ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆಯ ಮಹಾಪೂರ: ಮಾಲ್ದೀವ್ಸ್ ಅಧ್ಯಕ್ಷ ನಶೀದ್ ರಾಜೀನಾಮೆ

Last Updated 7 ಫೆಬ್ರುವರಿ 2012, 10:00 IST
ಅಕ್ಷರ ಗಾತ್ರ

ಮಾಲೆ (ಎಪಿ): ಹಿರಿಯ ನ್ಯಾಯಾಧೀಶರೊಬ್ಬರನ್ನು ಬಂಧಿಸುವಂತೆ ತಾವು ನೀಡಿದ್ದ ವಿವಾದಾತ್ಮಕ ಆದೇಶದ ವಿರುದ್ಧ ಭುಗಿಲೆದ್ದ ಸಾರ್ವಜನಿಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ನಶೀದ್ ಮಂಗಳವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು.

ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಮತ್ತು ಹುದ್ದೆಯನ್ನು ಉಪಾಧ್ಯಕ್ಷ ಮೊಹಮ್ಮದ ವಹೀದ್ ಹಸನ್ ಅವರಿಗೆ ಒಪ್ಪಿಸಲು ನಶೀದ್ ಒಪ್ಪಿದ್ದಾರೆ ಎಂದು ಬ್ರಿಗೇಡಿಯರ್ ಅಹ್ಮದ್ ಶಿಯಾಮ್ ಇಲ್ಲಿ ವರದಿಗಾರರಿಗೆ ತಿಳಿಸಿದರು. ನಶೀದ್ ಅವರಿಂದ ಈ ಬೆಳವಣಿಗೆ ಬಗ್ಗೆ ತತ್ ಕ್ಷಣದ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಹಿಂದೂ ಮಹಾಸಾಗರದಲ್ಲಿನ ಈ ದ್ವೀಪರಾಷ್ಟ್ರದಲ್ಲಿ ಕಳೆದ ಹಲವಾರು ವಾರಗಳ ಕಾಲ ನಿರಂತರ ನಡೆದ ಪ್ರತಿಭಟನೆಗಳ ಬಳಿಕ ನಶೀದ್ ರಾಜೀನಾಮೆ ಸಲ್ಲಿಸಿದ್ದಾರೆ. ಪ್ರತಿಭಟನೆಗಳ ಪರಿಣಾಮವಾಗಿ ರಾಷ್ಟ್ರದಲ್ಲಿ ತೀವ್ರ ರಾಜಕೀಯ ಅಶಾಂತಿ ಭುಗಿಲೆದ್ದಿತ್ತು.

ರಾಷ್ಟ್ರದಲ್ಲಿ ನಡೆದ ಮೊತ್ತ ಮೊದಲ ಬಹುಪಕ್ಷೀಯ ಚುನಾವಣೆಯಲ್ಲಿ ರಾಷ್ಟ್ರದ ದೀರ್ಘಕಾಲದ ಆಡಳಿತಗಾರರನ್ನು ಪರಾಭವಗೊಳಿಸಿದ್ದ ಮಾಜಿ ಮಾನವ ಹಕ್ಕುಗಳ ಚಳವಳಿಗಾರ ನಶೀದ್ ಅವರಿಗೆ ಈ ಬೆಳವಣಿಗೆ ಭಾರಿ ಹೊಡೆತವಾಗಿದೆ.

ನಶೀದ್ ಮಾನವ ಹಕ್ಕುಗಳ ಚಳವಳಿಗಾರರಾಗಿ ಮಾತ್ರವೇ ಅಲ್ಲ, ಪರಿಸರವಾದಿಯಾಗಿಯೂ ಖ್ಯಾತರಾಗಿದ್ದವರು. ಸಮುದ್ರದ ನೀರಿನ ಮಟ್ಟ ಮೇಲೇರುತ್ತಿರುವುದಕ್ಕೆ ಕಾರಣವಾದ ಪರಿಸರ ಅಸಮತೋಲನ ನಿವಾರಣೆಗಾಗಿ ವಿಶ್ವದಾದ್ಯಂತ ಪ್ರವಾಸ ಮಾಡಿ ಸರ್ಕಾರಗಳ ಮನವೊಲಿಸಿದ್ದವರು.

ಕ್ರಿಮಿನಲ್ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಅಬ್ದುಲ್ಲಾ ಮೊಹಮ್ಮದ್ ಅವರನ್ನು ಬಂಧಿಸುವಂತೆ ಸೇನೆಗೆ ಆಜ್ಞಾಪಿಸಿದ ಬಳಿಕ ರಾಷ್ಟ್ರದಾದ್ಯಂತ ನಶೀದ್ ವಿರುದ್ಧ ವ್ಯಾಪಕ ಪ್ರತಿಭಟನೆ ಆರಂಭವಾಗಿತ್ತು. ಸರ್ಕಾರದ ಟೀಕಾಕಾರೊಬ್ಬರ ಬಂಧನವನ್ನು ಅಕ್ರಮ ಎಂದು ಘೋಷಿಸಿ ಬಿಡುಗಡೆ ಮಾಡುವಂತೆ ನ್ಯಾಯಾಧೀಶ ಅಬ್ದುಲ್ಲಾ ಮೊಹಮ್ಮದ್ ಆಜ್ಞಾಪಿಸಿದ ಬಳಿಕ ನ್ಯಾಯಾಧೀಶರನ್ನೇ ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT