ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಫುಲ್ಲಚಂದ್ರರಿಗೆ ಸಲ್ಲಿಕೆಯಾಗದ ಸರ್ಕಾರಿ ಗೌರವ!

ಸರ್ಕಾರದ ವಿರುದ್ಧ ಅಭಿಮಾನಿಗಳ ಆಕ್ರೋಶ
Last Updated 13 ಡಿಸೆಂಬರ್ 2013, 8:03 IST
ಅಕ್ಷರ ಗಾತ್ರ

ಶಿವಮೊಗ್ಗ: ಕೃಷಿಯಲ್ಲಿ ಎರಡು ಅಂತರರಾಷ್ಟ್ರೀಯ ಪ್ರಶಸ್ತಿ, ಎಂಟು ಬಾರಿ ರಾಷ್ಟ್ರೀಯ ಪ್ರಶಸ್ತಿ, ಐದು ಬಾರಿ ಜಿಲ್ಲಾ ಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ, ಕೃಷಿ ಮತ್ತು ಅರಣ್ಯ ಇಲಾಖೆಗಳು ನೀಡುವ  ಪ್ರಶಸ್ತಿಗಳೆಲ್ಲವನ್ನೂ ಪಡೆದ ‘ಕೃಷಿ ಋಷಿ’ ಎಂದೇ ಪ್ರಸಿದ್ಧರಾಗಿದ್ದ ಡಿ.ಆರ್‌.ಪ್ರಫುಲ್ಲಚಂದ್ರ ಅವರಿಗೆ ಅಂತಿಮವಾಗಿ ಸರ್ಕಾರದಿಂದ ಯಾವುದೇ ಗೌರವ ಸಲ್ಲಿಕೆಯಾಗದಿರುವುದು ಚರ್ಚೆಗೆ ಗ್ರಾಸವಾಗಿದೆ.

ಕೃಷಿಗಾಗಿಯೇ ಧಾರವಾಡ ಹಾಗೂ ಕುವೆಂಪು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ಗೂ ಪಾತ್ರರಾಗಿದ್ದ ಪ್ರಫುಲ್ಲಚಂದ್ರ ಅವರ ಪಾರ್ಥಿವ ಶರೀರಕ್ಕೆ ಸರ್ಕಾರದಿಂದ ಯಾವುದೇ ಗೌರವ ಸಲ್ಲಿಕೆಯಾಗಿಲ್ಲ.

ಅಂತಿಮ ಸಂಸ್ಕಾರದ ಸಮಯದಲ್ಲಿ ಯಾವುದೇ ಬ್ಯಾಂಡ್‌ ಸದ್ದು ಮಾಡಲಿಲ್ಲ; ಗೌರವಾರ್ಥವಾಗಿ ಮೂರು ಬಾರಿ ಗುಂಡು ಹಾರಲಿಲ್ಲ. ರಾಷ್ಟ್ರಗೀತೆ ಮೊಳಗಲಿಲ್ಲ.

ಬುಧವಾರ ಬೆಳಿಗ್ಗೆ ನಿಧನರಾಗಿದ್ದ ಪ್ರಫುಲ್ಲಚಂದ್ರ ಅವರ ಪಾರ್ಥಿವ ಶರೀರವನ್ನು ಗುರುವಾರ ಬೆಳಿಗ್ಗೆಯವರೆಗೂ ಶಿವಮೊಗ್ಗ–ತೀರ್ಥಹಳ್ಳಿ ರಸ್ತೆಯ ಹೊಸಹಳ್ಳಿಯ ಕೃಷಿಸಂಪದ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು.

ಅವರ ಅಭಿಮಾನಿಗಳು, ವಿವಿಧ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿಗಳು, ರೈತ ಮುಖಂಡರು, ರಾಜಕೀಯ ಮುಖಂಡರು ಅವರ ಅಂತಿಮ ದರ್ಶನ ಪಡೆದುಕೊಂಡರು. ಆದರೆ, ಕನಿಷ್ಠ ಪಕ್ಷ ಸರ್ಕಾರದ ಕಡೆಯಿಂದ ಜಿಲ್ಲಾಧಿಕಾರಿಯಾಗಲಿ ಅಥವಾ ತಹಶೀಲ್ದಾರ್‌ ಆಗಲಿ ಅಲ್ಲಿಗೆ ಭೇಟಿ ನೀಡಿ ಹೂವಿನ ಹಾರವನ್ನೂ ಹಾಕದಿರುವುದು ಅವರ ಅಭಿಮಾನಿಗಳಲ್ಲಿ ಸಿಟ್ಟು ತರಿಸಿದೆ.

ಪೂರ್ಣಚಂದ್ರ ತೇಜಸ್ವಿ ತೀರಿಕೊಂಡಾಗ ತೀರ್ಥಹಳ್ಳಿಯ ಕುಪ್ಪಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗಿತ್ತು. ಇದೇ ಗೌರವ ಸಾಹಿತಿ ಹಾ.ಮ.ನಾಯಕರಿಗೂ ಸಲ್ಲಿಕೆಯಾಗಿತ್ತು. ಅದೇ ಕೃಷಿಯಲ್ಲಿ ಅತ್ಯುನ್ನುತ ಸಾಧನೆ ಮಾಡಿದ ಪ್ರಫುಲ್ಲಚಂದ್ರ ಅವರಿಗೆ ಈ ಗೌರವ ಏಕೆ ಸಲ್ಲಿಕೆಯಾಗಿಲ್ಲ. ಇದರಲ್ಲಿ ಸರ್ಕಾರದಿಂದ ಲೋಪವಾಗಿದೆ ಎಂದು ಅಭಿಮಾನಿ ರೈತರೊಬ್ಬರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಪ್ರಫುಲ್ಲಚಂದ್ರ ಬಗ್ಗೆ ತುಂಬಾ ಗೌರವ ಭಾವನೆ ಹೊಂದಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರೂ ಆದ ಕಿಮ್ಮನೆ ರತ್ನಾಕರ ಕೂಡ ಭೇಟಿ ನೀಡದಿರುವುದು ಸೋಜಿಗ ಉಂಟು ಮಾಡಿದೆ ಎನ್ನುತ್ತಾರೆ ಅವರು.

ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಮಧುಸೂದನ್‌ ಸೇರಿದಂತೆ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕೆಲ ಅಧಿಕಾರಿಗಳು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದ್ದು, ಸರ್ಕಾರದಿಂದ ಯಾವುದೇ ಅಧಿಕೃತ ಗೌರವ ಸಲ್ಲಿಕೆಯಾಗಿಲ್ಲ. ಸರ್ಕಾರಕ್ಕೆ ಜಿಲ್ಲಾಡಳಿತ ಪ್ರಫುಲ್ಲಚಂದ್ರ ಅವರ ಬಗ್ಗೆ ಯಾವುದೇ ಮಾಹಿತಿ ನೀಡದಿರುವುದರಿಂದ ಈ ಲೋಪ ಆಗಿರಬಹುದು ಎಂದು ಹೇಳಲಾಗುತ್ತಿದೆ.

‘ಪ್ರಫುಲ್ಲಚಂದ್ರ ಅವರಿಗೆ ಸರ್ಕಾರಿ ಗೌರವ ಸಲ್ಲಿಕೆ ಕುರಿತಂತೆ ಸರ್ಕಾರದಿಂದ ಯಾವುದೇ ಆದೇಶ ಬಾರದ ಕಾರಣ ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಿಲ್ಲ. ಸರ್ಕಾರ ಇಂತಹವರಿಗೆ ಸರ್ಕಾರಿ ಗೌರವ ಸಲ್ಲಿಸಿ ಎಂದು ಹೇಳಿದಾಗ ಮಾತ್ರ ಅವರಿಗೆ ಸಲ್ಲಿಸಲಾಗುತ್ತದೆ’ ಎನ್ನುತ್ತಾರೆ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT