ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಅಪಘಾತ: ಮೂವರ ಬಲಿ

Last Updated 1 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ನಗರದ ಹಲವೆಡೆ ಶನಿವಾರ ರಾತ್ರಿ ಸಂಭವಿಸಿರುವ ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ಹೊಸ ವರ್ಷ ಆಚರಿಸಲು ಬೈಕ್‌ನಲ್ಲಿ ಸ್ನೇಹಿತರ ಮನೆಗೆ ಹೋಗುತ್ತಿದ್ದ ಯುವಕನಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಸಾವನ್ನಪ್ಪಿರುವ ದಾರುಣ ಘಟನೆ ಹಳೆ ಮದ್ರಾಸ್ ರಸ್ತೆಯಲ್ಲಿ ನಡೆದಿದೆ.

ಮರ್ಫಿ ಟೌನ್ ನಿವಾಸಿ ವಿನೋದ್‌ಕುಮಾರ್ (24) ಮೃತಪಟ್ಟವರು. ಕಾರು ಚಾಲಕರಾಗಿದ್ದ ಅವರು ಹೊಸ ವರ್ಷ ಆಚರಿಸಲು ಸ್ನೇಹಿತರ ಜತೆ ಬೈಕ್‌ನಲ್ಲಿ ಭದ್ರಪ್ಪಲೇಔಟ್‌ನ ಮತ್ತೊಬ್ಬ ಸ್ನೇಹಿತನ ಮನೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಹಳೇ ಮದ್ರಾಸ್ ರಸ್ತೆಯಲ್ಲಿ ಅವರ ಬೈಕ್‌ಗೆ ಕಾರೊಂದು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ರಾತ್ರಿ ಎರಡು ಗಂಟೆ ಸುಮಾರಿಗೆ ಅವರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ವಿನೋದ್‌ಕುಮಾರ್ ಪಾನಮತ್ತರಾಗಿದ್ದರು ಎಂಬ ಅಂಶ ಮರಣೋತ್ತರ ಪರೀಕ್ಷೆ ವೇಳೆ ಗೊತ್ತಾಗಿದೆ. ಅವರ ಜತೆ ಬೈಕ್‌ನಲ್ಲಿ ಕುಳಿತಿದ್ದ ಸ್ನೇಹಿತ ದೊರೈ ಎಂಬುವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಹಲಸೂರು ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆರ್.ಟಿ.ನಗರ: ಬಳ್ಳಾರಿ ರಸ್ತೆಯ ಸಂಜಯನಗರ ಕ್ರಾಸ್ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಚಂದ್ರು (33) ಎಂಬುವರು ಮೃತಪಟ್ಟಿದ್ದಾರೆ.

ನಾಗಶೆಟ್ಟಿಹಳ್ಳಿ ನಿವಾಸಿಯಾದ ಅವರು ಹೋಟೆಲ್ ಒಂದರಲ್ಲಿ ಅಡುಗೆ ಭಟ್ಟರಾಗಿದ್ದರು. ರಾತ್ರಿ ಕೆಲಸ ಮುಗಿದ ನಂತರ ಅವರು ಹೋಟೆಲ್‌ನಿಂದ ಮನೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ಸಂಜಯನಗರ ಕ್ರಾಸ್ ಬಳಿ ರಸ್ತೆ ದಾಟುತ್ತಿದ್ದ ಅವರಿಗೆ ವಾಹನವೊಂದು ಡಿಕ್ಕಿ ಹೊಡೆದಿದೆ. ತಲೆಗೆ ತೀವ್ರ ಪೆಟ್ಟಾಗಿ ಅಸ್ವಸ್ಥಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಾಹನದ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆರ್.ಟಿ.ನಗರ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಎಂ.ಶ್ರೀನಿವಾಸ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ದಾಖಲಾಗಿದೆ.

ಚಿಕ್ಕಜಾಲ: ಪಾನಮತ್ತನಾಗಿ ಬೈಕ್ ಚಾಲನೆ ಮಾಡುತ್ತಿದ್ದ ಯುವಕನೊಬ್ಬ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೋರಿಗೆ ಬಿದ್ದು ಮೃತಪಟ್ಟಿರುವ ಘಟನೆ ವಿದ್ಯಾನಗರ ಕ್ರಾಸ್ ಬಳಿ ನಡೆದಿದೆ.

ವಿದ್ಯಾನಗರ ಕ್ರಾಸ್ ನಿವಾಸಿ ಮಲ್ಲಿಕಾರ್ಜುನ್ (25) ಮೃತಪಟ್ಟವರು, ಅವರು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಬಳಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಾದಹಳ್ಳಿಯಲ್ಲಿ ಸ್ನೇಹಿತರೊಂದಿಗೆ ಹೊಸ ವರ್ಷಾಚರಣೆ ಆಚರಿಸಿದ್ದ ಅವರು ಮದ್ಯಪಾನ ಮಾಡಿದ್ದರು. ಆ ನಂತರ ಅವರು ಬೈಕ್‌ನಲ್ಲಿ ಮನೆಗೆ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಮೋರಿಗೆ ಬಿದ್ದಿದ್ದರು. ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವವಾಗಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.

ಸ್ಥಳೀಯರು ಈ ಬಗ್ಗೆ ಠಾಣೆಗೆ ಭಾನುವಾರ ಬೆಳಿಗ್ಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅವರು ಸಾವನ್ನಪ್ಪಿರುವುದು ಗೊತ್ತಾಯಿತು ಎಂದು ಪೊಲೀಸರು ಹೇಳಿದ್ದಾರೆ. ಚಿಕ್ಕಜಾಲ ಸಂಚಾರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT