ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಾಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

Last Updated 23 ಜುಲೈ 2012, 19:30 IST
ಅಕ್ಷರ ಗಾತ್ರ

 ನವದೆಹಲಿ (ಐಎಎನ್‌ಎಸ್): ಬುಧವಾರಕ್ಕೆ (ಜು.25) ಅಧಿಕಾರಾವಧಿ ಪೂರ್ಣಗೊಳಿಸಲಿರುವ ದೇಶದ ಮೊದಲ ಮಹಿಳಾ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಸೋಮವಾರ ಸಂಸತ್‌ನ ಉಭಯ ಸದನಗಳ ಸದಸ್ಯರು ಬೀಳ್ಕೊಡುಗೆ ಸಮಾರಂಭ ಆಯೋಜಿಸಿದ್ದರು.

ಸಂಸತ್ತಿನ ಐತಿಹಾಸಿಕ ಸೆಂಟ್ರಲ್‌ಹಾಲ್‌ನಲ್ಲಿ ಸೋಮವಾರ ಲೋಕಸಭಾ ಸ್ಪೀಕರ್‌ಮೀರಾ ಕುಮಾರ್ ನೇತೃತ್ವದಲ್ಲಿ ನಡೆದ ಭಾವಪೂರ್ಣ ಸಮಾರಂಭದಲ್ಲಿ ಉಪ ರಾಷ್ಟ್ರಪತಿ ಹಮಿದ್ ಅನ್ಸಾರಿ, ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಎರಡೂ ಸದನಗಳ ವಿರೋಧಪಕ್ಷದ ನಾಯಕರಾದ ಅರುಣ್ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್ ಇತರರು ಪಾಲ್ಗೊಂಡಿದ್ದರು.

ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಪ್ರತಿಭಾ ಪಾಟೀಲ್, ಸದನದಲ್ಲಿ ಗಂಭೀರ ವಿಷಯಗಳು ಚರ್ಚೆಯಾಗುತ್ತ್ದ್ದಿದ ವೇಳೆಯಲ್ಲಿ ಕಲಾಪವನ್ನು ಭಂಗಗೊಳಿಸಿದ್ದರ ಕುರಿತು ಸಂಸದರಿಗೆ ಕಿವಿ ಮಾತು ಹೇಳಿದರು.
`ಸಮಸ್ಯೆಗಳಿಗೆ ಪರಿಹಾರ ಕಂಡು ಹುಡುಕುವಾಗ  ವಾದ-ಪ್ರತಿವಾದಗಳು ನಡೆಯುವುದು ಸಾಮಾನ್ಯ. ಆದರೆ ಚರ್ಚೆ ನಡೆಯುವ ದಿನದ ಕೊನೆಯ ಹೊತ್ತಿಗೆ ಮೌಲ್ಯಯುತವಾದ ಹಾಗೂ ಶಾಸಕಾಂಗಕ್ಕೆ ಗೌರವ ತರುವಂತಹ ತೀರ್ಮಾನಗಳು ಸದನದಿಂದ ಹೊರ ಹೊಮ್ಮಬೇಕು~ ಎಂದು ಸಲಹೆ ಮಾಡಿದರು.

ತಮ್ಮ ಅಧಿಕಾರಾವಧಿಯಲ್ಲಿ (2010ರಲ್ಲಿ) ಚಳಿಗಾಲದ ಅಧಿವೇಶನ 2ಜಿ ಸ್ಪೆಕ್ಟ್ರಂ ಹಗರಣ ಕುರಿತ ಪ್ರತಿಭಟನೆಗೆ ಬಲಿಯಾಗಿದ್ದನ್ನು ಉಲ್ಲೇಖಿಸಿದ ಪ್ರತಿಭಾ ಪಾಟೀಲ್, `ಎಲ್ಲ ರಾಜಕೀಯ ಪಕ್ಷಗಳಲ್ಲೂ ವಿಭಿನ್ನ ಯೋಚನೆಗಳಿರುತ್ತವೆ. ಇದು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುತ್ತದೆ. ಆದರೆ, ಇದೇ ಸಮಯದಲ್ಲಿ ಹಲವು ನಿರೀಕ್ಷೆಗಳಿಂದಾಗಿ ರಾಜಕೀಯ ನಾಯಕರಿಗೆ ಕಠಿಣ ಸವಾಲುಗಳು ಎದುರಾಗುತ್ತವೆ ಎಂದರು.

ಲೋಕಸಭಾ ಸ್ಪೀಕರ್ ಮೀರಾಕುಮಾರ್, `ಪ್ರತಿಭಾ ಪಾಟೀಲ್ ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ ಮೊದಲ ಮಹಿಳೆ~ ಎಂದು ಪ್ರಶಂಸಿಸಿದರು.

ಹಮೀದ್ ಅನ್ಸಾರಿ ಮತ್ತು ಮೀರಾ ಕುಮಾರ್ ಅವರು, ಪ್ರತಿಭಾ ಪಾಟೀಲ್ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಔತಣ ಕೂಟ :  ಇದೇ 25ಕ್ಕೆ ಅಧಿಕಾರ ಪೂರ್ಣಗೊಳ್ಳಲಿರುವ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಮಂಗಳವಾರ ಪ್ರಧಾನಿ ಮನಮೋಹನ್ ಸಿಂಗ್, ಪ್ರಣವ್ ಮುಖರ್ಜಿ ಮತ್ತು ಸಂಪುಟ ಸಹದ್ಯೋಗಿಗಳನ್ನು ಔತಣಕೂಟಕ್ಕೆ ಆಹ್ವಾನಿಸಿದ್ದಾರೆ. 

 ರಾಷ್ಟ್ರಪತಿ ಭವನದಲ್ಲಿ ಈ ಔತಣಕೂಟ ನಡೆಯಲಿದೆ ಎಂದು ಮೂಲಗಳೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT