ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ತರಬೇತಿ ಕೇಂದ್ರ ಸ್ಥಾಪಿಸಲು ಆಗ್ರಹ

Last Updated 10 ಜುಲೈ 2013, 10:38 IST
ಅಕ್ಷರ ಗಾತ್ರ

ಶಿವಮೊಗ್ಗ: ಪ್ರಸಕ್ತ ವರ್ಷ ಸಿಇಟಿ ಮುಂದುವರಿಯುವುದೋ ಅಥವಾ ಎನ್‌ಇಇಟಿ (ನೀಟ್) ಪರೀಕ್ಷೆ ಕಾಯಂ ಆಗುವುದೋ ಎಂಬ ನಿರ್ಧಾರ ಪ್ರಕಟ ಆಗಬೇಕು. ವಿದ್ಯಾರ್ಥಿಗಳು ಹೆಚ್ಚು ಇರುವ ಕಾಲೇಜುಗಳಿಗೆ ಐಸಿಟಿ ಯೋಜನೆಯಲ್ಲಿ ನೀಡಿರುವ ಕಂಪ್ಯೂಟರ್‌ಗಳನ್ನು ಹೆಚ್ಚು ಮಾಡಬೇಕು. ಪಿಯು ಸಿಬ್ಬಂದಿಗೆ ಪ್ರತ್ಯೇಕ ಪುನಶ್ಚೇತನ ತರಬೇತಿ ಕೇಂದ್ರ ಆರಂಭಿಸಬೇಕು ಎಂದು ಜಿಲ್ಲೆಯ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರಿಗೆ ಮನವಿ ಮಾಡಿದರು.

ತಾಲ್ಲೂಕಿನ ಜಾವಳ್ಳಿಯ ಅರಬಿಂದೋ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರೊಂದಿಗೆ ಚರ್ಚೆ ನಡೆಸಿದರು.

ಜಿಲ್ಲಾ ಪಿಯು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಉಮೇಶ್ ಮಾತನಾಡಿ, ಪಿಯು ಸಿಬ್ಬಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ತರಬೇತಿ ನೀಡಲಾಗುತ್ತಿದೆ. ಆದರೆ, ಅದು ಯಶಸ್ವಿ ಆಗುತ್ತಿಲ್ಲ. ಆದ್ದರಿಂದ ಪದವಿಪೂರ್ವ ಶಿಕ್ಷಣ ಇಲಾಖೆಗಾಗಿಯೇ ಪ್ರತ್ಯೇಕ ತರಬೇತಿ ಸಂಸ್ಥೆ ಸ್ಥಾಪಿಸಬೇಕು. ಶೈಕ್ಷಣಿಕ ಮತ್ತು ಆಡಳಿತ ಎರಡೂ ಕ್ಷೇತ್ರಗಳಲ್ಲಿ ತರಬೇತಿ ನೀಡಬೇಕು ಎಂದರು.

ಆದಿಚುಂಚನಗಿರಿ ಕಾಲೇಜು ಪ್ರಾಂಶುಪಾಲ ಗುರುರಾಜ್ ಮಾತನಾಡಿ, ಪಿಯು ಮರು ಮೌಲ್ಯಮಾಪನ ವ್ಯವಸ್ಥೆಯಲ್ಲಿರುವ ಪ್ಯಾರಾ ಮೀಟರ್ ವ್ಯವಸ್ಥೆ ಬದಲಾಗಬೇಕು. ಎಸ್ಸೆಸ್ಸೆಲ್ಸಿ ಪತ್ರಿಕೆಗಳ ಮರುಮೌಲ್ಯಮಾಪನದಲ್ಲಿ 1ಅಂಕ ಹೆಚ್ಚು ಬಂದರೂ ನೀಡಲಾಗುತ್ತದೆ.

ಆದರೆ, ಪಿಯುಸಿಯಲ್ಲಿ 6 ಮತ್ತು 6ಕ್ಕಿಂತಲೂ ಹೆಚ್ಚು ಅಂಕ ಬಂದರೆ ಮಾತ್ರ ಅಂಕಗಳನ್ನು ನೀಡಲಾಗುತ್ತದೆ. ಒಂದು ವೇಳೆ 95 ಅಂಕ ಪಡೆದ ವಿದ್ಯಾರ್ಥಿಗೆ ಮರುಮೌಲ್ಯಮಾಪನದಲ್ಲಿ ನೂರಕ್ಕೆ ನೂರು ಅಂಕಗಳು ಸಿಕ್ಕರೂ ಅವು ಗಣನೆಗೆ ಬರುವುದಿಲ್ಲ. ಇದು ವಿದ್ಯಾರ್ಥಿಗಳಿಗೆ ಸಿಇಟಿ ರ‍್ಯಾಂಕಿಂಗ್‌ಗೆ ತೊಂದರೆ ಆಗುತ್ತದೆ. ಈ ವ್ಯವಸ್ಥೆ ಬದಲಾಯಿಸಬೇಕು ಎಂದು ಸಚಿವರ ಗಮನ ಸೆಳೆದರು. 
ರಾಷ್ಟ್ರಮಟ್ಟದಲ್ಲಿ ಏಕರೂಪ ಪಠ್ಯಕ್ರಮ ಜಾರಿಗೆ ತರಲಾಗಿದೆ. ಎನ್‌ಸಿಇಆರ್‌ಟಿ ಪಠ್ಯಕ್ರಮ ಅಧಿಕೃತವಾಗಿ ಜಾರಿ ಆಗಿದೆ.

ಆದರೆ, ಸಿಬಿಎಸ್‌ಸಿ ಪಠ್ಯಕ್ರಮದಲ್ಲಿ ಓದುವವರಿಗೆ 500 ಅಂಕಗಳು ಮತ್ತು ರಾಜ್ಯ ಪಿಯು ಮಂಡಳಿಯಲ್ಲಿ ಓದುವವರಿಗೆ 600 ಅಂಕಗಳಿವೆ. ಇದು ಗೊಂದಲಕ್ಕೆ ಕಾರಣವಾಗಿದ್ದು, ಎರಡೂ ವಿಧಗಳಲ್ಲಿ ಓದುವವರಿಗೆ ಒಂದೇ ಮಾದರಿ ಜಾರಿ ಆಗಬೇಕು ಎಂದು ಅವರು ಸಲಹೆ ನೀಡಿದರು.
ಈಚೆಗೆ ಪ್ರತಿ ವರ್ಷ ಪ್ರಶ್ನೆಪತ್ರಿಕೆಗಳು ಬಯಲಾಗುತ್ತಿವೆ. ಈ ಬಗ್ಗೆ ಜಾಗೃತಿ ವಹಿಸಬೇಕು ಹಾಗೂ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಐಸಿಟಿ ಯೋಜನೆಯಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಏಜೆನ್ಸಿಯೊಂದರ ಮೂಲಕ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ. ಆದರೆ ಏಜೆನ್ಸಿಯವರು ಕಂಪ್ಯೂಟರ್ ಶಿಕ್ಷಕರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ. ಅವರು ಪಾಠವನ್ನೂ ಮಾಡುತ್ತಿಲ್ಲ. ಏಜೆನ್ಸಿ ಮಾತ್ರ ಸರ್ಕಾರದ ಹಣವನ್ನೂ ಪಡೆಯುತ್ತದೆ. ಯೋಜನೆ ಅರಿಯಾಗಿ ಅನುಷ್ಠಾನ ಆಗುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಪದಾಧಿಕಾರಿಗಳು ಮನವಿ ಮಾಡಿದರು.

ಗ್ರಾಮಾಂತರ ಪ್ರದೇಶದ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗಿದೆ. ನಗರದ ಆಕರ್ಷಣೆಯಿಂದ ವಿದ್ಯಾರ್ಥಿಗಳು ನಗರಗಳಲ್ಲಿ ಇರುವ ಕಾಲೇಜುಗಳಲ್ಲಿ ದಾಖಲಾತಿ ಒತ್ತಡ ಹೆಚ್ಚಾಗಿದೆ. ಆಯಾ ಸ್ಥಳಗಳವರು ಅಲ್ಲಿಯ ಕಾಲೇಜುಗಳಿಗೆ ಪ್ರವೇಶ ಪಡೆಯುವಂತೆ ನಿಯಮಗಳನ್ನು ರೂಪಿಸಬೇಕು ಎಂದು ಶಿಕಾರಿಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರು ಹೇಳಿದರು.
ಸಂವಾದದಲ್ಲಿ ಜ್ಞಾನದೀಪ ವಿದ್ಯಾಸಂಸ್ಥೆ ಉಪಾಧ್ಯಕ್ಷ ಟಿ.ಪ್ರಕಾಶ್, ಕಾರ್ಯದರ್ಶಿ ವಿ.ದೇವೇಂದ್ರ, ಖಜಾಂಚಿ ಡಾ.ಕೆ.ಆರ್.ಶ್ರೀಧರ್ ಉಪಸ್ಥಿತರಿದ್ದರು.

`ಸಮಸ್ಯೆ ಬಗ್ಗೆ ಚರ್ಚಿಸಲು ನಿಯೋಗ ಬರಲಿ'
ಪಿಯು ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ. ಪ್ರಾಂಶುಪಾಲರ ಸಂಘದ ಪದಾಧಿಕಾರಿಗಳ ನಿಯೋಗ ಬಂದರೆ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತೇನೆ ಎಂದು ಸಚಿವ ಕಿಮ್ಮನೆ ರತ್ನಾಕರ ಭರವಸೆ ನೀಡಿದರು.

ಕೆಲ ರಾಜಕಾರಣಿಗಳು ಅಧಿಕಾರ ಸಿಕ್ಕಾಗ ವಿವೇಚನೆ ಇಲ್ಲದೆ ದಾಖಲಾತಿಯ ಪ್ರಮಾಣ ಕಡಿಮೆ ಇರುವ ಸ್ಥಳಗಳಲ್ಲೂ ಕಾಲೇಜುಗಳನ್ನು ತೆರೆದಿರುವುದರಿಂದ ಗ್ರಾಮಾಂತರ ಪ್ರದೇಶದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ ಎಂದು ದೂರಿದರು.

ಶಿಕ್ಷಣದಲ್ಲಿ ಖಾಸಗೀಕರಣ ಕಡಿಮೆ ಮಾಡುವುದು ಸರ್ಕಾರದ ಉದ್ದೇಶ. ಇದಕ್ಕೆ ನಿಯಮವೂ ಇದೆ. ಆದರೂ ವ್ಯವಸ್ಥೆಯಲ್ಲಿ ನುಸುಳಿಕೊಂಡು ಶಿಕ್ಷಣದ ಖಾಸಗೀಕರಣ ಆಗುತ್ತಿದೆ. ಸರ್ಕಾರಿ ಶಾಲಾ-ಕಾಲೇಜುಗಳ ಮೂಲಕ ಸಾರ್ವಜನಿಕರಿಗೆ ಶಿಕ್ಷಣ ನೀಡುವ ಜವಾಬ್ದಾರಿ ಸರ್ಕಾರದ್ದು ಎಂದರು.

ವಿದ್ಯಾರ್ಥಿನಿಯರ ಶುಲ್ಕದ ವಿನಾಯಿತಿ ಜತೆಗೆ ಪರಿಶಿಷ್ಟ ಜನಾಂಗಕ್ಕೆ ಸಂಬಂಧಿಸಿದ ಅನುದಾನವೂ ಕಳೆದ ಹಲವು ವರ್ಷಗಳಿಂದ ಸರ್ಕಾರ ನೀಡಿಲ್ಲ ಈ ಬಗ್ಗೆ ಹಣಕಾಸು ಇಲಾಖೆಯೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಸಿಬಿಎಸ್‌ಇ ಹಾಗೂ ಪಿಯು ಮಂಡಳಿ ಓದುವವರ ಅಂಕಗಳ ವ್ಯತ್ಯಾಸದ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಈಗಾಗಲೇ ಚರ್ಚಿಸಲಾಗಿದ್ದು, ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT