ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆಗಳಿಂದಲೇ ಹೊಸ ಇತಿಹಾಸ: ಕೆ. ನೀಲಾ

Last Updated 15 ಡಿಸೆಂಬರ್ 2013, 19:53 IST
ಅಕ್ಷರ ಗಾತ್ರ

ಮಂಗಳೂರು: ‘ಹಣ ಮತ್ತು ಸಂಖ್ಯೆಯನ್ನು ಗಮನಿಸಿ ಈ ಸಮಾವೇಶದ ಯಶಸ್ಸನ್ನು ಅಳೆಯ­ಬಾರದು. ನಮ್ಮ ಇತಿಹಾಸದಲ್ಲಿ ಇಂತಹ ಪರ್ಯಾ­ಯ ಚಿಂತನೆಗಳ ಮೂಲಕವೇ ಬೌದ್ಧ, ಜೈನಧರ್ಮ, ವಚನಕಾರರ ಪಂಥಗಳು ಬಂದವು ಎನ್ನುವುದನ್ನು ಮರೆಯಬಾರದು.

ಅಮಾನವೀಯತೆಯ ವಿರುದ್ಧ ನಡೆದ ಪ್ರತಿಭಟನೆಗಳೇ ಹೊಸ ಇತಿಹಾಸವನ್ನು ನಿರ್ಮಿಸಲು ಕಾರಣವಾದವು’ ಎಂದು ಮಹಿಳಾ ಹೋರಾಟಗಾರ್ತಿ ಕೆ.ನೀಲಾ ಅವರು ಭಾನುವಾರ ಇಲ್ಲಿ ಹೇಳಿದರು.

ಅವರು ಅಭಿಮತ ಮಂಗಳೂರು ವತಿಯಿಂದ ಇಲ್ಲಿನ ಶಕ್ತಿನಗರದ ಕಲಾಂಗಣ್‌ನಲ್ಲಿ ಎರಡು ದಿನಗಳ ಕಾಲ ನಡೆದ ‘ಜನನುಡಿ’ ಸಮಾವೇಶದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಧರ್ಮಸ್ಥಳದ ಆಸುಪಾಸಿನಲ್ಲಿ ನಡೆದ 400ಕ್ಕೂ ಹೆಚ್ಚು ಅಸಹಜ ಸಾವು ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸಬೇಕು’ ಎಂದ ಅವರು, ‘ನಾನು ಅಲ್ಲಿಗೆ ಹೋಗಿ ಭಯಗ್ರಸ್ಥರಾಗಿದ್ದ ಜನರನ್ನು ವಿಚಾರಿಸಿದಾಗ ಅವರು ತಮ್ಮ ಕಷ್ಟ ತೋಡಿಕೊಂಡಿ­ದ್ದರು. ಅಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ಸೌಜನ್ಯಾ ಪ್ರಕರಣ ತನಿಖೆಗೆ ಆಗ್ರಹಿಸಿ ನಿರ್ಣಯ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದಾಗ ಸದಸ್ಯರಲ್ಲಿ ಯಾವುದೇ ಉತ್ತರ ಇರಲಿಲ್ಲ’ ಎಂದರು. ‘ಅಗೋಚರ ಸರ್ಕಾರ’ದ ವಿರುದ್ಧ ಹೆಚ್ಚು ಎಚ್ಚರದಿಂದ ಹೋರಾಡುವ ಅಗತ್ಯವಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಸಂವಿಧಾನ ದುರ್ಬಲಗೊಳಿಸುವ ಶಕ್ತಿಗಳು:  ‘ಧರ್ಮ ಮತ್ತು ಉದ್ಯಮ ಎಂಬ ಅಗೋಚರ ಸರ್ಕಾರಗಳು ನಮ್ಮ ಸಂವಿಧಾನದ ಆಧಾರ ಸ್ತಂಭಗಳನ್ನು ದುರ್ಬಲಗೊಳಿಸುತ್ತಿವೆ’ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್‌ ಅಮೀನ್‌ ಮಟ್ಟು ಹೇಳಿದರು.

ಸಮಾರೋಪ ಭಾಷಣ ಮಾಡಿದ ಅವರು, ‘ಧರ್ಮದ ಜತೆ ಉದ್ಯಮವನ್ನು ಸೇರಿಸಿ ಬೆಳೆಸುವ ಈ ಅಗೋಚರ ಶಕ್ತಿಯ ಬಗ್ಗೆ ಎಚ್ಚರದಿಂದ ಇರಬೇಕಾಗಿದೆ. ಕರಾವಳಿಯಲ್ಲಿ ಶಿಕ್ಷಣದ ವ್ಯಾಪಾರೀಕರಣ ನಡೆಯುತ್ತಿರುವುದು ಗೊತ್ತಿರುವ ಸಂಗತಿ. ಆದರೆ ಸಾಂಸ್ಕೃತಿಕ ಮುಖವಾಡ ಹಾಕಿಕೊಂಡ ಉದ್ಯಮ ಅಪಾಯಕಾರಿ’ ಎಂದರು.

‘ಪ್ರಗತಿಪರ ಕಾನೂನುಗಳನ್ನು ರಚಿಸಿ ದೇಶಕ್ಕೆ ಮಾದರಿ ಎನಿಸಿಕೊಂಡಿರುವ ರಾಜ್ಯದಲ್ಲಿ ಮೂಢನಂಬಿಕೆ ವಿರೋಧಿ ಮಸೂದೆ ಬಗ್ಗೆ ಭಾರಿ ಪ್ರಮಾಣದ ಅಪಪ್ರಚಾರ ನಡೆಯುತ್ತಿದೆ. ಅಪಪ್ರಚಾರ ನಡೆಯುತ್ತಿರುವ ಮಾದರಿಯಲ್ಲಿ ಆ ಮಸೂದೆಯ ಕರಡು ಇಲ್ಲ’ ಎಂದು ವಿವರಿಸಿದರು.

‘ಗುಜರಾತ್‌ನಲ್ಲಿ ಅಭಿವೃದ್ಧಿ ಎಂದರೆ ಫ್ಲೈಓವರ್‌ಗಳು, ರಸ್ತೆಗಳು, ಮಾಲ್‌ಗಳೇ ಆಗಿವೆ. ಅದು ಮನುಷ್ಯ ಕೇಂದ್ರಿತವಾಗಿಲ್ಲ ಎನ್ನುವುದಕ್ಕೆ ಅಲ್ಲಿ ಶೇ 70ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂಬ ಅಂಶವೇ ಉದಾಹರಣೆ’ಎಂದರು.

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ, ಹಿರಿಯ ಪತ್ರಕರ್ತ ಸನತ್‌ಕುಮಾರ್‌ ಬೆಳಗಲಿ, ದಲಿತ ಸಂಘಟನೆ ರಾಜ್ಯ ಮುಖಂಡ ಮಾವಳ್ಳಿ ಶಂಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT