ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಕೃಷಿ ಬಜೆಟ್; ರೈತನ ಮೂಗಿಗೆ ತುಪ್ಪ

Last Updated 15 ಫೆಬ್ರುವರಿ 2011, 16:10 IST
ಅಕ್ಷರ ಗಾತ್ರ

ಮುಖ್ಯಮಂತ್ರಿ ಯಡಿಯೂರಪ್ಪನವರು ‘ಪ್ರತ್ಯೇಕ ಕೃಷಿ ಬಜೆಟ್’ ಮಂಡನೆಯ ಸಿದ್ಧತೆಯಲ್ಲಿದ್ದಾರೆ. ಈ ಮೂಲಕ ದಶಕಗಳಿಂದ ಕೃಷಿ ಬಜೆಟ್‌ಗಾಗಿ ಒತ್ತಾಯಿಸುತ್ತಿದ್ದ ರೈತಸಂಘದಿಂದ ಆ ಮಾತನ್ನು ಕಿತ್ತುಕೊಂಡು ಮೂಕರನ್ನಾಗಿಸಿಬಿಟ್ಟಿದ್ದಾರೆ. ಅವರ ಪ್ರಕಾರ ಕೃಷಿ ಬಜೆಟ್ ಎಂದರೆ ಕೃಷಿಯ ಬಗ್ಗೆಯೇ ವಿಶೇಷ ಕಾಳಜಿಯುಳ್ಳ ಪ್ರತ್ಯೇಕ ಬಜೆಟ್. ಆದರೆ, ಈ ಹಿಂದೆಯೂ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಯ ಬಗ್ಗೆ ಪ್ರತ್ಯೇಕ ಬಜೆಟ್ ಹಾಗೂ ಸ್ತ್ರೀ ಅಸಮಾನತೆಯನ್ನು ಕಡಿಮೆ ಮಾಡುವ ಜೆಂಡರ್ ಬಜೆಟ್‌ಗಳನ್ನು ಮಂಡಿಸುವ ಪ್ರಯತ್ನಗಳು ನಡೆದಿದ್ದವು.

ಈ ವಿಶೇಷ ಬಜೆಟ್‌ಗಳು ಆಯಾ ವರ್ಗಗಳ ಸಮಸ್ಯೆಗಳನ್ನು ಮತ್ತು ಪರಿಹಾರಗಳನ್ನು ಗ್ರಹಿಸುವ, ಅದನ್ನು ನಿವಾರಿಸಲು ಬೇಕಾದ ಯೋಜನೆಯನ್ನು ರೂಪಿಸುವ, ಅದನ್ನು ಮಂಜೂರು ಮಾಡಿ ಅನುಷ್ಠಾನಗೊಳಿಸುವ, ಅದರ ಉಸ್ತುವಾರಿಯನ್ನು ನೋಡಿಕೊಳ್ಳುವ ಮತ್ತು ನಂತರದಲ್ಲಿ ಈ ಯೋಜನೆಗಳ ಫಲಿತಾಂಶಗಳನ್ನು ವಿಶ್ಲೇಷಿಸಿ ಮರು ರೂಪಿಸು ಮೂಲಕ ಪರಿಣಾಮಕಾರಿಯಾಗುವುದು.
ಹೀಗಾಗಿ ಕೃಷಿ ಸಮಸ್ಯೆಗಳನ್ನು ಮತ್ತು ಅದಕ್ಕೆ ಪರಿಹಾರವನ್ನು ಬಿಜೆಪಿ ಸರ್ಕಾರ ಹೇಗೆ ಪರಿಭಾವಿಸಿಕೊಂಡಿದೆ ಎಂಬುದನ್ನು ವಿಶ್ಲೇಷಿಸಿದಾಗ ಮಾತ್ರ ಕೃಷಿ ಬಜೆಟ್‌ನ ಅಸಲಿ ಏನೆಂದು ಗೊತ್ತಾಗುತ್ತದೆಯೇ ಹೊರತು ಕೃಷಿಗೆ ಎಷ್ಟು ಹಣ ಒದಗಿಸಿದೆ

ಎಂಬುದರಿಂದಲೋ ಅಥವಾ ಕೃಷಿ ಬಜೆಟ್ ಮಂಡಿಸುವ ಮೂಲಕ ಅಲ್ಲ. ಒಂದು ವೇಳೆ, ಹೋದ ವರ್ಷ 72,000 ಕೋಟಿ ರೂಪಾಯಿಗಳಷ್ಟಿದ್ದ ನಮ್ಮ ಬಜೆಟ್‌ನ ಗಾತ್ರ ಇನ್ನೂ 30,000 ಕೋಟಿಗಳಷ್ಟು ಹೆಚ್ಚಿ ಒಂದು ಲಕ್ಷ ಕೋಟಿ ರೂಪಾಯಿಗಳಾಗುತ್ತದೆ ಎಂದು ತಿಳಿದುಕೊಂಡರೂ, ಹಣ ಸಂಗ್ರಹಕ್ಕೆ ಅದಕ್ಕಿರುವುದು ಪ್ರಧಾನವಾಗಿ ಇರುವುದು ನಾಲ್ಕು ಮಾರ್ಗಗಳು. ರಾಜ್ಯದ ರಾಜಸ್ವ ಮೂಲಗಳಾದ ವಾಣಿಜ್ಯ ತೆರಿಗೆ, ಮೋಟಾರು ವಾಹನ ತೆರಿಗೆ, ಅಬಕಾರಿ ತೆರಿಗೆ, ಸ್ಟಾಂಪ್ ಡ್ಯೂಟಿಗಳ ಹೆಚ್ಚಳ. ಇದು ಪರೋಕ್ಷ ತೆರಿಗೆಯಾದ್ದರಿಂದ ಅದರ ಅಂತಿಮ ಹೊರೆ ಬೀಳುವುದು ರೈತರ ಮೇಲೆ!

ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ ಯೋಜನೆಗಳನ್ನು ರೂಪಿಸಬೇಕೆಂಬ ವಿಶ್ವಬ್ಯಾಂಕ್ ಸಲಹೆಯನ್ನು ಇಂದಿನ ಬಿಜೆಪಿ, ಅಂದಿನ ಕಾಂಗ್ರೆಸ್- ಎಲ್ಲವೂ ಚಾಚೂ ತಪ್ಪದೆ ಅನುಸರಿಸುತ್ತಿವೆ. ಯಡಿಯೂರಪ್ಪನವರ ಸರ್ಕಾರವಂತೂ ಒಂದೆಡೆ ಕೃಷಿ ಬಜೆಟ್‌ನ  ಭರವಸೆಗಳನ್ನು ನೀಡುತ್ತಿರುವ ಮರುಕ್ಷಣದಲ್ಲೇ ಕೃಷಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ 50,000 ಕೋಟಿ ಖಾಸಗಿ ಬಂಡವಾಳವನ್ನು ಹೂಡಲಾಗುವುದೆಂದೂ, ಅದಕ್ಕಾಗಿ ಬರುವ ಜೂನ್‌ನಲ್ಲಿ ಕೃಷಿ ಕ್ಷೇತ್ರದಲ್ಲಿನ ವಿಶ್ವ ಬಂಡವಾಳಿಗರ ಸಮ್ಮೇಳನವನ್ನು ನಡೆಸುವುದಾಗಿಯೂ ಘೋಷಿಸಿದೆ. ಹಾಗೂ ಆ ನಿಟ್ಟಿನಲ್ಲಿ ಈಗಾಗಲೇ ಸಣ್ಣ ಮತ್ತು ಅತಿ ಸಣ್ಣ ರೈತರಿಂದ ವಶಪಡಿಸಿಕೊಂಡಿರುವ 1.75 ಲಕ್ಷ ಎಕರೆಯ ಜೊತೆಜೊತೆಗೆ ಇನ್ನೂ ಒಂದು ಲಕ್ಷ ಎಕರೆ ವಶಪಡಿಸಿಕೊಳ್ಳುವುದಾಗಿ ಘೋಷಿಸಿದ್ದಾರೆ, ಮುಖ್ಯಮಂತ್ರಿಗಳು. 

ಇದು ರೈತ ಸಮಸ್ಯೆಗಳ ಬಗ್ಗೆ ಬಿಜೆಪಿ ಸರ್ಕಾರದ ಪರಿಹಾರ ನೀತಿಗಳು. ಇವು ಯಾವುದೂ ಬದಲಾಗದೆ ಬಿಜೆಪಿ ಕೃಷಿ ಬಜೆಟ್ ಸಿದ್ಧತೆಯಲ್ಲಿರುವುದು ಸತ್ತ ರೈತನ ಮೂಗಿಗೂ ತುಪ್ಪ ಸವರುವಂತಿದೆ. ಈ ವಿಷಯದಲ್ಲಿ ಬಿಜೆಪಿ ಭಿನ್ನವಲ್ಲ, ಕಾಂಗ್ರೆಸ್ ಜೆಡಿಎಸ್‌ಗಳೂ ಭಿನ್ನವಲ್ಲ. ಏಕೆಂದರೆ ದೇಶದ ಅಭಿವೃದ್ಧಿಯ ಬಗ್ಗೆ ಈ ಪಕ್ಷಗಳು ಕಾಣುತ್ತಿರುವ ಕನಸುಗಳು ಮತ್ತು ಕಾಂಚಾಣ ಎರಡೂ ವಿಶ್ವಬ್ಯಾಂಕಿನಿಂದ ಕಿರಾಯಿಗೆ ತಂದವುಗಳೇ ಆಗಿವೆ!

ವಿಶ್ವಬ್ಯಾಂಕಿನ ಆದೇಶದ ಮೇರೆಗೆ 2002ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ Karnataka Fiscal Responsibility Act  ಎಂಬ ಕಾಯ್ದೆಯನ್ನು ಜಾರಿಗೆ ತಂದಿದೆ. ಅದರ ಪ್ರಕಾರ ಸರ್ಕಾರ ಬಜೆಟ್ ಮಂಡಿಸುವಾಗ ಸರ್ಕಾರ ಕೊಡುತ್ತಿರುವ ಸೇವೆ-ಸರಕುಗಳನ್ನು ಉಚಿತವಾಗಿಯಲ್ಲದೆ ಲಾಭದ ಬೆಲೆಗೆ ಮಾರಬೇಕು, ಕೃಷಿ ಮಾರುಕಟ್ಟೆ, ನೀರಾವರಿ, ಬೀಜ ಮಾರುಕಟ್ಟೆ, ಗೊಬ್ಬರ, ಸಾಲ, ಬೆಳೆ ಖರೀದಿ ಎಲ್ಲದರಲ್ಲೂ ಕಾರ್ಪೊರೆಟ್ ಬಂಡವಾಳಿಗರಿಗೆ ಅವಕಾಶ ಮಾಡಿಕೊಡಬೇಕು. ಈ ವಿಶ್ವಬ್ಯಾಂಕ್ ನಿರ್ದೇಶಿತ ಶಾಸನದ ಭಾಗವಾಗಿ ರೈತರಿಗೆ ದಕ್ಕಬೇಕಿದ್ದ ಎಲ್ಲಾ ಸೌಲಭ್ಯಗಳನ್ನು ಹಿಂತೆಗೆದುಕೊಳ್ಳಲಾಗುತ್ತಿದೆ.

ಆದ್ದರಿಂದಲೇ ಯಡಿಯೂರಪ್ಪನವರ ಕೃಷಿ ಬಜೆಟ್ ನಿಜಕ್ಕೂ ರೈತರ ಪರವೇ ಎಂದು ನಿರ್ಧಾರವಾಗಲು ಅದು: Karnataka Fiscal Responsibility Act ಕಾಯ್ದೆಗೆ ಬದ್ಧವಾಗಿರುವುದಿಲ್ಲ ಎಂದು ಘೋಷಿಸಿರಬೇಕು. ಬಜೆಟ್‌ನಲ್ಲಿ ಘೋಷಿತವಾಗುವ ಹಣದ ಸಂಗ್ರಹವನ್ನು ಶ್ರೀಮಂತರ ಮೇಲಿನ ತೆರಿಗೆಯಿಂದ  ತುಂಬಿಕೊಳ್ಳಬೇಕೇ ವಿನಃ ಜನರ ಮೇಲೆ ತೆರಿಗೆ ಹೆಚ್ಚಿಸುವುದರಿಂದಲ್ಲ. ಘೋಷಿತ ಯೋಜನೆಗಳಿಗೆ ಸೂಕ್ತ ಬಜೆಟ್ ಬೆಂಬಲವಿರಬೇಕು. ಮತ್ತು ಆ ಯೋಜನೆಗಳು ಕಾರ್ಪೊರೆಟ್ ಸರಕುಗಳಿಗೆ ರೈತನನ್ನು ಗ್ರಾಹಕನನ್ನಾಗಿ ಮಾಡುವಂತಿರಬಾರದು. ಮತ್ತು ಕೃಷಿ ಸಾಲ, ಭೂಹಿಡುವಳಿ, ನೀರಾವರಿ, ಉತ್ಪನ್ನ ಮಾರಾಟ ವ್ಯವಸ್ಥೆ, ಬೀಜ ಮಾರುಕಟ್ಟೆ ಇವುಗಳ ಅಭಿವೃದ್ಧಿ ಯೋಜನೆಗಳು ಖಾಸಗಿ-ಸರ್ಕಾರಿ ಪಾಲುದಾರಿಕೆಯ ಮಾದರಿಯಲ್ಲಿ ಕೃಷಿ  ದೈತ್ಯ ಕಂಪೆನಿಗಳ ಪಾಲಾಗದೆ ಸರ್ಕಾರ ಅಥವಾ ಸಹಕಾರಿ ಮಾದರಿಯಲ್ಲಿ ಯೋಜಿತವಾಗಬೇಕು.

ಇದು ಬಜೆಟ್ ರೈತಪರವಾಗಲು ಪೂರ್ವ ಷರತ್ತು. ಹಾಗಾಗದೆ ಬಜೆಟ್‌ಗೆ ಪ್ರೊ.ನಂಜುಂಡಸ್ವಾಮಿಯವರ ಹೆಸರಿಟ್ಟೇ ಜಾರಿಗೆ ತಂದರೂ ಅದು ರೈತರನ್ನು ತೀವ್ರಗತಿಯಲ್ಲಿ ಆತ್ಮಹತ್ಯೆಗೆ ದೂಡುವ ಬಜೆಟ್ಟೇ ಆಗಿರುತ್ತದೆ. ಪ್ರೊಫೆಸರರ ಗರಡಿಯಲ್ಲಿ ತಯಾರಾದ ರೈತಸಂಘಕ್ಕೆ ಬಿಜೆಪಿಯ ಈ ಹುನ್ನಾರಗಳು ಅರ್ಥವಾಗದಿರುವುದು ವಿಷಾದಕರ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT