ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಬುದ್ಧನಟಿ ಶಾರದಾ

Last Updated 4 ಆಗಸ್ಟ್ 2013, 7:23 IST
ಅಕ್ಷರ ಗಾತ್ರ

ರಂಗಭೂಮಿಯಲ್ಲಿ ಅಭಿನಯಿಸಲು ಹೆಣ್ಣುಮಕ್ಕಳು ಹಿಂದೇಟು ಹಾಕುತ್ತಿದ್ದ ಕಾಲದಲ್ಲಿ ಮರಿಯಮ್ಮನಹಳ್ಳಿ ಬಿ. ಶಾರದಾ ಬಣ್ಣ ಹಚ್ಚಿ ಎಲ್ಲರನ್ನು ಗಮನ ಸೆಳೆದ ದಿನಗಳು ಈಗ ಸ್ಮರಣೆ ಮಾತ್ರ. ನಲವತ್ತು ವರ್ಷಗಳ ಹಿಂದೆ ರಂಗಭೂಮಿಗೆ ಕಾಲಿಟ್ಟ ಅವರು ಇಂದಿಗೂ ರಂಗಭೂಮಿಯಲ್ಲಿ  ಸಕ್ರಿಯವಾಗಿ ತೊಡಗಿಸಿಕೊಂಡು ತಮ್ಮದೇ ಛಾಪು ಮೂಡಿಸಿದ ಪ್ರಬುದ್ಧ ಪ್ರತಿಭೆ. ರಂಗಭೂಮಿಯ ಪೋಷಕ ಪಾತ್ರದಲ್ಲಿ ತಮ್ಮ ಅಭಿನಯ ಕೌಶಲವನ್ನು ಮೆರೆದಿದ್ದಾರೆ.

ಹಿರಿಯ ರಂಗಭೂಮಿ ಕಲಾವಿದೆ, ತಾಯಿ ತಿರುಮಲೆಮ್ಮ ಅವರ ಬಳುವಳಿಯಂತೆ ಶಾರದಾ, 12 ವರ್ಷ ವಯಸ್ಸಿನಲ್ಲಿಯೇ ಓದಿಗೆ ಶರಣು ಹೇಳಿ, ಅಮ್ಮ ಹಾಗೂ ರಂಗಭೂಮಿಯ ಗುರು ಜಿ. ಮೈಲಾರಪ್ಪ ಅವರಿಂದ ಪ್ರೇರಣೆ ಪಡೆದು ಐತಿಹಾಸಿಕ `ಬಾಲಚಂದ್ರ' ನಾಟಕದಲ್ಲಿ ಹುಡುಗನ ಪಾತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟರು. 18ನೇ ವರ್ಷಕ್ಕೆ ನಾಟಕದ ಮುಖ್ಯ ಭೂಮಿಕೆಯಲ್ಲಿ ತೊಡಗಿಸಿಕೊಂಡು, ಮುಖ್ಯ ನಟಿಯಾಗಿ ಅಭಿನಯಕ್ಕೆ ನಿಂತರು. ಇದುವರೆಗೆ ಸಾವಿರಾರು ನಾಟಕಗಳಲ್ಲಿ ಬಾಲನಟಿಯಾಗಿ, ಮುಖ್ಯನಟಿಯಾಗಿ, ಹಾಸ್ಯ ಕಲಾವಿದೆಯಾಗಿ, ಪೋಷಕ ಪಾತ್ರಗಳಲ್ಲಿ ವೃತ್ತಿ ಹಾಗೂ ಹವ್ಯಾಸಿ ರಂಗಭೂಮಿಯಲ್ಲಿ ಅಭಿನಯಿಸಿದ ಅನುಭವ ಅವರಲ್ಲಿದೆ.

`ತಾಯಿ ತಿರುಮಲೆಮ್ಮ ಅವರ ಜೊತೆ ರತ್ನ ಮಾಂಗಲ್ಯ ನಾಟಕದಲ್ಲಿ ಮಗಳಾಗಿ ಪಾತ್ರ ನಿರ್ವಹಿಸಿದ್ದು ಎಂದೂ ಮರೆಯಲಾಗದ ಅನುಭವ. ತಾಯಿಯ ಜತೆ ಅಭಿನಯಿಸಿದ್ದು ಅದೊಂದೇ ನಾಟಕ. ಆ ನಾಟಕವೇ ತನ್ನನ್ನು ರಂಗಭೂಮಿಯ ಕಲಾವಿದೆಯನ್ನಾಗಿ ರೂಪಿಸಿದೆ. ನಂತರ ಆಶಾಲತಾ ನಾಟಕದಲ್ಲಿ ಲತಾ ಪಾತ್ರ ಖ್ಯಾತಿ ತಂದುಕೊಟ್ಟಿದೆ. ಟಿ.ವಿ. ಮಾಧ್ಯಮದ ಎದುರು ಪ್ರೇಕ್ಷಕರಿಗೆ ರಂಗಭೂಮಿಯ ಮೇಲಿನ ಒಲವು ಕಡಿಮೆಯಾಗುತ್ತಿದೆ. ಆದರೆ ರಂಗಭೂಮಿಯೇ ಹೆಚ್ಚು ತೃಪ್ತಿ ತಂದು ಕೊಡುತ್ತದೆ. ಟಿವಿ ಮಾಧ್ಯಮ ಹಣ ಕೊಡಬಹುದು, ಆದರೆ ತೃಪ್ತಿ ಇರುವುದಿಲ್ಲ' ಎನ್ನತ್ತಾರೆ ಶಾರದಾ.

ಬಸ್ ಕಂಡಕ್ಟರ್, ರತ್ನ ಮಾಂಗಲ್ಯ, ಗೌರಿ ಗೆದ್ದಳು, ರಕ್ತ ಮಕುಟ, ಆಶಾಲತಾ, ಸೋತು ಗೆದ್ದವಳು, ಕಲಿತ ಕಳ್ಳ, ಉತ್ತರ ಭೂಪ, ವೀರ ಅಭಿಮನ್ಯು, ರಕ್ತರಾತ್ರಿ, ಸೇಡಿನ ಕಿಡಿ, ಘಟಸರ್ಪ, ಕಲೆಕ್ಟರ್ ಕಮಲು, ಆದರ್ಶ ಪ್ರೇಮ, ದೇವಮಾನವ, ಬಡವ ಬದುಕಲೇಬೇಕು, ಮದುವೆ ಮಾರ್ಕೆಟ್, ಸುನಿತಾ ಸೂಳೆಯಲ್ಲ, ಏಳು ಗುಡ್ಡದ ಖಾನ್‌ಸಾಬ್, ಕಾಡುಕುದುರೆ, ಶೀಲಾವತಿ, ಅಣ್ಣತಂಗಿ, ಬೆಳ್ಳಕ್ಕಿ ಹಿಂಡು ಬೆದರ‌್ಯಾವೊ, ಅವ್ವಣ್ಣೆವ್ವ, ಜಗಜ್ಯೋತಿ ಬಸವೇಶ್ವರ, ಸಂಗ್ಯಾಬಾಳ್ಯಾ, ಹೇಮರೆಡ್ಡಿ ಮಲ್ಲಮ್ಮ  ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ಇಂದಿಗೂ ಬೀದಿನಾಟಕಗಳ ಮೂಲಕ ಏಡ್ಸ್, ಪಲ್ಸ್ ಪೊಲಿಯೋ, ಸಾಕ್ಷರತಾ ಆಂದೋಲನಗಳಲ್ಲಿ ಸುಮಾರು12 ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ.

`ನಮಗೆ ರಂಗಭೂಮಿಯೇ ಬದುಕು, ಅದೇ ಉಸಿರು, ಅದೇ ಜೀವ. ನನ್ನ ಕೊನೆ ಉಸಿರು ಇರುವವರೆಗೆ ಇದೇ ನನ್ನ ಬದುಕು. ಭವಿಷ್ಯ. ನನ್ನ ಅನುಭವದ ಪ್ರಕಾರ ಹೇಳುವುದಾದರೆ ಕಲಾವಿದರ ಬದುಕು ಬಹಳ ದುಸ್ತರ. ಅದಕ್ಕಾಗಿ ಸರ್ಕಾರ ಕಲಾವಿದರಿಗೆ 50ನೇ ವರ್ಷದಿಂದ ಮಾಸಾಶನವನ್ನು ನೀಡಬೇಕು' ಎಂದು ಹೇಳುವುದನ್ನು ಮರೆಯುವುದಿಲ್ಲ ಶಾರದಾ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT