ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಮೆ ವಿವಾದ : ಎನ್‌ಟಿಆರ್ ಕುಟುಂಬದಲ್ಲಿ ಸಮರ

Last Updated 15 ಡಿಸೆಂಬರ್ 2012, 19:54 IST
ಅಕ್ಷರ ಗಾತ್ರ

ಚುನಾವಣೆ ಸಮೀಪಿಸುತ್ತಿದ್ದಂತೆಯೇ ಆಂಧ್ರಪ್ರದೇಶದಲ್ಲಿ ರಾಜಕೀಯ ಆಟಗಳು ಗರಿಗೆದರಿವೆ. ಎನ್.ಟಿ.ರಾಮರಾವ್ ಅವರ ಹೆಸರು ಮತ್ತೆ ಎಲ್ಲರಿಗೂ, ಎಲ್ಲ ಪಕ್ಷಗಳಿಗೂ ಬೇಕಾದ ಹೆಸರಾಗಿದೆ.

ಕಾಂಗ್ರೆಸ್ ವಿರುದ್ಧವೇ ಸೆಡ್ಡು ಹೊಡೆದು, ಆಂಧ್ರಪ್ರದೇಶದ ಮುಖ್ಯಮಂತ್ರಿಯಾದ, ಚಲನಚಿತ್ರರಂಗದಲ್ಲಿ `ಕೃಷ್ಣಾವತಾರ'ಗಳ ಮೂಲಕ ಅಪಾರ ಜನಪ್ರಿಯತೆ ಪಡೆದಿದ್ದ  ನಂದಮೂರಿ ತಾರಕ ರಾಮರಾವ್ ಅವರ ಪ್ರತಿಮೆಯನ್ನು ಪಾರ್ಲಿಮೆಂಟ್ ಭವನದ ಮುಂದೆ ಪ್ರತಿಷ್ಠಾಪಿಸುವುದಕ್ಕೆ ಈಗ ಅನುಮತಿ ಸಿಕ್ಕಿದೆ.

ಲೋಕಸಭೆಯ ಸ್ಪೀಕರ್ ಮೀರಾ ಕುಮಾರ್ ಈ ಬಗ್ಗೆ ಕೋರಿಕೆ ಸಲ್ಲಿಸಿದ್ದ ಕೇಂದ್ರ ಸಚಿವೆ ದಗ್ಗುಬಾಟಿ ಪುರಂದರೇಶ್ವರಿ ಹಾಗೂ ಆಕೆಯ ಪತಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದ ದಗ್ಗುಬಾಟಿ ವೆಂಕಟೇಶ್ವರರಾವ್ ಮತ್ತಿತರರ ಕೋರಿಕೆಯನ್ನು ಪುರಸ್ಕರಿಸಿದ್ದಾರೆ. ಜೊತೆಗೆ ಇದಕ್ಕಾಗಿ ಎನ್‌ಟಿಆರ್ ಅವರ ಪ್ರತಿಮೆಯ ಸ್ವರೂಪ ನಿರ್ಧರಿಸಲು ಅವರಿಗೆ ಅನುಮತಿ ನೀಡಿದ್ದಾರೆ. ಪ್ರತಿಮೆ ಸ್ಥಾಪನೆಯ ದಿನವನ್ನು ಮುಂದಿನ ದಿನಗಳಲ್ಲಿ ತೀರ್ಮಾನಿಸುವುದಾಗಿ  ಸ್ಪೀಕರ್ ಹೇಳಿದ್ದಾರೆ.

ಎನ್‌ಟಿಆರ್ ಅವರ ಅಸಂಖ್ಯಾತ ಅಭಿಮಾನಿಗಳಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ  ಈ ವಿಷಯ ಸಂತೋಷ ನೀಡಿಲ್ಲ. ಎನ್‌ಟಿಆರ್ ಪ್ರತಿಮೆ ಸಂಸತ್‌ಭವನದ ಮುಂದೆ ಬರುವುದು ಹೆಮ್ಮೆಯ ವಿಷಯವೇ ಆದರೂ ಅದರ ಖ್ಯಾತಿ ಕಾಂಗ್ರೆಸ್‌ಗೂ, ಪುರಂದರೇಶ್ವರಿಗೂ ಸೇರುವುದು ಯಾರಿಗೂ ಬೇಕಿಲ್ಲ.

ಹೀಗಾಗಿ `ಪ್ರತಿಮೆ'ಯ ವಿಷಯ ಅವರ ಕುಟುಂಬದ ಸದಸ್ಯರಲ್ಲೇ ಭಿನ್ನಾಭಿಪ್ರಾಯ ಮೂಡಿಸಿದೆ. ಎನ್‌ಟಿಆರ್ ಅವರ ಪುತ್ರ ಹಾಗೂ ತೆಲುಗು ಚಿತ್ರರಂಗದ ನಾಯಕ ನಟ ಬಾಲಕೃಷ್ಣ ಅವರು ಈ ಪ್ರತಿಮೆ ಸ್ಥಾಪನೆಯ ಉದ್ದೇಶ ಕೇವಲ ತಮ್ಮ ಸೋದರಿ ಪುರಂದರೇಶ್ವರಿ ಮತ್ತು ಆಕೆಯ ಪತಿ ವೆಂಕಟೇಶ್ವರರಾವ್ ಅವರ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವುದೇ ಆಗಿದೆ ಎಂದು ಟೀಕಿಸಿದ್ದಾರೆ. 

“ಎನ್‌ಟಿಆರ್ ಪ್ರತಿಮೆ ಸ್ಥಾಪನೆ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದಕ್ಕೆ ನಮ್ಮ ವಿರೋಧ ಇದೆ. ಸ್ವಲ್ಪ ದಿನಗಳ ಹಿಂದೆ ದಗುಬಾಟಿ ದಂಪತಿ ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರು ಪ್ರತಿಮೆ ಸ್ಥಾಪನೆಯ ವಿಷಯದಲ್ಲಿ ಒಂದಿಷ್ಟೂ ಆಸಕ್ತಿ ತೋರಿಸುತ್ತಿಲ್ಲ ಎಂದು ಆಪಾದಿಸಿದ್ದರು.

ಈಗ ಪ್ರತಿಮೆ ಸ್ಥಾಪನೆಗೆ ಅವಕಾಶ ಸಿಕ್ಕಿದ ಕೂಡಲೇ ಇದರ ಸಂಪೂರ್ಣ ಕೀರ್ತಿಯನ್ನು ತಾವಿಬ್ಬರೇ ಪಡೆದುಕೊಳ್ಳಲು ಯತ್ನಿಸುತ್ತಿದ್ದಾರೆ” ಎಂದು ಬಾಲಕೃಷ್ಣ ದೂರಿದ್ದಾರೆ.

ಈ ಬಗ್ಗೆ ಬಾಲಕೃಷ್ಣ ಅವರು ಪತ್ರಿಕೆಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ  ಅವರ ಸೋದರಿ ಪುರಂದರೇಶ್ವರಿ ಹಾಗೂ ಪತಿ ದಗ್ಗುಬಾಟಿಯವರನ್ನು  ತೀವ್ರವಾಗಿ ಟೀಕಿಸಲಾಗಿದೆ. ಒಟ್ಟಿನಲ್ಲಿ ಎನ್‌ಟಿಆರ್ ಕುಟುಂಬದವರಲ್ಲಿ ಕೆಲವರು ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ನಟ ಬಾಲಕಷ್ಣ ಅವರ ಪರ ಗುರುತಿಸಿಕೊಂಡರೆ, ಮತ್ತೆ ಇತರರು ದಗ್ಗುಬಾಟಿ ದಂಪತಿ ಜೊತೆ ಸೇರಿದ್ದಾರೆ. ಇದರ ಜೊತೆಗೆ ಎನ್‌ಟಿಆರ್ ಅವರ ದ್ವಿತೀಯ ಪತ್ನಿ ಲಕ್ಷ್ಮೀ ಪಾರ್ವತಿ, ಪುತ್ರರಾದ ಹರಿಕೃಷ್ಣ ಹಾಗೂ ಜಯಕೃಷ್ಣ ಅವರುಗಳು ಕೂಡ ಭಿನ್ನ ಹೇಳಿಕೆಗಳನ್ನು ನೀಡುವ ಮೂಲಕ ಇದನ್ನು ಒಂದು ದೊಡ್ಡ ವಿವಾದವನ್ನಾಗಿಸಿದ್ದಾರೆ.

“ಕೇಂದ್ರ ಸಚಿವೆ  ಪುರಂದರೇಶ್ವರಿಯವರ ಸತತ ಪ್ರಯತ್ನದಿಂದ ಎನ್‌ಟಿಆರ್ ಪ್ರತಿಮೆ ಪ್ರತಿಷ್ಠಾಪನೆಗೆ ಅನುಮತಿ ಸಿಕ್ಕಿದೆ, ಚಂದ್ರಬಾಬುನಾಯ್ಡುಅವರಿಗೆ ಇದನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ” ಎಂದು  ದಗ್ಗುಬಾಟಿ ವೆಂಕಟೇಶ್ವರ ರಾವ್, ಚಂದ್ರಬಾಬು ನಾಯ್ಡು ಅವರನ್ನು ಕಟುವಾಗಿ ಟೀಕಿಸಿದ್ದಾರೆ.

ನಾಯ್ಡು ಅವರು ಒಂಬತ್ತು ವರ್ಷಗಳ ಸುದೀರ್ಘ ಕಾಲ ಮುಖ್ಯಮಂತ್ರಿಯಾಗ್ದ್ದಿದರು. ಅವರಿಗೆ ಬೇಕಾದ ಎನ್ ಡಿ ಎ ಮೈತ್ರಿಕೂಟವೇ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಪ್ರತಿಮೆಗೆ ಅನುಮತಿ ತರಲು ಸಾಧ್ಯವಾಗಲಿಲ್ಲ.  ಈಗ ಪುರಂದರೇಶ್ವರಿಯವರಿಂದ ಈ ಕೆಲಸ ಸುಗಮವಾಗಿ ನೆರವೇರಿದ್ದು ಅವರ ಹತಾಶೆಗೆ ಕಾರಣವಾಗಿದೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಸೇರಿ ಈಗಿನ ಕೇಂದ್ರ ಸರ್ಕಾರದಲ್ಲಿ ಸಚಿವೆಯೂ ಆಗಿರುವ ಪುರಂದರೇಶ್ವರಿಯವರು ತಾವು ಇದಕ್ಕೆ ಪೂರಕವಾಗಿ ಮಾಡಿರುವ ಪ್ರಯತ್ನಗಳ ಬಗ್ಗೆ  ದಾಖಲೆ ಸಹಿತ ಪ್ರಚಾರ ಮಾಡುತ್ತಿದ್ದಾರೆ. ಜೊತೆಗೆ ಆಂಧ್ರಪ್ರದೇಶದ ಗುಂಟೂರಿಗೆ ಸೇರಿದ ಮಾಯಾಚಾರಿ ಎಂಬ ಶಿಲ್ಪಿ ಒಂಬತ್ತು ಅಡಿಯ ಪ್ರತಿಮೆಯನ್ನು ಸಿದ್ಧಗೊಳಿಸುತ್ತಿರುವ ಸಂಗತಿಯನ್ನೂ ಬಹಿರಂಗ ಮಾಡಿದ್ದಾರೆ.  ಇದನ್ನೆಲ್ಲಾ ಮೊದಲು ಅಲ್ಲಗೆಳೆಯುತ್ತಾ ಬಂದಿದ್ದ ತೆಲುಗು ದೇಶಂ ಪಕ್ಷದ ನಾಯಕರು ಈಗ ಪುರಂದರೇಶ್ವರಿಯೇ ಅನುಮತಿಯನ್ನೇ ಪಡೆದುಕೊಂಡಿರುವುದರಿಂದ ಸಿಟ್ಟಿನಿಂದ ಕುದಿಯುತ್ತಿದ್ದಾರೆ. ಅದಕ್ಕಾಗಿಯೇ ರಾಜಕೀಯ ಆಕಾಂಕ್ಷೆಗಳನ್ನು ಬೆಳೆಸಿಕೊಂಡಿರುವ ನಟ ಬಾಲಕೃಷ್ಣ  ಈ ಬಗ್ಗೆ ಉಗ್ರವಾಗಿ ಪ್ರತಿಭಟನಾ ಹೇಳಿಕೆಗಳನ್ನು ನೀಡುತ್ತಿದ್ದಾರೆ.( ನಟ ಬಾಲಕಷ್ಣರ ಪುತ್ರಿ ಬ್ರಹ್ಮಿಣಿಯವರನ್ನು  ಚಂದ್ರಬಾಬು ನಾಯ್ಡು ಅವರ ಪುತ್ರ ಲೋಕೇಶ್ ಮದುವೆಯಾಗಿದ್ದಾರೆ.)

ಚಂದ್ರಬಾಬುನಾಯ್ಡು ಅವರು ಎನ್‌ಟಿಆರ್ ಅಭಿಮಾನಿಗಳಿಗೆ ಪತ್ರ ಬರೆದು, ಎನ್‌ಟಿಆರ್ ಹೆಸರಿನಲ್ಲಿ ಕೆಸರೆರೆಚಾಟದಲ್ಲಿ  ನಿರತರಾಗಿರುವ ಪುರಂದರೇಶ್ವರಿ ಹಾಗೂ ಆಕೆಯ ಪತಿ ದಗ್ಗುಬಾಟಿ ವೆಂಕಟೇಶ್ವರರಾವ್ ಅವರ ಹೇಳಿಕೆಗಳಿಗೆ ಪ್ರತಿರೋಧ ವ್ಯಕ್ತಪಡಿಸಬೇಕೆಂದು ಕೋರಿದ್ದಾರೆ. ವಿಶ್ವ ತೆಲುಗು ಸಮ್ಮೇಳನದಲ್ಲಿ ಎನ್‌ಟಿಆರ್ ಅವರ ಹೆಸರು ಎಲ್ಲೂ ಪ್ರಸ್ತಾಪವಾಗಿರಲಿಲ್ಲ. ಆಗ ಪುರಂದರೇಶ್ವರಿಯವರು ಯಾಕೆ ಪ್ರತಿಭಟಿಸಲಿಲ್ಲ ಎಂದೂ ನಾಯ್ಡು ಪ್ರಶ್ನಿಸಲಾರಂಭಿಸಿದ್ದಾರೆ.

ಎನ್‌ಟಿಆರ್ ಬದುಕಿದ್ದ ಕಾಲದಿಂದಲೂ ನಾಯ್ಡು ಹಾಗೂ ವೆಂಕಟೇಶ್ವರ ರಾವ್ ಅವರು  ರಾಜಕೀಯ ಮೇಲುಗೈ ಪಡೆಯಲು ಕಚ್ಚಾಡುತ್ತಲೇ ಇದ್ದಾರೆ.  ಎನ್‌ಟಿಆರ್ 1995 ರಲ್ಲಿ ಪದಚ್ಯುತರಾಗುವುದಕ್ಕೆ ಈ ಇಬ್ಬರೂ ನಡೆಸಿದ ಕಾರ್ಯತಂತ್ರವೇ ಮುಖ್ಯ ಕಾರಣ. ಆ ನಂತರ ನಾಯ್ಡು ಹಾಗೂ ದಗ್ಗುಬಾಟಿಯವರಲ್ಲಿ ಭಿನ್ನಾಭಿಪ್ರಾಯವಾಗಿ ಬೇರೆ ಬೇರೆಯಾದರು. ತಮ್ಮ ಪತ್ನಿ ಪುರಂದರೇಶ್ವರಿ ಕಾಂಗ್ರೆಸ್ ಸೇರುವುದಕ್ಕೆ ದಗ್ಗುಬಾಟಿಯವರೇ ಕಾರಣ. ಎನ್‌ಟಿಆರ್ ಬದುಕಿದ್ದಾಗಲೇ ಈ ಇಬ್ಬರು ಅಳಿಯಂದಿರು ಪ್ರೀತಿಯನ್ನು ತೋರಿಸಿದ್ದರೆ ಎನ್‌ಟಿಆರ್ ಅವರು ಇನ್ನಷ್ಟು ದಿನ ಬದುಕುತ್ತಿದ್ದರೋ ಏನೋ ಎಂದು ನಂದಮೂರಿ ಕುಟುಂಬದ ಅಭಿಮಾನಿಗಳೆಲ್ಲ ಮಾತನಾಡಿಕೊಂಡಿದ್ದೂ ಇದೆ.

ಎನ್‌ಟಿಆರ್ ಅವರ ಪ್ರತಿಮೆಯ ಸ್ಥಾಪನೆ,  ಮರಣೋತ್ತರ ಭಾರತ ರತ್ನ ಪ್ರಶಸ್ತಿ  ನೀಡಿಕೆ ಮತ್ತು ನಂದಮೂರಿ ಕುಟುಂಬದ ಶಕ್ತಿ, ಸಾಮರ್ಥ್ಯ ಹಿಂದಿನಂತೆ ಸದಾಕಾಲ ಉಳಿಸಿಕೊಳ್ಳುವುದು ಅಭಿಮಾನಿಗಳ ಆಕಾಂಕ್ಷೆ. ಎನ್‌ಟಿ ಆರ್ ಅವರ ಪರಮ ಭಕ್ತರಾಗಿದ್ದ ಅಭಿಮಾನಿಗಳಿಗೆ ಪ್ರತಿಮೆಯ ಸ್ಥಾಪನೆಯ ಬಗ್ಗೆ ಕುಟುಂಬದ ಸದಸ್ಯರೇ ಈ ರೀತಿ ಕಚ್ಚಾಡುತ್ತಿರುವುದು ಬೇಸರ ತಂದಿದೆ.

ಈಗ ಪ್ರತಿಮೆ ಸ್ಥಾಪನೆಯಾದರೆ ಎನ್‌ಟಿಆರ್ ಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡುವುದಕ್ಕೆ ಒತ್ತಾಯ ತರುವುದು ಕಷ್ಟವಾಗುವುದಿಲ್ಲ. ಆಗ  ಈ ಪ್ರಯತ್ನವನ್ನು ಎನ್‌ಟಿಆರ್ ಕುಟುಂಬದಲ್ಲಿ ಯಾರು ಕೈಗೊಳ್ಳುತ್ತಾರೆ ಎನ್ನುವುದೂ ಕುತೂಹಲದ ವಿಷಯವಾಗಿದೆ. ಏಕೆಂದರೆ ಈಗಿನ ನಡವಳಿಕೆಗಳ ಪ್ರಕಾರ ಭಾರತರತ್ನ ಪ್ರಶಸ್ತಿಯನ್ನು ಎನ್‌ಟಿಆರ್ ಅವರ ದ್ವಿತೀಯ ಪತ್ನಿ ಲಕ್ಷ್ಮೀ ಪಾರ್ವತಿಯವರೇ ಸ್ವೀಕರಿಸಬೇಕು. ಇಂತಹ ದೃಶ್ಯ ನೋಡಲು ಚಂದ್ರಬಾಬು ನಾಯ್ಡು, ಬಾಲಕೃಷ್ಣ, ದಗ್ಗುಬಾಟಿ ವೆಂಕಟೇಶ್ವರರಾವ್, ಪುರಂದರೇಶ್ವರಿ ಸಿದ್ದರಾಗುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT