ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ: ಬರ ನಿರ್ವಹಣೆ ಸಿದ್ಧತೆ ಇಲ್ಲ

Last Updated 18 ಅಕ್ಟೋಬರ್ 2011, 10:10 IST
ಅಕ್ಷರ ಗಾತ್ರ

ಯಾದಗಿರಿ: ರಾಜ್ಯದಲ್ಲಿ ಬರದ ಸ್ಥಿತಿ ಗಂಭೀರವಾಗಿದ್ದು, ರಾಜ್ಯ ಸರ್ಕಾರ ಇದುವರೆಗೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಅಲ್ಲದೇ ಬರ ಪರಿಸ್ಥಿತಿ ಎದುರಿಸಲು ಅಗತ್ಯವಿರುವ ಸಿದ್ಧತೆಗಳನ್ನೂ ಮಾಡಿಕೊಂಡಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ನಗರದಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಬರಪೀಡಿತ ತಾಲ್ಲೂಕುಗಳ ಪಟ್ಟಿಯನ್ನು ಘೋಷಣೆ ಮಾಡಲಾಗಿದೆ. ಅದಕ್ಕೆ ಅಗತ್ಯವಿರುವ ಹಣವನ್ನು ಬಿಡುಗಡೆ ಮಾಡುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಮೇವಿನ ಬ್ಯಾಂಕ್ ಸ್ಥಾಪನೆ, ನೀರಿನ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಜನರು, ಜಾನುವಾರುಗಳು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇದಕ್ಕೆಲ್ಲ ಸರ್ಕಾರವೇ ಹೊಣೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರದ ಖಜಾನೆ ಖಾಲಿ ಆಗಿದೆ. ಕಲ್ಲಿದ್ದಲು, ವಿದ್ಯುತ್ ಬೇಕಾದಷ್ಟು ದೊರೆಯುತ್ತದೆ. ಆದರೆ ಅದನ್ನು ಖರೀದಿಸಲು ಹಣ ಸರ್ಕಾರದ ಬಳಿ ಇಲ್ಲ. ಇದೀಗ ರಾಜ್ಯದಲ್ಲಿ ಬರಗಾಲ ತಲೆದೋರಿದೆ ಇದರ. ನಿರ್ವಹಣೆಗೂ ಸರ್ಕಾರದ ಬಳಿ ಹಣವಿಲ್ಲ ಎಂದ ಅವರು, ಈ ಬಗ್ಗೆ ಚರ್ಚಿಸಲು ವಿಧಾನಮಂಡಲದ ಅಧಿವೇಶನ ಕರೆಯುವಂತೆ ಆಗ್ರಹಿಸಿದರೂ, ಬೆಲೆ ನೀಡುತ್ತಿಲ್ಲ ಎಂದು ದೂರಿದರು.

ರಾಜ್ಯದ ಜನರ ಸಂಕಷ್ಟದ ಬಗ್ಗೆ ಗಮನ ನೀಡಲು ಬಿಜೆಪಿಯವರ ಬಳಿ ಸಮಯವೇ ಇಲ್ಲ. ಒಬ್ಬರ ಹಿಂದೆ ಒಬ್ಬರಂತೆ ಜೈಲಿಗೆ ಹೋಗುತ್ತಿದ್ದಾರೆ. ಅವರೆಲ್ಲರಿಗೂ ಜಾಮೀನು ಅರ್ಜಿ ಹಾಕುವುದು, ಆಸ್ಪತ್ರೆಗಳನ್ನು ಬುಕ್ ಮಾಡುವುದು, ಇನ್ನೂ ಎಷ್ಟು ಜೈಲಿಗೆ ಹೋಗಲಿದ್ದಾರೆಯೋ ಅವರನ್ನು ರಕ್ಷಣೆ ಮಾಡುವುದರಲ್ಲಿಯೇ ಸರ್ಕಾರ ಬ್ಯುಸಿಯಾಗಿದೆ ಎಂದು ಲೇವಡಿ ಮಾಡಿದರು.

ಸಂಪ್ರದಾಯದ ಪ್ರಕಾರ ರಾಜ್ಯದಲ್ಲಿ ಸಂಕಷ್ಟದ ಸ್ಥಿತಿ ತಲೆದೋರಿದರೆ, ನೆರವು ನೀಡುವಂತೆ ರಾಜ್ಯ ಸರ್ಕಾರವೇ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. ಆದರೆ ಇದುವರೆಗೂ ರಾಜ್ಯ ಸರ್ಕಾರ, ಮನವಿ ಕಳುಹಿಸುವುದಿರಲಿ, ಅದನ್ನು ಸಿದ್ಧಪಡಿಸಿಯೂ ಇಲ್ಲ ಎಂದು ಟೀಕಿಸಿದರು.

300 ಕೋಟಿ ಬೆಳೆ ಹಾನಿ: ಯಾದಗಿರಿ ಜಿಲ್ಲೆಯ ಮೂರೂ ತಾಲ್ಲೂಕುಗಳಲ್ಲಿ ಬರದ ಸ್ಥಿತಿ ಇದೆ. ಆದರೆ ಸುರಪುರ, ಶಹಾಪುರ ತಾಲ್ಲೂಕುಗಳನ್ನು ಮಾತ್ರ ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸಲಾಗಿದೆ. ಯಾದಗಿರಿ ತಾಲ್ಲೂಕಿನಲ್ಲಿಯೂ ಸ್ಥಿತಿ ಗಂಭೀರವಾಗಿದೆ. ಈಗಷ್ಟೇ ಯಾದಗಿರಿ ತಾಲ್ಲೂಕನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ ಎಂದು ಸಿದ್ಧರಾಮಯ್ಯ ತಿಳಿಸಿದರು.
ಮಳೆ ಹೆಚ್ಚಿಗೆ ಆಗಿದ್ದರೂ, ಅಕಾಲಿಕವಾಗಿ ಬಂದಿದೆ. ಇದರಿಂದ ರೈತರಿಗೆ ಯಾವುದೇ ಪ್ರಯೋಜನ ಆಗಿಲ್ಲ.

ಮುಂಗಾರು ಹಂಗಾಮಿನಲ್ಲೂ ಮಳೆಯಿಲ್ಲದೇ ರೈತರು ಸಂಕಷ್ಟ ಅನುಭವಿಸಿದ್ದಾರೆ. ಈಗ ಹಿಂಗಾರು ಹಂಗಾಮಿನ ಜೋಳ ಬಿತ್ತನೆಗೂ ಮಳೆ ಆಗುತ್ತಿಲ್ಲ. ಹೀಗಾಗಿ ಸುಮಾರು ರೂ. 300 ಕೋಟಿಯಷ್ಟು ಬೆಳೆಹಾನಿ ಆಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.

ಜಿಲ್ಲೆಯ 136 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದೆ ಎಂದು ಅಧಿಕಾರಿಗಳೇ ಪಟ್ಟಿ ಮಾಡಿದ್ದಾರೆ. ಆದರೆ ಜಿಲ್ಲಾಡಳಿತದ ಬಳಿ ರೂ.4 ಕೋಟಿ ಇದ್ದು, ಅದರಲ್ಲಿ ರೂ.2.40 ಕೋಟಿ ಮಾತ್ರ ಬರದ ಸ್ಥಿತಿ ನಿರ್ವಹಣೆಗೆ ಬಳಸಿಕೊಳ್ಳಬಹುದು. ಆದರೆ ಇಷ್ಟು ಹಣ ಒಂದು ಹೋಬಳಿಗೂ ಸಾಕಾಗುವುದಿಲ್ಲ. ಇದೆಲ್ಲವನ್ನೂ ರಾಜ್ಯ ಸರ್ಕಾರ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬರದ ಛಾಯೆ ಇರುವ ಪ್ರದೇಶಗಳಲ್ಲಿ ರೈತರಿಂದ ಸಾಲ ವಸೂಲಿ ಮಾಡಬಾರದು. ಅದಕ್ಕೆ ಹೆಚ್ಚಿನ ಬಡ್ಡಿಯನ್ನೂ ವಿಧಿಸಬಾರದು. ಜೊತೆಗೆ ಹೆಚ್ಚಿನ ಸಾಲದ ಅಗತ್ಯವಿದ್ದರೆ ಅದನ್ನು ಕೊಡಲು ಕ್ರಮ ಕೈಗೊಳ್ಳಬೇಕು. ಮೇವಿನ ಬ್ಯಾಂಕುಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು. ನೀರಾವರಿ ಸೌಲಭ್ಯವಿರುವ ಪ್ರದೇಶಗಳಲ್ಲಿ ಮೇವು ಬೆಳೆಸಿ, ಬರಪೀಡಿತ ಪ್ರದೇಶಗಳಿಗೆ ಪೂರೈಸಲು ಸರ್ಕಾರ ಗಮನ ನೀಡಬೇಕು ಎಂದು ಸಲಹೆ ಮಾಡಿದರು.

ಜಿಲ್ಲೆ, ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ: ರಾಜ್ಯದಲ್ಲಿ ಸರ್ಕಾರವೇ ಇಲ್ಲದಂತಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಇರುವ ಸರ್ಕಾರದಿಂದ ಪ್ರಯೋಜನವಾದರೂ ಏನು? ಈ ಬಗ್ಗೆ ಚರ್ಚೆ ನಡೆಸಲು ವಿಧಾನಮಂಡಳ ಅಧಿವೇಶನ ಕರೆಯುವಂತೆ ಮನವಿ ಮಾಡಿದರೂ ಅದಕ್ಕೆ ಸ್ಪಂದಿಸುತ್ತಿಲ್ಲ. ಕೇಂದ್ರಕ್ಕೆ ಒತ್ತಾಯಿಸಲು ನಿಯೋಗ ಕರೆದೊಯ್ಯುವಲ್ಲಿಯೂ ಪ್ರತಿಪಕ್ಷಗಳನ್ನು ಕಡೆಗಣಿಸಲಾಗುತ್ತಿದೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ, ಕಾಂಗ್ರೆಸ್ ಪಕ್ಷವು ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಸಿದ್ಧರಾಮಯ್ಯ ತಿಳಿಸಿದರು.

ಅ.21 ರಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪಂಜಿನ ಮೆರವಣಿಗೆ ನಡೆಯಲಿದ್ದು, ಅ.22 ರಂದು ರಾಜ್ಯದ 176 ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಲಿದೆ. ಈಗಾಗಲೇ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಸಾಧ್ಯವಿರುವ ಎಲ್ಲ ಪ್ರಯತ್ನವನ್ನೂ ಮಾಡಲಾಗಿದೆ. ಸರ್ಕಾರದ ಧೋರಣೆ ಇದೇ ರೀತಿ ಮುಂದುವರಿದರೆ, ಕಾಂಗ್ರೆಸ್ ಪಕ್ಷ ಹೋರಾಟವನ್ನು ನಿರಂತರವಾಗಿ ಮುಂದುವರಿಸಲಿದೆ ಎಂದು ಹೇಳಿದರು.

ಶಾಸಕರಾದ ಡಾ. ಎ.ಬಿ. ಮಾಲಕರೆಡ್ಡಿ, ಬಾಬುರಾವ ಚಿಂಚನಸೂರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅನಸೂಯಾ ಬೋರಬಂಡ್, ಉಪಾಧ್ಯಕ್ಷ ನಾಗನಗೌಡ ಸುಬೇದಾರ, ಸದಸ್ಯರಾದ ಸಿದ್ಧನಗೌಡ ಪೊಲೀಸ್‌ಪಾಟೀಲ, ಭೀಮರಾಯ ಹಯ್ಯಾಳಪ್ಪನೋರ್, ನಗರಸಭೆ ಅಧ್ಯಕ್ಷೆ ನಾಗರತ್ನಾ ಅನಪೂರ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮರಿಗೌಡ ಹುಲಕಲ್, ಕೆಪಿಸಿಸಿ ಸದಸ್ಯ ಮೌಲಾಲಿ ಅನಪೂರ ಮುಂತಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT