ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆಯ ನಂತರ ಚಟುವಟಿಕೆ ಸ್ಥಗಿತ

ವಿಮಾನ ನಿಲ್ದಾಣದ ಜಮೀನು ಖಾಸಗಿಯವರಿಗೆ ಮಾರಾಟ ಆರೋಪ
Last Updated 4 ಜುಲೈ 2013, 6:08 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿಮಾನ ನಿಲ್ದಾಣದ ವಿಸ್ತರಣೆಗೆ ಎಂದು ವಶಪಡಿಸಿಕೊಂಡ ಜಮೀನಿನಲ್ಲಿ ಕೆಲ ಭಾಗ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ (ಕೆಐಎಡಿಬಿ) ಖಾಸಗಿಯವರಿಗೆ ಮಾರಾಟ ಮಾಡಿರುವ ವಿಚಾರ ಬೆಳಕಿಗೆ ಬಂದ ನಂತರ ಇಲ್ಲಿನ ಗೋಕುಲ ಗ್ರಾಮದ ಭೂಸ್ವಾಧೀನ ಪ್ರದೇಶದಲ್ಲಿ ನೀರವ ಮೌನ ಆವರಿಸಿದೆ.

ಗೋಕುಲ ಗ್ರಾಮದ ಬಳಿ ನಗರದ ದೇಶಪಾಂಡೆ ಫೌಂಡೇಶನ್ ಕೆಐಎಡಿಬಿಯಿಂದ ತಾನು ಖರೀದಿಸಿದ್ದ ಆರು ಎಕರೆ ಜಮೀನಿನಲ್ಲಿ ಕಳೆದ ಮೇ 23ರಂದು ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ಮಾಡಲು ಮುಂದಾದ ವೇಳೆ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಗಲಾಟೆ ಮಾಡಿದ್ದರು. ಆಗ ಮಾಧ್ಯಮಗಳ ಮೂಲಕ ವಿಮಾನ ನಿಲ್ದಾಣದ ಭೂಮಿ ಖಾಸಗಿಯವರಿಗೆ ಮಾರಾಟವಾಗಿರುವುದು ಬಹಿರಂಗವಾಗಿತ್ತು.

ಗೋಕುಲ ಗ್ರಾಮಸ್ಥರ ಪ್ರತಿಭಟನೆಯ ನಂತರ ಆ ಪ್ರದೇಶದಲ್ಲಿ ದೇಶಪಾಂಡೆ ಫೌಂಡೇಶನ್‌ನಿಂದ ಹಾಕಲಾಗಿದ್ದ ಬೋರ್ಡ್ ತೆಗೆಯಲಾಗಿದೆ. ಜೊತೆಗೆ ಅಲ್ಲಿ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ.

ಕೆಐಎಡಿಬಿ ಕಿರುಕುಳಕ್ಕೆ ತಡೆ: ದೇಶಪಾಂಡೆ ಫೌಂಡೇಶನ್‌ನ ಭೂಮಿಪೂಜೆ ಕಾರ್ಯಕ್ರಮದ ವೇಳೆ ಗೋಕುಲ ಗ್ರಾಮಸ್ಥರು ನಡೆಸಿದ ಪ್ರತಿಭಟನೆಯ ನಂತರ ಕೆಐಎಡಿಬಿ ಅಧಿಕಾರಿಗಳಿಂದ ಆಗುತ್ತಿದ್ದ ಕಿರುಕುಳ ತಪ್ಪಿದೆ ಎಂದು ಅಲ್ಲಿಯೇ ಸಮೀಪದಲ್ಲಿ ಮನೆ ಕಟ್ಟಿಕೊಂಡು ಕಳೆದ 30 ವರ್ಷಗಳಿಂದ ವಾಸಿಸುತ್ತಿರುವ ಬಸಪ್ಪ ಸಾವಕಾರ.

ದೇಶಪಾಂಡೆ ಫೌಂಡೇಶನ್‌ನ ಜಮೀನಿನ ಪಕ್ಕದಲ್ಲಿಯೇ ಬಸಪ್ಪ ಸಾವಕಾರ ಅವರ ಕುಟುಂಬ ವಾಸವಿದ್ದು, ವಿಮಾನ ನಿಲ್ದಾಣಕ್ಕೆ ಭೂಸ್ವಾಧೀನಪಡಿಸಿಕೊಳ್ಳಲಾಗಿದೆ. ನೀವು ಮನೆ ಖಾಲಿ ಮಾಡಿ ಎಂದು ಆಗಾಗ ಬಂದು ಗಲಾಟೆ ಮಾಡುತ್ತಿದ್ದ ಕೆಐಎಡಿಬಿ ಅಧಿಕಾರಿಗಳು ಇತ್ತೀಚೆಗೆ ಇತ್ತ ಬಂದಿಲ್ಲ ಎಂದು ಬಸಪ್ಪ `ಪ್ರಜಾವಾಣಿ'ಗೆ ತಿಳಿಸಿದರು.

ವಿಶೇಷವೆಂದರೆ `ತಾವು ವಾಸವಿರುವ ಜಮೀನನ್ನು ವಿಮಾನ ನಿಲ್ದಾಣದ ವಿಸ್ತರಣೆ ಉದ್ದೇಶದ ಭೂಸ್ವಾಧೀನದಿಂದ ಕೈ ಬಿಟ್ಟು ಖಾಸಗಿಯವರಿಗೆ ಮಾರಾಟ ಮಾಡಿರುವುದು' ಬಸಪ್ಪ ಸಾವಕಾರ ಕುಟುಂಬಕ್ಕೆ ಇನ್ನೂ ತಿಳಿದಿಲ್ಲ.  

`ಇತ್ತೀಚೆಗೆ ಅಧಿಕಾರಿಗಳ ಕಾಟ ತಪ್ಪಿದ್ದರೂ ಮುಂದೆ ಇಲ್ಲಿಯೇ ವಾಸವಿರಲು ಅವಕಾಶ ದೊರೆಯುವುದೋ ಇಲ್ಲವೋ ಎಂಬ ಅನಿಶ್ಚಿತತೆ ಕಾಡುತ್ತಿದೆ' ಎಂದು ದ್ಯಾಮವ್ವ ಸಾವಕಾರ ಅಲವತ್ತುಕೊಂಡರು. ಸಾವಕಾರ ಕುಟುಂಬ ವಾಸವಿರುವ ಜಮೀನು ಗೋಕುಲ ಗ್ರಾಮದ ಜಮೀನ್ದಾರರೊಬ್ಬರಿಗೆ ಸೇರಿದ್ದು, ಕೆಲವೇ ವರ್ಷಗಳ ಹಿಂದೆ ಇಲ್ಲಿ ಕೃಷಿ ಕಾರ್ಯ ನಡೆಯುತ್ತಿತ್ತು. 100 ಚೀಲಕ್ಕೂ ಹೆಚ್ಚು ಜೋಳ ಬೆಳೆಯುತ್ತಿದ್ದುದ್ದಾಗಿ ದ್ಯಾಮವ್ವ ನೆನಪಿಸಿಕೊಂಡರು.

ಇದೇ ಪ್ರದೇಶದಲ್ಲಿ ಭಾಗಶಃ ಅಭಿವೃದ್ಧಿಗೊಂಡ ಬಡಾವಣೆಯೊಂದರಲ್ಲಿ ಮುರಿದು ಬಿದ್ದ ವಿದ್ಯುತ್ ಕಂಬಗಳು, ರಸ್ತೆಗಳಲ್ಲಿ ಬೆಳೆದಿದ್ದ ಕುರುಚಲು ಗಿಡಗಳು, ಹಾಳು ಬಿದ್ದ ಮನೆ ಗತ ವೈಭವಕ್ಕೆ ಸಾಕ್ಷಿಯಾಗಿ ಕಾಣುತ್ತಿದ್ದವು.

ಇತ್ತೀಚೆಗೆ ವಿಮಾನ ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಂಡ ಗೋಕುಲ ಗ್ರಾಮದ ಸಂತ್ರಸ್ತರ ವತಿಯಿಂದ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕೆಐಎಡಿಬಿಯಿಂದ ಆಗಿರುವ ಅನ್ಯಾಯ ಸರಿಪಡಿಸುವಂತೆ ಮನವಿ ಅರ್ಪಿಸಲಾಗಿದೆ.

ಮತ್ತೆ ಹೋರಾಟದ ಎಚ್ಚರಿಕೆ
`ಮಾಹಿತಿ ಹಕ್ಕು ಕಾಯ್ದೆಯಡಿ ಕೆಐಎಡಿಬಿಯಿಂದ ಖಾಸಗಿಯವರಿಗೆ ಹಂಚಿಕೆಯಾಗಿರುವ ಭೂಮಿಯ ವಿವರವನ್ನು ಕೇಳಿ ಅರ್ಜಿ ಸಲ್ಲಿಸಲಾಗಿದೆ. ಅದು ದೊರೆತ ನಂತರ ಸಂತ್ರಸ್ತರ ಪರ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ' ಹುಬ್ಬಳ್ಳಿ ವಿಮಾನ ನಿಲ್ದಾಣ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಹನುಮಂತ ಉಣಕಲ್ ಹೇಳಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣ ನಿವೇಶನದಾರರ ಸಂತ್ರಸ್ತರ ಒಕ್ಕೂಟದ ಅಧ್ಯಕ್ಷ ರಘೋತ್ತಮ ಕುಲಕರ್ಣಿ ಮಾತನಾಡಿ, ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಅವರೊಂದಿಗೆ ಆ ಬಗ್ಗೆ ಚರ್ಚೆ ನಡೆಸಿದ್ದು, ಅವರು ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ ಎಂದರು. ಸರ್ಕಾರ ಮುಂದಿನ ಒಂದು ತಿಂಗಳ ಒಳಗಾಗಿ ಸಾರ್ವಜನಿಕರಿಗೆ ಈ ಬಗ್ಗೆ ಸೂಕ್ತ ವಿವರಣೆ ನೀಡದಿದ್ದಲ್ಲಿ ಅಥವಾ ತನಿಖೆಗೆ ಆದೇಶ ಮಾಡದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT