ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕತೆ ಬೇಡ

Last Updated 2 ಜನವರಿ 2012, 19:30 IST
ಅಕ್ಷರ ಗಾತ್ರ

ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸೀಮಿತವಾಗಿದ್ದ ಮಧ್ಯಾಹ್ನದ ಬಿಸಿ ಊಟದ ಯೋಜನೆಯನ್ನು ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ವರ್ಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಖಾಸಗಿ ಶಾಲೆಗಳಿಗೂ ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಹದಿನೇಳು ವರ್ಷಗಳ ಹಿಂದೆ (1995ರಲ್ಲಿ) ಆರಂಭವಾಗಿದ್ದ ಯೋಜನೆ ಸುಪ್ರೀಂ ಕೋರ್ಟ್ ಆದೇಶದಂತೆ 2001ರಲ್ಲಿ ದೇಶದಾದ್ಯಂತ ಮಧ್ಯಾಹ್ನದ ಬಿಸಿಯೂಟದ ಕಾರ್ಯಕ್ರಮವಾಗಿ ಅನುಷ್ಠಾನಕ್ಕೆ ಬಂದು ಸುಮಾರು 12 ಕೋಟಿ ಶಾಲಾ ಮಕ್ಕಳ ಹಸಿವನ್ನು ತಣಿಸುತ್ತಿರುವುದು ನಿಜ.
 
ಈ ಕಾರ್ಯಕ್ರಮದ ಉದ್ದೇಶ ಮಕ್ಕಳಿಗೆ ಪೌಷ್ಟಿಕಾಂಶದ ಕೊರತೆ ನೀಗಿಸುವುದರ ಜೊತೆಗೆ ಬಡತನದ ಕಾರಣ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುವುದನ್ನು ತಡೆಯುವುದೂ ಆಗಿತ್ತು. ಈ ಉದ್ದೇಶ ಎಷ್ಟರಮಟ್ಟಿಗೆ ಈಡೇರಿದೆ ಎಂಬ ಬಗ್ಗೆ ಅಧಿಕೃತ ಸಮೀಕ್ಷೆಗಳೇನೂ ಹೊರಬಂದಿಲ್ಲ.

ಆದರೆ ಒಂದನೇ ತರಗತಿಗೆ ಸೇರಿಕೊಳ್ಳುವ 20 ಕೋಟಿ ಮಕ್ಕಳಲ್ಲಿ ಕೇವಲ ಎರಡು ಕೋಟಿಯಷ್ಟು ಮಕ್ಕಳು ಹತ್ತನೇ ತರಗತಿಯವರೆಗೆ ಓದನ್ನು ಮುಂದುವರಿಸುತ್ತಾರೆ ಎಂಬ ಒಂದು ಸಮೀಕ್ಷಾ ವರದಿ ಈಚೆಗೆ ಪ್ರಕಟವಾಗಿತ್ತು.
 
ಬಿಸಿಯೂಟ, ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಸೈಕಲ್ ಇತ್ಯಾದಿ ಸೌಲಭ್ಯಗಳು ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಹಿಡಿದಿಟ್ಟುಕೊಳ್ಳಲಾರವು ಎಂಬುದು ಇದರಿಂದ ಸ್ಪಷ್ಟವಾಗಿದೆ.
 
ಕರ್ನಾಟಕದಲ್ಲಿ ಗ್ರಾಮೀಣ ಭಾಗಗಳಲ್ಲಿ ತಲೆ ಎತ್ತಿರುವ ಇಂಗ್ಲಿಷ್ ಮಾಧ್ಯಮ ಶಾಲೆಗಳ ಕಾರಣ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿಯುತ್ತಿರುವ ವಾಸ್ತವ ಶಿಕ್ಷಣ ತಜ್ಞರನ್ನು ಎಚ್ಚರಿಸಬೇಕು.

 ಮಧ್ಯಾಹ್ನದ ಬಿಸಿಯೂಟದ ಯೋಜನೆಯನ್ನು ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ವಿಸ್ತರಿಸಲು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಚಿಂತನೆ ನಡೆಸಿರುವುದು ಸ್ವಾಗತಾರ್ಹ ಹೆಜ್ಜೆಯಾದರೂ ಅದರ ಅನುಷ್ಠಾನ ವಿಧಾನದ ಬಗ್ಗೆ ಸ್ಪಷ್ಟತೆ ಕಾಣುತ್ತಿಲ್ಲ.

ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನಾಂಗಕ್ಕೆ ಸೇರಿದವರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳಿಲ್ಲ ಎನ್ನುವ ಸ್ಥಿತಿ ದೇಶದ ಯಾವ ಭಾಗದಲ್ಲಿಯೂ ಇಲ್ಲ. 

ಖಾಸಗಿ ಶಾಲೆಗಳಲ್ಲಿ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿದ್ದರೂ ಅವರನ್ನು ಇತರ ವಿದ್ಯಾರ್ಥಿಗಳಿಂದ ಬೇರ್ಪಡಿಸಿ ಮಧ್ಯಾಹ್ನದ ಊಟ ನೀಡುವಂಥ ಕಾರ್ಯಕ್ರಮ ವಿದ್ಯಾರ್ಥಿ ಸಮುದಾಯದಲ್ಲಿ ಪ್ರತ್ಯೇಕತೆಯ ಅಪಾಯಕಾರಿ ಭಾವವನ್ನು ಮೂಡಿಸುವಂಥದ್ದಾಗಿದೆ.

ಬಿಸಿಯೂಟದ ಕಾರ್ಯಕ್ರಮವನ್ನು ಸರ್ಕಾರಿ ಶಾಲೆಗಳಲ್ಲಿ ಉತ್ಸಾಹದಿಂದ ಆರಂಭಿಸಿರುವ ಸರ್ಕಾರ ಅದಕ್ಕೆ ತಕ್ಕ ವ್ಯವಸ್ಥೆಯನ್ನು ಇಷ್ಟು ವರ್ಷಗಳ ನಂತರವೂ ಸಮರ್ಪಕ ರೀತಿಯಲ್ಲಿ ಮಾಡಿಲ್ಲ. ಅಡುಗೆ ಸಿಬ್ಬಂದಿ ಮತ್ತು ಸಹಾಯಕರ ಸಮಸ್ಯೆಗಳನ್ನು ಗಮನಿಸುತ್ತಿಲ್ಲ.

ಹೀಗೆ ಪರಿಶಿಷ್ಟ ವರ್ಗದವರನ್ನು ಗುರುತಿಸಿ ಅವರಿಗಷ್ಟೇ ಊಟ ನೀಡುವ ವಿಧಾನ ಅವರಲ್ಲಿ ಪ್ರತ್ಯೇಕ ಭಾವವನ್ನೇ ಉಳಿಸುತ್ತದೆ. ಒಂದರಿಂದ ಹತ್ತನೆ ತರಗತಿವರೆಗಿನ ಶಿಕ್ಷಣ ದೇಶದಾದ್ಯಂತ ಒಂದೇ ರೀತಿಯಲ್ಲಿರಬೇಕು ಎಂಬುದು ಸರ್ಕಾರದ ಉದ್ದೇಶವಾಗಿದ್ದರೆ ಆ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT