ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಮೆ ಸ್ಥಳಾಂತರಕ್ಕೆ ಒಪ್ಪಿದ ಸರ್ಕಾರ

Last Updated 25 ಫೆಬ್ರುವರಿ 2013, 20:29 IST
ಅಕ್ಷರ ಗಾತ್ರ

ಬೆಂಗಳೂರು: ವಿವಾದದ ಸ್ವರೂಪ ಪಡೆದುಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಸ್ಥಳಾಂತರ ವಿಷಯಕ್ಕೆ ಹೈಕೋರ್ಟ್ ಸೋಮವಾರ ಮಂಗಳ ಹಾಡಿದೆ. ಮೆಟ್ರೊ ರೈಲು ಕಾಮಗಾರಿಯ ಅನುಕೂಲಕ್ಕಾಗಿ ಇಲ್ಲಿನ ವಿಧಾನಸೌಧ ಮುಂಭಾಗದ ಅಂಬೇಡ್ಕರ್ ಪ್ರತಿಮೆಯನ್ನು ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲು ಸರ್ಕಾರ ಒಪ್ಪಿಕೊಂಡಿದೆ.

ಸರ್ಕಾರ, ದಲಿತ ಸಂಘಟನೆಗಳು ಹಾಗೂ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್) ಹೇಳಿಕೆಗಳನ್ನು ಮಾನ್ಯ ಮಾಡಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಕೆ. ಶ್ರೀಧರ ರಾವ್ ಮತ್ತು ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ, `ಪ್ರತಿಮೆಯನ್ನು ತಾತ್ಕಾಲಿಕವಾಗಿ ಸ್ಥಳಾಂತರ ಮಾಡಿದ 2 ತಿಂಗಳಲ್ಲಿ ಅದನ್ನು ಈಗಿರುವ ಸ್ಥಳದಲ್ಲೇ ಪ್ರತಿಷ್ಠಾಪಿಸಬೇಕು' ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಕಾಮಗಾರಿ ಪೂರ್ಣಗೊಳ್ಳುವವರೆಗೆ ಪ್ರತಿಮೆ ಸ್ಥಳಾಂತರ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ವಕೀಲ ಎ.ವಿ. ಅಮರನಾಥನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠದ ಎದುರು ಹಾಜರಾದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಸಜನ್ ಪೂವಯ್ಯ, `ಪ್ರತಿಮೆ ಸ್ಥಳಾಂತರಕ್ಕೆ ಸರ್ಕಾರ ಸಿದ್ಧ. ಅದನ್ನು ತಾತ್ಕಾಲಿಕವಾಗಿ ಯಾವ ಸ್ಥಳದಲ್ಲಿ ಇರಿಸಬೇಕು ಎಂಬುದರ ಕುರಿತು ದಲಿತ ಸಂಘಟನೆಗಳ ಮುಖಂಡರ ಜೊತೆ ಸಮಾಲೋಚನೆ ನಡೆಸಲಾಗುವುದು' ಎಂದು ವಿವರಣೆ ನೀಡಿದರು.

`ಪ್ರತಿಮೆ ಸ್ಥಳಾಂತರ ಮಾಡಿಕೊಟ್ಟರೆ, ಆ ಭಾಗದಲ್ಲಿ ಆಗಬೇಕಿರುವ ಕಾಮಗಾರಿಗಳನ್ನು 6 ವಾರಗಳಲ್ಲಿ (ಒಂದೂವರೆ ತಿಂಗಳು) ಪೂರ್ಣಗೊಳಿಸಬಹುದು. ಬಂಡೆ ಒಡೆಯುವ ಕಾಮಗಾರಿ ಸೇರಿದಂತೆ ಕೆಲವು ಕಾರ್ಯಗಳು ಅಲ್ಲಿ ಆಗಬೇಕಿವೆ' ಎಂದು ಬಿಎಂಆರ್‌ಸಿಎಲ್ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.

ದಲಿತ ಸಂಘಟನೆಗಳ ಪರ ಹಾಜರಾದ ವಕೀಲ ಎ.ಕೆ. ಸುಬ್ಬಯ್ಯ, ಸರ್ಕಾರ ನೀಡಿದ ವಿವರಣೆಗೆ ಸಮ್ಮತಿ ಸೂಚಿಸಿದರು.

ಹಿನ್ನೆಲೆ: ಅಮರನಾಥನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹಿಂದಿನ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ, `ಪ್ರತಿಮೆಯನ್ನು 15 ದಿನಗಳಲ್ಲಿ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಬೇಕು' ಎಂದು ಡಿಸೆಂಬರ್ 12ರಂದು ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಕೆಲವು ದಲಿತ ಸಂಘಟನೆಗಳು ಮಧ್ಯಂತರ ಅರ್ಜಿ ಸಲ್ಲಿಸಿದ್ದವು.

ಈ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ವಿಭಾಗೀಯ ನ್ಯಾಯಪೀಠ, ಪ್ರತಿಮೆಯ ಸುರಕ್ಷತೆ ಕುರಿತು ತೀವ್ರ ಕಳಕಳಿ ವ್ಯಕ್ತಪಡಿಸಿತ್ತು. `ಅಂಬೇಡ್ಕರ್ ಪ್ರತಿಮೆಯನ್ನು ಈಗ ಕ್ರೇನ್ ಒಂದಕ್ಕೆ ತೂಗುಹಾಕಿದಂತೆ ಇಡಲಾಗಿದೆ.

ಇದು ಅಂಬೇಡ್ಕರ್‌ರಂಥ ಮೇರು ನಾಯಕನಿಗೆ ಮಾಡುವ ಅವಮಾನ' ಎಂದೂ ಹೇಳಿತ್ತು. ಮೆಟ್ರೊ ಕಾಮಗಾರಿಯ ಕಾರಣ ಪ್ರತಿಮೆಯ ತಳಪಾಯ 22 ಸೆಂಟಿ ಮೀಟರ್‌ಗಳಷ್ಟು ಕುಸಿದಿರುವ ಸಂಗತಿಯನ್ನು ಬಿಎಂಆರ್‌ಸಿಎಲ್ ಇತ್ತೀಚೆಗೆ ಬಹಿರಂಗಪಡಿಸಿತ್ತು.

ನಿಗಾ ವಹಿಸಿ
`ಸ್ಥಳಾಂತರದ ವೇಳೆ ಪ್ರತಿಮೆಗೆ ಯಾವುದೇ ಧಕ್ಕೆ ಆಗದಂತೆ ನಿಗಾ ವಹಿಸಬೇಕು. ಸ್ಥಳಾಂತರಿಸುವ ಜವಾಬ್ದಾರಿಯನ್ನು ಸರ್ಕಾರ ಮತ್ತು ಬಿಎಂಆರ್‌ಸಿಎಲ್ ವಹಿಸಿಕೊಳ್ಳಬೇಕು'.
-ಹೈಕೋರ್ಟ್ ಪೀಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT