ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನ ವೇದಿಕೆಯಿಂದ ಮಹಿಳೆ ದೂರ: ಆಕ್ಷೇಪ

Last Updated 5 ಫೆಬ್ರುವರಿ 2011, 18:10 IST
ಅಕ್ಷರ ಗಾತ್ರ

ಬೆಂಗಳೂರು:  ಸಾಹಿತ್ಯ ಸಮ್ಮೇಳನದಲ್ಲಿ ಪ್ರತ್ಯೇಕ ಮಹಿಳಾ ಗೋಷ್ಠಿ ಎಷ್ಟರ ಮಟ್ಟಿಗೆ ಪ್ರಸ್ತುತ? ಇದು ಪ್ರಧಾನ ವೇದಿಕೆಯಿಂದ ಹೊರತಾಗಿ ನಡೆದದ್ದು ಸಮಂಜಸವೇ? ಇಂಥ ಸಂವಾದಗಳಲ್ಲಿ ಪುರುಷರೂ ಭಾಗವಹಿಸಬಹುದಲ್ಲವೇ?

-ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆಯ ದಿನವಾದ ಶನಿವಾರ ನಡೆದ ಮಹಿಳಾ ಗೋಷ್ಠಿಯಲ್ಲಿ ಇಂಥ ಪ್ರಶ್ನೆಗಳು ಚರ್ಚೆಗೆ ಬಂದವು.

ಸಾಹಿತ್ಯ ಸಮ್ಮೇಳನದ ವಿವಿಧ ಗೋಷ್ಠಿಗಳಲ್ಲಿ (ಮಹಿಳಾ ಗೋಷ್ಠಿ ಹೊರತುಪಡಿಸಿ) ಪುರುಷರದ್ದೇ ಪ್ರಾಬಲ್ಯ. ಎಲ್ಲೋ ಬೆರಳೆಣಿಕೆಯಷ್ಟು ಮಹಿಳೆಯರು ಮಾತ್ರವೇ ಕಾಣಿಸುತ್ತಾರೆ. ಇವುಗಳನ್ನೆಲ್ಲ ನೋಡಿದರೆ, ರಾಜಕೀಯದಲ್ಲಿ ಮಾತ್ರವಲ್ಲ;

ಸಾಹಿತ್ಯ ಕ್ಷೇತ್ರದಲ್ಲಿಯೂ ಮಹಿಳೆಯರಿಗೆ ಶೇ33ರಷ್ಟು ಮೀಸಲಾತಿ ನೀಡಬೇಕಾದ ಅಗತ್ಯ ಎದ್ದು ಕಾಣುತ್ತದೆ ಎಂದು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್ ಅಭಿಪ್ರಾಯಪಟ್ಟರು. ಇಲ್ಲಿಯವರೆಗೆ ನಡೆದುಕೊಂಡು ಬಂದ ಸಾಹಿತ್ಯ ಸಮ್ಮೇಳನಗಳನ್ನು ನೋಡಿದರೆ, ಮಹಿಳೆಯರು ಅಧ್ಯಕ್ಷರಾಗಿದ್ದು ಕೇವಲ ನಾಲ್ಕೇ ಸಮ್ಮೇಳನಗಳಲ್ಲಿ.

ಇನ್ನು ಕನ್ನಡ ಸಾಹಿತ್ಯ ಪರಿಷತ್‌ನಲ್ಲಿಯೂ ಈತನಕ ಮಹಿಳೆಯರು ಅಧ್ಯಕ್ಷರಾಗಿಯೇ ಇಲ್ಲ. ಕನಿಷ್ಠ ಪಕ್ಷ ಎರಡು ಅವಧಿಗೆ ಒಮ್ಮೆಯಾದರೂ ಮಹಿಳೆಯರನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರನ್ನಾಗಿ ಮಾಡುವ ನಿರ್ಣಯವನ್ನು ಈ ಸಮ್ಮೇಳನದಲ್ಲಿ ಕೈಗೊಳ್ಳಬೇಕೆಂದು ಲೀಲಾದೇವಿ ಮನವಿ ಮಾಡಿಕೊಂಡರು.  ‘ಮಹಿಳೆ ಮತ್ತು ಚಳವಳಿಗಳು’ ವಿಷಯ ಕುರಿತು ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷೆ ಕೆ.ಎಸ್.ವಿಮಲಾ, ಸ್ತ್ರೀವಾದ ಅಥವಾ ಮಹಿಳಾ ಚಳವಳಿ ಅಂದ ತಕ್ಷಣ ಅದು ಪುರುಷ ವಿರೋಧಿಯಾದುದು ಎಂದು ತಪ್ಪಾಗಿ ಅರ್ಥೈಸುವ ಅಪಾಯ ಇರುತ್ತದೆ. ಸ್ತ್ರೀ ಹಾಗೂ ಪುರುಷರು ಸಮಾನರು ಎಂಬ ನೆಲೆಯಲ್ಲಿ ನಾವು ಹೋರಾಟವನ್ನು ನಡೆಸುತ್ತೇವೆ. ಹಾಗಾಗಿ ನಾವು ಅಂದರೆ, ಮಹಿಳಾ ಹೋರಾಟಗಾರರು ಪುರುಷರ ಸಹವರ್ತಿಗಳೇ ಹೊರತೂ ಅನುವರ್ತಿಗಳಲ್ಲ ಎನ್ನುವುದನ್ನು ಗಮನಿಸಬೇಕು ಎಂದರು.

ಈ ನೆಲದಲ್ಲಿ ನಮಗೆ ಬೇಕೋ ಬೇಡವೋ ಪುರುಷ ಪ್ರಧಾನ ಮೌಲ್ಯಗಳು ಆಳವಾಗಿ ಬೇರೂರಿಬಿಟ್ಟಿವೆ. ಮಹಿಳೆ ಕೂಡ ಅವುಗಳಿಂದ ಪ್ರಭಾವಿತಳಾಗಿಬಿಟ್ಟಿದ್ದಾಳೆ. ಪುರುಷ ಪ್ರಧಾನ ಮೌಲ್ಯಗಳ ಮೂಲೋತ್ಪಾಟನೆ ಆಗಬೇಕು ಎನ್ನುವುದು ನಮ್ಮ ಹೋರಾಟದ ಆಶಯವಾಗಿದೆ ಎಂದು ನುಡಿದರು.

70ರ ದಶಕದ ನಂತರದಲ್ಲಿ ಮಹಿಳಾ ಚಳವಳಿಗೆ ಧ್ವನಿ ಬಂತು ಎನ್ನುವಂತಹ ಮಾತುಗಳನ್ನು ಕೇಳುತ್ತೇವೆ. ಆದರೆ ಮಹಿಳಾ ಚಳವಳಿಗೆ ಸುದೀರ್ಘ ಇತಿಹಾಸವೇ ಇದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಅಸಂಖ್ಯಾತ ಮಹಿಳೆಯರು ಸಕ್ರಿಯವಾಗಿ ಭಾಗವಹಿಸಿದ್ದರು. ತಮ್ಮ ಮನೆಯ ಪುರುಷರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಸಂದರ್ಭದಲ್ಲಿ ಇಡೀ ಕುಟುಂಬದ ಹೊಣೆಗಾರಿಕೆಯನ್ನು ನಿಭಾಯಿಸಿದ ದಿಟ್ಟ ಮಹಿಳೆಯರು ನಮ್ಮಲ್ಲಿದ್ದಾರೆ. ಪೊಲೀಸರ ದೌರ್ಜನ್ಯ ಸಹಿಸಿಕೊಂಡೂ ಇವರು ಮಾಡಿದ ಕೆಲಸ ಇದೆಯಲ್ಲ; ಅಲ್ಲೇ ನಾವು ಮಹಿಳಾ ಚಳವಳಿಯ ಬೇರುಗಳನ್ನು ಕಾಣುತ್ತೇವೆ ಎಂದು ವಿಮಲಾ ವ್ಯಾಖ್ಯಾನಿಸಿದರು.

ಮಹಿಳಾ ಸಬಲೀಕರಣದಂಥ ಮಾತುಗಳಿಗೆ ಅರ್ಥವೇ ಇಲ್ಲ. ಮಹಿಳೆ ಯಾವತ್ತೂ ಸಬಲಳೇ. ಬಸಿರು, ಬಾಣಂತನವನ್ನು ಮಹಿಳೆಯ ಮಿತಿ ಎಂದು ಎಣಿಸಕೂಡದು. ಶಿಲಾಯುಗದ ಕಾಲವನ್ನೇ ನಾವು ಉದಾಹರಣೆಯನ್ನಾಗಿ ತೆಗೆದುಕೊಂಡರೆ ಮಹಿಳೆ ದುರ್ಬಲಳಲ್ಲ ಎನ್ನುವುದು ಗೊತ್ತಾಗುತ್ತದೆ. ಪುರುಷನಿಗೆ ಸರಿಸಾಟಿಯಾಗಿ ಆಕೆ ಆಗ ಎಲ್ಲ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತಿದ್ದಳು. ಆದರೆ ಯಾವಾಗ ಖಾಸಗಿ ಆಸ್ತಿಯ ಒಡೆತನದ ಉಗಮ ಆರಂಭವಾಯಿತೋ ಆವಾಗಿನಿಂದ ಅವಳ ಹಕ್ಕುಗಳ ದಮನ ಶುರುವಾಯಿತು ಎಂದರು.

‘ಮಹಿಳೆ ಮತ್ತು ಸಾಹಿತ್ಯ’ ವಿಷಯ ಕುರಿತು ಮಾತನಾಡಿದ ಹನುಮಾಕ್ಷಿ ಗೋಗಿ, ಮಹಿಳಾ ಸಾಹಿತ್ಯ ‘ಅಡುಗೆ ಮನೆ’ ಸಾಹಿತ್ಯ ಎಂಬ ಕ್ಲೀಷೆಯ ಮಾತುಗಳಿಗೆ ಅರ್ಥವಿಲ್ಲ. ಅಡುಗೆ, ಕುಟುಂಬ ನಿರ್ವಹಣೆ ಇವೆಲ್ಲವೂ ಸೃಜನಶೀಲ ಚಟುವಟಿಕೆಗಳೇ ಆಗಿವೆ. ಪುರುಷನಿಗೆ ಸಾಧ್ಯವಿಲ್ಲದ ವಿಶಿಷ್ಟ ಜೀವನ ಗ್ರಹಿಕೆ ಮಹಿಳೆಗೆ ದಕ್ಕಿದೆ ಎಂದು ವಿಶ್ಲೇಷಿಸಿದರು.

ಪುರುಷ ಕೇಂದ್ರಿತ ಸಮಾಜದಲ್ಲಿ ಕೆಲವೊಂದು ಅಡೆತಡೆಗಳನ್ನು ಮೀರಿಯೂ ಮಹಿಳೆ ಕ್ರಿಯಾಶೀಲಳಾದಾಗ ಅದನ್ನು ಹತ್ತಿಕ್ಕುವ ಹುನ್ನಾರ ನಡೆಯುತ್ತದೆ. ಸಾಮಾಜಿಕ ನಿರ್ಬಂಧಗಳೇ ಮಹಿಳೆಯ ಸೃಜನಶೀಲತೆಯ ಹುಟ್ಟು, ಬೆಳವಣಿಗೆ ಹಾಗೂ ಅಭಿವ್ಯಕ್ತಿಗೆ ತೊಡಕಾಗುತ್ತಿವೆ ಎಂದ ಅವರು, ನಮ್ಮ ಇತಿಹಾಸವಿರಲಿ, ಸಾಹಿತ್ಯ ಚರಿತ್ರೆ ಇರಲಿ, ಇಲ್ಲೆಲ್ಲ ಪ್ರತಿಭಾವಂತ ಮಹಿಳೆಯರ ಕುರಿತ ಪ್ರಸ್ತಾಪಗಳೇ ಇಲ್ಲ. ಈ ಲಿಂಗ ತಾರತಮ್ಯದ ಧೋರಣೆ ನಮ್ಮ ವಿದ್ವತ್ ವಲಯವನ್ನೂ ಬಿಟ್ಟಿಲ್ಲವೇ ಎಂದು ಪ್ರಶ್ನಿಸಿದರು.

‘ಮಹಿಳೆ ಮತ್ತು ಮೀಸಲಾತಿ’ ಕುರಿತು ಮಾತನಾಡಿದ ಎಂ.ಎಸ್. ಶಶಿಕಲಾ ಗೌಡ, ‘ಒಡೆತನದ ಪರಿಕಲ್ಪನೆ ಇರದ ಕಾಲಘಟ್ಟದಲ್ಲಿ ಮಹಿಳೆಯರಿಗೆ ಮೀಸಲಾತಿಯ ಅವಶ್ಯಕತೆಯೇ ಇರಲಿಲ್ಲ. ಆದರೆ ಸಾಮಾಜಿಕ ಹಾಗೂ ಆರ್ಥಿಕ ಚಟುಚವಟಿಕೆಗಳಲ್ಲಿ ಯಾವಾಗ ಲಿಂಗ ವಿಭಜನೆ ಶುರುವಾಯಿತೋ ಅಲ್ಲಿಂದ ಮಹಿಳೆ ತನ್ನ ಹಕ್ಕುಗಳಿಗೆ ಹೋರಾಡುವ ಸ್ಥಿತಿ ಬಂತು’ ಎಂದು ವಿಷಾದಿಸಿದರು.

ಆಶಯ ಭಾಷಣ ಮಾಡಿದ ಲತಾ ಗುತ್ತಿ, ‘ಹೆಣ್ಣು ತ್ಯಾಗಮಯಿ ಎನ್ನುವ ಪರಿಕಲ್ಪನೆಯನ್ನು ಪುರುಷ ಕೇಂದ್ರಿತ ಸಮಾಜವೇ ಹುಟ್ಟು ಹಾಕಿದೆ. ಅಲ್ಲದೇ ಆಕೆಯನ್ನು ಅಬಲೆ ಎಂತಲೂ ಬಿಂಬಿಸಲಾಗುತ್ತಿದೆ. ಇದು ಸತ್ಯಕ್ಕೆ ದೂರವಾದ ಮಾತು. ಶ್ರಮದಾಯಕ ಕೆಲಸಗಳಲ್ಲೂ ಹೆಣ್ಣು, ಗಂಡಿಗೆ ಸರಿಸಾಟಿಯಾಗಿ ನಿಂತ ನಿದರ್ಶನಗಳು ನಮ್ಮ ಮುಂದೆಯೇ ಇವೆ’ ಎಂದರು.

ಇಂದು ಮಹಿಳೆಯರು ಸವಾಲುಗಳನ್ನು ಎದುರಿಸಬೇಕಾಗಿದೆ. ದೇಶದ ಎಲ್ಲೆಡೆ ಹೆಣ್ಣು ಭ್ರೂಣ ಹತ್ಯೆ ಅವ್ಯಾಹತವಾಗಿ ನಡೆಯುತ್ತಿದೆ. ಖಾಪ್ ಪಂಚಾಯ್ತಿ, ಮರ್ಯಾದಾ ಹತ್ಯೆ, ಶಾಲೆ, ಕಾಲೇಜು, ಕೆಲಸ ಮಾಡುವ ಸ್ಥಳಗಳಲ್ಲಿ ನಡೆಯುವ ಲೈಂಗಿಕ ದೌರ್ಜನ್ಯದಂಥ ಪ್ರಕರಣಗಳು ಮಹಿಳಾ ಸ್ವಾತಂತ್ರ್ಯ ಹರಣ ಮಾಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
 ಗಾಯತ್ರಿ ರಾಮಣ್ಣ ಸ್ವಾಗತಿಸಿ, ನಾ.ರಾ.ಜ್ಯೋತಿ ಕಾರ್ಯಕ್ರಮ ನಿರ್ವಹಿಸಿದರು.

ಗೊಂದಲ....
ಸಾಹಿತ್ಯ ಸಮ್ಮೇಳನದಲ್ಲಿ ಸಮಾನಾಂತರ ಗೋಷ್ಠಿಗಳು ನಡೆಯುವ ಸ್ಥಳಗಳ ಬಗ್ಗೆ ಅನೇಕರಿಗೆ ಸರಿಯಾದ ಮಾಹಿತಿ ಸಿಗದೇ ಗೊಂದಲಗೊಂಡ ಪ್ರಸಂಗವೂ ನಡೆಯಿತು. ವಿ.ವಿ.ಪುರಂ ಕೆ.ಆರ್.ರಸ್ತೆಯ ಮಹಿಳಾ ಸೇವಾ ಸಮಾಜದಲ್ಲಿ ಶನಿವಾರ ಬೆಳಿಗ್ಗೆ ಮಹಿಳಾ ಗೋಷ್ಠಿ ಇತ್ತು. ಅನೇಕರು ಗೋಷ್ಠಿ ನಡೆಯುವ ಸ್ಥಳಕ್ಕಾಗಿ ಹುಡುಕಾಡುತ್ತಿದ್ದರು. ಅಲ್ಲಿದ್ದ ಭದ್ರತಾ ಸಿಬ್ಬಂದಿಗಾಗಲೀ, ಪೊಲೀಸರಿಗಾಗಲೀ, ಅಷ್ಟೇ ಏಕೆ ಸಮ್ಮೇಳನದ ಕಾರ್ಯಕರ್ತರಿಗೂ ಈ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ.

ಮಹಿಳಾ ಸೇವಾ ಸಮಾಜದ ಹಿಂಭಾಗದಲ್ಲಿರುವ ಉನ್ನತಿ ಸಭಾಂಗಣದಲ್ಲಿ ಕೆಲವೊಂದು ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೆ ಆಹ್ವಾನ ಪತ್ರಿಕೆಯಲ್ಲಿ ಈ ಬಗ್ಗೆ ಮಾಹಿತಿ ಇಲ್ಲ. ಕೊನೆ ಪಕ್ಷ ನಡೆಯುವ ಗೋಷ್ಠಿಗಳ ಬಗ್ಗೆ ಮಹಿಳಾ ಸಮಾಜದ ಹೊರಗಡೆ ಸಣ್ಣ ಸೂಚನಾ ಫಲಕ ಹಾಕುವ ಸೌಜನ್ಯವನ್ನೂ ಆಯೋಜಕರೂ ತೋರಿಸದಿರುವುದು ವಿಪರ್ಯಾಸ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT