ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭಾವ, ಒತ್ತಡಕ್ಕೆ ಮಣಿಯದಿರಿ

ನಾಗರಿಕ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ
Last Updated 19 ಡಿಸೆಂಬರ್ 2012, 9:38 IST
ಅಕ್ಷರ ಗಾತ್ರ

ದಾವಣಗೆರೆ: ಯಾವುದೇ ಪ್ರಭಾವ, ಒತ್ತಡಕ್ಕೆ ಮಣಿಯದೇ ಪೊಲೀಸರು ದಿಟ್ಟವಾಗಿ ಕಾರ್ಯ ನಿರ್ವಹಿಸಬೇಕು ಎಂದು ಬೆಂಗಳೂರಿನ ತರಬೇತಿ ವಿಭಾಗದ ಪೊಲೀಸ್ ಮಹಾನಿರೀಕ್ಷಕ ಡಾ.ಪರಶಿವಮೂರ್ತಿ ಕರೆ ನೀಡಿದರು.

ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ ವತಿಯಿಂದ ನಡೆದ 4ನೇ ತಂಡದ ನಾಗರಿಕ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಮನುಷ್ಯನಿಗೆ ಅತಿ ಆಸೆ, ದುರಾಸೆ ಸಲ್ಲದು. ವೃತ್ತಿಯಲ್ಲಿದ್ದಾಗ ಪೊಲೀಸರಿಗೆ ಹಲವು ಒತ್ತಡಗಳು, ಪ್ರಭಾವಗಳು ಎದುರಾಗುತ್ತವೆ. ಅಂಥ ಸಂದರ್ಭದಲ್ಲಿ ಧೃತಿಗೆಡದೇ ದಿಟ್ಟವಾಗಿ ಕಾರ್ಯ ನಿರ್ವಹಿಸಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದಕ್ಕಬೇಕೆಂಬುದೇ ಸಂವಿಧಾನದ ಆಶಯ. ಈ ಆಶಯಕ್ಕೆ ಧಕ್ಕೆ ಆಗದಂತೆ ಕೆಲಸ ಮಾಡಬೇಕು. ಈ ಮೂಲಕ ಇಲಾಖೆಯ ಘನತೆ ಮತ್ತು ಗೌರವವನ್ನು ಪೊಲೀಸರು ಕಾಪಾಡಬೇಕು. ಸೇವೆ, ಪ್ರಾಮಾಣಿಕತೆ, ಶಿಸ್ತು, ಮಾನವೀಯತೆಯಿಂದ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ಪೊಲೀಸ್ ಮಹಾನಿರೀಕ್ಷಕ (ಪೂರ್ವವಲಯ) ಸಂಜಯ್ ಸಹಾಯ್ ಮಾತನಾಡಿ, ಪೊಲೀಸರು ವೃತ್ತಿಯ ಜತೆಗೇ ವೈಯಕ್ತಿಕ ಜೀವನದ ಕಡೆಯೂ ಗಮನ ನೀಡಬೇಕು. ಪೊಲೀಸರು ಕಂಪ್ಯೂಟರ್ ಜ್ಞಾನ ಪಡೆದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಾಭೂರಾಂ ಸ್ವಾಗತಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ. ಚವಾಣ್ ವರದಿ ವಾಚಿಸಿದರು. ಗ್ರಾಮಾಂತರ ವೃತ್ತ ನಿರೀಕ್ಷಕ  ಎನ್.ಆರ್. ಮಹಾಂತ ರೆಡ್ಡಿ ಕಾರ್ಯಕ್ರಮ ನಿರೂಪಿಸಿದರು. ಗ್ರಾಮಾಂತರ ಡಿವೈಎಸ್ಪಿ ಕವಳಪ್ಪ ವಂದಿಸಿದರು.

ಮಂಡ್ಯ ಜಿಲ್ಲೆಯ 4ನೇ ತಂಡದ 95 ನಾಗರಿಕ ಪೊಲೀಸ್ ಪ್ರಶಿಕ್ಷಣಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT