ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಪ್ರಧಾನಿ ಹುದ್ದೆ, ಮದುವೆ ಪ್ರಶ್ನೆಯೇ ಅಸಂಬದ್ಧ'

100 ಕೋಟಿಗೂ ಹೆಚ್ಚಿನ ಭಾರತೀಯರಿಗೆ ದನಿಯಾಗುವ ಆಸೆ- ರಾಹುಲ್
Last Updated 4 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್): `ನಾನು ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ. ನೂರು ಕೋಟಿಗೂ ಹೆಚ್ಚಿರುವ ಭಾರತೀಯರಿಗೆ ಧ್ವನಿಯಾಗುವುದು ಮತ್ತು ಸರ್ವರ ಅಭ್ಯುದಯಕ್ಕೆ ಶ್ರಮಿಸುವುದು ನನ್ನ ಗುರಿ'. - ಇದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಮಾಡಿದ ಘೋಷಣೆ.

ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ವಾರ್ಷಿಕ ಸಭೆಯಲ್ಲಿ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, `ನಿಮ್ಮ ಮದುವೆ ಯಾವಾಗ ಎಂದು ನಾನು ಹೋದಲ್ಲೆಲ್ಲ ಪತ್ರಕರ್ತರು ಪ್ರಶ್ನಿಸುತ್ತಾರೆ. ಕೆಲವರು ನೀವು ಯಾವಾಗ ಪ್ರಧಾನಿಯಾಗುತ್ತೀರಾ, ಆ ಸಾಧ್ಯತೆ ಇದೆ ಎಂದು ಹೇಳುತ್ತಾರೆ. ಮತ್ತೆ ಕೆಲವರು ನೀವು ಪ್ರಧಾನಿಯಾಗುವುದಿಲ್ಲ ಎನ್ನುತ್ತಾರೆ. ಈ ಪ್ರಶ್ನೆಗಳೆಲ್ಲ ಅಸಮಂಜಸ. ಇವೆಲ್ಲ ಊಹಾಪೋಹಗಳು ಅಷ್ಟೇ. ನಾವೀಗ ನೂರು ಕೋಟಿಗೂ ಹೆಚ್ಚು ಜನರಿಗೆ ಶಕ್ತಿ ತುಂಬುವುದು ಹೇಗೆ ಎಂಬುದರತ್ತ ಗಮನ ಹರಿಸಬೇಕಿದೆ. ಅಭಿವೃದ್ಧಿಯಲ್ಲಿ ಹಿನ್ನಡೆ, ಭ್ರಷ್ಟಾಚಾರ, ಅರ್ಥಹೀನ ರಾಜಕೀಯ ವ್ಯವಸ್ಥೆ ಸರಿಪಡಿಸುವಂಥ ಮುಖ್ಯ ವಿಷಯಗಳಿಗೆ ಒತ್ತು ಕೊಡಬೇಕಾಗಿದೆ' ಎಂದು ಹೇಳಿದರು.

42 ವಯಸ್ಸಿನ ರಾಹುಲ್ ಅವರು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ಹುದ್ದೆ ವಹಿಸಿಕೊಂಡ ನಂತರ ಪ್ರತಿಷ್ಠಿತ ಉದ್ಯಮಿಗಳ ಸಮೂಹವನ್ನು ಉದ್ದೇಶಿಸಿ ಮಾತನಾಡಿದ್ದು ಇದೇ ಮೊದಲು. ಲಿಖಿತ ಭಾಷಣವನ್ನು ಆಗಾಗ ಬದಿಗಿಟ್ಟು ತಮ್ಮ ಅನುಭವದ ಬೆಳಕಿನಲ್ಲಿ ದೇಶದ ಬಗೆಗಿನ ಕನಸನ್ನು ಹಂಚಿಕೊಂಡರು. 

`ಆಕಸ್ಮಿಕವಾಗಿ ಒಂದು ನಿರ್ದಿಷ್ಟ ವಂಶಕ್ಕೆ ಸೇರಿದವನಾಗಿದ್ದರಿಂದ ನಾನು ಇಲ್ಲಿದ್ದೇನೆ. ವಿಧಿ ನನ್ನನ್ನು ಈ ಸ್ಥಾನದಲ್ಲಿ ಕೂರಿಸಿದೆ. ಜನ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಈ ಸ್ಥಾನದಲ್ಲಿ ಇರುವುದರಿಂದ ನನ್ನ ಕರ್ತವ್ಯ ನಿಭಾಯಿಸುತ್ತಿದ್ದೇನೆ. ನಾನು ಅಥವಾ ಬೇರೆ ಯಾರೇ ಒಬ್ಬರು ಭಾರತದ ಸಮಸ್ಯೆಗಳನ್ನೆಲ್ಲ ಪರಿಹರಿಸುತ್ತಾರೆ ಎಂದುಕೊಂಡಲ್ಲಿ ಅದು ಭ್ರಮೆ ಮಾತ್ರ' ಎಂದು ವಾಸ್ತವ ಚಿತ್ರ ಮುಂದಿಟ್ಟರು.

ಅಧಿಕಾರ ಕೇಂದ್ರೀಕರಣದ ಬಗ್ಗೆ ಎಚ್ಚರಿಸಿದ ರಾಹುಲ್, `ಸರದಾರನೊಬ್ಬ ಕುದುರೆಯ ಮೇಲೆ ಬಂದು ಈ ದೇಶವನ್ನು ಬದಲಾಯಿಸುತ್ತಾನೆ ಅಂದುಕೊಳ್ಳಬೇಡಿ. ಒಬ್ಬ ವ್ಯಕ್ತಿ ಕೈಯಲ್ಲಿ ಅಧಿಕಾರ ಕೊಡಬೇಡಿ. ಪ್ರಧಾನಿ ಮನಮೋಹನ್ ಸಿಂಗ್ ಒಬ್ಬರೇ ಪವಾಡ ಮಾಡಬಹುದು ಎಂದು ಅತೀ ನಿರೀಕ್ಷೆ ಮಾಡುವುದು ಸಲ್ಲದು' ಎಂದು ಹೇಳಿದಾಗ ಸಭೆಯಲ್ಲಿ ಕರತಾಡನ ಕೇಳಿಬಂತು.

ತಮ್ಮ ಭಾಷಣದ ಮಧ್ಯೆ ಬಿಜೆಪಿ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ಟೀಕಿಸಲು ಮರೆಯಲಿಲ್ಲ. ನಿರ್ದಿಷ್ಟ ಸಮುದಾಯಗಳನ್ನು ಹೊರಗಿಡುವ ರಾಜಕೀಯದಿಂದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದರು.

`ಆದರೆ, ಕಾಂಗ್ರೆಸ್ ಪಕ್ಷ ಎಲ್ಲರನ್ನೂ ಒಳಗೊಳ್ಳುವ ಸಮಗ್ರ ಅಭಿವೃದ್ಧಿಯನ್ನು ಪ್ರತಿಪಾದಿಸುತ್ತದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತ ವೇಗವಾಗಿ ಆರ್ಥಿಕ ಅಭಿವೃದ್ಧಿ ಸಾಧಿಸಿದೆ' ಎಂದು ಪಕ್ಷದ ಸಾಧನೆ ಹೊಗಳಿಕೊಂಡರು.

`ಒಡಕು ಮೂಡಿಸುವ ರಾಜಕೀಯದಿಂದ ಜನರು ಪರಸ್ಪರ ಬೆರೆಯುವುದಿಲ್ಲ. ಚಿಂತನೆಗಳ ವಿನಿಮಯವಾಗುವುದಿಲ್ಲ. ಇದರಿಂದಾಗಿ ವಾಣಿಜ್ಯ ವಹಿವಾಟಿಗೂ ಬಾಧೆಯಾಗುತ್ತದೆ. ಅಸಮಾಧಾನದ ಬೀಜ ಮೊಳಕೆಯೊಡೆಯುತ್ತದೆ. ಜನರ ಆಶೋತ್ತರ, ಕನಸುಗಳು ಭಗ್ನವಾಗುತ್ತವೆ. ಈ ನಷ್ಟವನ್ನು ಸರಿಪಡಿಸಲು ದೀರ್ಘ ಕಾಲ ಬೇಕು' ಎಂದು ಎಚ್ಚರಿಸಿದರು.

ಭಾರತ ಜೇನುಗೂಡು: `ಚೀನಾ ಅಂದರೆ ಡ್ರ್ಯಾಗನ್. ಭಾರತ ಆನೆ ಇದ್ದಂತೆ ಎಂದು ಕೆಲವರು ಹೇಳುತ್ತಾರೆ. ಆದರೆ, ಭಾರತ ಆನೆಯಲ್ಲ. ಜೇನುಗೂಡು' ಎಂದು ರಾಹುಲ್ ಬಣ್ಣಿಸಿದರು.

`ಭಾರತ ಜಗತ್ತಿನಲ್ಲೇ ಅತಿ ಹೆಚ್ಚು ಮಾನವ ಸಂಪನ್ಮೂಲ ಇರುವ ದೇಶ. ಭಾರತ ಅಂದರೆ 100 ಕೋಟಿಗೂ ಹೆಚ್ಚು ಜನ ಸಂಕೋಲೆಯನ್ನು ಕಡಿದುಕೊಂಡು ಹೊರಬರಲು ಯತ್ನಿಸುತ್ತಿರುವ ಒಂದು ಚಳವಳಿ. ಈ ಪ್ರಕ್ರಿಯೆಯಲ್ಲಿ ಸೃಷ್ಟಿಯಾಗುತ್ತಿರುವ ಅಪಾರ ಶಕ್ತಿ ಮತ್ತು ಆಲೋಚನೆಗಳನ್ನು ಎಲ್ಲರ ಒಳಿತಿಗಾಗಿ ಬಳಸಿಕೊಳ್ಳುವ ಅಗತ್ಯವಿದೆ. ಈ ಚಳವಳಿ 21ನೇ ಶತಮಾನದಲ್ಲಿ ಭಾರತದ ಸ್ವರೂಪವನ್ನು ನಿರ್ಧರಿಸುತ್ತದೆ. ಇದು ಎಲ್ಲರಲ್ಲೂ ಸಾಮರಸ್ಯ ಮೂಡಿಸಬಹುದು ಅಥವಾ ವಿಚ್ಛಿದ್ರಕಾರಕವೂ ಆಗಬಹುದು. ಆದರೆ ಎಲ್ಲರೂ ಸಂತೋಷದಿಂದ ಜೊತೆಯಾಗಿ ಮುನ್ನಡೆಯಬೇಕು ಎಂಬುದು ಕಾಂಗ್ರೆಸ್ ನಿಲುವು. ಕೋಪ, ದ್ವೇಷ ಹಾಗೂ ಪೂರ್ವಗ್ರಹ ಧೋರಣೆ  ಪ್ರಗತಿಗೆ ಕೊಡುಗೆ ನೀಡುವುದಿಲ್ಲ' ಎಂದರು.

`ಜನತಂತ್ರ ಮತ್ತು ತಂತ್ರಜ್ಞಾನಗಳು ನಮ್ಮ ದೇಶದಲ್ಲಿ ಸರಣಿ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿವೆ. ಈ ಕ್ರಿಯೆಯನ್ನು ಈಗ ಯಾರೂ ತಡೆದು ನಿಲ್ಲಿಸಲು ಸಾಧ್ಯವಿಲ್ಲ. ಈ ಜನಾಂದೋಲನದ ಯಶಸ್ಸಿಗೆ, ಕೈಗಾರಿಕೆಗಳ ಅಭಿವೃದ್ಧಿಗೆ ನಾವು ಭೌತಿಕ ಮೂಲಸೌಕರ್ಯಗಳನ್ನು ಕಲ್ಪಿಸಬೇಕಿದೆ' ಎಂದೂ ರಾಹುಲ್ ಅಭಿಪ್ರಾಯಪಟ್ಟರು.

`ನನಗೆ ನಿಮ್ಮಲ್ಲಿ ನಂಬಿಕೆಯಿದೆ. ನಾವೆಲ್ಲ ಸೇರಿ ಈ ರಾಷ್ಟ್ರವನ್ನು ಇನ್ನಷ್ಟು ಭದ್ರವಾಗಿ ಕಟ್ಟೋಣ' ಎನ್ನುವ ಮೂಲಕ ಉದ್ಯಮ ವಲಯದ ಮೇಲಿನ ತಮ್ಮ ನಂಬಿಕೆಯನ್ನು ಪುನರುಚ್ಚರಿಸಿದರು.
...........

ಸರದಾರನೊಬ್ಬ ಕುದುರೆಯ ಮೇಲೆ ಬಂದು ಈ ದೇಶವನ್ನು ಬದಲಾಯಿಸುತ್ತಾನೆ ಅಂದುಕೊಳ್ಳಬೇಡಿ. ಒಬ್ಬ ವ್ಯಕ್ತಿ ಕೈಯಲ್ಲಿ ಅಧಿಕಾರ ಕೊಡಬೇಡಿ. ಪ್ರಧಾನಿ ಮನಮೋಹನ್ ಸಿಂಗ್ ಒಬ್ಬರೇ ಪವಾಡ ಮಾಡಬಹುದು ಎಂದು ಅತೀ ನಿರೀಕ್ಷೆ ಮಾಡುವುದು ಸಲ್ಲದು'

-ರಾಹುಲ್ ಗಾಂಧಿ
.................


ರಾಹುಲ್ ಗಾಂಧಿ ಸತ್ಯವನ್ನೇ ನುಡಿದಿದ್ದಾರೆ. ಭಾರತ ನಿಜಕ್ಕೂ ಜೇನುಗೂಡು ಇದ್ದಂತೆ. ಸಾವಿರಾರು ದುಡಿಯುವ ಜೇನು ಹುಳಗಳಿವೆ. ಅನೇಕ  ಸೋಮಾರಿ ಗಂಡು ಜೇನು ಹುಳಗಳು ಸಂಸತ್‌ನಲ್ಲಿ ಹಾರಾಡುತ್ತಿವೆ. ಮತ್ತೆ... ಜೇನು ರಾಣಿ ಇರುವವಳು ಒಬ್ಬಳೆ...

ರಮೇಶ್ ಶ್ರೀವತ್ಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT