ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಪಕ್ಷ ಮಾನ್ಯತೆ: ಬಿಜೆಪಿ ಅರ್ಜಿ

Last Updated 4 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ – ಕೆಜೆಪಿ ವಿಲೀನ ಪ್ರಕ್ರಿಯೆಗೆ ಅಧಿಕೃತ ಮುದ್ರೆ ಬಿದ್ದ ನಂತರವೂ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಅವರೇ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಲಿದ್ದಾರೆ.

ಕೆಜೆಪಿ ಅಧ್ಯಕ್ಷ ಬಿ.ಎಸ್‌. ಯಡಿ­ಯೂರಪ್ಪ ಹಾಗೂ ಅವರ ಪಕ್ಷದ ಶಾಸಕರು ಬಿಜೆಪಿಗೆ ಸೇರ್ಪಡೆಯಾದ ನಂತರವೂ ಶಾಸಕಾಂಗ ಪಕ್ಷದ ನಾಯ­ಕತ್ವದಲ್ಲಿ ಸದ್ಯಕ್ಕೆ ಯಾವುದೇ ಬದ­ಲಾವಣೆ ಮಾಡದಿರಲು ನಿರ್ಧರಿಸ­ಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಲೀನ ಪ್ರಕ್ರಿಯೆ ಪೂರ್ಣಗೊಂಡ ನಂತರ  ಯಡಿಯೂರಪ್ಪ ಅವರಿಗೆ ರಾಜ್ಯದಲ್ಲಿ ಬಿಜೆಪಿ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಇದೆ. ಜತೆಗೆ ಅವರ ಬೆಂಬಲಿಗರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಚಿಂತನೆ  ನಡೆದಿದೆ ಎಂದು ಬಿಜೆಪಿ ಹಿರಿಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಅಧಿಕೃತ ವಿರೋಧ ಪಕ್ಷದ ಸ್ಥಾನ­ಮಾನ ದೊರೆತ ನಂತರವೂ ಶಾಸಕಾಂಗ ಪಕ್ಷದ ನಾಯಕತ್ವದಲ್ಲಿ ಯಾವುದೇ  ಬದಲಾವಣೆ ಇಲ್ಲ ಎಂದು ಜಗದೀಶ್‌ ಶೆಟ್ಟರ್‌ ಸಹ ಸ್ಪಷ್ಟಪಡಿಸಿದ್ದಾರೆ.

ಹಕ್ಕು ಪ್ರತಿಪಾದನೆ: ಬಿಜೆಪಿಯೊಂದಿಗೆ ವಿಲೀನ ಆಗುವುದಾಗಿ ಕೆಜೆಪಿ ಈಗಾ­ಗಲೇ ಸ್ಪೀಕರ್‌ಗೆ ಪತ್ರ ನೀಡಿದೆ. ಈ ಹಿನ್ನೆಲೆಯಲ್ಲಿ ವಿಧಾನಸಭೆಯ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನವನ್ನು ತಮ್ಮ ಪಕ್ಷಕ್ಕೆ ನೀಡುವಂತೆ ಕೋರಿ  ಬಿಜೆಪಿ ಮುಖಂಡರು ಶನಿವಾರ ಸ್ಪೀಕರ್‌ ಕಾಗೋಡು ತಿಮ್ಮಪ್ಪ ಅವರಿಗೆ  ಮನವಿ ಸಲ್ಲಿಸಿದರು.

ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ಅವರ ನೇತೃತ್ವದಲ್ಲಿ ಶಾಸಕರಾದ ಎಸ್‌.­ಸುರೇಶ್‌ಕುಮಾರ್‌, ವಿಶ್ವೇಶ್ವರ ಹೆಗಡೆ ಕಾಗೇರಿ, ಎಸ್‌.ಆರ್‌. ವಿಶ್ವನಾಥ್‌, ಬಿ.ಎನ್‌.ವಿಜಯ­ಕುಮಾರ್‌ ಅವರು ಕಾಗೋಡು ತಿಮ್ಮಪ್ಪ ಅವರನ್ನು ಭೇಟಿ ಮಾಡಿದ್ದರು.

ನಂತರ ಸುದ್ದಿಗಾರರೊಂದಿಗೆ ಮಾತ­ನಾಡಿದ ಜಗದೀಶ್‌ ಶೆಟ್ಟರ್‌, ಕೆಜೆಪಿಯ ನಾಲ್ವರು ಶಾಸಕರ ಸೇರ್ಪಡೆಯಿಂದ ಬಿಜೆಪಿ ಶಾಸಕರ ಸಂಖ್ಯೆ 44ಕ್ಕೆ ಏರ­ಲಿದ್ದು, ಎರಡನೇ ಅತಿದೊಡ್ಡ ಪಕ್ಷ­ವಾಗಲಿದೆ. ಆದ್ದರಿಂದ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ ನೀಡ­ಬೇಕು ಎಂದು ಕೋರಲಾಗಿದೆ. ವಿಲೀನ ನಿರ್ಣಯದ ಬಗ್ಗೆ ಕೆಜೆಪಿಯು ಶುಕ್ರ­ವಾರವೇ ಸ್ಪೀಕರ್‌ಗೆ ಪತ್ರ ನೀಡಿದೆ. ಬಿಜೆಪಿ ಸಹ ವಿಲೀನಕ್ಕೆ ಒಪ್ಪಿಗೆ ಸೂಚಿಸುವ ಪತ್ರವನ್ನು ಸ್ಪೀಕರ್‌ಗೆ ಸಲ್ಲಿಸಿದೆ ಎಂದು ತಿಳಿಸಿದರು.

9ಕ್ಕೆ ಸೇರ್ಪಡೆ: ಕೆಜೆಪಿ ಅಧ್ಯಕ್ಷ ಬಿ.ಎಸ್‌. ಯಡಿ ಯೂರಪ್ಪ ಅವರು ಅಧಿಕೃತವಾಗಿ ಜ.9ರಂದು ಬೆಂಗಳೂರಿನಲ್ಲೇ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಶೆಟ್ಟರ್‌ ತಿಳಿಸಿದರು.

ವಿಲೀನಕ್ಕೆ ವಿರೋಧ: ಬಿಜೆಪಿ ಜತೆ ಕೆಜೆಪಿ ವಿಲೀನವಾಗಲು ಅವಕಾಶ ನೀಡಬಾರದು ಎಂದು ಕೆಜೆಪಿ ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನ ಸ್ಪೀಕರ್‌ಗೆ ಶನಿವಾರ ಮನವಿ ಸಲ್ಲಿಸಿದ್ದಾರೆ.

‘10 ದಿನಗಳಲ್ಲಿ ನಿರ್ಧಾರ’: ‘ಬಿಜೆಪಿ ಸೇರುವ ಬಗ್ಗೆ ಕೆಜೆಪಿ ಶಾಸಕರು ಪತ್ರ ಸಲ್ಲಿಸಿದ್ದಾರೆ. ಇದೇ ರೀತಿ ವಿಲೀನಕ್ಕೆ ಒಪ್ಪಿಗೆ ಸೂಚಿಸಿ ಬಿಜೆಪಿಯೂ ಪತ್ರ ಸಲ್ಲಿಸಿದೆ. ಕೆಜೆಪಿಯ ನಾಲ್ವರು ಶಾಸಕರು ಸೇರ್ಪಡೆ­ಯಾಗುತ್ತಿರುವುದರಿಂದ ಇವರನ್ನು ಬಿಜೆಪಿ ಸದಸ್ಯರು ಎಂದು ಪರಿಗಣಿಸಲು ನಮಗೆ ಸಾಕಷ್ಟು ಅವ­ಕಾಶಗಳಿವೆ. ಆದರೂ, ಈ ಬಗ್ಗೆ ಚುನಾವಣಾ ಆಯೋಗದ ಅಭಿಪ್ರಾಯ ಪಡೆದು ಕಾನೂನು ಪ್ರಕಾರವೇ ಮುಂದಿನ ನಿರ್ಧಾರ ಕೈಗೊಳ್ಳಲಾಗು­ವುದು’ ಎಂದು ಸ್ಪೀಕರ್‌ ಕಾಗೋಡು ತಿಮ್ಮಪ್ಪ ಸುದ್ದಿಗಾರರಿಗೆ ತಿಳಿಸಿದರು.

ವಿಲೀನ ವಿಚಾರ ತಮ್ಮ ವ್ಯಾಪ್ತಿಗೆ ಬರುವುದಿಲ್ಲ. ಆದರೆ, ಮೂರನೇ ಎರಡರಷ್ಟು ಸದಸ್ಯರು ಪಕ್ಷಾಂತರ ಮಾಡುವ ನಿರ್ಧಾರ ಕೈಗೊಂಡರೆ ಪಕ್ಷಾಂತರ ನಿಷೇಧ ಕಾನೂನು ಅನ್ವಯವಾಗುವುದಿಲ್ಲ. ಒಟ್ಟಾರೆ ಈ ಬಗ್ಗೆ 10–12 ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಾಷ್ಟ್ರ ರಾಜಕಾರಣದತ್ತ ಯಡಿಯೂರಪ್ಪ ಚಿತ್ತ!
ಮುಂಬರುವ ಲೋಕಸಭಾ ಚುನಾವಣೆ­ಯಲ್ಲಿ ಬಿ.ವೈ.ರಾಘವೇಂದ್ರ ಬದಲು, ಯಡಿಯೂರಪ್ಪ ಅವರನ್ನೇ ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಹಾಗೂ ಯಡಿಯೂರಪ್ಪ ಅವರಿಂದ ತೆರ­ವಾಗುವ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ರಾಘವೇಂದ್ರ ಅವರಿಗೆ ಟಿಕೆಟ್‌ ನೀಡಲು ಬಿಜೆಪಿ ಮುಖಂಡರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಆದರೆ, ಯಡಿಯೂರಪ್ಪ ಅವರು ಲೋಕಸಭೆ ಬದಲು, ಜೂನ್‌­ನಲ್ಲಿ ನಡೆಯುವ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲು ಒಲವು ತೋರಿಸಿದ್ದಾರೆ ಎಂದು ಗೊತ್ತಾಗಿದೆ. ಬಿಜೆಪಿಯಲ್ಲಿ ಉಳಿದುಕೊಂಡೇ ಯಡಿಯೂರಪ್ಪ ಅವರನ್ನು ಬೆಂಬಲಿಸುತ್ತಿದ್ದ ಹಲವು ಹಾಲಿ ಸಂಸದರಿಗೆ ಈ ಬಾರಿಯೂ ಮತ್ತೆ ಟಿಕೆಟ್‌ ದೊರೆಯಬಹುದು ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT