ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆ ವೇಳೆ ವ್ಯಕ್ತಿ ಸಾವು

ಕಾರ್ಯಕರ್ತರ ನೂಕುನುಗ್ಗಲಿನ ಕಾರಣಕ್ಕೆ ಹೃದಯಾಘಾತ?
Last Updated 4 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಮಹದೇವಪುರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ನಲ್ಲೂರಹಳ್ಳಿಯ ನಾಗೇಶ್ ಅವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ಬೆಂಬಲಿಗರು ಕೆಪಿಸಿಸಿ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸುತ್ತಿದ್ದ ವೇಳೆ ವೇಲು (48) ಎಂಬುವರು ಸಾವನ್ನಪ್ಪಿದ್ದಾರೆ.

ಪೊಲೀಸರು ಲಾಠಿ ಪ್ರಹಾರ ಮಾಡಿದ್ದರಿಂದ ನೂಕು ನುಗ್ಗಲು ಉಂಟಾಗಿ ವೇಲುಗೆ ಹೃದಯಾಘಾತವಾಯಿತು ಎಂದು ಪ್ರತಿಭಟನಾನಿರತರು ದೂರಿದ್ದಾರೆ. ಆದರೆ, ಈ ಆರೋಪವನ್ನು ತಳ್ಳಿ ಹಾಕಿರುವ ಪೊಲೀಸರು, ಪ್ರತಿಭಟನಾ ಸ್ಥಳದಲ್ಲಿ ವೇಲು ಅವರು ಇರಲೇ ಇಲ್ಲ ಎಂದು ಹೇಳಿದ್ದಾರೆ.

`ಮಹದೇವಪುರ ಕ್ಷೇತ್ರದಲ್ಲಿ ಹಿಂದುಳಿದ ವರ್ಗದ 1.10 ಲಕ್ಷ ಮಂದಿ ಇದ್ದಾರೆ. ಇಲ್ಲೇ ಹುಟ್ಟಿ ಬೆಳೆದ ನಮ್ಮ ಸಮುದಾಯದ ಸದಸ್ಯರಿಗೆ ಟಿಕೆಟ್ ಕೊಡುವುದನ್ನು ಬಿಟ್ಟು, ಮೂರು ಸಾವಿರ ಜನರಿರುವ ಬೋವಿ ಜನಾಂಗದ ಸದಸ್ಯರಿಗೆ ಟಿಕೆಟ್ ಕೊಟ್ಟು ಪಕ್ಷ ಅನ್ಯಾಯ ಮಾಡಲು ಹೊರಟಿದೆ. ಈಗ ಟಿಕೆಟ್ ಸಿಗಲಿದೆ ಎನ್ನಲಾದ ಎ.ಸಿ.ಶ್ರೀನಿವಾಸ್ ಕೂಡ ಮೂಲತಃ ಮಹದೇವಪುರದವರಲ್ಲ. ಹೀಗಾಗಿ ನಮ್ಮ ಜನಾಂಗದ ನಾಗೇಶ್ ಅವರಿಗೇ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿತ್ತು' ಎಂದು ವರ್ತೂರು ಬ್ಲಾಕ್ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ (ಎಸ್‌ಸಿ ವಿಭಾಗ) ಎಸ್.ಸಿ.ಶಿವಣ್ಣ ಹೇಳಿದರು.

`ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಪ್ರತಿಭಟನಾಕಾರರು ಕೆಪಿಸಿಸಿ ಕಚೇರಿ ಮುಂದೆ ಜಮಾಯಿಸಿದರು. ಆದರೆ, ಅರ್ಧ ಗಂಟೆಯಾದರೂ ಪಕ್ಷದ ಮುಖಂಡರು ಸ್ಥಳಕ್ಕೆ ಬಂದು ಸಮಸ್ಯೆಗಳನ್ನು ಆಲಿಸಲಿಲ್ಲ. ಹೀಗಾಗಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಲಾಯಿತು. ಆಗ ನಮ್ಮನ್ನ ಅಡ್ಡಗಟ್ಟಿದ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಈ ವೇಳೆ ವೇಲು ಪಾದಚಾರಿ ಮಾರ್ಗದ ಕಲ್ಲಿನ ಮೇಲೆ ಬಿದ್ದರು. ಎದೆಗೆ ಪೆಟ್ಟಾಗಿ ಅಸ್ವಸ್ಥರಾದರು. ಕೂಡಲೇ ಅವರನ್ನು ವಸಂತನಗರದ ಜೈನ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು. ಹೀಗಾಗಿ ಲಾಠಿ ಪ್ರಹಾರ ನಡೆಸಿದ ಪೊಲೀಸರ ವಿರುದ್ಧ ಹಿರಿಯ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು' ಎಂದು ಅವರು ಆಗ್ರಹಿಸಿದರು.

ಪ್ರತಿಭಟನಾ ಸ್ಥಳದಲ್ಲಿ ವೇಲು ಇರಲಿಲ್ಲ: `ಗುಂಪು ಚದುರಿಸಲು ಲಘು ಲಾಠಿ ಪ್ರಹಾರ ಮಾಡಲಾಯಿತು. ಆ ವೇಳೆ ವೇಲು ಸ್ಥಳದಲ್ಲಿ ಇರಲಿಲ್ಲ. ನಲ್ಲೂರಹಳ್ಳಿಯಿಂದ ಬಂದಿದ್ದರಿಂದ ಅವರು ಸುಸ್ತಾಗಿ ಪ್ರತಿಭಟನೆಯಿಂದ ದೂರು ಉಳಿದಿದ್ದರು ಎಂದು ಅವರ ಕುಟುಂಬ ಸದಸ್ಯರೇ ಹೇಳಿಕೆ ಕೊಟ್ಟಿದ್ದಾರೆ. ಆ ಹೇಳಿಕೆ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ಬೌರಿಂಗ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಲಾಠಿ ಪ್ರಹಾರಕ್ಕೂ ವೇಲು ಅವರ ಸಾವಿಗೂ ಸಂಬಂಧವಿಲ್ಲ' ಎಂದು ಕೇಂದ್ರ ವಿಭಾಗದ ಡಿಸಿಪಿ ಬಿ.ಆರ್.ರವಿಕಾಂತೇಗೌಡ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT