ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಅಪಘಾತ : ವಿದ್ಯಾರ್ಥಿ ಸೇರಿ ಇಬ್ಬರ ಸಾವು

Last Updated 20 ಜನವರಿ 2012, 19:50 IST
ಅಕ್ಷರ ಗಾತ್ರ

ಬೆಂಗಳೂರು:  ನಗರದ ನಾಯಂಡಹಳ್ಳಿ ಜಂಕ್ಷನ್ ಸಮೀಪ ಶುಕ್ರವಾರ ಬೆಳಿಗ್ಗೆ ನಡೆದ ಸರಣಿ ಅಪಘಾತ ಮತ್ತು ದೇವನಹಳ್ಳಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ಅಪಘಾತದಲ್ಲಿ ವಿದ್ಯಾರ್ಥಿ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.

ಅತಿ ವೇಗವಾಗಿ ವಾಹನ ಚಾಲನೆ ಮಾಡಿದ ಲಾರಿ ಚಾಲಕ ಬೈಕ್, ಎಂಟು ಕಾರು ಮತ್ತು ಜೀಪಿಗೆ ಡಿಕ್ಕಿ ಹೊಡೆದಾಗ ಸಂಭವಿಸಿದ ಸರಣಿ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ದಾರುಣ ಘಟನೆ ನಾಯಂಡಹಳ್ಳಿ ಜಂಕ್ಷನ್ ಬಳಿ ಇರುವ ಬಿಡಿಎ ಅಂಡರ್‌ಪಾಸ್‌ನಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.

ರಾಜರಾಜೇಶ್ವರಿನಗರದ ಬಿಇಎಂಎಲ್ ಲೇಔಟ್‌ನ ನಿವಾಸಿಯಾಗಿದ್ದ ಬ್ರಹ್ಮೇಶ್ ಕುಮಾರ್ (49) ಮೃತಪಟ್ಟವರು. ಗುತ್ತಿಗೆದಾರರಾಗಿದ್ದ ಅವರು ಕೆಲಸದ ನಿಮಿತ್ತ ಬೆಳಿಗ್ಗೆ ವಿಜಯನಗರಕ್ಕೆ ಹೋಗಿದ್ದರು. ಅಲ್ಲಿಂದ ಮನೆಗೆ ಬೆಳಿಗ್ಗೆ 9.45ರ ಸುಮಾರಿಗೆ ವಾಪಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೈಸೂರು ರಸ್ತೆಯಲ್ಲಿ ಕೆಂಪು ಸಿಗ್ನಲ್ ಬಿದ್ದಿದ್ದರಿಂದ ವಾಹನಗಳು ಅಂಡರ್‌ಪಾಸ್ ಒಳಗೆ ಸಾಲುಗಟ್ಟಿ ನಿಂತಿದ್ದವು. ಸಿಮೆಂಟ್ ಚೀಲಗಳನ್ನು ತುಂಬಿಕೊಂಡು ಮೈಸೂರು ರಸ್ತೆ ಕಡೆ ಬರುತ್ತಿದ್ದ ಲಾರಿ ಚಾಲಕ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡು ಮೊದಲು ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಆ ನಂತರ ಒಟ್ಟು ಎಂಟು ಕಾರು ಮತ್ತು ಜೀಪಿಗೆ ಡಿಕ್ಕಿ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಬ್ರಹ್ಮೇಶ್ ಕುಮಾರ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯವ ಮಾರ್ಗ ಮಧ್ಯೆ ಸಾವನ್ನಪ್ಪಿದರು. 

ಎಲ್ಲ ಕಾರುಗಳೂ ಜಖಂ ಆಗಿದ್ದು, ಜೀಪಿನ ಚಾಲಕ ಮುರುಗನ್ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದ ಹಿನ್ನೆಲೆಯಲ್ಲಿ ಸಂಚಾರಕ್ಕೆ ಕೆಲ ಕಾಲ ತೊಂದರೆ ಆಗಿತ್ತು. ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿದ ಬ್ಯಾಟರಾಯನಪುರ ಸಂಚಾರ ಠಾಣೆ ಪೊಲೀಸರು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಲಾರಿ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಡಿಎ ನಿರ್ಲಕ್ಷ್ಯ: ಸುಮಾರು ಮುನ್ನೂರು ಅಡಿ ಉದ್ದದ ಅಂಡರ್‌ಪಾಸ್ ಇದಾಗಿದ್ದು ಒಳಗೆ ಕತ್ತಲೆ ಆವರಿಸಿರುತ್ತದೆ. ಹಾಗಾಗಿ  ಅಂಡರ್‌ಪಾಸ್ ಪ್ರವೇಶಿಸುವ ವಾಹನ ಸವಾರರಿಗೆ ವಾಹನಗಳಿರುವುದು ಕಾಣುವುದಿಲ್ಲ. ವಾಸ್ತವವಾಗಿ ಇಲ್ಲಿ ಪ್ರಕಾಶಮಾನ ದೀಪಗಳನ್ನು ಹಾಕಬೇಕು. ಆದರೆ ಹಾಕಿಲ್ಲ. ಬಿಡಿಎ ದೀಪಗಳನ್ನು ಹಾಕಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಬಿಡಿಎ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT