ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ವಾರ ಪ್ರಗತಿ ಪರಿಶೀಲನೆ: ಮುಖ್ಯಮಂತ್ರಿ

Last Updated 6 ಫೆಬ್ರುವರಿ 2011, 9:25 IST
ಅಕ್ಷರ ಗಾತ್ರ

ಬೆಳಗಾವಿ: ವಿಶ್ವ ಕನ್ನಡ ಸಮ್ಮೇಳನ ಸಿದ್ಧತೆಗೆ ಚಾಲನೆ ನೀಡಲಾಗಿದ್ದು, ಮುಂದಿನ ಪೀಳಿಗೆ ನೆನಪಿಡುವ ರೀತಿಯಲ್ಲಿ ಆಯೋಜನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ನಗರದ ಸಾಂಬ್ರಾ ವಿಮಾನ ನಿಲ್ದಾಣದ ಸಭಾಂಗಣದಲ್ಲಿ ವಿಶ್ವ ಕನ್ನಡ ಸಮ್ಮೇಳನದ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಮ್ಮೇಳನಕ್ಕೆ ಪ್ರಧಾನಮಂತ್ರಿ ಅವರನ್ನು ಆಹ್ವಾನಿಸಲಾಗುವುದು. ಅದಕ್ಕಾಗಿ ಫೆ.15 ಅಥವಾ 16ರಂದು ಅವರನ್ನು ಆಹ್ವಾನಿಸಲು ನಿಯೋಗವೊಂದು ತೆರಳಲಿದೆ’ ಎಂದು ತಿಳಿಸಿದರು.

‘ವಿಶ್ವ ಕನ್ನಡ ಸಮ್ಮೇಳನ ಪ್ರಗತಿಯನ್ನು ಪ್ರತಿ ವಾರವೂ ಪರಿಶೀಲನೆ ಮಾಡಲಾಗುವುದು. ಮೂರು ದಿನಗಳ ಮುಂಚೆಯೇ ಎಲ್ಲ ಸಿದ್ಧತೆಗಳು ಪೂರ್ಣಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಅವರು ಹೇಳಿದರು.

‘ಇಡೀ ನಗರವನ್ನು ಸರ್ಕಾರ ಸಜ್ಜುಗೊಳಿಸಲು ಸಾಧ್ಯವಿಲ್ಲ. ಕೈಗಾರಿಕೋದ್ಯಮಿಗಳು ಸಹಕಾರ ನೀಡಬೇಕು. ಸಮ್ಮೇಳನಕ್ಕಾಗಿ 40 ಹೊಸ ಬಸ್ ನೀಡಲಾಗುವುದು. ವಿಶೇಷ ವಿಮಾನ ವ್ಯವಸ್ಥೆ ಮಾಡಲಾಗುವುದು’ ಎಂದು ಅವರು ತಿಳಿಸಿದರು.

‘ಸಮ್ಮೇಳನಕ್ಕಾಗಿ 30 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಅವಶ್ಯ ಬಿದ್ದರೆ ಇನ್ನಷ್ಟು ಹಣ ಬಿಡುಗಡೆ ಮಾಡಲಾಗುವುದು. ಬಜೆಟ್ ಅಧಿವೇಶನ ನಂತರ ಬೆಳಗಾವಿಯಲ್ಲಿ ಒಂದು ವಾರ ಕಾಲ ಅಧಿವೇಶನ ನಡೆಸಲು ಉದ್ದೇಶಿಸಲಾಗಿದೆ’ ಎಂದು ಅವರು ಹೇಳಿದರು.

‘ರಾಜ್ಯ ಸರ್ಕಾರದ ಅಭಿವೃದ್ಧಿಯನ್ನು ಮರೆಮಾಚಲು ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ’ ಎಂದು ಅವರು ಟೀಕಿಸಿದರು.
‘ನನ್ನ ರಾಜೀನಾಮೆ ಕೇಳಲು ವಿರೋಧ ಪಕ್ಷದವರು ಯಾರು’ ಎಂದ ಪ್ರಶ್ನಿಸಿದ ಅವರು, ‘ಐದು ವರ್ಷದ ಅವಧಿಗೆ ಜನರು ತೀರ್ಪು ನೀಡಿದ್ದಾರೆ. ಆ ನಂತರ ಜನರೇ ತೀರ್ಮಾನಿಸಲಿದ್ದಾರೆ. ಈಗ ಪೈಪೋಟಿ ನಡೆದಿರುವುದು ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ. ಕಾಂಗ್ರೆಸ್ ಎರಡನೇ ಸ್ಥಾನ ಉಳಿಸಿಕೊಳ್ಳಲು ಯತ್ನಿಸುತ್ತಿದ್ದರೆ, ಜೆಡಿಎಸ್ ಎರಡನೇ ಸ್ಥಾನಕ್ಕೆ ಏರಲು ಯತ್ನಿಸುತ್ತಿದೆ’ ಎಂದರು.

‘ವಿಧಾನಮಂಡಲ ಅಧಿವೇಶನದಲ್ಲಿ ಚರ್ಚಿಸಲು ಸಿದ್ಧರಿಲ್ಲ, ಬಹಿರಂಗ ಚರ್ಚೆಗೂ ಬರುವುದಿಲ್ಲ. ಆದರೆ ಬೀದಿಗಳಲ್ಲಿ ಮಾತ್ರ ಸರ್ಕಾರದ ವಿರುದ್ಧ ಟೀಕೆ ಮಾಡುವುದನ್ನು ಕೆಲಸ ಮಾಡಿಕೊಂಡಿದ್ದಾರೆ’ ಎಂದು ಅವರು ವಾಗ್ದಾಳಿ ನಡೆಸಿದರು.

ಇದಕ್ಕೊ ಮೊದಲು ನಡೆದ ವಿಶ್ವ ಕನ್ನಡ ಸಮ್ಮೇಳನದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಚಿವರಾದ ಉಮೇಶ ಕತ್ತಿ, ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಲಕ್ಷ್ಮಣ ಸವದಿ, ಸಂಸದರಾದ ಸುರೇಶ ಅಂಗಡಿ, ರಮೇಶ ಕತ್ತಿ, ಪ್ರಭಾಕರ ಕೋರೆ, ಶಾಸಕರಾದ ಅಭಯ ಪಾಟೀಲ, ಸಂಜಯ ಪಾಟೀಲ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಈರಪ್ಪ ಕಡಾಡಿ, ಮೇಯರ್ ಎನ್.ಬಿ. ನಿರ್ವಾಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ, ಪ್ರಾದೇಶಿಕ ಆಯುಕ್ತ ಸಿ.ಎಂ. ಶಿರೋಳ, ಜಿಲ್ಲಾಧಿಕಾರಿ ಏಕರೂಪ್ ಕೌರ್ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT