ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಅಪಘಾತ: ಮೂವರ ಸಾವು

Last Updated 13 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಮೈಕೊಲೇಔಟ್, ಅಶೋಕನಗರ ಮತ್ತು ಯಶವಂತಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಮೂರು ಮಂದಿ ಮೃತಪಟ್ಟಿದ್ದಾರೆ.

ಲಾಂಗ್‌ಫೋರ್ಡ್ ರಸ್ತೆಯ ನಂಜಪ್ಪ ವೃತ್ತದ ಬಳಿ ಸಂಭವಿಸಿದ ಅಪಘಾತದಲ್ಲಿ ಕೇರಳ ಮೂಲದ ಜಸ್ಟಿನ್ (32) ಎಂಬುವರು ಸಾವನ್ನಪ್ಪಿದ್ದಾರೆ.

ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ನೀಲಸಂದ್ರ ಸಮೀಪದ ಆನೆಪಾಳ್ಯದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಜಸ್ಟಿನ್ ಅವರು ಖಾಸಗಿ ಕಂಪೆನಿಯಲ್ಲಿ ವೆಬ್ ಡಿಸೈನರ್ ಆಗಿದ್ದರು.

ಅವರು ಬೈಕ್‌ನಲ್ಲಿ ಮನೆಗೆ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆ ಬದಿಯ ಪಾದಚಾರಿ ಮಾರ್ಗಕ್ಕೆ ವಾಹನ ಗುದ್ದಿಸಿದ್ದಾರೆ. ಇದರಿಂದಾಗಿ ಅಡ್ಡಾದಿಡ್ಡಿ ಚಲಿಸಿದ ಬೈಕ್ ಪಾದಚಾರಿ ಮಾರ್ಗದ ಪಕ್ಕದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ತಲೆಗೆ ತೀವ್ರ ಪೆಟ್ಟಾಗಿ ಅಸ್ವಸ್ಥಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಸ್ವಲ್ಪ ಸಮಯದಲ್ಲೇ ಅವರು ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.

ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಜಸ್ಟಿನ್ ಅವರು ಹೆಲ್ಮೆಟ್ ಧರಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಶೋಕನಗರ ಸಂಚಾರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಮತ್ತೊಂದು ಪ್ರಕರಣ: ಬಿಟಿಎಂ ಲೇಔಟ್ ನಾಲ್ಕನೇ ಹಂತದ ವರ್ತುಲ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಅರಕೆರೆ ನಿವಾಸಿ ರವಿಕುಮಾರ್ (19) ಎಂಬುವರು ಸಾವನ್ನಪ್ಪಿದ್ದಾರೆ.

ರವಿಕುಮಾರ್ ಖಾಸಗಿ ಶಾಲೆಯೊಂದರ ವಾಹನದಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ಅವರು ಅಣ್ಣ ಶಶಿಕಿರಣ್ ಜತೆ ಬೈಕ್‌ನಲ್ಲಿ ಮನೆಗೆ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಬೈಕ್ ಚಾಲನೆ ಮಾಡುತ್ತಿದ್ದ ಶಶಿಕಿರಣ್, ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ವಾಹನ ಗುದ್ದಿಸಿದ್ದಾರೆ. ಈ ಸಂದರ್ಭದಲ್ಲಿ ಬೈಕ್‌ನಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡ ರವಿಕುಮಾರ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಶಶಿಕಿರಣ್‌ಗೂ ಸಣ್ಣಪುಟ್ಟ ಗಾಯಗಳಾಗಿವೆ. ಅವರು ಖಾಸಗಿ ಆಸ್ಪತ್ರೆಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೈಕೊಲೇಔಟ್ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.

ಯಶವಂತಪುರ: ಮತ್ತೀಕೆರೆಯ ಚೌಡೇಶ್ವರಿ ಬಸ್ ನಿಲ್ದಾಣದ ಬಳಿ ಬೈಕ್ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಸಾವನ್ನಪ್ಪಿರುವ ವ್ಯಕ್ತಿಯ ವಯಸ್ಸು ಸುಮಾರು 35 ವರ್ಷ. ಆದರೆ, ಅವರ ಗುರುತು ಪತ್ತೆಯಾಗಿಲ್ಲ. ಅವರು ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಯಶವಂತಪುರ ಸಂಚಾರ ಠಾಣೆ ಪೊಲೀಸರು ಬೈಕ್ ಸವಾರ ಅನ್ಸರ್ ಖಾನ್ ಎಂಬಾತನನ್ನು ಬಂಧಿಸಿ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT