ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣ ದರ ಏರಿಕೆ ವಿರೋಧಿಸಿ ಹೆದ್ದಾರಿ ತಡೆ

Last Updated 23 ಫೆಬ್ರುವರಿ 2011, 16:40 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಖಾಸಗಿ ಬಸ್ ಪ್ರಯಾಣ ದರ ಏರಿಕೆ ವಿರೋಧಿಸಿ ಬುಧವಾರ ಕ್ಷೇತ್ರ ವ್ಯಾಪ್ತಿಯ ಹಿರೇಹಳ್ಳಿಯಲ್ಲಿ ಬೆಂಗಳೂರು-ಬಳ್ಳಾರಿ ರಾಜ್ಯ ಹೆದ್ದಾರಿ ಮೇಲೆ ಗ್ರಾಮಸ್ಥರು ಕೆಲಕಾಲ ರಸ್ತೆತಡೆ ನಡೆಸಿದರು.

ಮಳೆ, ಬೆಳೆ ಇಲ್ಲದೇ ಜನ ಜೀವನ ನಡೆಸುವುದು ದುಸ್ತರವಾಗಿರುವ ಜತೆಗೆ ಅಗತ್ಯ ವಸ್ತುಗಳ ಬೆಲೆ ವಿಪರೀತ ಏರಿಕೆಯಾಗಿರುವ ಸಮಯದಲ್ಲಿ ಖಾಸಗಿ ಬಸ್ಸಿನ ಪ್ರಯಾಣ ದರವನ್ನು ಅವೈಜ್ಞಾನಿಕವಾಗಿ ಏರಿಕೆ ಮಾಡಿರುವ ಪರಿಣಾಮ ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ. ದರ ಇಳಿಕೆ ಮಾಡುವವರೆಗೆ ಪ್ರತಿಭಟನೆ ಹಿಂದಕ್ಕೆ ಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಡೀಸೆಲ್ ದರ ಏರಿಕೆ ಪ್ರಮಾಣಕ್ಕೂ ಬಸ್ ಪ್ರಯಾಣ ದರ ಏರಿಕೆ ಪ್ರಮಾಣಕ್ಕೂ ಬಹಳ ವ್ಯತ್ಯಾಸವಿದೆ. ಯಾವುದೇ ಮುನ್ಸೂಚನೆ ನೀಡದೆ ಯಾರ ಜತೆಯಲ್ಲಿ ಚರ್ಚೆ ಮಾಡದೇ ಖಾಸಗಿ ಬಸ್ ಮಾಲೀಕರ ಸಂಘ ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡಿದೆ. ರೈತರು, ವಿದ್ಯಾರ್ಥಿಗಳು ಇಷ್ಟೊಂದು ದುಬಾರಿ ಪ್ರಯಾಣ ದರ ನೀಡಿ ಸಂಚರಿಸದ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ರಸ್ತೆತಡೆ ಪರಿಣಾಮ ಬಸ್ಸುಗಳು ಗೌರಸಮುದ್ರ, ಹನುಮಂತನಹಳ್ಳಿ, ಚಿತ್ರನಾಯಕಹಳ್ಳಿ ಕ್ರಾಸ್ ಮೂಲಕ ಸಂಚರಿಸಿದವು.

ಸ್ಥಳಕ್ಕೆ ತಹಶೀಲ್ದಾರ್ ಡಾ.ಸ್ನೇಹಾ, ಸಿಪಿಐ ವಾಸುದೇವ್ ಮತ್ತಿತರರು ಭೇಟಿ ನೀಡಿ ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಹಳೆ ದರದಲ್ಲಿಯೇ ಬಸ್‌ಗಳನ್ನು ಓಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

ರೆಡ್ಡಿಹಳ್ಳಿ ವೀರಣ್ಣ, ನಿಜಲಿಂಗಪ್ಪ, ಯರಿಸ್ವಾಮಿ, ಗ್ರಾ.ಪಂ. ಅಧ್ಯಕ್ಷೆ ಮಲ್ಲಮ್ಮ, ಸದಸ್ಯರಾದ ಆನಂದಾಚಾರಿ, ಡಿ. ಬೋರಪ್ಪ, ಜಿ.ಎಂ. ಬಸವರಾಜ್ ಮತ್ತಿತರರು ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT