ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭೆ ಕೊರತೆ: ನಿವೃತ್ತರಿಗೆ ಮಣೆ

ಕಾನೂನು,ಹಣಕಾಸು ಸೇವೆ ಪರಿಣಿತರಿಗೆ ಗರಿಷ್ಠ ಬೇಡಿಕೆ
Last Updated 20 ಜನವರಿ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹೊಸಬರಿಗೆ ಸಾಕಷ್ಟು ಉದ್ಯೋಗಾವಕಾಶ ಲಭಿಸುತ್ತಿಲ್ಲ ಎಂಬ ಆರೋಪ ಒಂದೆಡೆಯಾದರೆ, ಇನ್ನೊಂದೆಡೆ ಭಾರತೀಯ ಕಂಪೆನಿಗಳು ನಿವೃತ್ತ ಉದ್ಯೋಗಿಗಳತ್ತ ಮುಖ ಮಾಡಿವೆ. ನಿವೃತ್ತ `ಅನುಭವಿ'ಗಳನ್ನು ಮತ್ತೆ ನೇಮಿಸಿಕೊಳ್ಳುವ ಮೂಲಕ `ಪ್ರತಿಭಾ ಕೊರತೆ' ನೀಗಿಸುವ ಹೊಸ ವಿಧಾನಕ್ಕೆ ಮುನ್ನುಡಿ ಬರೆದಿವೆ.

ಸಾಕಷ್ಟು ವರ್ಷಗಳ ಕಾಲ ಕೆಲಸ ಮಾಡಿ, ಅಪಾರ ಅನುಭವ ಗಳಿಸಿರುವ, ವಿಶೇಷ ವಲಯಗಳಲ್ಲಿ ಪರಿಣಿತಿ ಹೊಂದಿರುವ ನಿವೃತ್ತ ಪ್ರತಿಭೆಗಳನ್ನು ಹುಡುಕಿ ಮತ್ತೆ ಪ್ರಮುಖ ಹುದ್ದೆಗಳಿಗೆ ವಿಶೇಷ ಅಧಿಕಾರಿಗಳಾಗಿ ನೇಮಕ ಮಾಡಿಕೊಳ್ಳಲು ಕಂಪೆನಿಗಳು ಆಸಕ್ತಿ ತೋರಿಸುತ್ತಿವೆ. ಬ್ಯಾಂಕಿಂಗ್, ಇಂಧನ, ತೈಲ, ಮೂಲಸೌಕರ್ಯ ಮತ್ತು ತಂತ್ರಜ್ಞಾನ ಆಧಾರಿತ ಸೇವಾ ವಲಯದ (ಐಟಿಇಎಸ್) ಕಂಪೆನಿಗಳು ಇತ್ತೀಚೆಗೆ ನಿವೃತ್ತರಿಗೆ ರತ್ನಗಂಬಳಿ ಹಾಸಿ ಬರಮಾಡಿಕೊಳ್ಳುತ್ತಿವೆ. ಇದನ್ನು ಅಧ್ಯಯನವೊಂದು ಖಚಿತಪಡಿಸಿದೆ.

ಕಾನೂನು, ತನಿಖೆ, ಭದ್ರತಾ ಸೇವೆ, ಹಣಕಾಸು ವಲಯಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಕ್ಷೇತ್ರಗಳಲ್ಲಿ ಪರಿಣಿತರ ಕೊರತೆ ಇರುವುದೇ ಇದಕ್ಕೆ ಕಾರಣ. ಹೊಸಬರಲ್ಲಿನ ಅನುಭವ ಕೊರತೆ, ಸ್ಥಿರತೆ ಇಲ್ಲದಿರುವ ಅಂಶವೇ ಕಂಪೆನಿಗಳು ನಿವೃತ್ತರಿಗೆ ಮಣೆ ಹಾಕುವಂತೆ ಮಾಡುತ್ತಿವೆ. ಯುವ ಪ್ರತಿಭೆಗಳಿಗೇ ಆದ್ಯತೆ ನೀಡುತ್ತಿದ್ದ ಕಾರ್ಪೊರೇಟ್ ಕಂಪೆನಿಗಳೂ ಇತ್ತೀಚೆಗೆ `ಹಿರಿಯ'ರತ್ತ ಒಲವು ತೋರಿಸುತ್ತಿರುವುದು ವಿಶೇಷ.

ಕ್ರಿಯಾಶೀಲ ಅಜ್ಜ-ಅಜ್ಜಿಯರು ನಿವೃತ್ತಿ ನಂತರ ಹಣಕಾಸು ಭದ್ರತೆಗಾಗಿ ಮತ್ತೆ ಕೆಲಸಕ್ಕೆ ಸೇರುತ್ತಿದ್ದಾರೆ. ಕಂಪೆನಿಗಳೂ ಈ ಅಸಾಮಾನ್ಯ ಪ್ರತಿಭೆಗಳನ್ನು  ಸ್ವಾಗತಿಸುತ್ತಿವೆ ಎಂದು ಈ ಅಧ್ಯಯನ ನಡೆಸಿದ ಮಾನವ ಸಂಪನ್ಮೂಲ ನಿರ್ವಹಣೆ ಸಂಸ್ಥೆ `ಫ್ಲೆಕ್ಸಿ ಕೆರಿಯರ್ಸ್‌ ಇಂಡಿಯಾ' ಹೇಳಿದೆ.

ಈ ಅಧ್ಯಯನದ ಪ್ರಕಾರ ಭಾರತೀಯ ಕಂಪೆನಿಗಳು ಕಳೆದ ಒಂದು ವರ್ಷದಲ್ಲಿ 26 ಲಕ್ಷ ನಿವೃತ್ತರನ್ನು ಮತ್ತೆ ವಿವಿಧ ವಿಶೇಷ ಹುದ್ದೆಗಳಿಗೆ ನೇಮಕ ಮಾಡಿಕೊಂಡಿವೆ. ಕೆಲವು ವಿಶೇಷ ಜವಾಬ್ದಾರಿಗಳನ್ನು ನಿಭಾಯಿಸಲು ನಿವೃತ್ತ ಅನುಭವಿಗಳೇ ಅತ್ಯಂತ ಸಮರ್ಥರು ಎನ್ನುವುದು ಇದಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ `ಫ್ಲೆಕ್ಸಿ ಕೆರಿಯರ್ಸ್‌ ಇಂಡಿಯಾ' ಮುಖ್ಯಸ್ಥ ಕಾರ್ತಿಕ್ ಏಕಂಬರಂ.

ಎಚ್‌ಡಿಎಫ್‌ಸಿ ಸ್ಟಾಂಡರ್ಡ್ ಲೈಫ್ ಇನ್ಷುರೆನ್ಸ್, ಗೋಲ್ಡ್‌ಮನ್ ಸ್ಯಾಷೆ, ಐಸಿಐಸಿಐ ಬ್ಯಾಂಕ್, ಕೆಇಸಿ ಇಂಟರ್‌ನ್ಯಾಷನಲ್ ಸೇರಿದಂತೆ ಹಲವು ಕಂಪೆನಿಗಳು ನಿವೃತ್ತರನ್ನು ನೇಮಿಸಿಕೊಂಡಿವೆ. ಎರಡನೇ ಸುತ್ತಿನ ವೃತ್ತಿ ಬದುಕು ಆರಂಭಿಸಲು ಹಿರಿಯರಿಗೆ ಹಲವು ಅವಕಾಶಗಳಿವೆ. ಯುವ ಸಮೂಹಕ್ಕಿಂತ ಹಿರಿಯರಿಂದ ಸ್ಥಿರ ಮತ್ತು ಸಮತೋಲಿತ ಪ್ರದರ್ಶನ ನಿರೀಕ್ಷಿಸಬಹುದು ಎಂದು `ಫ್ಲೆಕ್ಸಿ ಕೆರಿಯರ್ಸ್‌' ಅಭಿಪ್ರಾಯಪಟ್ಟಿದೆ.

ಬಿಎಸ್‌ಎನ್‌ಎಲ್: 1ಲಕ್ಷ ಸಿಬ್ಬಂದಿಗೆ ವಿಆರ್‌ಎಸ್

ನವದೆಹಲಿ(ಪಿಟಿಐ): ನೌಕರರ ವೇತನವೇ ದೊಡ್ಡ ಹೊರೆ ಎಂಬಂತಾಗಿರುವ ಭಾರತೀಯ ಸಂಚಾರ್ ನಿಗಮ್ ಲಿ.(ಬಿಎಸ್‌ಎನ್‌ಎಲ್)ನಲ್ಲಿ ಈಗ (1ಲಕ್ಷ ಮಂದಿ) ಸಿಬ್ಬಂದಿ ಕಡಿತದ ಚಿಂತನೆ ನಡೆದಿದೆ! ಬಿಎಸ್‌ಎನ್‌ಎಲ್‌ನ ಒಟ್ಟು ವರಮಾನದ ಶೇ 48ರಷ್ಟು ಭಾಗ ಸಿಬ್ಬಂದಿ ವೇತನಕ್ಕೇ ವಿನಿಯೋಗವಾಗುತ್ತಿದೆ!

`ನೌಕರರ ಸಂಖ್ಯೆಯೂ ಅಗತ್ಯಕ್ಕಿಂತಲೂ ಅತ್ಯಧಿಕ ಪ್ರಮಾಣದಲ್ಲಿದೆ. ಹಾಗಾಗಿ ಒಂದು ಲಕ್ಷ ಸಿಬ್ಬಂದಿಯನ್ನು ಸ್ವಯಂ ನಿವೃತ್ತಿ ಯೋಜನೆ(ವಿಆರ್‌ಎಸ್)ಯಡಿ ಮನೆಗೆ ಕಳುಹಿಸುವ ಪ್ರಕ್ರಿಯೆಗೆ ಸದ್ಯವೇ ಚಾಲನೆ ನೀಡಲಾಗುವುದು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಕಳುಹಿಸಲಾಗಿದೆ' ಎಂದು ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಒಂದೊಮ್ಮೆ ನಮ್ಮ ನಿರೀಕ್ಷೆಯಂತೆಯೇ 1 ಲಕ್ಷ ನೌಕರರು `ವಿಆರ್‌ಎಸ್' ಪಡೆದರೆ ವೇತನದ ಹೊರೆ ಶೇ 10ರಿಂದ 15ರಷ್ಟು ಕಡಿಮೆ ಆಗುತ್ತದೆ. ಆಗ ಸಂಬಳದ ಬಜೆಟ್ ನಿರ್ವಹಣೆ ಸ್ವಲ್ಪ ಹಗುರವಾಗಲಿದೆ ಎಂದಿದ್ದಾರೆ. 2011ರ ಮಾರ್ಚ್ 31ರ ವೇಳೆಗೆ ಬಿಎಸ್‌ಎನ್‌ಎಲ್ ಸಿಬ್ಬಂದಿ ಸಂಖ್ಯೆ 2.81 ಲಕ್ಷವಿದ್ದಿತು. ಇನ್ನೊಂದೆಡೆ,  ಸಂಸ್ಥೆಯ ಲಾಭ 2004-05ರಲ್ಲಿರೂ10,183 ಕೋಟಿಯಷ್ಟಿದ್ದಿತು. ನಂತರದಲ್ಲಿ ಸತತ ಕುಸಿತ ಕಂಡಿದ್ದು, 2009-10ರಲ್ಲಿ ನಷ್ಟಕ್ಕೀಡಾಯಿತು. 2010-11ರಲ್ಲಿ ನಷ್ಟದ ಬಾಬ್ತುರೂ6384 ಕೋಟಿಗೆ ಹೆಚ್ಚಿತು. ನಷ್ಟ ಇಷ್ಟು ಭಾರಿ ಪ್ರಮಾಣಕ್ಕೇರಲು ಕಾರಣವಾಗಿದ್ದು, ನೌಕರರ ದೊಡ್ಡ ಮೊತ್ತದ ಸಂಬಳ. ಜತೆಗೆ `3ಜಿ' ಮತ್ತು `ಬಿಡಬ್ಲ್ಯುಎ' ತರಂಗಗುಚ್ಛ ಖರೀದಿಯೂ ಸಂಸ್ಥೆಗೆ ದೊಡ್ಡ ಹೊರೆಯಾಯಿತು.

ಜತೆಗೆ ಬಿಎಸ್‌ಎನ್‌ಎಲ್ ಸಿಬ್ಬಂದಿ ಸಮೂಹದಲ್ಲಿ ವಯಸ್ಸಾಗಿರುವವರೇ ಹೆಚ್ಚಿದ್ದಾರೆ. ಸದ್ಯ ಸಂಸ್ಥೆಯ ಒಟ್ಟು ಸಿಬ್ಬಂದಿಯ ಸರಾಸರಿ ವಯಸ್ಸು 50 ವರ್ಷ. 1 ಲಕ್ಷ ಮಂದಿ ವಿಆರ್‌ಎಸ್ ಪ್ರಸ್ತಾವನೆ ವೆಚ್ಚ ಕಡಿತದ ಯೋಜನೆಯಾಗಿದ್ದರೆ, ಇನ್ನೊಂದು ಮಗ್ಗಲಿಂದ ಆದಾಯ ಹೆಚ್ಚಿಸಿಕೊಳ್ಳುವ ಮಾರ್ಗವನ್ನೂ ಬಿಎಸ್‌ಎನ್‌ಎಲ್ ಅರಸುತ್ತಿದೆ. ಅದಕ್ಕಾಗಿ ದೇಶದಾದ್ಯಂತ ಇರುವ ತನ್ನ ಸ್ಥಿರಾಸ್ತಿಯಲ್ಲಿ ಒಂದಷ್ಟನ್ನು ಮಾರಾಟ ಮಾಡಿರೂ 8000 ಕೋಟಿ ಸಂಗ್ರಹಿಸಲೂ ಮುಂದಾಗಿದೆ. ಮುಂದಿನ ಐದು ವರ್ಷಗಳಲ್ಲಿ ಆಸ್ತಿ ಮಾರಾಟ ಯೋಜನೆಗೆ ಜಾರಿಗೆ ಕರಡು ಯೋಜನೆಯನ್ನೂ ಸಿದ್ಧಪಡಿಸಿದೆ ಎಂದು ಹಿರಿಯ ಅಧಿಕಾರಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT