ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ತಮಿಳುನಾಡಿನ ಏಜೆಂಟ್?: ಈಶ್ವರಪ್ಪ

Last Updated 14 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಕಾವೇರಿ ನದಿ ನೀರು ಹಂಚಿಕೆ ವಿವಾದದ ಕುರಿತು ಮಾತುಕತೆ ನಡೆಸಲು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ತಮ್ಮನ್ನು ಭೇಟಿ ಮಾಡಲು ಸಮಯ ನಿಗದಿ ಮಾಡದ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು, ಇದೇ ವಿಷಯ ಕುರಿತು ತಮಿಳುನಾಡಿನ ನಿಯೋಗಕ್ಕೆ ಸಮಯ ನೀಡಿದ್ದಾರೆ. ಪ್ರಧಾನಿಯವರು ತಮಿಳುನಾಡಿನ ಏಜೆಂಟ್ ಆಗಿದ್ದಾರಾ?~ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದರು.

ರಾಜ್ಯದ ಕಾವೇರಿ ಜಲಾನಯನ ಪ್ರದೇಶದ ವಾಸ್ತವ ಸ್ಥಿತಿ ಏನು ಎಂಬ ಬಗ್ಗೆ ಅಧ್ಯಯನವನ್ನೇ ನಡೆಸದೆ, ಸೆಪ್ಟೆಂಬರ್ 20ರಿಂದ ಅಕ್ಟೋಬರ್ 15ರವರೆಗೆ ತಮಿಳುನಾಡಿಗೆ ಪ್ರತಿದಿನ ಒಂಬತ್ತು ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನದಿ ಪ್ರಾಧಿಕಾರದ (ಸಿಆರ್‌ಎ) ಅಧ್ಯಕ್ಷರೂ ಆದ ಡಾ. ಸಿಂಗ್ ಆದೇಶ ನೀಡಿದ್ದಾರೆ. ತಮಿಳುನಾಡು ರಾಜ್ಯವನ್ನು ತೃಪ್ತಿಪಡಿಸಲು ಈ ರೀತಿಯ ಆದೇಶ ನೀಡಿದ್ದಾರೆ. ಈ ಕುರಿತು ರಾಜ್ಯದ ಕಾಂಗ್ರೆಸ್ ಮುಖಂಡರು ಏನು ಹೇಳುತ್ತಾರೆ ಎಂದೂ ಪ್ರಶ್ನಿಸಿದರು.

ಯುಪಿಎ ಸರ್ಕಾರದ ಹಗರಣಗಳ ಕುರಿತು ಬಿಜೆಪಿ ಕಾರ್ಯಕರ್ತರಿಗೆ ಮಾಹಿತಿ ನೀಡಲು ಭಾನುವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಈಶ್ವರಪ್ಪ, `ಕಾವೇರಿ ನೀರು ಹಂಚಿಕೆ ಬಗ್ಗೆ `ಸಿಆರ್‌ಎ~ ನೀಡಿರುವ ಆದೇಶ ಕುರಿತು ರಾಜ್ಯದ ಕಾಂಗ್ರೆಸ್ಸಿಗರು ಇಬ್ಬಗೆಯ ನೀತಿ ಅನುಸರಿಸುತ್ತಿದ್ದಾರೆ. ಇದೇ ನೀತಿಯನ್ನು ಅವರು ಮುಂದುವರಿಸಿದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹೆಸರಿಲ್ಲದಂತಾಗುತ್ತಾರೆ~ ಎಂದು ವ್ಯಂಗ್ಯವಾಡಿದರು.

ಕಲ್ಲಿದ್ದಲು ಹಗರಣ, ಕಾಮನ್‌ವೆಲ್ತ್ ಕ್ರೀಡಾಕೂಟ ಆಯೋಜನೆಯಲ್ಲಿನ ಅವ್ಯವಹಾರ, 2-ಜಿ ತರಂಗಾಂತರ ಹಂಚಿಕೆಯಲ್ಲಿ ಅವ್ಯವಹಾರ ಎಸಗುವ ಮೂಲಕ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಪಾತಾಳ, ಭೂಮಿ ಮತ್ತು ಆಕಾಶದಲ್ಲಿ ಹಗರಣ ನಡೆಸಿದೆ. ಇದೇ 20ರಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಯುಪಿಎ ಸರ್ಕಾರದ ಹಗರಣಗಳ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಯುಪಿಎ ಸರ್ಕಾರ ಪತನ ಆಗುವವರೆಗೆ ಇದು ಮುಂದುವರಿಯಲಿದೆ ಎಂದರು.

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ, ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, `ಕಾವೇರಿ ವಿವಾದ ಕುರಿತು ಚರ್ಚಿಸಲು ಪ್ರಧಾನಿಯವರನ್ನು ಭೇಟಿ ಮಾಡಲು ನಾವು (ರಾಜ್ಯದ ಬಿಜೆಪಿ ಸಂಸದರು) ಅವಕಾಶ ಕೋರಿದೆವು. ಸಂಸದರು ಪ್ರಧಾನಿಯವರನ್ನು ಒಂದು ದಿನದಲ್ಲಿ ಭೇಟಿ ಮಾಡಬಹುದು. ಆದರೆ ನಮಗೆ ಅವರನ್ನು ಭೇಟಿ ಮಾಡಲು ನಾಲ್ಕು ದಿನ ಕಾಯಿಸಲಾಯಿತು. ವಿವಾದದ ಸಂಬಂಧ ಪ್ರಧಾನಿಯವರ ವರ್ತನೆಗೆ ಈ ಘಟನೆ ಒಂದು ಉದಾಹರಣೆ~ ಎಂದು ಹೇಳಿದರು.

ಸಿಆರ್‌ಎ ನೀಡಿರುವ ಆದೇಶವನ್ನು ಪುನರ್ ಪರಿಶೀಲಿಸಲು ತಮಗೆ ಅಧಿಕಾರ ಇಲ್ಲ ಎಂದು ಪ್ರಧಾನಿಯವರು ಹೇಳಿದರು. ಆದರೆ ಆ ಅಧಿಕಾರ ಅವರಿಗೆ (ಪ್ರಧಾನಿ) ಇದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ ಎಂದು ಜೋಶಿ ವಿವರಿಸಿದರು.

ವಾದ್ರಾ ವಿರುದ್ಧ ಆರೋಪ: ನ್ಯಾಯಾಂಗ ತನಿಖೆಗೆ ಒತ್ತಾಯ
ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ವಿರುದ್ಧ ಸಾಮಾಜಿಕ ಕಾರ್ಯಕರ್ತ ಅರವಿಂದ್ ಕೇಜ್ರಿವಾಲ್ ಅವರು ಮಾಡಿರುವ ಆರೋಪ ಮತ್ತು ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರ ಟ್ರಸ್ಟ್ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ರವಿಶಂಕರ್ ಪ್ರಸಾದ್ ಆಗ್ರಹಿಸಿದರು.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಹಗರಣಗಳ ಕುರಿತು ಬಿಜೆಪಿ ಕಾರ್ಯಕರ್ತರಿಗೆ ಮಾಹಿತಿ ನೀಡಲು ಬೆಂಗಳೂರಿನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, `ದಲಿತ ಸಮುದಾಯಕ್ಕೆ ನೀಡಲು ಉದ್ದೇಶಿಸಿದ್ದ ಭೂಮಿಯನ್ನು ವಾದ್ರಾ ಅವರ ಕಂಪೆನಿಗೆ ಮಾರಾಟ ಮಾಡಿರುವುದು ದುರದೃಷ್ಟಕರ ವಿಚಾರ. ಇದು ವಿಶ್ವಾಸ ದ್ರೋಹಕ್ಕೆ ಸಮ. ಈ ವ್ಯವಹಾರದ ಕುರಿತು ಸೂಕ್ತ ಕಾನೂನು ಕ್ರಮ ಜರುಗಿಸಬೇಕು~ ಎಂದು ಒತ್ತಾಯಿಸಿದರು.

ಸಲ್ಮಾನ್ ಖುರ್ಷಿದ್ ಅವರ `ಝಕೀರ್ ಹುಸೇನ್ ಸ್ಮಾರಕ ಟ್ರಸ್ಟ್~ ಹಣಕಾಸು ನೆರವನ್ನು ದುರ್ಬಳಕೆ ಮಾಡಿಕೊಂಡಿದೆ ಎಂಬ ಆರೋಪಗಳ ಕುರಿತೂ ಸೂಕ್ತ ತನಿಖೆ ಆಗಬೇಕು. ಆರೋಪಗಳ ಕುರಿತು ಸಿಬಿಐ ತನಿಖೆ ಬೇಡ. ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಆಗಲಿ ಎಂದರು.
`ವಿಭಿನ್ನ ಮಾನದಂಡ~:  ಇದಕ್ಕೂ ಮೊದಲು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ರವಿಶಂಕರ್, `ಕಾಮನ್‌ವೆಲ್ತ್ ಕ್ರೀಡಾಕೂಟದ ಆಯೋಜನೆಯಲ್ಲಿ ಅವ್ಯವಹಾರ ನಡೆಸಿರುವ ಆರೋಪ ಎದುರಾದಾಗ ಸುರೇಶ್ ಕಲ್ಮಾಡಿ ಅವರನ್ನು ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಯಿತು.

ಎರಡನೆಯ ತಲೆಮಾರಿನ ತರಂಗಾಂತರಗಳ ಹರಾಜು ಪ್ರಕ್ರಿಯೆಯಲ್ಲಿ ನಡೆದ ಅವ್ಯವಹಾರ ಬೆಳಕಿಗೆ ಬಂದಾಗ, ಎ. ರಾಜಾ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲಾಯಿತು. ಆದರೆ ಕಲ್ಲಿದ್ದಲು ಹಗರಣದ ಹಿನ್ನೆಲೆಯಲ್ಲಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಏಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬಾರದು. ಸಲ್ಮಾನ್ ಖುರ್ಷಿದ್ ಅವರು ಕಾನೂನು ಸಚಿವ ಸ್ಥಾನ ಏಕೆ ತೊರೆಯಬಾರದು. ಇವರಿಬ್ಬರಿಗೆ ಬೇರೆ ಮಾನದಂಡ ಇದೆಯೇ?~ ಎಂದು ಪ್ರಶ್ನಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT