ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಧ್ವನಿಸಿದ ಬೈಲಾ ತಿದ್ದುಪಡಿ

ಚನ್ನರಾಯಪಟ್ಟಣ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಂಘದ ವಾರ್ಷಿಕ ಸಭೆ
Last Updated 26 ಸೆಪ್ಟೆಂಬರ್ 2013, 8:49 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಪಟ್ಟಣದಲ್ಲಿ ಬುಧವಾರ ಏರ್ಪಡಿಸಿದ್ದ ‘ತಾಲ್ಲೂಕು ವ್ಯವಸಾಯೋತ್ಪನ್ನ  ಮಾರಾಟ ಸಹಕಾರ ಸಂಘ’ದ 'ಸರ್ವ ಸದಸ್ಯರ ವಾರ್ಷಿಕ ಸಭೆ’ಯಲ್ಲಿ ಆಡಳಿತ  ಮಂಡಳಿಯ ರಚನೆಗೆ ಸಂಬಂಧಿಸಿದಂತೆ   ಬೈಲಾ ತಿದ್ದುಪಡಿ ವಿಚಾರ ಸಭೆಯಲ್ಲಿ ಪ್ರತಿಧ್ವನಿಸಿ  ಗೊಂದಲ ವಾತಾವರಣ ನಿರ್ಮಾಣವಾಯಿತು.

ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್‌) ಅಧ್ಯಕ್ಷ ಕಾಳೇಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೈಲಾ ತಿದ್ದುಪಡಿ ವಿಚಾರ ಪ್ರಮುಖವಾಗಿ ಪ್ರಸ್ತಾಪವಾಯಿತು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ 7 ಸದಸ್ಯರು, ಕೃಷಿ ಸದಸ್ಯರಿಂದ 5 ಸದಸ್ಯರು ಹಿಂದಿನಿಂದ ಆಯ್ಕೆಯಾಗುತ್ತಿದ್ದಾರೆ. ಕೇವಲ 11 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 7 ಸದಸ್ಯರು ಆಯ್ಕೆಯಾಗುತ್ತಾರೆ. ಆದರೆ 2300ಕ್ಕೂ ಅಧಿಕ ಷೇರುದಾರರಿರುವ ಕೃಷಿ ಸದಸ್ಯರಿಗೆ ಕೇವಲ 5ಸ್ಥಾನ ನೀಡಿರುವುದು ತರವಲ್ಲ. ಈ ಎರಡು ಕ್ಷೇತ್ರಕ್ಕೆ ತಲಾ 6 ಸ್ಥಾನ  ನೀಡಬೇಕು ಎಂದು ನಿರ್ದೇಶಕರಾದ ಎ.ಸಿ. ಆನಂದ್‌ಕುಮಾರ್‌, ಎಂ.ಎಸ್‌. ರಾಜು ಸೇರಿ, ಹಲವು  ಷೇರುದಾರರು ಆಗ್ರಹಿಸಿದರು.

ಇದಕ್ಕೆ ಅಧ್ಯಕ್ಷ ಕಾಳೇಗೌಡ, ನಿರ್ದೇಶಕರಾದ ಬಿ.ಎಚ್‌. ಶಿವಣ್ಣ, ಕೆ.ಟಿ. ಮಂಜುನಾಥ್‌, ವಿ.ಎನ್‌. ರಾಜಣ್ಣ ಸೇರಿ ಹಲವು ಷೇರುದಾರರು ಆಕ್ಷೇಪ ವ್ಯಕ್ತಪಡಿಸಿದರು. ಈ ಹಿಂದಿನಂತೆ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 7 ಮತ್ತು ಕೃಷಿ  ಸದಸ್ಯ ಕ್ಷೇತ್ರದಿಂದ  5 ಸದಸ್ಯರು ಆಯ್ಕೆಯಾಗುವ  ಪದ್ಧತಿ ಮುಂದುವರಿಯಬೇಕು ಎಂದು ಪಟ್ಟು ಹಿಡಿದರು. ಆಗ  ಕೆಲವರು ಕೈ ಎತ್ತುವ ಮೂಲಕ ತೀರ್ಮಾನಿಸಬೇಕು ಎಂದರೆ, ಮತ್ತೆ ಕೆಲವರು ಸಭೆಯನ್ನು ಮುಂದೂಡಿ ಎಂದಾಗ  ಮತ್ತೆ ಗದ್ದಲ ತಲೆದೋರಿತು.

ಅಧ್ಯಕ್ಷ ಕಾಳೇಗೌಡ ಮಾತನಾಡಿ,  ಷೇರುದಾರರಲ್ಲದವರು ಸಭೆಗೆ  ಬಂದು ಗದ್ದಲ ಎಬ್ಬಿಸುತ್ತಿರುವುದರಿಂದ ಮುಂದಿನ ವರ್ಷ ನಡೆಯುವ ಸರ್ವ ಸದಸ್ಯರ ಸಭೆಯಲ್ಲಿ  ‘ಬೈಲಾ ತಿದ್ದುಪಡಿ‘ ಬಗ್ಗೆ ಚರ್ಚಿಸಿ ತೀರ್ಮಾನಿಸೋಣ ಎಂದು ಘೋಷಿಸಿದಾಗ ಮತ್ತೆ ಗೊಂದಲ ಉಂಟಾಯಿತು.

ಷೇರುದಾರರ ಪ್ರತಿಭಟನೆ: ಅಧ್ಯಕ್ಷರ  ನಿಲುವು  ಖಂಡಿಸಿದ ನಿರ್ದೇಶಕರಾದ ಎ.ಸಿ. ಆನಂದಕುಮಾರ್‌, ಎಂ.ಎಸ್‌. ರಾಜು ನೇತೃತ್ವದಲ್ಲಿ ಷೇರುದಾರರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಆಡಳಿತ ಮಂಡಳಿಯ ರಚನೆಗೆ ಬೈಲಾ ತಿದ್ದುಪಡಿ ಮೂಲಕ ಕೃಷಿ ಸದಸ್ಯ ಕ್ಷೇತ್ರದಿಂದ ಆರು ಸದಸ್ಯರು ಆಯ್ಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು. ಪ್ರಾಥಮಿಕ ಕೃಷಿ ಪತ್ತಿನ  ಸಹಕಾರ ಸಂಘದಿಂದ ಆಯ್ಕೆಯಾದ 7 ಸದಸ್ಯರು ಆಡಳಿತ ಮಂಡಳಿಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ.

ಇವರ ಅಣತಿಯಂತೆ ಅಧ್ಯಕ್ಷರು ನಡೆದುಕೊಳ್ಳುತ್ತಾರೆ. ಅವ್ಯವಸ್ಥೆಯ ಆಗರವಾಗಿರುವ ಟಿಎಪಿಸಿಎಂಎಸ್‌ ಆಡಳಿತ ಮಂಡಳಿಯನ್ನು  ಕೂಡಲೇ ರದ್ದು  ಮಾಡಬೇಕು. ಸಭೆಯನ್ನು ಮುನ್ನಡೆಸಬೇಕಾದ ಸಹಕಾರ ಇಲಾಖೆಯ ಸಹಾಯಕ ನಿಬಂಧಕ ಎಂ.ಡಿ. ಪರಮೇಶ್‌, ದಿಢೀರ್‌ ಹಾಸನಕ್ಕೆ ತೆರಳಿರುವುದು ತರವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಗ್ರೇಡ್‌–2 ತಹಶೀಲ್ದಾರ್‌ ಸೋಮಶೇಖರ್‌ ಆಗಮಿಸಿ ಮನವಿ ಸ್ವೀಕರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT