ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭುದೇವ ನೃತ್ಯ ಚಿತ್ರ

Last Updated 7 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಲಂಡನ್‌ನಲ್ಲಿ ರಜೆ ಮುಗಿಸಿ ಬಂದ ಪ್ರಭುದೇವ `ಎಬಿಸಿಡಿ' ಚಿತ್ರ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಚಿತ್ರದಲ್ಲಿ ಜಗತ್ತಿನ ಸುಪ್ರಸಿದ್ಧ ನೃತ್ಯಗಾರರು ಕೆಲಸ ಮಾಡಿದ್ದಾರೆ. ಚಿತ್ರಕ್ಕೆ ಕ್ಯಾಮೆರಾ ಹಿಡಿದವರು ಆಸ್ಟ್ರೇಲಿಯಾದವರು, ನೃತ್ಯ ತಂಡದಲ್ಲಿ ಸುಪ್ರಸಿದ್ಧ ರಿಯಾಲಿಟಿ ಶೋ `ಸೊ ಯು ಥಿಂಕ್ ಯು ಕ್ಯಾನ್ ಡಾನ್ಸ್' ಕಾರ್ಯಕ್ರಮದ ಲೌರಾನಾ ಸೇರಿದಂತೆ ಬಗೆಬಗೆಯ ನೃತ್ಯ ಪ್ರಕಾರಗಳ ಪ್ರಸಿದ್ಧ ನೃತ್ಯಗಾರರನ್ನೇ ಬಳಸಿಕೊಳ್ಳಲಾಗಿದೆ. ಮತ್ತೊಂದು ವಿಶೇಷವೆಂದರೆ ತಂತ್ರಜ್ಞಾನ ವಿಭಾಗದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರೂ ವಿದೇಶೀಯರು.

`ಈವರೆಗೂ ನಾನು ಹಲವಾರು ಯುವಕರಿಗೆ ನೃತ್ಯ ಹೇಳಿಕೊಟ್ಟಿದ್ದೇನೆ. ಅವರಿಂದ ಹೊಸ ಬಗೆಯ ಪಟ್ಟುಗಳನ್ನು ನಾನೂ ಕಲಿತಿದ್ದೇನೆ. ಇಂಥ ಹಲವು ವಿಶಿಷ್ಟ ಬಗೆಯ ನೃತ್ಯದ ಶೈಲಿಗಳನ್ನು ಈ ಚಿತ್ರದಲ್ಲಿ ಕಾಣಬಹುದಾಗಿದೆ. ಚಿತ್ರದ ನೃತ್ಯ ನಿರ್ದೇಶನದ ಜವಾಬ್ದಾರಿಯನ್ನು ರೆಮೊ ಡಿ'ಸೋಜಾ ಅವರಿಗೆ ವಹಿಸಲಾಗಿದೆ' ಎಂದ ಪ್ರಭುದೇವ, ಚಿತ್ರವನ್ನು ನಿರ್ದೇಶಿಸಿರುವುದೇ ಅಲ್ಲದೆ ಅಭಿನಯಿಸಿದ್ದಾರೆ.

`ಹೊಸ ತಲೆಮಾರಿನಲ್ಲಿ ಪ್ರತಿಭಾವಂತ ನೃತ್ಯಗಾರರಿದ್ದಾರೆ ಎಂದು ಪ್ರಭು ಹೇಳುತ್ತಿರುತ್ತಾರೆ. ಹೊಸತನದ ಅನ್ವೇಷಣೆ ಹಾಗೂ ಬಗೆಬಗೆಯ ನೃತ್ಯ ಪ್ರಕಾರಗಳನ್ನು ಬೆರೆಸುವ ಅವರ ಪ್ರಯೋಗದಲ್ಲಿ ಎಂದೂ ರಾಜಿಯಾಗಿಲ್ಲ. ಚಿತ್ರದಲ್ಲಿ ಹೊಸ ಬಗೆಯ ಹಾಡುಗಳು, ಹೊಸ ಬೀಟ್ಸ್ ಹಾಗೂ ಪ್ರತಿಯೊಬ್ಬ ನೃತ್ಯಗಾರನೂ ಕಾಲ ಕಾಲಕ್ಕೆ ತನ್ನನ್ನು ತಾನು ಅನ್ವೇಷಿಸಿಕೊಳ್ಳುವಂಥ ನವೀನ ಮಾದರಿಯ ನೃತ್ಯಗಳನ್ನು ಚಿತ್ರದಲ್ಲಿ ಕಾಣಬಹುದು' ಎಂದು ರೆಮೊ ವಿವರಿಸಿದರು.

ನೃತ್ಯ ಹಾಗೂ ನೃತ್ಯ ಜಗತ್ತಿನಲ್ಲಿನ ಸವಾಲು ಹಾಗೂ ಸಾಧನೆಯೇ ಚಿತ್ರದ ವಸ್ತು. ಚಿತ್ರದಲ್ಲಿ ಯುವ ನೃತ್ಯಗಾರರನ್ನು ಸಾಧನೆಯ ಹಾದಿಯಲ್ಲಿ ಉತ್ತೇಜಿಸುವ ಮಾರ್ಗದರ್ಶಕನ ಪಾತ್ರದಲ್ಲಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. `ಚಿತ್ರೀಕರಣದ ವೇಳೆ ಇಡೀ ತಂಡ ಕ್ಯಾಮೆರಾ ಮುಂದೆ ಹಾಗೂ ಹಿಂದೆ ಸದಾ ನೃತ್ಯದಲ್ಲೇ ತಲ್ಲೆನವಾಗಿರುತ್ತಿತ್ತು. ನೃತ್ಯವೇ ನನ್ನ ಜೀವಾಳವಾದ್ದರಿಂದ ಚಿತ್ರೀಕರಣದ ಪ್ರತಿಯೊಂದು ಗಳಿಗೆಯನ್ನೂ ಸಂಭ್ರಮಿಸಿ ಅನುಭವಿಸಿದ್ದೇನೆ' ಎಂದು ಪ್ರಭುದೇವ ತಮ್ಮ ಸಂತಸವನ್ನು ಹಂಚಿಕೊಂಡರು.

`ಒಂಬತ್ತು ಹಾಡುಗಳಿರುವ ಎಬಿಸಿಡಿ ಚಿತ್ರದಲ್ಲಿ ಯಾವ ದೊಡ್ಡ ನಟರೂ ಇಲ್ಲ. ಪ್ರಣಯ ದೃಶ್ಯಗಳು ಇಲ್ಲವೇ ಇಲ್ಲ. ಆದರೆ ಸಣ್ಣ ಪುಟ್ಟ ಫೈಟ್‌ಗಳಿವೆ. ಹೀಗಾಗಿ ಯುವ ಜನಾಂಗಕ್ಕೆ ಚಿತ್ರ ಇಷ್ಟವಾಗಲಿದೆ' ಎಂಬ ವಿಶ್ವಾಸ ಪ್ರಭುದೇವ ಅವರದ್ದು. ಚಿತ್ರದಲ್ಲಿ ಪ್ರಭುದೇವ ಜತೆಗೆ ಮಾಧುರಿ ದೀಕ್ಷಿತ್ ಕೂಡ ಹೆಜ್ಜೆ ಹಾಕಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಈ ಕುರಿತು ಕೇಳಿದ್ದಕ್ಕೆ, `ಇದೊಂದು ಊಹಾಪೋಹವಷ್ಟೇ. ಎಬಿಸಿಡಿ ಚಿತ್ರದಲ್ಲಿ ನಟಿಸುವ ಅವಕಾಶವನ್ನು ಮಾಧುರಿ ಎಂದೂ ಕೇಳಿಕೊಂಡಿಲ್ಲ' ಎಂದು ವಿವರಣೆ ನೀಡಿದ ಅವರು ಶಾಹೀದ್ ಕಪೂರ್ ಅವರ ಮುಂದಿನ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ. ಅಜಯ್ ದೇವಗನ್ ಹಾಗೂ ಸಲ್ಮಾನ್ ಖಾನ್ ಅವರ ಮುಂದಿನ ಚಿತ್ರಗಳನ್ನು  ನಿರ್ದೇಶಿಸಲೂ ಒಪ್ಪಿಕೊಂಡಿದ್ದಾರೆ. ಈ ಇಬ್ಬರೊಂದಿಗೆ ಕೆಲಸ ಮಾಡಲು ಅವರು ತುದಿಗಾಲಲ್ಲಿ ನಿಂತಿದ್ದಾರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT