ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ರಾಯಲಸೀಮಾಗಾಗಿ ಹೋರಾಟ

ಆಂಧ್ರ ವಿಭಜನೆಗೆ ವಿರೋಧ
Last Updated 4 ಜುಲೈ 2013, 19:59 IST
ಅಕ್ಷರ ಗಾತ್ರ

ಹೈದರಾಬಾದ್ (ಐಎಎನ್‌ಎಸ್): ತೆಲಂಗಾಣ ಪ್ರತೇಕ ರಾಜ್ಯದ ಬೇಡಿಕೆ ಪರಿಶೀಲನೆ ಅಂತಿಮ ಹಂತದಲ್ಲಿದೆ ಎಂಬ ಸುಳಿವು ದೊರೆತ ಬೆನ್ನಲ್ಲೇ ಆಂಧ್ರಪ್ರದೇಶ ವಿಭಜನೆ ವಿರೋಧಿಸಿ ರಾಯಲಸೀಮಾ ಪ್ರದೇಶದಲ್ಲಿ ಪ್ರತಿಭಟನೆಗಳು ಆರಂಭವಾಗಿವೆ.

ಸಮಖ್ಯ ಆಂಧ್ರ ಜಂಟಿ ಕ್ರಿಯಾ ಸಮಿತಿ  ನೇತೃತ್ವದಲ್ಲಿ ಗುರುವಾರ ಕಡಪಾ, ಅನಂತಪುರ ಜಿಲ್ಲೆಗಳಲ್ಲಿ ಭಾರಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಆಂಧ್ರ ಪ್ರದೇಶ ವಿಭಜನೆಗೆ ವಿರೋಧ ವ್ಯಕ್ತವಾಗಿದೆ.

ಕಡಪಾ ಜಿಲ್ಲೆಯಲ್ಲಿ ಬೀದಿಗಿಳಿದ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಯಾವುದೇ ಕಾರಣಕ್ಕೂ ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಗೆ ಅವಕಾಶ ನೀಡುವುದಿಲ್ಲ ಎಂದು ಘೋಷಣೆ ಕೂಗಿದರು.

ಪ್ರತ್ಯೇಕ ರಾಯಲಸೀಮಾ ರಾಜ್ಯಕ್ಕೆ ಒತ್ತಾಯಿಸಿ ರಾಯಲಸೀಮಾ ಪರಿರಕ್ಷಣಾ ಸಮಿತಿ (ಆರ್‌ಪಿಸಿ) ಸಂಸ್ಥಾಪಕ ಬೈರೆಡ್ಡಿ ರಾಜಶೇಖರ್ ಹೈದರಾಬಾದ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ತೆಲಂಗಾಣವನ್ನು ನಮ್ಮ ರಾಜ್ಯವೆಂದು ಒಪ್ಪಲು ಸಾಧ್ಯವಿಲ್ಲ. ಹೀಗಾಗಿ ತೆಲಂಗಾಣವನ್ನು ಪ್ರತ್ಯೇಕ ರಾಜ್ಯವೆಂದು ಘೋಷಿಸುವುದಾದರೆ, ರಾಯಲಸೀಮಾ ಪ್ರದೇಶವನ್ನೂ ಪ್ರತ್ಯೇಕ ರಾಜ್ಯ ಎಂದು ಘೋಷಿಸಬೇಕು ಎಂದು ಅವರು ಬೇಡಿಕೆ ಮುಂದಿಟ್ಟಿದ್ದಾರೆ.

ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸಿರುವ ತೆಲಂಗಾಣ ಜಂಟಿ ಕ್ರಿಯಾ ಸಮಿತಿ (ಜೆಎಸಿ) ನವದೆಹಲಿಯಲ್ಲಿ ಹಲವು ಸುತ್ತಿನ ದುಂಡು ಮೇಜಿನ ಸಭೆ ನಡೆಸಿದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ರಾಜಕೀಯ ಪಕ್ಷಗಳ ಬೆಂಬಲ ಪಡೆಯುವ ಹಿನ್ನೆಲೆಯಲ್ಲಿ ಅದು ಸಭೆಗಳನ್ನು ನಡೆಸುತ್ತಿದೆ. ಒಟ್ಟಾರೆ ರಾಜ್ಯದಲ್ಲಿ ಪರ-ವಿರೋಧ ಧ್ವನಿಗಳು ಬಲಗೊಳ್ಳತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT