ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ನಾಡು ಬೇಡ ಕೋ.ಚೆ. ಸಲಹೆ

Last Updated 7 ಜನವರಿ 2014, 19:30 IST
ಅಕ್ಷರ ಗಾತ್ರ

ಭಾರತೀಸುತ ವೇದಿಕೆ (ಮಡಿಕೇರಿ): ‘ಸಣ್ಣ ರಾಜ್ಯಗಳಾದರೆ ಲಾಭದಾಯ­ಕ­ವಲ್ಲ. ಇದಕ್ಕಾಗಿ ಕೊಡವರು ಪ್ರತ್ಯೇಕ ನಾಡು ಕೇಳುವ ಕುರಿತು ಮರು ಆಲೋಚಿಸ­ಬೇಕು’ ಎಂದು ನಿಕಟಪೂರ್ವ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಕೋ. ಚೆನ್ನಬಸಪ್ಪ ಸಲಹೆ ನೀಡಿದರು.

ಕನ್ನಡ ಬಾವುಟವನ್ನು ಸಮ್ಮೇಳನದ ಅಧ್ಯಕ್ಷ ನಾ.ಡಿಸೋಜ ಅವರಿಗೆ ಹಸ್ತಾಂತರಿಸುವ ಮುನ್ನ ಅವರು ಮಾತನಾಡಿದರು.

‘ಪ್ರತ್ಯೇಕ ರಾಜ್ಯ ಕೇಳುವುದಕ್ಕಿಂತ ನಾವೆಲ್ಲರೂ ಒಂದಾಗಬೇಕು. ಆಗ ದೇಶದ, ನಾಡಿನ ಗಡಿಗಳ ಸಮಸ್ಯೆ ಇರುವುದಿಲ್ಲ’ ಎಂದು ಕಿವಿಮಾತು ಹೇಳಿದರು.

‘ಕನ್ನಡದ ಬಾವುಟವನ್ನು ಆಚಾರ್ಯ ಬಿ.ಎಂ. ಶ್ರೀಕಂಠಯ್ಯ ಅವರು ಕನ್ನಡದ ಸ್ವಾಭಿಮಾನ ಎಂದರು. ಇದನ್ನು ಕೈಬಿಡಬೇಡಿ. ಕೈ ಹಿಡಿದೆತ್ತಿ ಆಕಾಶದೆತ್ತರಕ್ಕೆ ಏರಿಸಿ. ಡಿ.ಎಸ್. ಕರ್ಕಿ ಅವರು ಹಚ್ಚೇವು ಕನ್ನಡದ ದೀಪ ಎಂದು ಕವಿತೆ ಕಟ್ಟಿದರು. ಕನ್ನಡದ ದೀಪ ಹಚ್ಚಿದ್ದೇವೆ. ಅದು ಇನ್ನೂ ಉಜ್ವಲವಾಗಿ ಬೆಳಗಲಿ ಎಂದು ಪ್ರಾರ್ಥಿಸುವೆ. ಕನ್ನಡಕ್ಕಾಗಿ, ಕನ್ನಡದ ಬಾವುಟಕ್ಕಾಗಿ ಅಸಂಖ್ಯರು ದುಡಿದಿದ್ದಾರೆ. ಪಂಜೆ ಮಂಗೇಶರಾಯರು ಉಸಿರು ಬಿಡುವ ಮುನ್ನ ಕನ್ನಡ ಕನ್ನಡ ಎಂದು ಹೇಳಿದ್ದರು’ ಎಂದು ಸ್ಮರಿಸಿದರು.

ಸಮ್ಮೇಳನದ ಆಶಯ: ‘ಮಡಿಕೇರಿಯಲ್ಲಿ ಸಾಹಿತ್ಯ ಸಮ್ಮೇಳನ ಆಗಬೇಕಾದ ಅಗತ್ಯವಿತ್ತು. ಗಡಿಭಾಗದಲ್ಲಿ ಕನ್ನಡಿಗರು ಅಲ್ಪ­ಸಂಖ್ಯಾತ­­ರಾಗುತ್ತಿದ್ದಾರೆ. ಅವರಿಗೆ ನೈತಿಕ ಬೆಂಬಲ ನೀಡಬೇಕಿದೆ. ಕೊಡಗಿನಲ್ಲಿ ಕನ್ನಡ ಜಾಗೃತಿಗೊಳಿಸುವುದು, ಕನ್ನಡಪ್ರಜ್ಞೆ ಬೆಳೆಸುವುದು ಸಮ್ಮೇಳನದ ಆಶಯ’ ಎಂದು ಕಸಾಪ ರಾಜ್ಯ ಘಟಕದ ಅಧ್ಯಕ್ಷ ಪುಂಡಲೀಕ ಹಾಲಂಬಿ ಹೇಳಿದರು.

‘ಸಾಹಿತ್ಯ ಹಾಗೂ ಸಂಸ್ಕೃತಿಯ ಕೇಂದ್ರ ಮಾತ್ರವಾಗಿರದ ಪರಿಷತ್ತು ಕನ್ನಡಿಗರ ಬದುಕನ್ನು ಪ್ರತಿನಿಧಿಸುತ್ತಿದೆ. ಕನ್ನಡಿಗರು ಬದುಕನ್ನು

ಕಟ್ಟಿಕೊಳ್ಳಲು ನೆರವಾಗುತ್ತಿದೆ. ಜತೆಗೆ ಆತ್ಮಸ್ಥೈರ್ಯ ತುಂಬಲು, ಭಾವೈಕ್ಯಕ್ಕೆ ಸಮ್ಮೇಳನ ಪೂರಕವಾಗಲಿದೆ’ ಎಂದು ವಿಶ್ವಾಸದಿಂದ ಹೇಳಿದರು.

‘ಸಾಹಿತ್ಯ ಹಾಗೂ ಸಂಸ್ಕೃತಿಯ ಭಾಷೆಯಾಗಿ ಕನ್ನಡ ಉಳಿಯದಿರಬಹುದು. ಇದಕ್ಕಾಗಿ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡವನ್ನು ಉಳಿಸುವ ಪ್ರಯತ್ನಗಳಾಗಬೇಕು. ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿಕೊಳ್ಳುವುದರ ಜತೆಗೆ ಸಿಇಟಿ ಪರೀಕ್ಷೆಯಲ್ಲಿ ಶೇ 50ರಷ್ಟು ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಬೇಕು. ಕನ್ನಡ ಮಾಧ್ಯಮದಲ್ಲಿ ಓದಿದ ಕನ್ನಡಿಗರಿಗೆ ಶೇ 50ರಷ್ಟು ಉದ್ಯೋಗ ಮೀಸಲಾತಿ ಸಿಗಬೇಕು’ ಎಂದು ಆಗ್ರಹಿಸಿದರು.

ಪುಸ್ತಕ ಮಳಿಗೆಗಳನ್ನು ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಉದ್ಘಾಟಿಸಿದರು. ಕನ್ನಡ ದಿನದರ್ಶಿಕೆಯನ್ನು ಗೃಹ ಸಚಿವ ಕೆ.ಜೆ. ಜಾರ್ಜ್ ಬಿಡುಗಡೆಗೊಳಿಸಿದರು. ಪರಿಷತ್ತಿನ ಪುಸ್ತಕಗಳನ್ನು ಸಾಹಿತಿ ಡಾ.ಮಳಲಿ ವಸಂತಕುಮಾರ್‌ ಬಿಡುಗಡೆ ಮಾಡಿದರು. ವಾಣಿಜ್ಯ ಮಳಿಗೆಗಳನ್ನು ಆಹಾರ ಸಚಿವ ದಿನೇಶ್‌ ಗುಂಡೂರಾವ್‌ ಉದ್ಘಾಟಿಸಿದರು. ವಿವಿಧ ಲೇಖಕರ ಪುಸ್ತಕಗಳನ್ನು ಸಂಸದ ಅಡಗೂರು ವಿಶ್ವನಾಥ್‌ ಬಿಡುಗಡೆಗೊಳಿಸಿದರು.

ಚಿತ್ರಕಲಾ ಪ್ರದರ್ಶನವನ್ನು ಶಾಸಕ ಕೆ.ಜಿ. ಬೋಪಯ್ಯ, ಕೊಡಗಿನ ಲೇಖಕರ ಪುಸ್ತಕಗಳನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌, ಮಹಾಮಂಟಪವನ್ನು ವಿಧಾನ ಪರಿಷತ್‌ ಸದಸ್ಯ ಎಂ.ಸಿ.ನಾಣಯ್ಯ, ವೇದಿಕೆಯನ್ನು ವಿಧಾನ ಪರಿಷತ್‌ ಸದಸ್ಯ ಟಿ. ಜಾನ್‌, ಮುಖ್ಯದ್ವಾರವನ್ನು ವಿಧಾನ ಪರಿಷತ್‌ ಸದಸ್ಯ ಗಣೇಶ್ ಕಾರ್ಣಿಕ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಉದ್ಘಾಟಿಸಿದರು.

ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿ ಶುಭನುಡಿ ಆಡಿದರು. ಅರಮೇರಿಯ ಕಳಂಚೇರಿಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT