ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಅಭ್ಯರ್ಥಿ: 8 ತಿಂಗಳ ಗಡುವು

ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಜೆಡಿಯು ನಿರ್ಣಯ
Last Updated 14 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):ಮುಂದಿನ ಚುನಾವಣೆಗೆ ನರೇಂದ್ರ ಮೋದಿ ಅವರನ್ನು ಎನ್‌ಡಿಎ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವುದಕ್ಕೆ ಆಕ್ಷೇಪ ಎತ್ತಿರುವ ಜೆಡಿಯು, `ಅನುಮಾನಕ್ಕೆ ಆಸ್ಪದವಿಲ್ಲದ ಧರ್ಮನಿರಪೇಕ್ಷ ನಾಯಕ'ನನ್ನು ಎಂಟು ತಿಂಗಳ ಗಡುವಿನೊಳಗೆ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಬೇಕು ಎಂದು ಬಿಜೆಪಿಯನ್ನು ಒತ್ತಾಯಿಸಿದೆ.
ಎಂಟು ತಿಂಗಳ ಅವಧಿಯೊಳಗೆ, ಅಂದರೆ ವರ್ಷಾಂತ್ಯಕ್ಕೆ ಮುನ್ನ ಮಾಜಿ ಪ್ರಧಾನಿ ಎ.ಬಿ.ವಾಜಪೇಯಿ ಅವರಂತಹ ನಾಯಕನನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಬೇಕು. ಇಲ್ಲದಿದ್ದರೆ ನಕಾರಾತ್ಮಕ ಫಲಶ್ರುತಿಯನ್ನು ಅನುಭವಿಸಬೇಕಾಗುತ್ತದೆ ಎಂದು ಪಕ್ಷವು ಭಾನುವಾರ ನಡೆದ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಂಡು ಕಠಿಣ ಸಂದೇಶ ರವಾನಿಸಿದೆ.

ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯನ್ನು ಚುನಾವಣೆಗೆ ಮುನ್ನವೇ ಘೋಷಿಸಬೇಕು ಎಂಬುದು ಪಕ್ಷದ ಸ್ಪಷ್ಟ ನಿಲುವು. ಎಂತಹವರು ಮುಂದಿನ ಪ್ರಧಾನಿ ಅಭ್ಯರ್ಥಿ ಆಗಬೇಕು ಎಂಬ ಬಗ್ಗೆ ಪಕ್ಷ ತನ್ನದೇ ಸ್ಪಷ್ಟ ನಿಲುವು ಹೊಂದಿದೆ. ಎನ್‌ಡಿಎ ರಾಷ್ಟ್ರೀಯ ಆಡಳಿತ ಕಾರ್ಯಸೂಚಿಗೆ ಹಾಗೂ ಮೂರು ವಿಷಯಗಳಿಗೆ ಸಂಬಂಧಿಸಿ ಈ ಹಿಂದಿನ ನಿರ್ಧಾರಗಳಿಗೆ ಬದ್ಧವಾಗಿರುವಂತಹ ನಾಯಕನನ್ನೇ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಬೇಕು ಎಂದು ಒತ್ತಾಯಿಸಿದೆ (ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, 370ನೇ ವಿಧಿ ರದ್ದತಿ ಮತ್ತು ಏಕರೂಪ ನಾಗರಿಕ ಸಂಹಿತೆ- ಇವು ಮೂರು ವಿಷಯಗಳು).

ಪ್ರಧಾನಿ ಅಭ್ಯರ್ಥಿ ಆಗುವವರು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬಲ್ಲವರಾಗಿರಬೇಕು . ಹಿಂದುಳಿದ ರಾಜ್ಯಗಳು ಮತ್ತು ಪ್ರದೇಶಗಳ ಅಭಿವೃದ್ಧಿಯ ಬಗ್ಗೆ ಸಂವೇದನಾಶೀಲರಾಗಿರಬೇಕು ಎಂದು ನಿರ್ಣಯದಲ್ಲಿ ಹೇಳಲಾಗಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಭೆ ಉದ್ದೇಶಿಸಿ ಮಾತನಾಡಿ, `ಈ ರಾಷ್ಟ್ರದ ಆಡಳಿತ ನಡೆಸಲು ವಾಜಪೇಯಿ ಅವರಂತಹವರ ಅಗತ್ಯವಿದೆ. ಅವರು ಯಾವಾಗಲೂ ರಾಜಧರ್ಮ ಅನುಸರಿಸಲು ಹೇಳುತ್ತಿದ್ದರು. ಒಂದೊಮ್ಮೆ ನಮ್ಮ ಬೇಡಿಕೆಯನ್ನು ನಿರ್ಲಕ್ಷಿಸಿದರೆ ನಾವು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ' ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದರು.

`ರಾಜಕಾರಣದಿಂದ ರಾಜಿ ಅನಿವಾರ್ಯವಾದರೂ, ಕೆಲವು ಮೂಲಭೂತ ತಾತ್ವಿಕತೆಗೆ ಸಂಬಂಧಿಸಿದ ವಿಷಯದಲ್ಲಿ ಅದು ಸಾಧ್ಯವಿಲ್ಲ. ಅಧಿಕಾರಕ್ಕಾಗಿ ಧರ್ಮನಿರಪೇಕ್ಷತೆಯನ್ನು ನಾವು ಎಂದೆಂದಿಗೂ ಉಪೇಕ್ಷಿಸುವುದಿಲ್ಲ' ಎಂದ ಅವರು, ಎಲ್ಲವೂ ಸರಿಯಿರುವಾಗ `ಕುಲಾಂತರಿ ಬದಲಾವಣೆ'ಯ ಅಗತ್ಯವೇನಿದೆ ಎಂದು ಮಾರ್ಮಿಕವಾಗಿ ಕೇಳಿದರು.
`ಈ ಹಿಂದೆ ನಡೆದುಕೊಂಡು ಬಂದಂತೆ ಎನ್‌ಡಿಎ ಪ್ರಧಾನಿ ಅಭ್ಯರ್ಥಿ ಯಾರೆಂಬುದನ್ನು ಚುನಾವಣೆಗೆ ಮುನ್ನವೇ ನಿರ್ಧರಿಸಬೇಕು. ಆದರೆ, ಒಂದು ಸಣ್ಣ ಪಕ್ಷಕ್ಕೆ ಸೇರಿದ ನಾನು ಪ್ರಧಾನಿ ಅಭ್ಯರ್ಥಿಯಾಗಬೇಕು ಎಂಬ ಭ್ರಮೆ ಇಟ್ಟುಕೊಂಡಿಲ್ಲ' ಎಂದರು.

`ಒತ್ತಾಯಪೂರ್ವಕವಾದ ಬಲ'ದಿಂದ ಈ ರಾಷ್ಟ್ರವನ್ನು ಆಳಬಹುದೆಂದು ಯಾರೂ ಭಾವಿಸಬಾರದು. ಯಾವುದೋ ಒಂದು ರಾಜ್ಯದಲ್ಲಿ ಆ ರೀತಿ ಆಡಳಿತ ನಡೆಸಬಹುದು. ಆದರೆ ಅದೇ ಬಗೆಯಲ್ಲಿ ಇಡೀ ರಾಷ್ಟ್ರದ ಆಡಳಿತ ನಡೆಸಲು ಕಷ್ಟವಾಗುತ್ತದೆ ಎನ್ನುವ ಮೂಲಕ, ನರೇಂದ್ರ ಮೋದಿ ಅವರ ಆಡಳಿತ ವೈಖರಿಯನ್ನು ಪರೋಕ್ಷವಾಗಿ ಕುಟುಕಿದರು.
1999, 2004ರಲ್ಲಿ ವಾಜಪೇಯಿ ಹಾಗೂ 2009ರಲ್ಲಿ ಅಡ್ವಾಣಿ ಅವರನ್ನು ಎನ್‌ಡಿಎ ಪ್ರಧಾನಿ ಅಭ್ಯರ್ಥಿಗಳಾಗಿ ಚುನಾವಣೆಗೆ ಮುನ್ನವೇ ಬಿಂಬಿಸಲಾಗಿತ್ತು ಎಂಬುದನ್ನು ಜೆಡಿಯು ತನ್ನ ನಿರ್ಣಯದಲ್ಲಿ ನೆನಪಿಸಿದೆ.

`ಅಡ್ವಾಣಿ ಆದರೆ ಅಡ್ಡಿಯಿಲ್ಲ'
ಗುಜರಾತ್ ಮುಖ್ಯಮಂತ್ರಿ ಮೋದಿ ಅವರ ಬದಲು ಎಲ್.ಕೆ.ಅಡ್ವಾಣಿ ಅವರನ್ನು ಎನ್‌ಡಿಎ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವುದಾದರೆ ತಮ್ಮ ಪಕ್ಷ ಯಾವುದೇ ತಕರಾರು ತೆಗೆಯುವುದಿಲ್ಲ ಎಂದು ಜೆಡಿಯು ಮುಖಂಡ ದೇವೇಶ್ ಚಂದ್ರ ಠಾಕೂರ್ ಹೇಳಿದರು.

ರಾಷ್ಟ್ರಕ್ಕೆ ವಾಜಪೇಯಿ ಅವರಂತಹ ನಾಯಕರು ಬೇಕು ಎಂಬುದು ನಿಮ್ಮ ಪಕ್ಷದ ನಿಲುವು. ಈಗ ಅವರನ್ನು ಹೋಲುವಂಥವರು ಬಿಜೆಪಿಯಲ್ಲಿ ಯಾರಿದ್ದಾರೆ ಎಂದು ಸುದ್ದಿಗಾರರು ಕೇಳಿದಾಗ, `ಈಗ ಬಿಜೆಪಿಯಲ್ಲಿ ಅಡ್ವಾಣಿ ನಂಬರ್ ಒನ್ ನಾಯಕರು. ಹಿರಿತನವನ್ನು ಗಣನೆಗೆ ತೆಗೆದುಕೊಂಡರೆ ಮೋದಿ ಆರು ಅಥವಾ ಏಳನೇ ಸ್ಥಾನದಲ್ಲಿದ್ದಾರೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT