳಸಿಕೊಂಡಾಗ ಕಾನೂನು ಸೇವಾ ಪ್ರಾಧಿಕಾರದ ಉದ್ದೇಶ ಸಾರ್ಥಕವಾಗುತ್ತದೆ ಎಂದರು.

ತ್ವರಿತಪಥ ನ್ಯಾಯಾಧೀಶರಾದ ಸುರೇಶ್, ಪ್ರಧಾನ ಸಿವಿಲ್ ನ್ಯಾಯಾಧೀಶೆ ಕೆ.ಎನ್.ರೂಪ, ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ಜಯರಾಮಯ್ಯ, ಉಪಾಧ್ಯಕ್ಷ ಆರ್.ವಿ.ದೇವರಾಜ್, ಕಾರ್ಯದರ್ಶಿ ಬಿ.ಎಂ.ಶ್ರೀವತ್ಸ, ಖಜಾಂಚಿ ಅಶೋಕ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT