ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಅಪಘಾತ: ನಾಲ್ವರ ಸಾವು

Last Updated 9 ಅಕ್ಟೋಬರ್ 2011, 20:25 IST
ಅಕ್ಷರ ಗಾತ್ರ

ಕುಣಿಗಲ್/ ಗುಬ್ಬಿ: ಕುಣಿಗಲ್ ಹಾಗೂ ಗುಬ್ಬಿ ತಾಲ್ಲೂಕುಗಳಲ್ಲಿ ಶನಿವಾರ ರಾತ್ರಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಬೆಂಗಳೂರಿನ ನಾಲ್ವರು ಮೃತಪಟ್ಟಿದ್ದಾರೆ.

ಕುಣಿಗಲ್ ತಾಲ್ಲೂಕಿನ ಅಮೃತೂರು ಪೊಲೀಸ್ ಠಾಣೆ  ವ್ಯಾಪ್ತಿಯ ಶಾಂತಿಸಾಗರ್ ಹೋಟೆಲ್ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಬೆಂಗಳೂರಿನಿಂದ ಚನ್ನರಾಯಪಟ್ಟಣಕ್ಕೆ ತೆರಳುತ್ತಿದ್ದ ಇಂಡಿಕಾ ಕಾರು  ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದು ರಾಕೇಶ್ (24) ಮೃತಪಟ್ಟಿದ್ದಾರೆ. ಇವರು ಬೆಂಗಳೂರಿನ ಖಾಸಗಿ ಕಂಪೆನಿಯ ವಾಹನ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದು, ಚನ್ನರಾಯಪಟ್ಟಣ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಘಟನೆಯಲ್ಲಿ ಅಂಚೇಪಾಳ್ಯ ಗ್ರಾಮದ ಬಳಿ ಮಾರುತಿ ಓಮ್ನಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಬೆಂಗಳೂರು ಆಚಾರ್ಯ ಪಾಠಶಾಲೆ ಉಪನ್ಯಾಸಕ ನಾರಾಯಣಸ್ವಾಮಿ (40) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ನಾರಾಯಣಸ್ವಾಮಿ ಕುಟುಂಬದವರು ಹೊರನಾಡು ಪ್ರವಾಸ ಮುಗಿಸಿ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ.

ಸುಮೊ ಉರುಳಿ ಇಬ್ಬರ ಸಾವು:
ಗುಬ್ಬಿ ತಾಲ್ಲೂಕಿ ಬಾಗೂರು ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ- 206ರಲ್ಲಿ ಟಾಟಾ ಸುಮೊ ಉರುಳಿ ಇಬ್ಬರು ಸಾವನ್ನಪ್ಪಿದ್ದಾರೆ.

ಚಾಲಕ ರಂಜಿತ್‌ಕುಮಾರ್ (22), ವಾಹನ ಮಾಲೀಕ ಗಂಗಾಧರ್ (29) ಮೃತಪಟ್ಟವರು. ಇವರು ಬೆಂಗಳೂರಿನ ಹೆಬ್ಬಾಳ ನಿವಾಸಿಗಳು. ಗಂಗಾಧರ್ ತಮ್ಮ ಕುಟುಂಬ ಸದಸ್ಯರೊಂದಿಗೆ ಮುರ್ಡೇಶ್ವರ ದೇವಾಲಯಕ್ಕೆ ಪ್ರವಾಸ ತೆರಳುತ್ತಿದ್ದರು.

ಆಟೊ ಚಾಲಕನ ಮೇಲೆ ದುಷ್ಕರ್ಮಿಗಳ ಹಲ್ಲೆ
ಆಟೊ ಚಾಲಕನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಹೆಣ್ಣೂರು ಸಮೀಪ ಶನಿವಾರ ರಾತ್ರಿ ನಡೆದಿದೆ.

ಎಚ್.ಬಿ.ಆರ್ ಲೇಔಟ್ ನಿವಾಸಿ ರವಿಕುಮಾರ್ (28) ಕೊಲೆಯಾದವರು. ಆಟೊ ಚಾಲಕರಾಗಿದ್ದ ಅವರಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾತ್ರಿ ಊಟ ಮಾಡಿದ ನಂತರ ಮನೆಯ ಸಮೀಪವೇ ವಾಯುವಿಹಾರಕ್ಕೆ ಹೋಗಿದ್ದ ಅವರ ತಲೆ ಮತ್ತು ಮುಖಕ್ಕೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ಸಂಬಂಧ ರವಿಕುಮಾರ್ ಅವರ ಸಹೋದರಿ ಇಂದಿರಾ ಅವರು ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹೆಣ್ಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವಿಗೆ ಯತ್ನ
ಸರ್ಜಾಪುರ ರಸ್ತೆಯ ಗುಂಜೂರು ಬಳಿ ಇರುವ ವಿಜಯಾ ಬ್ಯಾಂಕ್ ಶಾಖೆ ಕಚೇರಿಯ ಗೋಡೆಗೆ ದುಷ್ಕರ್ಮಿಗಳು ಕನ್ನ ಕೊರೆದು ಒಳ ನುಗ್ಗಿ ಹಣ ಕಳವು ಮಾಡಲು ಯತ್ನಿಸಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

 ಈ ಸಂಬಂಧ ಶಾಖೆಯ ವ್ಯವಸ್ಥಾಪಕ ಶರಣ್ ಅವರು ದೂರು ಕೊಟ್ಟಿದ್ದಾರೆ. ಬ್ಯಾಂಕ್‌ನ ಕಂಪ್ಯೂಟರ್ ಒಂದನ್ನು ಕಿಡಿಗೇಡಿಗಳು ಕಳವು ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಬ್ಯಾಂಕ್‌ನ ಹಿಂಭಾಗದ ಗೋಡೆಗೆ ಕನ್ನ ಕೊರೆದು ಒಳ ನುಗ್ಗಿರುವ ದುಷ್ಕರ್ಮಿಗಳು ಭದ್ರತಾ ಕೊಠಡಿ ಮತ್ತು ಲಾಕರ್‌ನಲ್ಲಿದ್ದ ಹಣವನ್ನು ದೋಚಲು ಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗಿಲ್ಲ. ಆ ನಂತರ ಕಂಪ್ಯೂಟರ್ ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಬ್ಯಾಂಕ್‌ನ ಒಳ ಭಾಗದಲ್ಲಿ ಅಳವಡಿಸಿದ್ದ ಸಿ.ಸಿ ಟಿವಿ ಕ್ಯಾಮೆರಾದ ರೆಕಾರ್ಡರ್ ಅನ್ನು ದುಷ್ಕರ್ಮಿಗಳು ಕಿತ್ತು ಹಾಕಿದ್ದಾರೆ. ಬ್ಯಾಂಕ್‌ಗೆ ಭದ್ರತಾ ಸಿಬ್ಬಂದಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವರ್ತೂರು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಬೆಟ್ಟಿಂಗ್ ದಂಧೆ: ಬಂಧನ
ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು 2.10 ಲಕ್ಷ ನಗದು, ಲ್ಯಾಪ್‌ಟಾಪ್ ವಶಪಡಿಸಿಕೊಂಡಿದ್ದಾರೆ.

ನಗರ್ತಪೇಟೆಯ ಸುರೇಶ್ (39) ಮತ್ತು ಕಬ್ಬನ್‌ಪೇಟೆಯ ಗೌತಮ್‌ಕುಮಾರ್ (36) ಬಂಧಿತರು.

ಆರೋಪಿಗಳಿಂದ ಲ್ಯಾಪ್‌ಟಾಪ್, ಟಿ.ವಿ, ಆರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯಗಳ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ ಅವರನ್ನು ಬಂಧಿಸಲಾಯಿತು. ಪ್ರಕರಣದ ಮತ್ತೊಬ್ಬ ಆರೋಪಿ ಹರೀಶ್ ಎಂಬಾತ ಪರಾರಿಯಾಗಿದ್ದಾನೆ. ಬಂಧಿತರ ವಿರುದ್ಧ ಹಲಸೂರುಗೇಟ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸಿಸಿಬಿ ಎಸಿಪಿ ಬಿ.ಎನ್.ನ್ಯಾಮಗೌಡ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಹಣಕ್ಕಾಗಿ ಒತ್ತಾಯ: ಹಲ್ಲೆ
ರಸ್ತೆ ಬದಿ ವ್ಯಾಪಾರಿಗಳಿಗೆ ಹಣ ಕೊಡುವಂತೆ ಪೀಡಿಸಿದ ವ್ಯಕ್ತಿಯೊಬ್ಬ ಅವರು ಹಣ ಕೊಡಲು ನಿರಾಕರಿಸಿದಾಗ ತನ್ನ ಸಹಚರರೊಂದಿಗೆ ಸೇರಿಕೊಂಡು ಬ್ಯಾಗ್ ಮಾರಾಟಗಾರ ಶಕೀಲ್ ಬಾಷಾ (17) ಎಂಬುವರಿಗೆ ಕೋಲಿನಿಂದ ಹೊಡೆದು ಗಾಯಗೊಳಿಸಿದ ಘಟನೆ ಭಾನುವಾರ ಸಂಜೆ ನಗರದ ಅವೆನ್ಯೂ ರಸ್ತೆಯಲ್ಲಿ ನಡೆದಿದೆ.

ಶಿವಾಜಿ (45) ಎಂಬಾತ ಈ ದುಂಡಾವರ್ತನೆ ತೋರಿದ ವ್ಯಕ್ತಿ. ಈತನ ವಿರುದ್ಧ ಹಣಕ್ಕಾಗಿ ಪೀಡಿಸಿದ ಆರೋಪಗಳಿದ್ದು, ಈ ಕುರಿತಂತೆ ಪ್ರಕರಣಗಳೂ ಸಿಟಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ತನ್ನ ಬಳಿ ಹಣವಿಲ್ಲದಾಗ ವ್ಯಾಪಾರಿಗಳಿಂದ ಒತ್ತಾಯದಿಂದ ಹಣ ಪಡೆಯುತ್ತಿದ್ದ. ಈತನ ಬಗ್ಗೆ ಅರಿವಿದ್ದ ವ್ಯಾಪಾರಿಗಳು ಹಣ ಕೊಡಲು ನಿರಾಕರಿಸಿದ್ದು ಶಿವಾಜಿಯ ಸಿಟ್ಟಿಗೆ ಕಾರಣವಾಗಿದೆ. ತಕ್ಷಣವೇ ಶಿವಾಜಿ ವ್ಯಾಪಾರಿಗಳೊಂದಿಗೆ ಘರ್ಷಣೆಗೆ ಇಳಿದಿದ್ದಾನೆ. ಈ ಸಂದರ್ಭದಲ್ಲಿ ಶಕೀಲ್‌ಗೆ ಹೊಡೆದಿದ್ದರಿಂದ ಗಾಯಗೊಂಡರು. ತಕ್ಷಣ ಅವರನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ನಂತರ ಶಕೀಲ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವಕನ ಆತ್ಮಹತ್ಯೆ
 ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜಪೇಟೆಯ ಅಪ್ಪುರಾವ್ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಅಪ್ಪುರಾವ್ ರಸ್ತೆ ನಿವಾಸಿ ಅಹಮ್ಮದ್ ಆರೀಫ್ (24) ಆತ್ಮಹತ್ಯೆ ಮಾಡಿಕೊಂಡವರು. ಅವರು ಎಂ.ಜಿ.ರಸ್ತೆಯ ಜಾಹೀರಾತು ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅವರ ಪೋಷಕರು ಕೆಲ ದಿನಗಳ ಹಿಂದೆ ಮುಂಬೈಗೆ ಹೋಗಿದ್ದರು. ಅಹಮ್ಮದ್ ಮತ್ತು ಅವರ ಸಹೋದರ ಸೈಯದ್ ಆಸೀಫ್ ಅವರು ಮಾತ್ರ ಮನೆಯಲ್ಲಿದ್ದರು. ರಾತ್ರಿ ಊಟ ಮಾಡಿದ ನಂತರ ಅಹಮ್ಮದ್ ಅವರು ಮಲಗುವ ಕೋಣೆಗೆ ತೆರಳಿ ಅಲ್ಲಿಯೇ ನೇಣು ಹಾಕಿಕೊಂಡಿದ್ದಾರೆ. ಭಾನುವಾರ ಮಧ್ಯಾಹ್ನ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಅವರ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಶವವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಸೋಮವಾರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೆಂಪೇಗೌಡನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಮನೆಯ ಬಾಗಿಲು ಮುರಿದು ಕಳವು
ಮನೆಯ ಮುಂಬಾಗಿಲು ಮುರಿದು ಒಳ ನುಗ್ಗಿದ ದುಷ್ಕರ್ಮಿಗಳು ನಗದು, ಚಿನ್ನಾಭರಣ ಮತ್ತು ಬೆಳ್ಳಿ ಆಭರಣಗಳು ಸೇರಿದಂತೆ ಸುಮಾರು 25 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ಬಸವೇಶ್ವರನಗರದ ಕಿರ್ಲೋಸ್ಕರ್ ಲೇಔಟ್‌ನಲ್ಲಿ ನಡೆದಿದೆ.

ಈ ಸಂಬಂಧ ಕಿರ್ಲೋಸ್ಕರ್ ಲೇಔಟ್ ಎರಡನೇ ಅಡ್ಡರಸ್ತೆ ನಿವಾಸಿ ಜಗದೀಶ್ ಎಂಬುವರ ದೂರು ಕೊಟ್ಟಿದ್ದಾರೆ. ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಅವರು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸದಸ್ಯರೊಂದಿಗೆ ಅ.6ರಂದು ತಮಿಳುನಾಡಿಗೆ ಹೋಗಿದ್ದರು. ಕಿಡಿಗೇಡಿಗಳು ಈ ಸಂದರ್ಭವನ್ನು ನೋಡಿಕೊಂಡು ಅವರ ಮನೆಗೆ ನುಗ್ಗಿ ಕಳವು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಗದೀಶ್ ಅವರು ಭಾನುವಾರ ಬೆಳಿಗ್ಗೆ ಮನೆಗೆ ಬಂದಾಗ ಕಳವು ನಡೆದಿರುವುದು ಗೊತ್ತಾಗಿದೆ. ದುಷ್ಕರ್ಮಿಗಳು 899 ಗ್ರಾಂ ಚಿನ್ನಾಭರಣ, 930 ಗ್ರಾಂ ಬೆಳ್ಳಿ ಆಭರಣಗಳು, ಒಂದು ಲಕ್ಷ ನಗದು ಮತ್ತು ಒಂದು ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಹಣ ಕಳವು ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಬಸವೇಶ್ವರನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT