ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಮುಖ ರಸ್ತೆಗಳ ದುರಸ್ತಿಗೆ ಆಗ್ರಹ

Last Updated 3 ಜೂನ್ 2011, 5:30 IST
ಅಕ್ಷರ ಗಾತ್ರ

ತಿ.ನರಸೀಪುರ : ಇಲ್ಲಿನ ಲಿಂಕ್ ರಸ್ತೆ ಹಾಗೂ ಮಾರುಕಟ್ಟೆ ರಸ್ತೆ ಹಾಳಾಗಿದ್ದು, ಅವುಗಳನ್ನು ದುರಸ್ತಿಗೊಳಿಸುವಂತೆ ಪಟ್ಟಣದ ನಾಗರಿಕರು ಒತ್ತಾಯಿಸಿದ್ದಾರೆ.

 ವಿದ್ಯೋದಯ ಕಾಲೇಜು ವೃತ್ತದಿಂದ ತಿರಮಕೂಡಲು ವೃತ್ತದವರೆಗೆ ಕೈಗೊಂಡ ಜೋಡಿ ರಸ್ತೆ ಕಾಮಗಾರಿಯ ವೇಳೆ ಲಿಂಕ್ ರಸ್ತೆ ಹಾಗೂ ಮಾರುಕಟ್ಟೆ ರಸ್ತೆಗಳಲ್ಲಿ ಖಾಸಗಿ ಬಸ್‌ಗಳಿಗೆ ಸಂಚಾರ ಕಲ್ಪಿಸಲಾಗಿತ್ತು. ಅದುವರೆವಿಗೂ ಪರವಾಗಿಲ್ಲ ಎನ್ನುವಂತಿದ್ದ ರಸ್ತೆಗಳು ಬಸ್‌ಗಳ ಸಂಚಾರದಿಂದ ರಸ್ತೆಯ ಕಲ್ಲುಗಳೆಲ್ಲ ಕಿತ್ತು ಗುಂಡಿಗಳಾದವು. ಆನಂತರ ಎರಡು ರಸ್ತೆಗಳು ಸಂಪೂರ್ಣವಾಗಿ ದುಃಸ್ಥಿತಿಯತ್ತ ಸಾಗಿವೆ.

`ಜೋಡಿ ರಸ್ತೆ ನಿರ್ಮಾಣದ ನಂತರ ಬಸ್‌ಗಳು ಆ ರಸ್ತೆಯಲ್ಲಿ ಸಂಚರಿಸಲು ಪ್ರಾರಂಭವಾದಾಗ ಇಲ್ಲಿನ ರಸ್ತೆಗಳನ್ನು ಮಳೆಗಾಲಕ್ಕೆ ಮುನ್ನಾ ದುರಸ್ತಿಗೊಳಿಸುವಂತೆ ಅನೇಕ ಬಾರಿ ಮನವಿ ಮಾಡಿದರೂ ರಸ್ತೆ ದುರಸ್ತಿಯಾಗಲಿಲ್ಲ. ಮಳೆ ಬಂದರೆ ರಸ್ತೆಯ ಗುಂಡಿಗಳಲ್ಲಿ ಕೊಚ್ಚೆ ನೀರು ತುಂಬಿಕೊಳ್ಳುತ್ತದೆ. ಇದರಿಂದ ಪಾದಚಾರಿಗಳು, ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವುದೇ ಕಷ್ಟವಾಗಿದೆ~ ಎಂದು ದೂರಿದ್ದಾರೆ.

ಈ ನಡುವೆ ಲಿಂಕ್ ರಸ್ತೆಯಲ್ಲಿನ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಿ ವಾಣಿಜ್ಯ ಮಳಿಗೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ವ್ಯಾಪಾರ ವಹಿವಾಟು  ನಡೆಸುವವರು ರಸ್ತೆ ಬದಿಯಲ್ಲಿ ಕುಳಿತಿರುವುದರಿಂದ ಸಾರ್ವಜನಿಕ ಸಂಚಾರಕ್ಕೆ ಬಹಳ ಕಿರಿಕಿರಿಯಾಗಿದೆ. ಅವರಿಗಾದರೂ ತಾತ್ಕಾಲಿಕವಾಗಿ ವ್ಯಾಪಾರ ವಹಿವಾಟು ನಡೆಸಲು ಅಗತ್ಯ ಸ್ಥಳವಕಾಶ ಕಲ್ಪಿಸಿದರೆ ರಸ್ತೆಯಲ್ಲಿ ಅನುಕೂಲವಾಗುತ್ತದೆ ಎನ್ನುವ ಆರೋಪ ಕೇಳಿಬರುತ್ತಿದೆ.

ಮಾರುಕಟ್ಟೆ ರಸ್ತೆಯು ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಸದಾ ಗಿಜಿ ಗಿಡುವ ಈ ರಸ್ತೆಯಲ್ಲಿ ಕೂಡ ಹಳ್ಳ ಕೊಳ್ಳಗಳಿವೆ. ರೇಷ್ಮೆಗೂಡಿನ ಮಾರುಕಟ್ಟೆ ಬಳಿ ಸಂಪೂರ್ಣ ನೀರಿನ ಗುಂಡಿಗಳಿವೆ. ಆ  ರಸ್ತೆಯಲ್ಲಿ ರಾತ್ರಿ ವೇಳೆ ವಾಹನ ಸಂಚಾರ ಕಷ್ಟವಾಗಿದೆ.

ಈ ರಸ್ತೆಗಳ ಅಭಿವೃದ್ಧಿಗೆ ಈವರೆಗೂ ಸಂಬಂಧ ಪಟ್ಟ ಇಲಾಖೆಗಳು ಯಾವುದೇ ಗಮನ ನೀಡಿಲ್ಲ. ಪಟ್ಟಣ ಪಂಚಾಯಿತಿ ಪಟ್ಟಣದ ರಸ್ತೆಗಳ ಅಭಿವೃದ್ಧಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮಳೆಗಾಲಕ್ಕೂ ಮುನ್ನಾ ತಾತ್ಕಾಲಿಕವಾಗಿಯಾದರೂ ಈ ಎರಡು ಪ್ರಮುಖ ರಸ್ತೆಗಳನ್ನು ತುರ್ತಾಗಿ ದುರಸ್ತಿಗೊಳಿಸಬೇಕಿದೆ.

ಇಲ್ಲವಾದಲ್ಲಿ ಸಾರ್ವಜನಿಕ ಸಂಘಟನೆಗಳ ಜೊತೆಯಲ್ಲಿ ಪಟ್ಟಣ ಪಂಚಾಯಿತಿ ಹಾಗೂ ತಾಲ್ಲೂಕು ಆಡಳಿತ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT