ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿಗಳ ಚರ್ಚೆಗೆ ಪೂರಕ ವಾತಾವರಣ ಅಗತ್ಯ

ಪಾಕ್‌ಗೆ ಸಲ್ಮಾನ್ ಖುರ್ಷಿದ್‌ ಕಿವಿಮಾತು
Last Updated 13 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬಿಷ್ಕೇಕ್‌ (ಕಿರ್ಗಿಸ್ತಾನ) (ಪಿಟಿಐ): ಈ ತಿಂಗಳ ಕೊನೆಯಲ್ಲಿ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಭಾರತ–ಪಾಕ್‌ ಪ್ರಧಾನಿಗಳ ಮಹತ್ವದ ಮಾತುಕತೆಗೆ ವೇದಿಕೆ ಸಿದ್ಧಗೊಳ್ಳುತ್ತಿದೆಯಾದರೂ ಇಂತಹ ಮಾತುಕತೆಗೆ ಪೂರಕ ವಾತಾವರಣವೂ ಅಷ್ಟೆ ಮುಖ್ಯವಾಗುತ್ತದೆ ಎಂದು ಭಾರತ ಹೇಳಿದೆ. ಪಾಕಿಸ್ತಾನ ಪ್ರಧಾನಿ ಸಲಹೆಗಾರ ಸರ್‌ತಾಜ್‌ ಅಜೀಜ್‌ ಜತೆ ಇಲ್ಲಿ ಸಮಾಲೋಚನೆ ನಡೆಸಿದ ವಿದೇಶಾಂಗ ಸಚಿವ ಸಲ್ಮಾನ್‌ ಖುರ್ಷಿದ್‌ ಅವರು, ಮುಂಬೈ ದಾಳಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಪಾಕಿಸ್ತಾನ ತನಿಖಾಧಿಕಾರಿ ಹತ್ಯೆಯಾಗಿರುವ ಹಿನ್ನೆಲೆಯಲ್ಲಿ, ಹೊಸ ತನಿಖಾಧಿಕಾರಿ ಯನ್ನು ನೇಮಿಸುವ ಆ ದೇಶದ ನಿರ್ಧಾರವನ್ನು ತಾವು ಸ್ವಾಗತಿಸುವುದಾಗಿ ಸುದ್ದಿಗಾರರಿಗೆ ತಿಳಿಸಿದರು.

ಹೊಸ ತನಿಖಾಧಿಕಾರಿ ನೇತೃತ್ವದ ತಂಡ ಭಾರತಕ್ಕೆ ಇದೇ 23 ರಂದು ಭೇಟಿ ನೀಡಿ ಸಾಕ್ಷಿಗಳ ಪಾಟಿಸವಾಲು ಕೈಗೊಳ್ಳಲಿದೆ ಎಂದು ಅಜೀಜ್‌ ತಮಗೆ ತಿಳಿಸಿದರು ಎಂದರು.
‘ಇಂತಹ ಬೆಳವಣಿಗೆ ಉಭಯ ದೇಶಗಳ ಸಂಬಂಧಗಳ ಸುಧಾರಣೆಗೆ ಪೂರಕ ಎನಿಸಿದ್ದು, ಸಮಸ್ಯೆಗಳು ಶೀಘ್ರ ಇತ್ಯರ್ಥವಾಗುವ ಸಾಧ್ಯತೆಗಳಿವೆ’ ಎಂದರು. ಪ್ರಧಾನಿ ಹಂತದ ಮಾತುಕತೆ ಫಲಪ್ರದ ಎನಿಸಿಕೊಳ್ಳಲು ಇದಕ್ಕೆ ಪೂರಕವಾದ ವಾತಾವರಣ ಇರಬೇಕಾಗುತ್ತದೆ ಎನ್ನುವುದನ್ನು ತಾವು ಅಜೀಜ್‌ ಅವರಿಗೆ ಮನವರಿಕೆ ಮಾಡಿಕೊಟ್ಟಿರುವುದಾಗಿ ಖುರ್ಷಿದ್‌ ವಿವರಿಸಿದರು.

ಭಾರತ ಪಾಕ್‌ ಗಡಿಯಲ್ಲಿ ಶಾಂತಿ ಕಾಪಾಡಿಕೊಳ್ಳುವುದರ ಜತೆಗೆ ಗಡಿ ನಿಯಂತ್ರಣ ರೇಖೆಗುಂಟ ಕದನ ವಿರಾಮ ಪಾಲಿಸುವ ವಿಷಯಗಳಿಗೆ ಖುರ್ಷಿದ್‌ ಒತ್ತು ನೀಡಿದರು.
‘ಗಡಿಯಲ್ಲಿ ಶಾಂತಿ ಹಾಗೂ ಸಮಾಧಾನ ಇರದಿದ್ದರೆ ನಮ್ಮ ಎಲ್ಲ ಪ್ರಯತ್ನಗಳು ನಿರರ್ಥಕ ಎನಿಸಿಕೊಳ್ಳು ತ್ತವೆ’ ಎಂದು ಖುರ್ಷಿದ್‌ ಹೇಳಿದರು.

ಪಾಕ್‌ ಪ್ರಧಾನಿ ನವಾಜ್‌ ಷರೀಫ್‌ ಅವರ ಭೇಟಿಗೆ ಮೊದಲು ಭಯೋತ್ಪಾದನೆ ಹಾಗೂ ಮುಂಬೈ ದಾಳಿ ತನಿಖೆಯ ಪ್ರಗತಿಯ ಕುರಿತು ತಾವು ‘ಕೆಲ ಕಠಿಣ ವಾಸ್ತವಗಳನ್ನು’ ಕಂಡುಕೊಂಡದ್ದಾಗಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಕಳೆದ ಶನಿವಾರ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT