ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಷ್ಠಿತ ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಕಲಿಯುವ ಆಸೆ

Last Updated 20 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಸಾಧನೆಯ ಹಾದಿಯಲ್ಲಿ ಅಂಗವೈಕಲ್ಯಗಳು ಅಡ್ಡಿಯಾಗಲಾರವು. ಸಾಧನೆಗೆ ಬೇಕಿರುವುದು ದೃಢ ಮನಸ್ಸು ಹಾಗೂ ಛಲ ಎಂಬ ಮಾತು ಹಲವಾರು ಬಾರಿ ಸಾಬೀತಾಗಿದೆ. ಉದಾಹರಣೆಗೆ ಕಳೆದ ಬಾರಿ ಕರ್ನಾಟಕ ವಿಶ್ವವಿದ್ಯಾಲಯ ನಡೆಸಿದ ಪದವಿ ಪರೀಕ್ಷೆಗಳಲ್ಲಿ ಬಿ.ಎ. ಪದವಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದು, ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಕಾಲೇಜಿನ ವಿದ್ಯಾರ್ಥಿ ಮಲ್ಲಪ್ಪ ಬಂಡಿ. ಹುಟ್ಟು ಅಂಧನಾದ ಈ ಯುವಕ ತನ್ನ ಅದಮ್ಯ ಮನೋಸ್ಥೈರ್ಯ ಹಾಗೂ ನಿರಂತರ ಪ್ರಯತ್ನದಿಂದ ಶೇ 91.16 ಅಂಕ ಗಳಿಸಿ 5 ಚಿನ್ನದ ಪದಕ ಹಾಗೂ ಐದು ನಗದು ಪಾರಿತೋಷಕಗಳ ಒಡೆಯನಾದ.

ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಮುಳುಗಡೆ ಹೊಂದಿದ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಹೆರಕಲ್ಲ ಈತನ ಸ್ವಂತ ಊರು. ಇದೇ 22ರಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆಯಲಿದ್ದಾನೆ.

ಅಂಥದೇ ಇನ್ನೊಂದು ಮಾದರಿ ನಮ್ಮ ಮುಂದಿದೆ. ಈಚೆಗೆ ನಡೆದ ಬೆಂಗಳೂರು ವಿಶ್ವವಿದ್ಯಾಲಯದ 46ನೇ ಘಟಿಕೋತ್ಸವದಲ್ಲಿ, ಕಣ್ಣಿದ್ದ ಇತರ ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಬಿ.ಕಾಂ. ವಿಭಾಗದಲ್ಲಿ ನಾಲ್ಕು ಚಿನ್ನದ ಪದಕ ಪಡೆದು ಸಾಧನೆ ಗೈದವರು ಬೆಂಗಳೂರಿನ ಹನುಮಂತನಗರದ ಬ್ಯಾಂಕ್ ಕಾಲೋನಿ ನಿವಾಸಿ, ಸ್ವಾತಿ ಟಿ.ಪಿ. ಬಿಎಂಎಸ್ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯಾದ ಇವರು 2004ರಲ್ಲಿ ದೃಷ್ಟಿ ಸಾಮರ್ಥ್ಯ ಕಳೆದುಕೊಂಡಾಗ ಐಸಿಎಸ್‌ಸಿ ಪಠ್ಯಕ್ರಮದಲ್ಲಿ 10ನೇ ತರಗತಿ ಓದುತ್ತಿದ್ದರು. ಇನ್ನೇನು ಪರೀಕ್ಷೆ ಬಂತು ಎಂಬಷ್ಟರಲ್ಲಿಯೇ ತಮ್ಮ ದೃಷ್ಟಿ ಸಾಮರ್ಥ್ಯವನ್ನು ಭಾಗಶಃ ಕಳೆದುಕೊಂಡರು.

ಆದರೆ ಜೀವನವನ್ನು ಅರ್ಥಪೂರ್ಣವಾಗಿ ಕಳೆಯಲು ನಿರ್ಧರಿಸಿದ ಸ್ವಾತಿ, ಓದನ್ನು ಮುಂದುವರೆಸಿ 2005ರಲ್ಲಿ ಬಾಹ್ಯ ಅಭ್ಯರ್ಥಿಯಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಶೇ93.44 ಅಂಕ ಗಳಿಸಿದರು. ಪಿಯುಸಿಯಲ್ಲೂ  ಶೇ91.33 ಅಂಕದೊಂದಿಗೆ ರ್ಯಾಂಕ್ ಪಡೆದು ನಂತರ ಬಿ.ಕಾಂ. ಸೇರಿದ್ದರು.

ಬಿ.ಕಾಂ.ನಲ್ಲಿ ಸರಾಸರಿ ಶೇ 88 ಅಂಕಗಳಿಸುವ ಮೂಲಕ ನಾಲ್ಕು ಚಿನ್ನ ಹಾಗೂ 2 ನಗದು ಬಹುಮಾನ ಪಡೆದು ಬಿ.ಕಾಂ.ನಲ್ಲಿ ಇಡೀ ವಿ.ವಿ.ಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಅವರು ‘ಪ್ರಜಾವಾಣಿ’ ಜತೆ ತಮ್ಮ ಸಂತಸ, ನಡೆದುಬಂದ ಹಾದಿ, ಎದುರಿಸಿದ ಸವಾಲುಗಳು ಹಾಗೂ ಮುಂದಿನ ಕನಸುಗಳನ್ನು ಹಂಚಿಕೊಂಡಿದ್ದಾರೆ.

* ದೃಷ್ಟಿಹೀನತೆಯ ಸಮಸ್ಯೆಯನ್ನು ಹೇಗೆ ಎದುರಿಸಿದಿರಿ?
ವೈದ್ಯಕೀಯ ಚಿಕಿತ್ಸೆಯ ನಿರ್ಲಕ್ಷ್ಯದಿಂದಾಗಿ ಕೇವಲ 72 ಗಂಟೆಗಳಲ್ಲಿ ನಾನು ದೃಷ್ಟಿ ಕಳೆದುಕೊಂಡಿದ್ದೆ. ಆಗಲೇ ಜೀವನವನ್ನು ಸವಾಲಾಗಿ ಸ್ವೀಕರಿಸಿ ಅರ್ಥಪೂರ್ಣವಾಗಿ ಬದುಕಬೇಕು ಎಂದು ನಿರ್ಧರಿಸಿದೆ. ‘ಎಲ್ಲಿ ಛಲ ಇದೆಯೋ ಅಲ್ಲಿ ದಾರಿಯಿದೆ’ ಎಂಬ ಗಾದೆಯನ್ನು ನೆನಪಿಸಿಕೊಂಡು ಬದುಕುವುದಕ್ಕೆ ಮುಂದಾದೆ.ಇದಕ್ಕೆ ನನ್ನ ಕುಟುಂಬದ ಸಂಪೂರ್ಣ ಬೆಂಬಲವೂ ಸಿಕ್ಕಿತು.

* ನಿಮ್ಮ ಮುಂದೆ ಎದುರಾದ ಸವಾಲುಗಳೇನು?
ದೃಷ್ಟಿ ಇರುವ ವ್ಯಕ್ತಿಗೆ ಒಮ್ಮಿಂದೊಮ್ಮೆಗೆ ಅದು ಇಲ್ಲವಾದಾಗ ಯಾವ ರೀತಿಯ ಸಮಸ್ಯೆಗಳು ಎದುರಾಗುತ್ತವೆಯೋ ಅಂಥವು ನನಗೂ ಎದುರಾದವು. ನಾನು ಇಷ್ಟಪಟ್ಟು ಆಡುತ್ತಿದ್ದ ಥ್ರೋಬಾಲ್ ಆಡಲಾಗಲಿಲ್ಲ. ಆದರೆ ಇದರಿಂದ ಎದೆಗುಂದಲಿಲ್ಲ. ದೃಷ್ಟಿಯಿಲ್ಲದೆಯೂ ಭಾಗವಹಿಸಬಹುದಾದ ಚರ್ಚಾ ಸ್ಪರ್ಧೆ, ಭಾಷಣ ಸ್ಪರ್ಧೆ ಸೇರಿದಂತೆ ಹಲವು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದೆ. ನ್ಯಾಕ್ ತಂಡ ನಮ್ಮ ಕಾಲೇಜಿಗೆ ಭೇಟಿ ನೀಡಿದಾಗ ಸಾಂಸ್ಕೃತಿಕ ಸಮಿತಿಯ ಸಂಚಾಲಕಳಾಗಿದ್ದೆ. ಅವರು ನನ್ನ ಪ್ರತಿಭೆಯನ್ನು ಮೆಚ್ಚಿಕೊಂಡದ್ದು ಸಂತಸ ತಂದಿತ್ತು.

* ಕಾಲೇಜಿಗೆ ಹೇಗೆ ಹೋಗುತ್ತಿದ್ದಿರಿ?
ನಮ್ಮ ತಂದೆ ಕಾಲೇಜಿಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಎಷ್ಟೋ ಸಂದರ್ಭಗಳಲ್ಲಿ ಹನುಮಂತನಗರದ ಬ್ಯಾಂಕ್ ಕಾಲೋನಿ ಮನೆಯಿಂದ ಜಯನಗರದ 2ನೇ ಬ್ಲಾಕ್‌ನಲ್ಲಿರುವ ಬಿಎಂಎಸ್ ಮಹಿಳಾ ಕಾಲೇಜಿಗೆ ಬಿಎಂಟಿಸಿ ಬಸ್‌ನಲ್ಲೇ ಪ್ರಯಾಣ ಮಾಡುತ್ತಿದ್ದೆ. ಬಸ್ ಎಲ್ಲಿಗೆ ಹೋಗುತ್ತದೆ ಎಂದು ಅಕ್ಕಪಕ್ಕದವರನ್ನು ಅಥವಾ ಕಂಡಕ್ಟರ್‌ನನ್ನು ಕೇಳಿ ಹತ್ತುತ್ತಿದ್ದೆ. ವಾಪಸ್ ಬರುವಾಗಲೂ ಅಷ್ಟೇ.

* ಕಾಲೇಜು ವಾತಾವರಣದ ಬಗ್ಗೆ ಹೇಳಿ.
ನನ್ನ ಅಂಧತ್ವವನ್ನು ಹೇಳಿಕೊಂಡು ಯಾವ ಮೀಸಲಾತಿ, ವಿಶೇಷ ಸೌಕರ್ಯವನ್ನೂ ಪಡೆಯುವ ಆಸಕ್ತಿ ಇಲ್ಲದಿದ್ದರಿಂದ ಸಾಮಾನ್ಯ ವಿದ್ಯಾರ್ಥಿಗಳಂತೆಯೇ ಕ್ಲಾಸ್‌ಗೆ ಹೋಗ್ತಿದ್ದೆ. ಎಷ್ಟೊ ತಿಂಗಳ ತನಕ ನಮ್ಮ ಉಪನ್ಯಾಸಕರಿಗೆ ನನಗೆ ದೃಷ್ಟಿ ದೋಷ ಇದೆಯೆಂಬುದೇ ಗೊತ್ತಿರಲಿಲ್ಲ. ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಸೂಕ್ತವಾಗಿ ಮಾರ್ಗದರ್ಶನ ನೀಡಿದರು.

* ಬಿ.ಕಾಂ. ಕಷ್ಟ ಎನಿಸಲಿಲ್ಲವೇ?
ಮೊದಲಿನಿಂದಲೂ ಅಕೌಂಟ್ಸ್ ಬಗ್ಗೆ ಆಸಕ್ತಿ ಇತ್ತು. ಅಲ್ಲದೇ ಸಾಫ್ಟವೇರ್ ಒಂದರ ಸಹಾಯದಿಂದ ಕಂಪ್ಯೂಟರ್‌ನಲ್ಲಿ ಸಂಗ್ರಹಿಸಲಾದ ಪಠ್ಯಪುಸ್ತಕಗಳನ್ನು ಕೇಳುವಿಕೆಯ ಮೂಲಕ ಅಧ್ಯಯನ ಮಾಡುತ್ತಿದ್ದೆ. ಕಾಲೇಜಿನಲ್ಲಿ ಪಾಠ ಮಾಡದಿದ್ದರೂ ರಾಮಕೃಷ್ಣ ಎಂಬುವವರು ನನ್ನ ಗುರು ಸ್ಥಾನ ತುಂಬಿ ಮಾರ್ಗದರ್ಶನ ನೀಡಿದರು. ನನ್ನ ಗೆಳತಿಯರಾದ ಸಂಧ್ಯಾ ಹಾಗೂ ಶಾಲಿನಿಯ ಸಹಾಯ ಸಿಕ್ಕಿತು. ಅವರೊಂದಿಗೆ ಸಮೂಹ ಚರ್ಚೆಗಳನ್ನು ಮಾಡುತ್ತಿದ್ದೆ.

* ನಿಮ್ಮ ಸ್ಫೂರ್ತಿ?
ನಾನು ಅಧ್ಯಾತ್ಮದಲ್ಲಿ ನಂಬಿಕೆ ಇಟ್ಟವಳು. ಹಾಗೆಯೇ ಸ್ವಾಮಿ ವಿವೇಕಾನಂದ ಹಾಗೂ ಗುರುಮಾತಮ್ಮ ಅವರನ್ನು ನನ್ನ ಸ್ಫೂರ್ತಿ ಎಂದು ನಂಬಿದ್ದೇನೆ. ಹಾಗಾಗಿ ಅವರೇ ನನಗೆ ಮಾರ್ಗದರ್ಶಕರು.

* ನಿಮ್ಮ ಮುಂದಿನ ಯೋಜನೆ ಏನು?
ದೇಶದ ಪ್ರತಿಷ್ಠಿತ ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಅಧ್ಯಯನ ಮಾಡುವ ಆಸೆ ಇದೆ. ಅರ್ಜಿ ಹಾಕುವ ತಯಾರಿ ನಡೆಸಿದ್ದೇನೆ. ಅಂಗವೈಕಲ್ಯ ಇದ್ದ ಮಾತ್ರಕ್ಕೆ ಇಡೀ ಜೀವನ ಮುಗಿದಂತಲ್ಲ. ನನ್ನ ಜೀವನವನ್ನು ಇನ್ನಷ್ಟು ಅರ್ಥಪೂರ್ಣಗೊಳಿಸುವತ್ತ ಮುನ್ನಡೆಯುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT