ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತೇಕ ಪ್ರಕರಣ: ಭಾರತೀಯ ವಿದ್ಯಾರ್ಥಿ ಚಿಂತಾಜನಕ

Last Updated 11 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಲಂಡನ್/ ಸಿಂಗಪುರ (ಪಿಟಿಐ): ವಿದೇಶಗಳಲ್ಲಿ ಭಾರತೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಲಂಡನ್ ಹಾಗೂ ಸಿಂಗಪುರದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ವಿದ್ಯಾರ್ಥಿಯೊಬ್ಬರು ಹಲ್ಲೆಗೊಳಗಾಗಿ ಚಿಂತಾಜನಕ ಸ್ಥಿತಿದರೆ, ಮತ್ತೊಬ್ಬರು ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದಾರೆ.

ಲಂಡನ್‌ನ ನ್ಯೂವಾಮ್ ಪ್ರಾಂತ್ಯದಲ್ಲಿ ಶುಕ್ರವಾರ ರಾತ್ರಿ ದುಷ್ಕರ್ಮಿಗಳಿಂದ ಇರಿತಕ್ಕೊಳಗಾದ ಎಂಬಿಎ ವಿದ್ಯಾರ್ಥಿ ಪ್ರವೀಣ್ ರೆಡ್ಡಿ (28) ಇದೀಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿಯನ್ನು ಬಂಧಿಸಲಾಗಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಕಳೆದ ಎರಡು ತಿಂಗಳಿನಲ್ಲಿ ದೇಶದಲ್ಲಿ ಭಾರತೀಯರ ಮೇಲೆ ನಡೆದ ನಾಲ್ಕನೆಯ ಹಲ್ಲೆ ಪ್ರಕರಣ ಇದಾಗಿದೆ.
ಪ್ರವೀಣ್ ಮೈಮೇಲೆ ಚಾಕುವಿನಿಂದ ಇರಿದ ಗಾಯಗಳಾಗಿದ್ದು, ನ್ಯೂವಾಮ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸ್ ಹೇಳಿಕೆ ತಿಳಿಸಿದೆ. ಇದು ಜನಾಂಗೀಯ ಪ್ರೇರಿತ ಪ್ರಕರಣವೇ ಎನ್ನುವುದು ಇನ್ನೂ ತಿಳಿದುಬಂದಿಲ್ಲ.

ಸಿಂಗಪುರ ವರದಿ: ಇಲ್ಲಿನ ಮೇಲ್ಸೇತುವೆಯೊಂದರ ಬಳಿ ಭಾರತೀಯ ಪ್ರಜೆಯ ಮೃತ ದೇಹ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ತಮಿಳುನಾಡಿನ ತಿರುಚಿನಾಪಳ್ಳಿಯ ರಾಜು ಅರಿವಳಗನ್ (32) ಎಂದು ಗುರುತಿಸಲಾಗಿದೆ.
ಕಳೆದ ಆರು ವರ್ಷಗಳಿಂದ ಇಲ್ಲಿ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿಕೊಂಡಿದ್ದ ಇವರು, ಕೆಲವು ದಿನಗಳಿಂದ ನಾಪತ್ತೆಯಾಗಿದ್ದರು. ಶುಕ್ರವಾರ ರಾಜು ಅವರ ಮೃತದೇಹವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಎಸ್.ಎಂ. ಕೃಷ್ಣ ಭರವಸೆ
 

ಲಂಡನ್‌ನಲ್ಲಿರುವ ಹೈ ಕಮಿಷನರ್ ರಾಜೇಶ್ ಪ್ರಸಾದ್ ಅವರೊಂದಿಗೆ ಮಾತನಾಡಿರುವ ವಿದೇಶಾಂಗ ವ್ಯವಹಾರ ಸಚಿವ ಎಸ್.ಎಂ. ಕೃಷ್ಣ, ಪ್ರವೀಣ್ ಅವರಿಗೆ ಎಲ್ಲ ರೀತಿಯ ನೆರವು ನೀಡುವಂತೆ ಸೂಚಿಸಿದ್ದಾರೆ.
ಪ್ರವೀಣ್ ತಂದೆ, ಆಂಧ್ರ ಪ್ರದೇಶ ಮೂಲದ ಉದ್ಯಮಿ ಸುಧಾಕರ ರೆಡ್ಡಿ ಅವರೊಂದಿಗೂ ಮಾತನಾಡಿರುವ ಸಚಿವರು, ವೀಸಾ ಪಡೆಯುವಲ್ಲಿ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT